ಬಾಗಲಕೋಟೆ ಜಿಲ್ಲೆಯ ನೂರಾರು ಸರ್ಕಾರಿ ಪ್ರಾಥಮಿಕ ಶಾಲೆಗಳ ಭವಿಷ್ಯ ಇದೀಗ ಅನಿಶ್ಚಿತತೆಯಲ್ಲಿದೆ. ಜಿಲ್ಲೆಯ 396 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ಮಕ್ಕಳು ವ್ಯಾಸಂಗ ಮಾಡುತ್ತಿರುವುದರಿಂದ ಈ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ.
ಇದರಿಂದ ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆ, ಶಾಲೆಗಳ ಅಸ್ತಿತ್ವ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಮತ್ತು ಗ್ರಾಮಸ್ಥರಲ್ಲಿ ಚರ್ಚೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 1,227 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ ಸುಮಾರು ಮೂರನೇ ಭಾಗದಷ್ಟು ಶಾಲೆಗಳು ಅತ್ಯಂತ ಕಡಿಮೆ ದಾಖಲಾತಿಯನ್ನು ಹೊಂದಿವೆ.
ಅಂಕಿ ಅಂಶಗಳ ಪ್ರಕಾರ 26 ಶಾಲೆಗಳಲ್ಲಿ 5ಕ್ಕಿಂತ ಕಡಿಮೆ ಮಕ್ಕಳು, 83 ಶಾಲೆಗಳಲ್ಲಿ 10ಕ್ಕೂ ಕಡಿಮೆ ಮಕ್ಕಳು ಹಾಗೂ 287 ಶಾಲೆಗಳಲ್ಲಿ 20ಕ್ಕೂ ಕಡಿಮೆ ಮಕ್ಕಳು ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ. ಹಲವು ಶಾಲೆಗಳಲ್ಲಿ ಒಂದೇ ತರಗತಿಯಲ್ಲಿ ಬೆರಳೆಣಿಕೆಯಷ್ಟು ಮಕ್ಕಳು ಇರುವ ಸ್ಥಿತಿ ನಿರ್ಮಾಣವಾಗಿದ್ದು, ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವುದು, ಉದ್ಯೋಗಕ್ಕಾಗಿ ಕುಟುಂಬಗಳ ವಲಸೆ, ಖಾಸಗಿ ಶಾಲೆಗಳತ್ತ ಹೆಚ್ಚುತ್ತಿರುವ ಪಾಲಕರ ಒಲವು, ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕುರಿತಾದ ಆಸಕ್ತಿ ಸದ್ಯದ ಪರಿಸ್ಥಿತಿಗೆ ಕಾರಣ ಎಂದು ಹೇಳಲಾಗಿದೆ.
ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಕೊರತೆಯಿಂದ ಪಾಲಕರು ಮಕ್ಕಳನ್ನು ಆರಂಭದಲ್ಲೇ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದು, ನಂತರ ಅಲ್ಲಿಯೇ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿಗೆ ದೊಡ್ಡ ಹೊಡೆತ ಬಿದ್ದಿದೆ.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆ ದಾಖಲಾತಿ ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದೆ. 20ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗದಿದ್ದರೆ ಅಂತಹ ಶಾಲೆಗಳನ್ನು ಸಮೀಪದ ಪಿ.ಎಂ.ಶ್ರೀ ಶಾಲೆಗಳು ಅಥವಾ ಕರ್ನಾಟಕ ಪಬ್ಲಿಕ್ ಶಾಲೆಗಳೊಂದಿಗೆ ವಿಲೀನಗೊಳಿಸಲು ಚಿಂತಿಸಲಾಗುತ್ತಿದೆ.
ವಿಲೀನದ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯ, ಶಿಕ್ಷಕರ ಲಭ್ಯತೆ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತದೆ ಎಂಬುದು ಇಲಾಖೆಯ ಯೋಚನೆಯಾಗಿದೆ.
ಉದ್ದೇಶಿತ ಯೋಜನೆಯ ಕುರಿತು ಈದಿನ.ಕಾಮ್ ಜೊತೆ ಅಭಿಪ್ರಾಯ ಹಂಚಿಕೊಂಡ ಬಾಗಲಕೋಟೆ ಗ್ರಾಕೂಸ ಮುಖಂಡ ಬಸವರಾಜ್, “ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಕಡೆಗೆ ಸರ್ಕಾರ ಗಮನ ಹರಿಸಬೇಕು, ಕೆಪಿಎಸ್‌ಸಿ ಶಾಲೆಗಳೊಂದಿಗಿನ ವಿಲೀನ ಸರ್ಕಾರಿ ಶಾಲೆಗಳ ಉಳಿವಿಗೆ ಉಪಾಯವಲ್ಲ. ಸರ್ಕಾರಿ ಶಾಲೆಗಳ ಸವಲತ್ತುಗಳನ್ನು ಉನ್ನತೀಕರಿಸಿ, ಶಿಕ್ಷಕರ ನೇಮಕಾತಿಯಲ್ಲಿ ಶಿಸ್ತು ಅನುಸರಿಸುವ ಮೂಲಕ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಪ್ರಯತ್ನವಾಗಬೇಕು” ಎಂದು ಅಭಿಪ್ರಾಯಿಸಿದರು.
