ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್-ಡಿಎಂಕೆ-ಟಿವಿಕೆ ನಡೆ ಏನಾಗಿತ್ತು, ಈಗ ಏನಾಗಿದೆ?

Date:

ತಮಿಳುನಾಡು ರಾಜಕಾರಣ ಯಾವಾಗಲೂ ದ್ರಾವಿಡ ಪಕ್ಷಗಳ ಭದ್ರಕೋಟೆ. ಇಲ್ಲಿ ರಾಷ್ಟ್ರೀಯ ಪಕ್ಷಗಳು ಒಂದು ಪ್ರಬಲ ಪ್ರಾದೇಶಿಕ ಪಕ್ಷದ ಬೆಂಬಲವಿಲ್ಲದೆ ಅಸ್ತಿತ್ವ ಕಂಡುಕೊಳ್ಳುವುದು ಕಷ್ಟ ಎಂಬುದು ದಶಕಗಳ ಇತಿಹಾಸ. ಆದರೆ, ಸೂಪರ್‌ ಸ್ಟಾರ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಎಂಟ್ರಿ ಈ ಸಮೀಕರಣವನ್ನೇ ಬದಲಿಸಿದ ಸೂಚನೆ ನೀಡುತ್ತಿದೆ.

- Advertisement -

ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ, ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯ ಪ್ರೊಫೆಷನಲ್ ವಿಂಗ್ ಮತ್ತು ಟೆಕ್ನಾಲಜಿ-ಡೇಟಾ ಸೆಲ್ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ಅವರು ಡಿಎಂಕೆ ಆಡಳಿತದ ರಾಜ್ಯದ ಸಾಲದ ಪರಿಸ್ಥಿತಿಯನ್ನು “ಆತಂಕಕಾರಿ” ಎಂದು ವಿಶ್ಲೇಷಿಸಿ ದೊಡ್ಡ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆ ಕಾಂಗ್ರೆಸ್‌ನ ಪ್ರಮುಖ ಮಿತ್ರ ಪಕ್ಷವಾದ ಡಿಎಂಕೆ ಮತ್ತು ಕಾಂಗ್ರೆಸ್‌ನ ಒಳಗಿನ ಕೆಲವು ವರ್ಗಗಳಿಂದ ತೀವ್ರ ಟೀಕೆಗೆ ಗುರಿಯಾಯಿತು. ಇದು ಕಾಂಗ್ರೆಸ್‌ನ ಪ್ರಮುಖ ಮಿತ್ರಪಕ್ಷವಾದ ಡಿಎಂಕೆಯನ್ನು ಕೆರಳಿಸಿತ್ತು. ಮೈತ್ರಿ ಧರ್ಮಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಆದರೆ ಚುನಾವಣೆ ನಂತರದ ಪರಿಸ್ಥಿತಿ ಈಗ ಆ ಹೇಳಿಕೆಗಳಿಗೆ ಹೊಸ ಅರ್ಥ ನೀಡುತ್ತಿದೆ. ಟಿವಿಕೆ (ತಮಿಳಗ ವೆಟ್ರಿ ಕಳಗಂ) 108 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಂಗ್ರೆಸ್ ಈಗ ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆಗಳನ್ನು ಚರ್ಚಿಸುತ್ತಿದೆ. ಹೌದು, ಪ್ರವೀಣ್ ಚಕ್ರವರ್ತಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, “ಒಂದು ವೇಳೆ ಕಾಂಗ್ರೆಸ್ ಪಕ್ಷವು ವಿಜಯ್ ಅವರ ಟಿವಿಕೆ ಜೊತೆ ಮೈತ್ರಿ ಮಾಡಿಕೊಂಡಿದ್ದರೆ, ನಾವು ತಮಿಳುನಾಡಿನಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವುದರ ಜೊತೆಗೆ ಪುದುಚೇರಿಯಲ್ಲೂ ಅಧಿಕಾರಕ್ಕೆ ಬರಬಹುದಿತ್ತು,” ಎಂದು ಅಭಿಪ್ರಾಯಪಟ್ಟಿದ್ದಾರೆ. 

