ಪ್ರೀಮಿಯಂ ಲೇಖನ | ಮೂರು ಭಾಷೆಗಳ ಮೂರಾಬಟ್ಟೆ ನೀತಿ

Date:

ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವುದು ಒಂದು ರಾಜಕೀಯ ನಡೆಯೂ ಆಗಿದೆ. ನಮ್ಮ ಸಂಸತ್ತನ್ನು ನೋಡಿದರೆ ಅದು ತಿಳಿಯುತ್ತದೆ. ಇಂಗ್ಲಿಷ್‌ ಮಾತನಾಡಲು ಬಾರದವರು ಹಿಂದಿಯನ್ನು ಆಶ್ರಯಿಸಬೇಕಾದ ಸನ್ನಿವೇಶವನ್ನು ಉತ್ತರ ಭಾರತದ ರಾಜಕಾರಣಿಗಳು ಸೃಷ್ಟಿಸಿದ್ದಾರೆ.

- Advertisement -

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (2020) ಈ ವರ್ಷದಿಂದ (2026-27)ಜಾರಿಗೆ ಬರಲಿದೆ. ಈ ನೀತಿಯ ಪ್ರಕಾರ ತ್ರಿಭಾಷಾ ಸೂತ್ರ ಎಂದರೆ ನಮ್ಮ ಶಾಲಾ ಮಕ್ಕಳು ಮೂರು ಭಾಷೆಗಳನ್ನು ಕಲಿಯಬೇಕು. ಹಿಂದಿಯೇತರ ರಾಜ್ಯಗಳಿಗಂತೂ ಮೂರನೇ ಭಾಷೆಯಾದ ಹಿಂದಿ ಕಡ್ಡಾಯವಾಗಲಿದೆ. ಇಲ್ಲಿಯವರೆಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಹಿಂದಿ ಭಾಷೆಯನ್ನು ಇನ್ನು ಹಾಗೆ ನೋಡುವ ಹಾಗಿಲ್ಲ, ಅದನ್ನು ಕಡ್ಡಾಯವಾಗಿ ಕಲಿಸಬೇಕು; ವಿದ್ಯಾರ್ಥಿಗಳು ಹಿಂದಿಯನ್ನು ಓದಬೇಕು, ಪರೀಕ್ಷೆ ಬರೆಯಬೇಕು. ಈ ಭಾಷೆಯ ಅಂಕಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಎಂಬುದನ್ನು ಈ ಹೊಸ ಶಿಕ್ಷಣ ನೀತಿ ಹೇಳುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ವಿಪರ್ಯಾಸ ಎಂದರೆ ಹಿಂದಿಯನ್ನು ದಕ್ಷಿಣ ಭಾರತ ರಾಜ್ಯಗಳು ಮಾನ್ಯ ಮಾಡಿಯೇ ಇಲ್ಲ. ತ್ರಿಪುರ, ತಮಿಳುನಾಡು ಮತ್ತು ಪಾಂಡಿಚೆರಿಗಳಂತೂ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡೇ ಇಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಈ ರಾಜ್ಯಗಳು ತಮ್ಮ ಎರಡೇ ಭಾಷೆಯ ನಿಲುವನ್ನು ಬಿಟ್ಟುಕೊಟ್ಟಿಲ್ಲ. ಮೂರು ಭಾಷೆಯ ಸೂತ್ರವನ್ನು ಒಳಗೇ ಬಿಟ್ಟುಕೊಂಡಿಲ್ಲ. ಉಳಿದ ದಕ್ಷಿಣ ರಾಜ್ಯಗಳು ನೇರವಾಗಿ ವಿರೋಧ ಮಾಡದಿದ್ದರೂ ಹಿಂದಿಯನ್ನು ಅಂದರೆ ಮೂರನೇ ಕಡ್ಡಾಯ ಭಾಷೆಯನ್ನು ಗೌರವಿಸಿಯೇ ಇಲ್ಲ. ಅದು ನಿಯಮವಾಗಿ ಕಾಗದದ ಮೇಲೆ ಇದೆಯೇ ಹೊರತು ಜಾರಿಯಾಗಿಯೇ ಇಲ್ಲ.

