ಫೆಬ್ರವರಿ 2020ರ ಈಶಾನ್ಯ ದೆಹಲಿ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಇಶ್ರತ್ ಜಹಾನ್ ಅವರಿಗೆ ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ (ಏಪ್ರಿಲ್ 24) ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ರವೀಂದರ್ ಡುಡೇಜಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಆದೇಶ ನೀಡಿದೆ. “ವಿಶೇಷ ನ್ಯಾಯಾಲಯವು ಇಶ್ರತ್ ಜಹಾನ್ ಅವರಿಗೆ ಜಾಮೀನು ನೀಡಿ 4 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ ಮತ್ತು ಅವರು ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ಯಾವುದೇ ದಾಖಲೆ ಅಥವಾ ನಿದರ್ಶನಗಳಿಲ್ಲ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
ದೆಹಲಿ ಗಲಭೆಗಳಲ್ಲಿ ಶಾಮೀಲಾದ ಆರೋಪದ ಮೇಲೆ ಮಾರ್ಚ್ 2020 ರಲ್ಲಿ ಇಶ್ರತ್ ಜಹಾನ್ ಅವರನ್ನು ಬಂಧಿಸಲಾಗಿತ್ತು. ಅವರ ಮೇಲೆ ಭಾರತೀಯ ದಂಡ ಸಂಹಿತೆ , ಸಾರ್ವಜನಿಕ ಆಸ್ತಿ ನಷ್ಟ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು UAPA (ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿತ್ತು. ತರುವಾಯ, ಮಾರ್ಚ್ 2022 ರಲ್ಲಿ ವಿಶೇಷ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು. ಜಾಮೀನು ನೀಡುವ ವೇಳೆ, “ಇಶ್ರತ್ ಜಹಾನ್ ಅವರು ‘ಚಕ್ಕಾ ಜಾಮ್’ ಕಲ್ಪನೆಯನ್ನು ಸೃಷ್ಟಿಸಿಲ್ಲ ಮತ್ತು ಸಂಚಿನಲ್ಲಿ ಭಾಗಿಯಾದ ಯಾವುದೇ ಸಂಘಟನೆ ಅಥವಾ ವಾಟ್ಸಾಪ್ ಗ್ರೂಪ್‌ನಲ್ಲಿ ಅವರು ಸದಸ್ಯರಾಗಿರಲಿಲ್ಲ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತ್ತು.
ಕೆಳಹಂತದ ನ್ಯಾಯಾಲಯವು ಸರಿಯಾದ ಸಾಕ್ಷ್ಯಾಧಾರಗಳನ್ನು ಪರಿಗಣಿಸದೆ ಜಾಮೀನು ನೀಡಿದೆ ಎಂದು ದೆಹಲಿ ಪೊಲೀಸರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. “ಈ ಗಲಭೆಗಳು ಕ್ಷಣಾರ್ಧದಲ್ಲಿ ಅಥವಾ ಕೋಮು ದ್ವೇಷದಿಂದ ತಕ್ಷಣವಾಗಿ ನಡೆದಿದ್ದಲ್ಲ, ಬದಲಿಗೆ ಇದು ಬಹುಹಂತದ ಮತ್ತು ಬಹುಸಂಘಟನೆಗಳ ಪೂರ್ವ ನಿಯೋಜಿತ ಸಂಚಾಗಿತ್ತು. ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಲು, ಅಮೆರಿಕ ಅಧ್ಯಕ್ಷರ ಭೇಟಿಯ ಸಮಯವನ್ನೇ ಆಯ್ಕೆ ಮಾಡಿಕೊಂಡು ಈ ಗಲಭೆ ಸೃಷ್ಟಿಸಲಾಗಿತ್ತು” ಎಂದು ಪೊಲೀಸರು ವಾದಿಸಿದ್ದರು.