ಇನ್ನು ಈ ಬದಲಾದ ರಾಜಕೀಯ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕ ಮಾಣಿಕ್ಯಂ ಠಾಗೋರ್ ಸಂದರ್ಶನವೊಂದರಲ್ಲಿ ಡಿಎಂಕೆ ಮೈತ್ರಿಕೂಟದ ವೈಫಲ್ಯದ ಬಗ್ಗೆ ಹಂಚಿಕೊಂಡಿರುವ ಅಭಿಪ್ರಾಯಗಳು ಈಗ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಚಕ್ರವರ್ತಿ ಅವರ ಹೇಳಿಕೆಯನ್ನು ಮಾಣಿಕ್ಯಂ ಠಾಗೋರ್ ಅವರ ವಿಶ್ಲೇಷಣೆ ಒಂದು ರೀತಿಯಲ್ಲಿ ಪುಷ್ಟೀಕರಿಸುತ್ತಿದೆ. “ಜನರ ತೀರ್ಪು ನೇರವಾಗಿ ರಾಜ್ಯ ಸರ್ಕಾರದ ವಿರುದ್ಧವಾಗಿತ್ತು. ಕಾಂಗ್ರೆಸ್ ಮೈತ್ರಿಕೂಟದಲ್ಲಿತ್ತೇ ಹೊರತು ಸರ್ಕಾರದಲ್ಲಿರಲಿಲ್ಲ. ಆದರೂ ಆಡಳಿತ ವಿರೋಧಿ ಅಲೆಯ ಹೊಡೆತ ಕಾಂಗ್ರೆಸ್ಸಿಗೂ ತಟ್ಟಿತು.” ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಚುನಾವಣೆಗೂ ಮುನ್ನ ಕಾಂಗ್ರೆಸ್ ಯಾಕೆ ಟಿವಿಕೆ ಜೊತೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಠಾಗೋರ್ ಅವರ ಉತ್ತರ ಸ್ಪಷ್ಟವಾಗಿದೆ. “ಕಾಂಗ್ರೆಸ್ ಪಕ್ಷದೊಳಗೆ ಈ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು. ಕೆಲವರು ಹೊಸ ಮೈತ್ರಿಗೆ ಒಲವು ತೋರಿದ್ದರೆ, ಹೈಕಮಾಂಡ್ ಮಾತ್ರ ‘ಇಂಡಿಯಾ’ ಒಕ್ಕೂಟದ ಹಿತದೃಷ್ಟಿಯಿಂದ ಹಳೆಯ ಮಿತ್ರ ಡಿಎಂಕೆಗೆ ನಿಷ್ಠೆ ತೋರಿಸಲು ನಿರ್ಧರಿಸಿತು.” ಎಂದು ಹೇಳಿದ್ದಾರೆ. ಅಂದರೆ ಇಲ್ಲಿ ಮಾಣಿಕ್ಯಂ ಠಾಗೋರ್ ಮತ್ತು ಪ್ರವೀಣ್ ಚಕ್ರವರ್ತಿ ಅವರಂತಹ ನಾಯಕರು ತಮಿಳುನಾಡಿನಲ್ಲಿ ಕಾಂಗ್ರೆಸ್ ಹೊಸ ಮಿತ್ರರ ಜೊತೆ ಬೆಳೆಯಬೇಕೆಂದು ಬಯಸುತ್ತಿದ್ದಾರೆ ಎಂಬುದು ಅವರ ಮಾತಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. 

ಅಷ್ಟೇ ಅಲ್ಲ, ಇದು ಕಾಂಗ್ರೆಸ್‌ನ ಒಳಗಿರುವ ಒಂದು ಬಣಕ್ಕೆ ಡಿಎಂಕೆ ಜೊತೆಗಿನ ಸೀಟು ಹಂಚಿಕೆಯ ಅಸಮಾಧಾನವನ್ನು ಹೊರಹಾಕಿದಂತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ನೀಡಿದ ಸೀಟುಗಳ ಬಗ್ಗೆ ಕಾಂಗ್ರೆಸ್‌ನ ಅನೇಕ ನಾಯಕರಲ್ಲಿ ಅಸಮಾಧಾನವಿತ್ತು. ವಿಜಯ್ ಅವರ ಹೊಸ ಪಕ್ಷಕ್ಕೆ ಯುವ ಸಮೂಹದ ಬೆಂಬಲವಿರುವುದರಿಂದ, ಅವರೊಂದಿಗೆ ಕೈಜೋಡಿಸಿದರೆ ಕಾಂಗ್ರೆಸ್ ತನ್ನ ‘ಬಿಗ್ ಬ್ರದರ್’ ಇಮೇಜ್ ಅನ್ನು ಮರಳಿ ಪಡೆಯಬಹುದು ಎಂಬುದು ಚಕ್ರವರ್ತಿ ಅವರ ಲೆಕ್ಕಾಚಾರವಾಗಿತ್ತು.

image 123

ಚುನಾವಣೆಗೂ ಮುನ್ನ ಪ್ರವೀಣ್ ಚಕ್ರವರ್ತಿ ಟಿವಿಕೆ ನಾಯಕ ವಿಜಯ್ ಅವರೊಂದಿಗೆ ಸಭೆ ನಡೆಸಿದ್ದರು. ಇದು ತಮಿಳುನಾಡು ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಕೆಲವರು ಇದನ್ನು ಪಕ್ಷದ ಶಿಸ್ತು ಉಲ್ಲಂಘನೆ ಎಂದು ದೂರಿದರು. ಆದರೆ ಪ್ರವೀಣ್ ತಾವು ಪಕ್ಷದ ನಾಯಕರ ಸಮ್ಮತಿಯನ್ನ ಪಡೆದು ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ರಾಹುಲ್ ಗಾಂಧಿ ಅವರ ಸನಿಹದ ನಾಯಕರಲ್ಲಿ ಒಬ್ಬರಾದ ಅವರು ಟಿವಿಕೆಯೊಂದಿಗೆ ಮೈತ್ರಿ ಸಾಧ್ಯತೆಯನ್ನು ಚರ್ಚಿಸುವಲ್ಲಿ ಮುಂಚೂಣಿಯಲ್ಲಿದ್ದರು ಎಂಬ ವದಂತಿಗಳು ಕೇಳಿಬಂದಿದ್ದವು.

ಹಾಗಾದರೆ ಕಾಂಗ್ರೆಸ್ ಮೊದಲೇ ಟಿವಿಕೆ ಜೊತೆ ಏಕೆ ಹೋಗಲಿಲ್ಲ? ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಂಯಮದ ರಾಜಕಾರಣ. ಹೌದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಈ ವಿಚಾರದಲ್ಲಿ ಎಚ್ಚರಿಕೆಯ ನಿಲುವು ತಾಳಿದ್ದರು. ಸಾರ್ವಜನಿಕವಾಗಿ ಅವರು ಡಿಎಂಕೆ ಮೈತ್ರಿಯನ್ನು ಸಮರ್ಥಿಸಿಕೊಂಡು, “ನಾವು ನಮ್ಮ ಮೈತ್ರಿ ಪಾಲುದಾರರೊಂದಿಗೆ ಬದ್ಧವಾಗಿದ್ದೇವೆ, ತಮಿಳುನಾಡಿನಲ್ಲಿ ಡಿಎಂಕೆಯ ನೇತೃತ್ವದಲ್ಲಿ ಹೋರಾಟ ಮುಂದುವರಿಸುತ್ತೇವೆ” ಎಂಬ ಸಂದೇಶ ನೀಡಿದ್ದರು.

ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ (I.N.D.I.A) ಒಕ್ಕೂಟದ ಐಕ್ಯತೆಗೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಪ್ರಕಾರ, ಕೇಂದ್ರದಲ್ಲಿ ಬಿಜೆಪಿಯನ್ನು ಎದುರಿಸಲು ಸ್ಟಾಲಿನ್ ನೇತೃತ್ವದ ಡಿಎಂಕೆ ಅತ್ಯಂತ ವಿಶ್ವಾಸಾರ್ಹ ಮಿತ್ರಪಕ್ಷ ಎಂಬುದು ಖರ್ಗೆ ಅವರ ಬಲವಾದ ನಂಬಿಕೆಯಾಗಿತ್ತು. ಹೊಸದಾಗಿ ಹುಟ್ಟಿದ ಪಕ್ಷದ (TVK) ಸಂಘಟನಾ ಶಕ್ತಿ ಮತ್ತು ಸಿದ್ಧಾಂತದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದಾಗ, ಹಳೆಯ ಮಿತ್ರನನ್ನು ಬಿಟ್ಟುಕೊಡುವುದು ಅಪಾಯಕಾರಿ ಎಂದು ಖರ್ಗೆ ಭಾವಿಸಿದ್ದರು.

