ದಕ್ಷಿಣ ಕನ್ನಡ ಜಿಲ್ಲಾದ್ಯಂತ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಶುಕ್ರವಾರ ಮುಂಜಾನೆಯಿಂದಲೇ ಆರಂಭವಾದ ಮಳೆ ಬಿರುಸು ಪಡೆದಿದೆ. ಗ್ರಾಮೀಣ ಭಾಗಗಳಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ, ಅನುದಾನಿತ ಹಾಗೂ ಸರ್ಕಾರಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜು, ಡಿಪ್ಲೋಮಾ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಆದೇಶಿಸಿದ್ದಾರೆ.
ಕರಾವಳಿ ತೀರ ಪ್ರದೇಶದ ಜನರಿಗೆ ಜಾಗರೂಕರಾಗಿರಲು ಸೂಚನೆ
ಪುತ್ತೂರು ಉಪ ವಿಭಾಗದ ಸುಳ್ಯ, ಕಡಬ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕು ವ್ಯಾಪ್ತಿಗಳಲ್ಲಿ ಭಾರೀ ಮಳೆಯಾಗಿದೆ. ಧರ್ಮಸ್ಥಳ, ಚಾರ್ಮಾಡಿ ಘಾಟಿ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಮಳೆಯ ಆರ್ಭಟ ಕೊಂಚ ಹೆಚ್ಚೇ ಇತ್ತು. ಇತ್ತ ಮಂಗಳೂರು ನಗರ, ಕೊಣಾಜೆ, ಮೂಲ್ಕಿ, ಪಣಂಬೂರು ಹಾಗೂ ಉಳ್ಳಾಲದಲ್ಲೂ ಭಾರೀ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಕರಾವಳಿ ತೀರ ಪ್ರದೇಶದ ಜನರಿಗೆ ಜಾಗರೂಕರಾಗಿರಲು ಜಿಲ್ಲಾಡಳಿತ ಸೂಚನೆ ನೀಡಿದೆ.
ವಾಯುಭಾರ ಕುಸಿತ
This video cannot be played in your browser. Open the video directly
ವಾಯುಭಾರ ಕುಸಿತವು ಗುಜರಾತ್ ತಲುಪಿದ್ದು, ಕರ್ನಾಟದ ಕರಾವಳಿ ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ಈ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದಂತೆ ಮುಂಗಾರು ದುರ್ಬಲಗೊಳ್ಳಲಿದೆ. ಆ.4ರ ಸುಮಾರಿಗೆ ಮಧ್ಯಮ ಸ್ತರದಲ್ಲಿ ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ. ಪರಿಣಾಮ ಹಾಗೂ ಪರಿಸ್ಥಿತಿ ಕಾದು ನೋಡಬೇಕಾಗಿದೆ.
ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 24 ಗಂಟೆ ಅವಧಿಯಲ್ಲಿ ಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 73 ಮಿ.ಮೀ. ಮಳೆ ದಾಖಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಆಗಸ್ಟ್ 1ರಂದು ರಜೆ ಘೋಷಿಸಿ ಮಡಿಕೇರಿ ಮತ್ತು ಸೋಮವಾರಪೇಟೆ ತಹಶೀಲ್ದಾರರು ಆದೇಶಿಸಿದ್ದಾರೆ.
ಕಾವೇರಿ ನದಿಯ ನೀರಿನ ಮಟ್ಟ ಗಣನೀಯ ಹೆಚ್ಚಳ
ಕಾವೇರಿ ನದಿ ಪಾತ್ರದ ನಾಪೋಕ್ಲು, ಬಲಮುರಿ, ಮೂರ್ನಾಡು, ಸಿದ್ದಾಪುರ ಭಾಗದಲ್ಲಿಉತ್ತಮ ಮಳೆಯಾಗುತ್ತಿದೆ. ಮಡಿಕೇರಿ-ವಿರಾಜಪೇಟೆ ಮುಖ್ಯ ರಸ್ತೆಯ ನಡುವಿನ ಬೇತ್ರಿಯಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಾಪೋಕ್ಲುವಿಭಾಗದಲ್ಲೂಉತ್ತಮ ಮಳೆಯಾಗುತ್ತಿದ್ದು, ನಾಪೋಕ್ಲು ಮತ್ತು ಹಳೇ ತಾಲೂಕು ನಡುವಿನ ರಸ್ತೆ ಮೇಲೆ ಕಾವೇರಿ ನದಿ ನೀರು ಹರಿಯುತ್ತಿದೆ. ವಿರಾಜಪೇಟೆ, ಪೊನ್ನಂಪೇಟೆ ಮತ್ತು ಸೋಮವಾರಪೇಟೆ ತಾಲೂಕಿನಲ್ಲೂಉತ್ತಮ ಮಳೆಯಾಗುತ್ತಿದೆ.
ಬಲಮುರಿ, ಕೊಟ್ಟಮುಡಿ, ನೆಲ್ಯಹುದಿಕೇರಿ, ಕರಡಿಗೋಡು, ಗುಡ್ಡೆಹೊಸೂರು ಬಳಿ ಕಾವೇರಿ ನದಿ ಮೈದುಂಬಿಕೊಂಡು ಹರಿಯುತ್ತಿದೆ. ಮಡಿಕೇರಿ ನಗರ, ಮಕ್ಕಂದೂರು, ಕಾಲೂರು, ಮುಕ್ಕೋಡ್ಲು, ಸೂರ್ಲಬ್ಬಿ, ಮಾದಾಪುರ, ಸೋಮವಾರಪೇಟೆ ವ್ಯಾಪ್ತಿಯಲ್ಲಿಉತ್ತಮ ಮಳೆಯಾದ ಕಾರಣ ಹಟ್ಟಿಹೊಳೆ ಮತ್ತು ಮಾದಾಪುರ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.
ಜಿಲ್ಲಾಡಳಿತದಿಂದ ಸೂಚನೆ:
ನೀರು ಇರುವ ತಗ್ಗು ಪ್ರದೇಶಗಳು, ಕೆರೆ, ನದಿ ತೀರ ಹಾಗೂ ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪೋಷಕರು ಜಾಗ್ರತೆ ವಹಿಸಬೇಕು.
ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ಮತ್ತು ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.
ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣೆಯನ್ನು ತಪ್ಪದೇ ನಿರ್ವಹಿಸಬೇಕು. ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸಲು ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
ಇದನ್ನೂ ಓದಿದ್ದೀರಾ? ಶಿರಸಿ | ಭಾರೀ ಮಳೆಗೆ ನಗರ ಜಲಾವೃತ; ಕೋಟೆಕೆರೆ ಉಕ್ಕಿ ಹರಿದು ಜನಜೀವನ ಅಸ್ತವ್ಯಸ್ತ
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತಿ ತಾಲೂಕಿನಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳಲು ಆದೇಶಿಸಲಾಗಿದೆ.
ತುರ್ತು ನೆರವಿಗೆ ಉಚಿತ ಸಹಾಯವಾಣಿ: ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಟೋಲ್ ಫ್ರೀ ಸಂಖ್ಯೆ: 1077
ದೂರವಾಣಿ ಸಂಖ್ಯೆ: 0824-2442590





