ಚುನಾವಣಾ ವೀಕ್ಷಕರು ಬಿಜೆಪಿಯ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಸಮ್ಮತ ಮತದಾನ ನಡೆಯಲು ಸಾಧ್ಯವೇ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಹಂತದ ಮತದಾನದ ವೇಳೆ, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಅವರು ನೇರವಾಗಿ ಖಂಡಿಸಿದ್ದಾರೆ.
ಚುನಾವಣೆಯಲ್ಲಿ ಅಕ್ರಮ ಎಸಗಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ‘ರಾಜ್ಯಕ್ಕೆ ಬಂದಿರುವ ಚುನಾವಣಾ ಆಯೋಗದ ವೀಕ್ಷಕರು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಬದಲು, ಜನರನ್ನು ಹೆದರಿಸುವ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ’ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಆ ಮೂಲಕ ಬಿಜೆಪಿ ಚುನಾವಣಾ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸ್ವಕ್ಷೇತ್ರ ಭವಾನಿಪುರದಲ್ಲಿ ಅವರ ವಿರುದ್ಧ ಬಿಜೆಪಿ ಸುವೇಂದು ಅಧಿಕಾರಿಯವರನ್ನು ಕಣಕ್ಕಿಳಿಸಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಅವರನ್ನು ಸೋಲಿಸಿದ್ದ ಸುವೇಂದು, ಈ ಬಾರಿಯೂ ಜಿದ್ದಾಜಿದ್ದಿನ ಕಣ ಏರ್ಪಟ್ಟಿದೆ.
ಇಂದು ಮತದಾನ ನಡೆಯುತ್ತಿರುವ ಒಟ್ಟು 142 ಕ್ಷೇತ್ರಗಳು ಆಡಳಿತಾರೂಢ ಟಿಎಂಸಿಯ ಭದ್ರಕೋಟೆಯಾಗಿವೆ. ಕಳೆದ 2021ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳ ಪೈಕಿ ಟಿಎಂಸಿ ಬರೋಬ್ಬರಿ 123 ಸ್ಥಾನಗಳನ್ನು ಗೆದ್ದುಕೊಂಡು ಬಿಗಿ ಹಿಡಿತ ಸಾಧಿಸಿತ್ತು. ಮತ್ತೊಂದೆಡೆ, ಬಿಜೆಪಿ 18 ಕ್ಷೇತ್ರಗಳಲ್ಲಷ್ಟೇ ಜಯಗಳಿಸಿತ್ತು. ಅಂದಿನ ಚುನಾವಣೆಯಲ್ಲಿ ಟಿಎಂಸಿ ಶೇ. 49.24ರಷ್ಟು ಮತಗಳನ್ನು ಗಳಿಸಿದ್ದರೆ, ಬಿಜೆಪಿ ಶೇ. 36.14ರಷ್ಟು ಮತ ಪ್ರಮಾಣ ಪಡೆದುಕೊಂಡಿತ್ತು. ಹೀಗಾಗಿ, ತಮ್ಮ ಭದ್ರಕೋಟೆ ಉಳಿಸಿಕೊಳ್ಳಲು ಟಿಎಂಸಿ ಹೋರಾಡುತ್ತಿದ್ದರೆ, ದಕ್ಷಿಣ ಬಂಗಾಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ತೀವ್ರ ಕಸರತ್ತು ನಡೆಸುತ್ತಿದೆ.
ಇದನ್ನು ಓದಿದ್ದೀರಾ? ಓಮನ್ ಬಳಿ 12 ಭಾರತೀಯರಿದ್ದ ಹಡಗಿನ ಮೇಲೆ ಇರಾನ್ ದಾಳಿ; ಎಲ್ಲಾ ಸಿಬ್ಬಂದಿ ಸುರಕ್ಷಿತ
ಅಂತಿಮ ಹಂತದ ಚುನಾವಣೆಯಲ್ಲಿ 1,228 ಪುರುಷರು ಮತ್ತು 220 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 1,448 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1.64 ಕೋಟಿ ಪುರುಷರು, 1.57 ಕೋಟಿ ಮಹಿಳೆಯರು ಮತ್ತು 792 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 3.22 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದಕ್ಕಾಗಿ 41,001 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 8,845 ಬೂತ್‌ಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ.
ಮತದಾನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯರು ಮತ್ತು ಯುವಕರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ. ಇನ್ನೊಂದೆಡೆ, ಬಿಜೆಪಿಯ ಸ್ವಪನ್ ದಾಸಗುಪ್ತ ಹಾಗೂ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಬೆಳಿಗ್ಗೆಯೇ ತಮ್ಮ ಹಕ್ಕು ಚಲಾಯಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಚುನಾವಣಾ ಆಯೋಗವು 2,321 ಕಂಪನಿಗಳ ಕೇಂದ್ರ ಪಡೆಗಳನ್ನು ನಿಯೋಜಿಸಿದೆ. ಇದರೊಂದಿಗೆ 142 ಸಾಮಾನ್ಯ ವೀಕ್ಷಕರು ಮತ್ತು 95 ಪೊಲೀಸ್ ವೀಕ್ಷಕರು ಚುನಾವಣಾ ಪ್ರಕ್ರಿಯೆಯ ಮೇಲೆ ಕಣ್ಣಿಟ್ಟಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರ ಉದ್ದನೆಯ ಸಾಲುಗಳು ಕಂಡುಬರುತ್ತಿದ್ದು, ಸಂಜೆಯವರೆಗೆ ಮತದಾನ ಪ್ರಕ್ರಿಯೆ ಮುಂದುವರಿಯಲಿದೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.




