ಚುನಾವಣ ಆಯೋಗ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಪೌರತ್ವದ ದಾಖಲೆಗಳಲ್ಲ ಎಂದು ತಿರಸ್ಕರಿಸಿದೆ. ಹಿಂದುಳಿದ ವರ್ಗ, ಆದಿವಾಸಿ ಹಾಗೂ ದಲಿತ ಸಮುದಾಯದವರಲ್ಲಿ ಇವರು ಕೇಳುವ 11 ದಾಖಲೆಗಳು ಇರುವುದಿಲ್ಲ, ಇದು ದಮನಿತರ ಮತದಾನದ ಹಕ್ಕು ಕಸಿಯುವ ಪ್ರಕ್ರಿಯೆಯಾಗಿದೆ ಆದ್ದರಿಂದ ಎಸ್‌ಐಆರ್ ವಿರೋಧಿಸಿ ಜನಾಂದೋಲನ ಕೈಗೊಳ್ಳಬೇಕು ಎಂದು ಚಿಂತಕ ಕೆ. ಪ್ರಕಾಶ್ ಕರೆ ನೀಡಿದರು.
ನಿನ್ನೆ ಹುಬ್ಭಳ್ಳಿಯಲ್ಲಿ ನಡೆದ 12ನೇ ಮೇ ಸಾಹಿತ್ಯ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಕಾನೂನಿನ ಚೌಕಟ್ಟಿನಲ್ಲಿ ಎಸ್ಐಆರ್ʼಗೆ ಪ್ರಾತಿನಿಧ್ಯತೆ ಇಲ್ಲ. ʼಮತದಾರರ ಪಟ್ಟಿಯಲ್ಲಿ ಅಕ್ರಮ ವಲಸಿಗರು ಇದ್ದಾರೆ, ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತೇವೆ’ ಎಂದು ಹೇಳಿದ ಆಯೋಗ ವಾಸಸ್ಥಳ ಬದಲಾದರೇ ಮತದಾರರ ವಾಸಸ್ಥಳದ ಮಾಹಿತಿ ಬದಲಾಯಿಸಬೇಕು ಬದಲಾಗಿ ಅವರನ್ನು ಚುನಾವಣ ಪ್ರಕ್ರಿಯೆಯಿಂದಲೇ ಹೊರದಬ್ಬಿ ಏನು ಸಾಧಿಸ ಹೊರಟ್ಟಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ” ಎಂದು ಅಭಿಪ್ರಾಯಿಸಿದರು.
“ಸಂವಿಧಾನದ ಮೂಲಭೂತ ಅಂಶಗಳು ಅವರ ಪ್ರಭುತ್ವಶಾಹಿ ಆಶಯಗಳಿಗೆ ತೊಡಕು ಎಂಬ ಕಾರಣಕ್ಕೆ ಸಂವಿಧಾನದ ಮೂಲಭೂತ ತತ್ವಗಳನ್ನು ಅಧಿಕಾರದಲ್ಲಿರುವವರು ಒಪ್ಪುವುದಿಲ್ಲ. ಸಂವಿಧಾನದ ಮೂಲತತ್ವಗಳನ್ನು ನಾಶ ಮಾಡಲು ಸಂವಿಧಾನವನ್ನೇ ಬಳಸಿಕೊಳ್ಳುತ್ತ ಭಾರತವನ್ನು ಹಿಂದೂ ರಾಷ್ರ್ಟ ಮಾಡಲು ಹೊರಟಿದ್ದಾರೆ. ಮುಸಲ್ಮಾನರನ್ನು ಬಿಟ್ಟು, ಉಳಿದ ಮತ ಧರ್ಮಗಳ ಜನರಿಗೆ ಪೌರತ್ವ ಕೊಡಲಾಗುವುದು ಎಂಬ ಹೇಳಿಕೆ ನೀಡಿದ್ದಾರೆ. ಮತ ಧರ್ಮದ ಆಧಾರದ ಮೇಲೆ ಪೌರತ್ವ ಕೊಡುವಿಕೆ ನಿರ್ಧರಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ” ಎಂದು ಆರೋಪಿಸಿದರು.
“ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಬೃಹತ್ ಪ್ರಮಾಣದಲ್ಲಿ ಜನ ಚಳವಳಿ ಆರಂಭಿಸುವ ತುರ್ತು ಎದುರಾಗಿದೆ. ದೇಶದ ಮುಗ್ಧ ಜನರಿಗೆ ಸುಳ್ಳನ್ನು ಸತ್ಯವೆಂದು ಒಪ್ಪಿಸುವವರ ದೊಡ್ಡ ದಂಡಿದೆ. ಇವರ ನಡುವಿದ್ದುಕೊಂಡು ಜನರಲ್ಲಿ ಅನಾಚಾರದ ಕುರಿತ ಅರಿವು ಮೂಡಿಸಲು ನಾವು ಸಿದ್ಧರಾಗಬೇಕು. ಎಸ್ಐಆರ್ ರದ್ದಾಗಬೇಕು ಎನ್ನುವ ಪ್ರತಿರೋಧ ದೊಡ್ಡಮಟ್ಟದ ಪ್ರತಿಭಟನೆಯ ರೂಪ ಪಡೆದು ಜನಾಂದೋಲನ ಆರಂಭಿಸಬೇಕಿದೆ” ಎಂದು ಕರೆ ನೀಡಿದರು.
ನೂರ್ ಶ್ರೀಧರ್ ಮಾತನಾಡಿ, “ನಾವು ಈ ವಾಸ್ತವದ ಜೊತೆಗೆ ಮುಖಾಮುಖಿ ಆಗಬೇಕು. ನಮ್ಮಲ್ಲಿಯೇ ಬೆಳಕು ಇದೆ. ರಾಜಕೀಯ ಸರ್ವಾಧಿಕಾರಿಗಳಿಗೆ ರಾಜಕಾರಣಿಗಳು ಶರಣಾಗಿದ್ದಾರೆ. ವೋಟ್ ಚೋರ್ ನಡೆಯುತ್ತಿತ್ತು, ಈಗ ವೋಟ್ ದರೋಡೆ ನಡೆಯುತ್ತಿದೆ. ಬಿಜೆಪಿ ಸೋಲಿಸಿದ್ದು ವಿರೋಧ ಪಕ್ಷದವರನ್ನಲ್ಲ, ಭಾರತವನ್ನು ಸೋಲಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಉಳಿಸುವ ಶಕ್ತಿ ನಮ್ಮ ಕೈಯಲ್ಲಿದೆ ಕರ್ನಾಟಕದ ಕಲಾವಿದರು, ಹೋರಾಟಗಾರರು, ಸಾಮನ್ಯ ಜನರು ಎಲ್ಲರೂ ಒಂದುಗೂಡಿ ಜನಾಂದೋಲನ ಸೃಷ್ಟಿಸುವ ಅಂಗ್ಯವಿದೆ” ಎಂದು ಕರೆಗೊಟ್ಟರು.
“ಎಸ್‌ಐಆರ್ ವಿರೋಧದ ಅಲೆ ಕರ್ನಾಟಕದಲ್ಲೂ ಶುರುವಾಗಿದೆ, ಎಲ್ಲರನ್ನೂ ಒಂದುಗೂಡಿಸಿ ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನಕ್ಕೆ ಕರ್ನಾಟಕ ಸಜ್ಜಾಗಿದೆ. ಹದಿಮೂರು ರಾಜ್ಯಗಳ ಎಸ್ಐಆರ್ ಪ್ರಕ್ರಿಯೆ ಅವಲೋಕಿಸಿ, ನಮ್ಮ ರಾಜ್ಯದ ಮತದಾರರ ಹಿತಾಸಕ್ತಿ ಕಾಯುವ ಷರತ್ತುಗಳೊಂದಿಗೆ ಕರ್ನಾಟಕದಲ್ಲಿ ಎಸ್‌ಐಆರ್ ಜಾರಿಗೊಳಿಸಬೇಕು. ಇಲ್ಲದಿದ್ದರೆ ಈ ಪ್ರಕ್ರಿಯೆಗೆ ಅವಕಾಶ ಕೊಡುವುದಿಲ್ಲ” ಎಂದು ಎಚ್ಚರಿಸಿದರು.




