ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಅವರ ವಿವಾದಾತ್ಮಕ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಸ್ವಾಗತಿಸಿ ಬಸವ ಪರ ಸಂಘಟನೆಗಳ ಪ್ರಮುಖರು ನಗರದಲ್ಲಿ ಶುಕ್ರವಾರ ಸಂಭ್ರಮಾಚರಣೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಬಸವಾನುಯಾಯಿಗಳು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಯಘೋಷ ಮೊಳಗಿಸಿದರು. ಬಳಿಕ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ, “ಬಸವ ಭಕ್ತರ ಭಾವನೆಗಳನ್ನು ಗೌರವಿಸಿ, ವಿವಾದಾತ್ಮಕ ಕೃತಿ ಹಾಗೂ ಅದರ ಲೇಖಕರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸೂಕ್ತ ಹಾಗೂ ಸ್ವಾಗತಾರ್ಹ ಎಂದು ಹೇಳಿದರು. ಸರ್ಕಾರ ಆದಷ್ಟು ಬೇಗ ಕೃತಿಯ ಲೇಖಕನನ್ನು ಬಂಧಿಸಬೇಕು” ಎಂದು ಒತ್ತಾಯಿಸಿದರು.
ಬಸವಣ್ಣನವರು ಲಿಂಗಾಯತರ ಅಸ್ಮಿತೆಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಹುಗ್ಗಿಪಾಟೀಲ, ಸಿದ್ದಯ್ಯ ಕವಡಿಮಠ, ಯೋಗೇಂದ್ರ ಯದಲಾಪುರೆ, ರಾಜಕುಮಾರ ಕಮಠಾಣೆ, ಗಣೇಶ ಬಿರಾದಾರ, ರವಿ ಪಾಪಡೆ, ರಾಜೇಂದ್ರ ಜೊನ್ನಿಕೇರಿ, ಮಲ್ಲಿಕಾರ್ಜುನ ಪಂಚಾಕ್ಷರಿ, ಯೋಗೇಶ್ ಶ್ರೀಗಿರಿ, ಶಿವಕುಮಾರ, ರಾಜಶೇಖರ ಮಠಪತಿ, ಸಿದ್ದಪ್ಪ ಮೂಲಗೆ, ಶ್ರೀಕಾಂತ ಬಿರಾದಾರ, ರಮೇಶ ಬಿರಾದಾರ, ಪ್ರವೀಣ್ ಎಕಲಾರೆ, ರಾಜಕುಮಾರ ಪಾಟೀಲ ಕನ್ನಳ್ಳಿ, ಬಸವರಾಜ ಪಾಟೀಲ ಕನ್ನಳ್ಳಿ, ಅಶೋಕ್ ಶಂಭು, ಮಾರುತೆಪ್ಪ ಪಾಪಡೆ, ಅಶೋಕ್ ಶೀಲವಂತ, ಸಂಜುಕುಮಾರ ಪಾಟೀಲ, ಸಾಯಿನಾಥ ಆಣದೂರ, ಬಸವರಾಜ ಚನಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ಪೋಷಣ ಅಭಿಯಾನ ಯೋಜನೆಯಡಿ 2 ಹುದ್ದೆಗಳಿಗೆ ಅರ್ಜಿ ಆಹ್ವಾನ