ಹಿಂದಿ ಹೇರಿಕೆಯನ್ನು ಮಕ್ಕಳ ಮೇಲೆ ಹೇರುವುದನ್ನು ತಪ್ಪಿಸುವುದಕ್ಕಾಗಿ ಮತ್ತು ಬಹುಭಾಷಾ ಕಲಿಕೆಯ ಆಯ್ಕೆಯನ್ನು ಮಾಡಿಕೊಳ್ಳುವುದಕ್ಕಾಗಿ ಹೊಸ ಶಿಕ್ಷಣ ನೀತಿ ಪ್ರಯತ್ನಿಸಿದೆ ಎಂದು ಹೇಳಲಾಗಿದೆ; ಅಂದರೆ ಒಂದು ಅರ್ಥದಲ್ಲಿ ಮಕ್ಕಳ ಮುಂದೆ ಬಹುಭಾಷೆಗಳ ಆಯ್ಕೆಯನ್ನು ಸುಗಮಗೊಳಿಸಿ ಅವರು ಹೆಚ್ಚು ಹೆಚ್ಚು ಭಾಷೆಯನ್ನು ಶಾಲಾ ಹಂತದಲ್ಲಿಯೇ ಕಲಿತು, ಜಾಗತಿಕ ಸಂವಹನಕ್ಕೆ ತಮ್ಮನ್ನು ಅಣಿ ಮಾಡಿಕೊಳ್ಳಲು ನೆರವಾಗುವಂತೆ ಈ ಹೊಸ ನೀತಿಯನ್ನು ರೂಪಿಸಲಾಗಿದೆ ಎಂದೂ ಹೇಳಲಾಗಿದೆ. ಈ ಆಶಯವನ್ನು ಟೀಕಿಸಲು ಅವಕಾಶವೇ ಇಲ್ಲ.

ಹಾಗೆಯೇ ಶಿಕ್ಷಣ ಮಾಧ್ಯಮವನ್ನು ಕುರಿತೂ ಈ ರಾಷ್ಟ್ರೀಯ ನೀತಿ ಮಾರ್ಗದರ್ಶಿ ಸೂತ್ರಗಳನ್ನು ಮುಂದಿಟ್ಟಿದೆ. ಮಗುವಿಗೆ ಸರಳವಾಗಿ ಅರ್ಥ ಮಾಡಿಸಲು ನೆರವಾಗುವ ಮನೆಮಾತು/ ತಾಯ್ನುಡಿ/ ಪ್ರಾದೇಶಿಕ ಭಾಷೆಯಲ್ಲಿಯೇ ಕಲಿಕೆ ಇರಬೇಕು. ಪ್ರಾಥಮಿಕ ಹಂತದಲ್ಲಿ ಕೊನೆಯ ಪಕ್ಷ 5ನೇ ತರಗತಿಯವರೆಗೆ ಶಿಕ್ಷಣ ಈ ಭಾಷೆಯಲ್ಲಿಯೇ ನಡೆಯಬೇಕು. ಸಾಧ್ಯವಾದರೆ 8ನೇ ತರಗತಿಯವರೆಗೆ ಮುಂದುವರಿಯಬೇಕು-ಇತ್ಯಾದಿ ಅಂಶಗಳೂ ಈ ಸೂತ್ರದಲ್ಲಿವೆ.

ಕೇಂದ್ರ ಸರ್ಕಾರ ವಿಜ್ಞಾನದ ವಿಷಯದಲ್ಲಿ, ಮೇಲೆ ಸೂಚಿಸಿರುವ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ ಒದಗಿಸುವುದು ಎಂಬ ಭರವಸೆಯನ್ನೂ ನೀಡಲಾಗಿದೆ. ಇವೆಲ್ಲ ಅಂಶಗಳನ್ನು ಯಾರೂ ವಿರೋಧಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇವೆಲ್ಲ ಮಕ್ಕಳ ಕಲಿಕೆಗೆ ನೆರವು ನೀಡುತ್ತವೆ.