ಇದೇ ವೇಳೆ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಇರುವ ಮಕ್ಕಳು, ಶಾಲೆಗೆ ಸೇರ್ಪಡೆಯಾಗದ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ಕಾರ್ಯ ನಡೆಯುತ್ತಿದೆ. ಜೂನ್ 30ರವರೆಗೆ ಈ ಅಭಿಯಾನ ಮುಂದುವರಿಯಲಿದ್ದು, ದಾಖಲಾತಿಯಲ್ಲಿ ಗಮನಾರ್ಹ ಏರಿಕೆ ಕಾಣುವ ನಿರೀಕ್ಷೆ ಶಿಕ್ಷಣ ಇಲಾಖೆಯದ್ದಾಗಿದೆ.
ದಾಖಲಾತಿ ಹೆಚ್ಚಿಸಲು ಮತ್ತೊಂದು ಮಹತ್ವದ ಹೆಜ್ಜೆಯಾಗಿ ಜಿಲ್ಲೆಯ 237 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದ್ದು, “ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಈಗಾಗಲೇ ಎಲ್‌ಕೆಜಿಗೆ 2,736 ಹಾಗೂ ಯುಕೆಜಿಗೆ 1,983 ಮಕ್ಕಳು ಸೇರ್ಪಡೆಯಾಗಿದ್ದಾರೆ. ಈ ಮಕ್ಕಳು ಮುಂದಿನ ವರ್ಷಗಳಲ್ಲಿ ಅದೇ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಂದುವರಿಸುವುದರಿಂದ ದಾಖಲಾತಿ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ” ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕುವಾರು ಪರಿಶೀಲಿಸಿದರೆ ಹುನಗುಂದ, ಜಮಖಂಡಿ ಹಾಗೂ ಮುಧೋಳ ತಾಲ್ಲೂಕುಗಳಲ್ಲಿ ಕಡಿಮೆ ದಾಖಲಾತಿಯ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಮುಧೋಳ ತಾಲೂಕಿನಲ್ಲಿ 64, ಜಮಖಂಡಿಯಲ್ಲಿ 61 ಹಾಗೂ ಹುನಗುಂದದಲ್ಲಿ 49 ಶಾಲೆಗಳು 20ಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿವೆ. ಬಾದಾಮಿ ತಾಲ್ಲೂಕಿನಲ್ಲಿ 39, ಬಾಗಲಕೋಟೆ ತಾಲ್ಲೂಕಿನಲ್ಲಿ 42 ಹಾಗೂ ಬೀಳಗಿ ತಾಲೂಕಿನಲ್ಲಿ 32 ಶಾಲೆಗಳು ಇದೇ ವರ್ಗಕ್ಕೆ ಸೇರಿವೆ. ಈ ಅಂಕಿ ಅಂಶಗಳು ಗ್ರಾಮೀಣ ಶಿಕ್ಷಣ ಕ್ಷೇತ್ರದ ಸವಾಲಿನ ಚಿತ್ರಣವನ್ನು ಬಿಚ್ಚಿಡುತ್ತವೆ.
ಶಾಲೆಗಳ ವಿಲೀನ ಪ್ರಕ್ರಿಯೆ ಜಾರಿಯಾದರೆ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳು ದೊರೆಯುವ ಸಾಧ್ಯತೆ ಇದ್ದರೂ, ಗ್ರಾಮ ಮಟ್ಟದಲ್ಲಿ ಶಾಲೆಗಳ ಅಸ್ತಿತ್ವ ಕಳೆದುಹೋಗುವ ಆತಂಕವೂ ವ್ಯಕ್ತವಾಗುತ್ತಿದೆ. ದೂರದ ಶಾಲೆಗಳಿಗೆ ಮಕ್ಕಳು ಸಂಚರಿಸುವ ಸ್ಥಿತಿಯೊದಗುವ ಚಿಂತೆ ಪಾಲಕರಿಗೆ, ಹೀಗಾಗಿ ದಾಖಲಾತಿ ಹೆಚ್ಚಿಸುವ ಅಭಿಯಾನ ಎಷ್ಟು ಯಶಸ್ವಿಯಾಗುತ್ತದೆ ಎಂಬುದರ ಮೇಲೆ ಜಿಲ್ಲೆಯ ನೂರಾರು ಶಾಲೆಗಳ ಭವಿಷ್ಯ ನಿರ್ಧಾರವಾಗಲಿದೆ. ಶಿಕ್ಷಣ ಇಲಾಖೆಯ ಮುಂದಿನ ಕ್ರಮಗಳತ್ತ ಜನರು ಕುತೂಹಲದ ಕಣ್ಣಿರಿಸಿದ್ದಾರೆ.




