ಬೀದರ್ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಮಳೆಯ ಕೊರತೆ ಎದುರಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ರಾಜ್ಯ ಸರಕಾರ ಈ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಿ ರೈತರ ನೆರವೇರಿಗೆ ಧಾವಿಸಬೇಕು ಎಂದು ಭಾಲ್ಕಿ ತಾಲೂಕು ವಕೀಲರ ಸಂಘ ಒತ್ತಾಯಿಸಿದೆ.
ಈ ಕುರಿತು ನಗರದ ತಹಸೀಲ್ ಕಚೇರಿಯಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹೇಶ ರಾಚೋಟೆ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಿದರು.
“ಜಿಲ್ಲೆಯಲ್ಲಿ ಮುಂಗಾರು ವಾಡಿಕೆಗಿಂತ ಕಡಿಮೆ ಮಳೆ ಸುರಿದಿದ್ದು, ರೈತರ ಕೃಷಿ ಜಮೀನುಗಳು ಸಂಪೂರ್ಣವಾಗಿ ಭಣಗುಡುತ್ತಿವೆ. ನಾಡಿಗೆ ಅನ್ನ ನೀಡುವ ಅನ್ನದಾತ ಇಂದು ಮಳೆಯಿಲ್ಲದೆ, ಬೆಳೆ ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾನೆ. ಕಾನೂನಿನ ಚೌಕಟ್ಟಿನಲ್ಲಿ ಸಮಾಜದ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ. ರೈತರ ಕಣ್ಣೀರು ಒರೆಸದಿದ್ದರೆ ಈ ಸಮಾಜಕ್ಕೆ ಉಳಿಗಾಲವಿಲ್ಲ. ಕೋರ್ಟ್ ಕಲಾಪಗಳ ಜತೆಗೆ ಅನ್ನದಾತನ ಬದುಕಿನ ಹಕ್ಕಿಗಾಗಿ ಬೀದಿಗಿಳಿದು ಹೋರಾಡಲು ವಕೀಲರ ಸಂಘ ಸದಾ ಸಿದ್ಧವಿದೆ. ಸರಕಾರ ವಿಳಂಬ ಧೋರಣೆ ತಾಳದೇ ಭಾಲ್ಕಿ ತಾಲೂಕು ಸೇರಿ ಜಿಲ್ಲೆಯನ್ನು ಬರಗಾಲ ಘೋಷಿಸಬೇಕು” ಎಂದು ಆಗ್ರಹಿಸಿದ್ದಾರೆ.
ರೈತರ ಕೃಷಿ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು, ಹಾನಿಯಾದ ರೈತರ ಬೆಳೆಗೆ ಎಕರೆಗೆ ವೈಜ್ಞಾನಿಕ ಪರಿಹಾರ ತಕ್ಷಣವೇ ಬಿಡುಗಡೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಉಚಿತ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಭದ್ರತೆ ಒದಗಿಸಬೇಕು. ಸಾಲದ ನೆಪದಲ್ಲಿ ಬ್ಯಾಂಕ್ ಅಧಿಕಾರಿಗಳು, ಸಾಲ ವಸೂಲಿಗಾರರ ರೈತರಿಗೆ ಕಿರುಕುಳ ನೀಡದಂತೆ ಕಟ್ಟುನಿಟ್ಟಿನ ತಡೆಯಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ಮನವಿಗೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿ ಬರಗಾಲ ಘೋಷಿಸಬೇಕು. ಇಲ್ಲದಿದ್ದರೆ ವಕೀಲರ ಸಂಘವು ಕೋರ್ಟ್ ಕಲಾಪಗಳಿಗೆ ಸೀಮಿತವಾಗದೆ ರೈತರೊಂದಿಗೆ ಬೀದಿಗಿಳಿದು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಮಾಯವಾದ ಮಳೆ: ಬರಿದಾದ 57 ಕೆರೆಗಳ ಒಡಲು!
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಮಕರಂದ ಮಾನಕಾರಿ, ಪ್ರಧಾನ ಕಾರ್ಯದರ್ಶಿ ವಾಗೇಶ ಪಾಟೀಲ್, ಜಂಟಿ ಕಾರ್ಯದರ್ಶಿ ನೀಲಕಂಠ ಬಿರಾದಾರ್, ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ಪ್ರಮುಖರಾದ ನಾಗನಾಥ ಸ್ವಾಮಿ, ಬಾಬುರಾವ ಗಾಮ, ಓಂಪ್ರಕಾಶ ಪಾಟೀಲ, ಅಶೋಕ ಪಾಟೀಲ, ಅನಿಮೇಶ ಆನಂದವಡೆ, ರಾಹುಲ ಸಾವಳೆ, ಸದಾಶಿವ ತುಕದೆ, ಸುಬೋಧ ತಿವಾರಿ,
ಆರತಿ ತಿವಾರಿ, ಶಾಂತನು ಕುಲಕರ್ಣಿ, ರಾಮಕೃಷ್ಣ ಬಿರಾದಾರ, ಶತ್ರುಘ್ನ ನೆಲವಾಡೆ, ದೀಪಕ ಮಾಶೆಟ್ಟೆ, ದಯಾನಂದ ಪವಾರ, ಮಹಾಂತೇಶ ಪಾಟೀಲ, ಗುರುನಾಥ ಚಲವ, ಸತೀಶ ಬೋರಳೆ, ನರಹರಿ, ಧನಲಕ್ಮಿ ಬಳತೆ, ನವಾಜ್, ಸಂಜುಕುಮಾರ ಸಲಂಕೆ, ಶಿವಕುಮಾರ ಕೆರೂರು, ಭಾರತ ಪವಾರ, ಶೈಫೋದ್ದಿನ್, ಗೌತಮ ಸಿಂಧೆ, ಆನಂದ ಸ್ವಾಮಿ, ದೇವಿಂದ್ರ ಸಿಂಧೆ, ಉತ್ತಮ ಪುರಿ, ಶ್ರೀನಿವಾಸ ಮುದ್ದಾಳೆ, ಮಹೇಶ ಪರಸಣ್ಣೆ, ಸತೀಶ ನಾಯಕ, ಶಿವಪುತ್ರ ದಾಬಶಟ್ಟೆ, ಇಂದ್ರಶೆನ ಬಿರಾದಾರ, ಸಂತೋಷ ನೆಲವಾಡೆ, ವೆಂಕಟ ಉಮಾಜೀ, ಪದ್ಮಾಕರ ಮಲ್ಲೇಶೀ, ನಾಗರಾಜ ಸಿರ್ಸಿ, ಶಿವಕುಮಾರ ಸಂಗೋಳಗಿ, ಯೋಗೀಶ ಬಂಡೆ, ಸಿರಾಜ ಸೇರಿದಂತೆ ಅನೇಕರಿದ್ದರು.





