'ಕೋಮು ದ್ವೇಷ, ದ್ವೇಷ ಭಾಷಣ, ದ್ವೇಷ ಅಪರಾಧಿ ಮತ್ತು ವಿಜಿಲಾಂಟಿಸಂ ಉಸ್ತುವಾರಿ ಪ್ರಾಧಿಕಾರ'ವನ್ನು ಸ್ಥಾಪಿಸಬೇಕು. ಪುನರಾವರ್ತಿತ ಅಪರಾಧಿಗಳು ಮತ್ತು ಸಂಘಟನೆಗಳನ್ನು ಗುರುತಿಸುವ ಹಾಗೂ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಈ ಪ್ರಾಧಿಕಾರ ಹೊಂದಿರಬೇಕು ಎಂದು ವರದಿ ಆಗ್ರಹಿಸಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದ್ವೇಷ ಭಾಷಣ ಮತ್ತು ಕೋಮುದ್ವೇಷ ಪ್ರಚೋದನೆ ತಾರಕ್ಕೇರಿತ್ತು. ಆಗ, ‘ನಾವು ಅಧಿಕಾರಕ್ಕೆ ಬಂದರೆ ದ್ವೇಷ ಭಾಷಣಗಳಿಗೆ ಕಡಿವಾಣ ಹಾಕುತ್ತೇವೆ’ ಎಂದು ಕಾಂಗ್ರೆಸ್ ವಾಗ್ದಾನ ನೀಡಿತ್ತು. ಆದರೀಗ, ಕಾಂಗ್ರೆಸ್ ನಿಜಕ್ಕೂ ಕೊಟ್ಟ ಮಾತಿಗೆ ಬದ್ಧವಾಗಿದೆಯೇ ಎಂದು ನೋಡಿದರೆ ನಿರಾಸೆ ಹುಟ್ಟುತ್ತದೆ. ಮೇ 16ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮುಸ್ಲಿಂ ಸಮಾವೇಶವು ಬಿಡುಗಡೆಗೊಳಿಸಿರುವ ‘ಕಾಂಗ್ರೆಸ್ ಸರ್ಕಾರದ ಆಶ್ವಾಸನೆಗಳು, ಅನುಷ್ಠಾನದಲ್ಲಿ ಕೊರತೆಗಳ ಕುರಿತ ವರದಿ ಹಾಗೂ ಆಗ್ರಹಗಳ ಪಟ್ಟಿ’ಯು ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೂ ಮುಂದುವರಿದಿರುವ ದ್ವೇಷಭಾಷಣಗಳು ಮತ್ತು ಅವುಗಳ ಸ್ವರೂಪವನ್ನು ಈ ವರದಿ ದಾಖಲಿಸಿದೆ.
ಕಾಂಗ್ರೆಸ್ ಪ್ರಣಾಳಿಕೆಯು ‘ಬಜರಂಗದಳ, ಪಿಎಫ್ಐ ಮತ್ತು ಇತರ ಕೆಲವು ಸಂಘಟನೆಗಳ ವಿರುದ್ಧ ಕಠಿಣ ಹಾಗೂ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂಬ ಭರವಸೆ ನೀಡಿತ್ತು. ಅಧಿಕಾರಕ್ಕೇರಿದ ಆರಂಭದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ತಮ್ಮ ಬದ್ಧತೆಯನ್ನು ಪುನುರುಚ್ಚರಿಸಿದ್ದರು. ಆದರೆ ಆದದ್ದೇನು? `ದ್ವೇಷ ಭಾಷಣ/ದ್ವೇಷ ಅಪರಾಧ ವರದಿ ಕಾರ್ಡ್-2026’ ದಾಖಲಿಸಿರುವ ಪ್ರಕಾರ, “ಸರ್ಕಾರ ಬದಲಾದ ನಂತರವೂ ಶ್ರೀರಾಮಸೇನೆ, ವಿಎಚ್‌ಪಿ, ಬಜರಂಗದಳ ಮತ್ತು ಅಂತಹ ಗುಂಪುಗಳಿಗೆ ಸಂಬಂಧಿಸಿದ ರಾಜಕೀಯ ನಾಯಕರು ಹಾಗೂ ಪದಾಧಿಕಾರಿಗಳು ಸೇರಿದಂತೆ ಅನೇಕ ಪುನರಾವರ್ತಿತ ಅಪರಾಧಿಗಳು ದ್ವೇಷ ಭಾಷಣಗಳನ್ನು ಮುಂದುವರಿಸಿದ್ದಾರೆ. ಎಫ್ಐಆರ್‌ಗಳು ಕೆಲವೊಮ್ಮೆ ದಾಖಲಾಗುತ್ತವೆ; ಆದರೆ ತನಿಖೆ ಬಂಧನ, ಸಮನ್ಸ್, ವಿಚಾರಣೆ, ಜಾಮೀನು ವಿರೋಧ ಮತ್ತು ವಿಚಾರಣೆಯ ಪ್ರಗತಿಗಳು ಅತ್ಯಂತ ದುರ್ಬಲವಾಗಿವೆ. ಹಬ್ಬಗಳು, ಯಾತ್ರೆಗಳು, ಗಣೇಶ ಮೆರವಣಿಗೆಗಳು, ಹನುಮ ಜಯಂತಿ ಕಾರ್ಯಕ್ರಮಗಳು ಮತ್ತು ಅಂತಹ ಸಾರ್ವಜನಿಕ ವೇದಿಕೆಗಳನ್ನು ಕೋಮು ಪ್ರಚೋದನೆ ಹಾಗೂ ದ್ವೇಷ ಭಾಷಣಕ್ಕಾಗಿ ಪದೇಪದೇ ಬಳಸಲಾಗುತ್ತಿದೆ”.
“2024ರಲ್ಲಿ ಕರ್ನಾಟಕದಲ್ಲಿ ಆರ್ಥಿಕ ಬಹಿಷ್ಕಾರ ಮತ್ತು ಅಲ್ಪಸಖ್ಯಾತ ಪ್ರದೇಶಗಳ ಮೇಲಿನ ದಾಳಿಗಳು ಸೇರಿದಂತೆ ಸುