ತಮಿಳುನಾಡಿನ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸುದೀರ್ಘ ಕಾಲದ ಡಿಎಂಕೆ ಮೈತ್ರಿಯನ್ನು ಕಡಿದುಕೊಂಡಿರುವ ಕಾಂಗ್ರೆಸ್ ಬುಧವಾರ ನಟ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷಕ್ಕೆ ಬೆಂಬಲ ಸೂಚಿಸಿದೆ. ತಮಿಳುನಾಡಿನಲ್ಲಿ ಮುಂದಿನ ಸರ್ಕಾರ ರಚಿಸಲು ಟಿವಿಕೆಗೆ ಬೆಂಬಲ ನೀಡುವುದಾಗಿ ಘೋಷಿಸಿರುವ ಕಾಂಗ್ರೆಸ್, ಈ ಹೊಸ ಮೈತ್ರಿಯು 2029ರ ಲೋಕಸಭಾ ಚುನಾವಣೆಗೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. “ಭಾರತದ ಸಂವಿಧಾನವನ್ನು ನಂಬದ ಯಾವುದೇ ಕೋಮುವಾದಿ ಶಕ್ತಿಗಳನ್ನು ಮೈತ್ರಿಕೂಟದಿಂದ ದೂರವಿಡುವ ಶರತ್ತಿನ ಮೇಲೆ ನಾವು ಟಿವಿಕೆಗೆ ಬೆಂಬಲ ನೀಡಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ತಮಿಳುನಾಡಿನ ಜನತೆ, ಅದರಲ್ಲೂ ವಿಶೇಷವಾಗಿ ಯುವಕರು, ಸಂವಿಧಾನಿಕ ತತ್ವಗಳನ್ನು ನಂಬುವ ಜಾತ್ಯತೀತ, ಪ್ರಗತಿಪರ ಮತ್ತು ಕಲ್ಯಾಣ ಆಧಾರಿತ ಸರ್ಕಾರಕ್ಕಾಗಿ ಅತ್ಯಂತ ಸ್ಪಷ್ಟ ಮತ್ತು ಬಲವಾದ ಜನಾದೇಶವನ್ನು ನೀಡಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷವು (ಸಿಎಲ್‌ಪಿ) ಸರ್ಕಾರ ರಚಿಸಲು ಟಿವಿಕೆಗೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಲು ನಿರ್ಧರಿಸಿವೆ. ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕಾಮರಾಜ್ ಅವರ ‘ಸುವರ್ಣ ದಿನಗಳನ್ನು’ ಮರಳಿ ತರಲು ಟಿವಿಕೆ ಮತ್ತು ಕಾಂಗ್ರೆಸ್ ಶ್ರಮಿಸಲಿವೆ. ಉಭಯ ಪಕ್ಷಗಳ ನಡುವಿನ ಪರಸ್ಪರ ಗೌರವ, ಸರಿಯಾದ ಪಾಲು ಮತ್ತು ಹಂಚಿಕೆಯ ಜವಾಬ್ದಾರಿಯ ಆಧಾರದ ಮೇಲೆ ಈ ಮೈತ್ರಿಯನ್ನು ರಚಿಸಲಾಗಿದೆ ಎಂದು ಚೋಡಂಕರ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ಕೇವಲ ಸರ್ಕಾರ ರಚನೆಗೆ ಮಾತ್ರವಲ್ಲದೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳಿಗೂ ಈ ಮೈತ್ರಿ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ವಿಜಯ್ ಅವರು ಜಂಟಿಯಾಗಿ ತಮಿಳುನಾಡಿನ ಜನತೆಯ, ವಿಶೇಷವಾಗಿ ಯುವಕರ ಕನಸುಗಳು ಮತ್ತು ಭರವಸೆಗಳನ್ನು ಈಡೇರಿಸಲು ಹಾಗೂ ಜಾತ್ಯತೀತ ಸರ್ಕಾರಕ್ಕಾಗಿ ನೀಡಿದ ಜನಾದೇಶವನ್ನು ಗೌರವಿಸಲು ಸಂಕಲ್ಪ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನವೇ ರಾಹುಲ್ ಗಾಂಧಿ ಅವರು ವಿಜಯ್ ಅವರ ಜೊತೆ ಮಾತುಕತೆ ನಡೆಸಿದ್ದರು. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಡಿಎಂಕೆ ಮೈತ್ರಿಯನ್ನು ತೊರೆದು ಟಿವಿಕೆ ಸೇರಲು ಒಲವು ತೋರಿತ್ತಾದರೂ, ಅಂತಿಮವಾಗಿ ಹಿರಿಯ ನಾಯಕರ ನಿರ್ಧಾರದಂತೆ ಆಡಳಿತ ಪಕ್ಷದೊಂದಿಗೇ ಚುನಾವಣೆಯನ್ನು ಎದುರಿಸಿತ್ತು. ಈಗ ಫಲಿತಾಂಶದ ಬಳಿಕ ನಿರೀಕ್ಷೆಯಂತೆಯೇ ಡಿಎಂಕೆ ಮೈತ್ರಿಯಿಂದ ಹೊರಬಂದಿದೆ.
2004 ರಿಂದ ಹಿಡಿದು 2026 ರವರೆಗೆ, 2014ರ ಲೋಕಸಭಾ ಚುನಾವಣೆಯನ್ನು ಹೊರತುಪಡಿಸಿ ಉಳಿದೆಲ್ಲಾ ಚುನಾವಣೆಗಳನ್ನು ಕಾಂಗ್ರೆಸ್ ಮತ್ತು ಡಿಎಂಕೆ ಒಟ್ಟಾಗಿ ಎದುರಿಸಿದ್ದವು. 2004 ರಲ್ಲಿ ಬಿಜೆಪಿಯನ್ನು ಎದುರಿಸಲು ಸೋನಿಯಾ ಗಾಂಧಿ ಅವರು ಈ ಮೈತ್ರಿಯನ್ನು ರೂಪಿಸಿದ್ದರು. ಈಗ ಆ ಸುದೀರ್ಘ ಮೈತ್ರಿಗೆ ತೆರೆ ಬಿದ್ದಂತಾಗಿದೆ.