ಆದರೆ, ತೊಡಕಿರುವುದು ಎಲ್ಲಿ ಮತ್ತು ಹೇಗೆ ಎಂಬುದು ತಿಳಿಯಬೇಕಾದರೆ, ಈ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಮೂರು ಭಾಷೆಗಳು: ಸರಿ. ಮಕ್ಕಳು ಕಲಿಯುತ್ತಾರೆ. ಅವರ ಮಿದುಳು ಚುರುಕಾಗಿರುತ್ತದೆ; ಗ್ರಹಣಶಕ್ತಿಯೂ ಅಗಾಧವಾಗಿರುತ್ತದೆ. ಮಕ್ಕಳು ಯಾವ ಮೂರು ಭಾಷೆಗಳನ್ನು ಆಯ್ಕೆಮಾಡಿಕೊಳ್ಳಬೇಕು?

ಮೊದಲ ಭಾಷೆ: ತಾಯಿನುಡಿ ಅಥವಾ ಪ್ರಾದೇಶಿಕ ಭಾಷೆ.

ಈ ಆಯ್ಕೆ ಸುಲಭ ಮತ್ತು ನ್ಯಾಯ ಸಮ್ಮತ.

ಇದು ಹಿಂದಿಯನ್ನು ಮಾತನಾಡುವ ರಾಜ್ಯಗಳು ಮತ್ತು ಹಿಂದಿಯೇತರ ರಾಜ್ಯಗಳು ಎರಡಕ್ಕೂ ಒಂದೇ ನಿಯಮವಾಗಿದೆ. ಆದ್ದರಿಂದ ಈ ಭಾಷೆಯ ವಿಚಾರದಲ್ಲಿ ತಕರಾರು ಉಂಟಾಗುವುದಿಲ್ಲ.

ಎರಡನೆಯ ಭಾಷೆ: ಇಡೀ ದೇಶಕ್ಕೆ ಒಂದೇ ನೀತಿ ಇಲ್ಲಿ ಅನ್ವಯವಾಗುವುದಿಲ್ಲ. ಹಿಂದಿ ರಾಜ್ಯಗಳು ಮತ್ತು ಹಿಂದಿಯೇತರ ರಾಜ್ಯಗಳು ಎಂದು ವಿಭಜಿಸಿ ಎರಡು ಬಗೆಯ ಸೂತ್ರಗಳನ್ನು ರೂಪಿಸಲಾಗಿದೆ.

ಹಿಂದಿ ರಾಜ್ಯಗಳು ಇಂಗ್ಲಿಷ್‌ ಅಥವಾ ಆಧುನಿಕ ಭಾರತೀಯ ಯಾವುದೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಹಿಂದಿಯೇತರ ರಾಜ್ಯಗಳು ಎರಡನೇ ಭಾಷೆಯಾಗಿ ಹಿಂದಿ ಅಥವಾ ಇಂಗ್ಲಿಷನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಹಜವಾಗಿಯೇ ಇಲ್ಲಿ ಎರಡೂ ವಿಭಾಗಗಳ ರಾಜ್ಯಗಳ ಆಯ್ಕೆ ಇಂಗ್ಲಿಷ್‌ ಆಗಿರುತ್ತದೆ.

ಮೂರನೇ ಭಾಷೆ: ಹಿಂದೀ ರಾಜ್ಯಗಳಿಗೆ- ಇಂಗ್ಲಿಷ್‌ ಅಥವಾ ಒಂದು ಆಧುನಿಕ ಭಾರತೀಯ ಭಾಷೆ. (ಎರಡನೇ ಭಾಷೆಯಾಗಿ ಆಯ್ಕೆಮಾಡಿಕೊಂಡ ಭಾಷೆಯನ್ನು ಬಿಟ್ಟು)