ಮೈತ್ರಿ ಪಕ್ಷಗಳ ಆಂತರಿಕ ವಿಷಯಗಳ ಬಗ್ಗೆ ಅಥವಾ ರಾಜ್ಯದ ಆರ್ಥಿಕತೆಯ ಬಗ್ಗೆ ಬಹಿರಂಗವಾಗಿ ಟೀಕೆ ಮಾಡುವುದು ಮೈತ್ರಿ ಧರ್ಮಕ್ಕೆ ವಿರುದ್ಧ ಎಂದು ಅವರು ರಾಜ್ಯ ನಾಯಕರಿಗೆ ಕಿವಿಮಾತನ್ನೂ ಹೇಳಿದ್ದರು. ಚುನಾವಣೆಗೂ ಮೊದಲು ತಮಿಳುನಾಡು ಕಾಂಗ್ರೆಸ್‌ನ ಹಿರಿಯ ನಾಯಕರು ಕೂಡ ಎರಡು ಭಾಗವಾಗಿದ್ದರು. ಕೆಲವರು ಡಿಎಂಕೆ ನಮಗೆ ಕೇವಲ ಬೆರಳೆಣಿಕೆಯಷ್ಟು ಸೀಟು ನೀಡುತ್ತಿದೆ, ನಾವು ಸ್ವತಂತ್ರವಾಗಿ ಅಥವಾ ಹೊಸ ಶಕ್ತಿಗಳೊಂದಿಗೆ ಬೆಳೆಯಬೇಕು ಎಂದು ವಾದಿಸಿದ್ದರು. ಆದರೆ ಹೈಕಮಾಂಡ್ ಸದ್ಯಕ್ಕೆ ಡಿಎಂಕೆಯನ್ನು ಎದುರು ಹಾಕಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿತ್ತು. ಹೊಸ ಗೆಳೆತನಕ್ಕಾಗಿ ಹಳೆಯ ಮೈತ್ರಿಯನ್ನು ಕೈಬಿಡುವುದು ಡಿಎಂಕೆ ಯನ್ನು ಕಷ್ಟಕಾಲದಲ್ಲಿ ತೊರೆದು ಬೆನ್ನಿಗೆ ಇರಿದಂತೆ ಎಂಬ ಟೀಕೆಯನ್ನೂ ಕಾಂಗ್ರೆಸ್ ಎದುರಿಸುತ್ತಿದೆ.

ಟಿವಿಕೆ ಮತ್ತು ಎಐಎಡಿಎಂಕೆ (AIADMK) ಮೈತ್ರಿ ಸಾಧ್ಯತೆಗಳೇನು?

ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ 59, ಎಐಎಡಿಎಂಕೆ 47 ಮತ್ತು ಕಾಂಗ್ರೆಸ್ 5 ಸ್ಥಾನಗಳನ್ನು ಪಡೆದಿದೆ. ಬಹುಮತಕ್ಕೆ 10 ಸ್ಥಾನಗಳ ಕೊರತೆ ಇರುವ ಟಿವಿಕೆಗೆ ಬೆಂಬಲದ ಅಗತ್ಯವಿದೆ. ಈಗಾಗಲೇ ಎಐಎಡಿಎಂಕೆ ಪಕ್ಷವು ವಿಜಯ್ ಅವರ ಟಿವಿಕೆಗೆ ಬಾಹ್ಯ ಬೆಂಬಲ ನೀಡುವ ಸೂಚನೆ ನೀಡಿದೆ. ಈ ಬೆಳವಣಿಗೆಯನ್ನು ರಾಜಕೀಯ ತಜ್ಞರು ಕುತೂಹಲದಿಂದ ಗಮನಿಸುತ್ತಿದ್ದಾರೆ. ಆದರೆ ಎಐಎಡಿಎಂಕೆಯ ಉನ್ನತ ನಾಯಕರು ಇದನ್ನು ಸ್ಪಷ್ಟವಾಗಿ ನಿರಾಕರಿಸುವ ಸಾಧ್ಯತೆಯೂ ಇದೆ. ವಿಜಯ್ ಅವರು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಎಐಎಡಿಎಂಕೆ ಬಿಜೆಪಿ ಜೊತೆಯಲ್ಲಿರುವುದರಿಂದ ಟಿವಿಕೆ-ಎಐಎಡಿಎಂಕೆ ಮೈತ್ರಿ ಸುಲಭವಲ್ಲ. ವಿಜಯ್ ಅವರ “ಧರ್ಮನಿರಪೇಕ್ಷತೆ” ಮತ್ತು “ವಂಶಪಾರಂಪರ್ಯ ರಾಜಕಾರಣ” “ಭ್ರಷ್ಟಾಚಾರ”ದಂತಹ ರಾಜಕಾರಣದ ವಿರುದ್ಧ ವಿಜಯ್‌ ಗುಡುಗಿದ್ದರು. ಈಗ ಅದೇ ಪಕ್ಷದ ಜೊತೆ ಕೈಜೋಡಿಸಿದರೆ ವಿಜಯ್‌ ಅವರ “ಬದಲಾವಣೆಯ ನಾಯಕ” ಎಂಬ ಬಿರುದಿಗೆ ಧಕ್ಕೆಯಾಗಬಹುದು.