ಇದು ಸರಿಯಾಗಿ ಕಂಡರೂ, ಹಿಂದಿ ರಾಜ್ಯಗಳ ಮೂರನೇ ಭಾಷೆ ಹಿಂದಿಯೇ ಆಗಿರುತ್ತದೆ. ಯಾಕೆಂದರೆ ಮೊದಲ ಭಾಷೆಯಾಗಿ ಅವರು ತಮ್ಮ ರಾಜ್ಯದ ಭಾಷೆಯನ್ನು ಅಥವಾ ತಾಯಿನುಡಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಹಿಂದಿ ತಾಯಿ ನುಡಿಯಾಗಿದ್ದರೆ ಅವರು ಮೊದಲ ಭಾಷೆಯಾಗಿ ಹಿಂದಿಯನ್ನು ಸಹಜವಾಗಿಯೇ ಮೊದಲ ಭಾಷೆಯಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಅವರಿಗೆ ಮೂರನೆಯ ಭಾಷೆಯಾಗಿ ಯಾವುದೇ ಒಂದು ಆಧುನಿಕ ಭಾರತೀಯ ಭಾಷೆಯನ್ನು ಆಯ್ಕೆಮಾಡಿಕೊಳ್ಳಬೇಕು. ಹಿಂದಿಯೇತರ ರಾಜ್ಯಗಳ ಯಾವ ಭಾಷೆಯನ್ನೂ ಅವರು ಆಯ್ಕೆ ಮಾಡಿಕೊಳ್ಳುವುದಿಲ್ಲ. ಕಾರಣ ಉತ್ತರ ರಾಜ್ಯದ ಭಾಷೆಗಳೇ ಅವರ ಆಯ್ಕೆಗೆ ಸಿಕ್ಕುತ್ತವೆ. ಕಲಿಯಲು ಅವೇ ಸುಲಭ ಎಂಬ ಭಾವನೆಯೂ ಅವರಲ್ಲಿ ಇರುತ್ತದೆ.

ಅದನ್ನು ಬಿಟ್ಟು ಹಿಂದಿಯೇತರ ರಾಜ್ಯಗಳ ಒಂದು ಭಾಷೆಯನ್ನು ಕಡ್ಡಾಯವಾಗಿ ಮೂರನೇ ಭಾಷೆಯಾಗಿ ಕಲಿಯಬೇಕೆಂದರೆ ಅದು ಭಾಷಾ ಹೇರಿಕೆಯಾಗುತ್ತದೆ.

ಹಿಂದಿಯೇತರ ರಾಜ್ಯಗಳ ಮುಂದಿರುವ ಮೂರನೇ ಭಾಷೆಯ ಪ್ರಶ್ನೆ: ತಾಯಿನುಡಿ ಮೊದಲ ಭಾಷೆಯಾಗಿರುತ್ತದೆ. ಇಂಗ್ಲಿಷ್‌ ಎರಡನೆಯ ಭಾಷೆಯಾಗಿರುತ್ತದೆ. ಮೂರನೆಯ ಭಾಷೆಯಾಗಿ ಅವರು ಯಾವ ಭಾಷೆಯನ್ನು ಆರಿಸಿಕೊಳ್ಳಬೇಕು? ಉಳಿದಿರುವುದು ಹಿಂದಿಯೇ ಎಂಬಂತಾಗುತ್ತದೆ. ಗುಜರಾತಿ, ಪಂಜಾಬಿ ಅಥವಾ ಇಂತಹದ್ದೇ ಇನ್ನೊಂದು ಭಾಷೆ ಕಲಿಯುವುದು ಕಷ್ಟ ಎಂದು ಇವರಿಗೆ ಅನ್ನಿಸುತ್ತದೆ. ಹಾಗಾಗಿ ಹಿಂದಿ ಹೇರಿಕೆಯ ಭಾಷೆಯಾಗುತ್ತದೆ.

ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವುದು ಒಂದು ರಾಜಕೀಯ ನಡೆಯೂ ಆಗಿದೆ. ನಮ್ಮ ಸಂಸತ್ತನ್ನು ನೋಡಿದರೆ ಅದು ತಿಳಿಯುತ್ತದೆ. ಇಂಗ್ಲಿಷ್‌ ಮಾತನಾಡಲು ಬಾರದವರು ಹಿಂದಿಯನ್ನು ಆಶ್ರಯಿಸಬೇಕಾದ ಸನ್ನಿವೇಶವನ್ನು ಉತ್ತರ ಭಾರತದ ರಾಜಕಾರಣಿಗಳು ಸೃಷ್ಟಿಸಿದ್ದಾರೆ. (ನಮ್ಮ ಸಂವಿಧಾನ ಮಾನ್ಯ ಮಾಡಿರುವ ಎಲ್ಲ ಭಾಷೆಗಳಲ್ಲೂ ನಮ್ಮ ಸಂಸದರು ಮಾತನಾಡುವ ಅವಕಾಶವಿದ್ದರೂ, ಯಾರೂ ತಮ್ಮ ತಾಯಿ ನುಡಿಯಲ್ಲಿ ಅಥವಾ ರಾಜ್ಯ ಭಾಷೆಯಲ್ಲಿ ಮಾತನಾಡದ ಸಾಹಸವನ್ನು ತೋರಿಸುತ್ತಿಲ್ಲ ಎಂಬುದು ಏನನ್ನು ಸೂಚಿಸುತ್ತದೆ?) ಜೊತೆಗೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ʼಒಂದು ದೇಶ ಒಂದು ಭಾಷೆ, ಒಂದು ಸಂಸ್ಕೃತಿʼ ಇತ್ಯಾದಿ ಧೋರಣೆಯಲ್ಲಿ ಹಿಂದಿಯನ್ನು ಅಧಿಕೃತ ರಾಷ್ಟ್ರಭಾಷೆಯೋ ಎನ್ನುವಂಥ ವಾತಾವರಣವನ್ನು ಸೃಷ್ಟಿಸಲು ತನ್ನೆಲ್ಲ ಪ್ರಯತ್ನವನ್ನು ಮಾಡುತ್ತಿದೆ. ಈಗಾಗಲೇ ಅನೇಕ ಕೇಂದ್ರ ಸರ್ಕಾರದ ಕಚೇರಿಗಳು ಹಿಂದಿಗೆ ಮಾತ್ರ ಸೀಮಿತ ಎನ್ನುವಂತಾಗಿವೆ. ಹಿಂದಿ ದೇಶದ ಸಮಗ್ರತೆಗೆ ಮತ್ತು ಏಕತೆಗೆ ದಾರಿ ಮಾಡಿಕೊಡುತ್ತದೆ ಎನ್ನುವ ಕೆಂದ್ರ ಸರ್ಕಾರದ ಧೋರಣೆ ಇತರ ಭಾಷೆಗಳನ್ನು ತುಳಿಯಲು ದಾರಿ ಮಾಡಿಕೊಡುತ್ತದೆ. ನಮ್ಮ ಒಕ್ಕೂಟ ರಾಜ್ಯಗಳ ರಾಷ್ಟ್ರದಲ್ಲಿ ಎಲ್ಲ ಭಾಷೆಗಳೂ ಮುಖ್ಯ. ಎಲ್ಲ ಸಮುದಾಯಗಳು, ಸಂಸ್ಕೃತಿಗಳೂ ಮುಖ್ಯ. ಅವೆಲ್ಲವೂ ಉಳಿಯಬೇಕು. ಹಾಗಾದಾಗಲೇ ಭಾರತದ ವೈವಿಧ್ಯತೆ, ಸಾಂಸ್ಕೃತಿಕ ವೈಭವ ಸಾಧ್ಯವಾಗುವುದು. ಭಾರತಕ್ಕೆ ಬಲ ಬರುವುದು, ಮುನ್ನಡೆ ಸಾಧ್ಯವಾಗುವುದು ಕೂಡಾ ಆಗಲೇ.

ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎಷ್ಟು ವಿಚಿತ್ರವಾಗಿದೆ ಎಂದರೆ, ಮೂರು ಭಾಷೆಗಳ ಆಯ್ಕೆ ರಾಜ್ಯಗಳಿಗೆ, ಪ್ರದೇಶಗಳಿಗೆ, ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರ. ಆದರೆ ಅವರು ಕಲಿಯುವ ಮೂರು ಭಾಷೆಗಳಲ್ಲಿ ಎರಡು ಭಾಷೆಗಳು ದೇಸೀಯ ಭಾಷೆಗಳಾಗಿರಬೇಕು. ಹಾಗೆಯೇ ಶಿಕ್ಷಣ ಮಾಧ್ಯಮ 5ನೇ ತರಗತಿಯವರೆಗೆ ತಾಯ್ನುಡಿಯಲ್ಲಿ ಇರಬೇಕು ಎಂದು ಹೇಳುತ್ತಲೇ ಸಾಧ್ಯವಾದ ಕಡೆಗೆಲ್ಲ ಎಂಬ ಮಾತನ್ನೂ ಸೇರಿಸುತ್ತದೆ. ವಿದ್ಯಾರ್ಥಿಗಳಿಗೆ ಒದಗಿಸುವ ಪಠ್ಯ ಸಾಮಗ್ರಿ ಎರಡು ಭಾಷೆಗಳಲ್ಲಿರಬೇಕು. ಒಂದು ತಾಯಿ ನುಡಿ, ಇನ್ನೊಂದು ಇಂಗ್ಲಿಷ್‌.

ಇನ್ನೂ ವಿಚಿತ್ರ ಎಂದರೆ ಇಂಥ ಬೋಧನೆಗೆ ಅಗತ್ಯ ತರಬೇತಿ ಪಡೆದ ಅಧ್ಯಾಪಕರು ಇಲ್ಲದಿರುವುದು. ಖಾಸಗೀ ಶಾಲೆಗಳಲ್ಲಿ ಇಂಗ್ಲಿಷ್‌ ಮಾತ್ರ ಶಿಕ್ಷಣ ಮಾಧ್ಯಮ ಮಾಡಿಕೊಂಡು, ಅದನ್ನು ಹಣ ಸುಲಿಯಲು ದಾರಿಯನ್ನಾಗಿ ಮಾಡಿಕೊಂಡಿರುವುದು. ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೂ ಪ್ರತಿಷ್ಠೆಯ ಪ್ರಶ್ನೆ ಪೋಷಕರಿಗೂ ಪ್ರತಿಷ್ಠೆಯ ಪ್ರಶ್ನೆ. ಮಕ್ಕಳು ಈ ಬಲೂನನ್ನೇ ಗಾಳಿಯಲ್ಲಿ ತೂರಿಬಿಡುತ್ತಾ ಸಾಗಬೇಕು. ಕಲಿಕೆ ಎಂಬುದು ಯಾವ ದೋಣಿಯಲ್ಲಿ ಎಷ್ಟು ಎಂಬುದು ಮಕ್ಕಳ ಆಯ್ಕೆ, ಪೋಷಕರ ಆಯ್ಕೆ, ರಾಜ್ಯ ಸರ್ಕಾರದ ಆಯ್ಕೆ ಹೀಗಿರುವಾಗ ಹೊಸ ರಾಷ್ಟ್ರೀಯ ಶಿಕ್ಷಣ ಎಲ್ಲಿ ಯಾವುದನ್ನು ಕಡ್ಡಾಯ ಮಾಡಲು ಸಾಧ್ಯ?

ಹೀಗಾಗಿಯೇ ತ್ರಿಭಾಷಾ ಸೂತ್ರವನ್ನುಕೆಲವು ರಾಜ್ಯಗಳು ತಿರಸ್ಕರಿಸುವುದು ಸಾಧ್ಯವಾಗಿದೆ; ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಇದು ಅನಿವಾರ್ಯ ಕೂಡಾ. ನಮ್ಮ ಕರ್ನಾಟಕ ಸರ್ಕಾರವೂ ಈ ಧೈರ್ಯವನ್ನು ತೋರಬೇಕಾಗಿದೆ.

G P Basavaraj
ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...

ಧಾರವಾಡ | ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಒಗ್ಗೂಡಿದ ಪ್ರಗತಿಪರ ಧ್ವನಿಗಳು

ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೌಹಾರ್ದತೆಯ ರಕ್ಷಣೆಗಾಗಿ ಧಾರವಾಡದಲ್ಲಿ...

ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಇಬ್ಬರು ಕೇಂದ್ರ ಸಚಿವರಿಗೆ ಕೊಕ್

ಉತ್ತರ ಪ್ರದೇಶದಿಂದ ತೆರವಾಗಲಿರುವ ಎಂಟು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಸೋಮವಾರ (ಅ....