ವಿಜಯ್ ಅವರು ಎಐಎಡಿಎಂಕೆ ಬೆಂಬಲವನ್ನು ಸ್ವೀಕರಿಸುವುದಾದರೆ ಅದು ಅವರ ರಾಜಕೀಯ ನಿಲುವಿಗೆ ವಿರುದ್ಧವಾಗಬಹುದು. ಬಿಜೆಪಿ ವಿರೋಧಿ ನಿಲುವು ಅವರ ಜನಪ್ರಿಯತೆಗೆ ಕಾರಣವಾಗಿದೆ. ಆದ್ದರಿಂದ ಕಾಂಗ್ರೆಸ್ ಅಥವಾ ಇತರ ಸಣ್ಣ ಪಕ್ಷಗಳ ಬೆಂಬಲವನ್ನು ಅವರು ಆದ್ಯತೆ ನೀಡುವ ಸಾಧ್ಯತೆ ಹೆಚ್ಚು. ತಮಿಳುನಾಡು ರಾಜಕೀಯ ಈಗ ಹೊಸ ಅಧ್ಯಾಯವನ್ನು ಎದುರಿಸುತ್ತಿದೆ. ಡ್ರಾವಿಡ ಪಕ್ಷಗಳ ಏಕಸ್ವಾಮ್ಯಕ್ಕೆ ಸವಾಲು ಹಾಕಿದ ಟಿವಿಕೆಯ ಯಶಸ್ಸು ದಕ್ಷಿಣ ಭಾರತ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯ ಸೂಚನೆಯಾಗಿದೆ.

ಕಾಂಗ್ರೆಸ್ ನಾಯಕ ಪ್ರವೀಣ್ ಚಕ್ರವರ್ತಿ ಅವರ ಹೇಳಿಕೆಯು ತಮಿಳುನಾಡು ಕಾಂಗ್ರೆಸ್‌ನೊಳಗೆ ಬದಲಾವಣೆಯ ಬಯಕೆಯನ್ನು ಪ್ರತಿಬಿಂಬಿಸುತ್ತಿದೆ. ಆದರೆ ಪ್ರಾಯೋಗಿಕವಾಗಿ, ಡಿಎಂಕೆಯಂತಹ ಸುಭದ್ರ ಸಂಘಟನೆಯನ್ನು ಬಿಟ್ಟು ಅನಿಶ್ಚಿತ ಟಿವಿಕೆ ನೌಕೆಯನ್ನು ಏರಲು ಕಾಂಗ್ರೆಸ್ ಹೈಕಮಾಂಡ್ ಈ ಮೊದಲು ಸಿದ್ಧವಿರಲಿಲ್ಲ. ವಿಜಯ್ ಅವರ ಟಿವಿಕೆ ಸದ್ಯಕ್ಕೆ “ಕಾದು ನೋಡುವ ತಂತ್ರ” ಅನುಸರಿಸುತ್ತಿದೆ. ಎಐಎಡಿಎಂಕೆ ಬೆಂಬಲ ಸೂಚಿಸಿರುವುದು ವಿಜಯ್ ಅವರಿಗೆ ಶಕ್ತಿ ತುಂಬಿದಂತಾಗಿದ್ದರೂ, ಅವರು ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ಉಳಿಯುತ್ತಾರೋ ಅಥವಾ ಅಧಿಕಾರದ ಲೆಕ್ಕಾಚಾರಕ್ಕಾಗಿ ಮೈತ್ರಿ ಮಾಡಿಕೊಳ್ಳುತ್ತಾರೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಒಂದು ವೇಳೆ 2026ರ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಹಾದಿ ಬದಲಿಸಿದರೆ, ತಮಿಳುನಾಡು ರಾಜಕೀಯದಲ್ಲಿ ಬಹುಕೋನ ಸ್ಪರ್ಧೆ ಏರ್ಪಡುವುದಂತೂ ಖಚಿತ. ತಮಿಳುನಾಡು ರಾಜಕಾರಣದಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಗೆ ವಿಜಯ್ ಅವರ ಪ್ರವೇಶವು ಒಂದು ದೊಡ್ಡ ಸವಾಲಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...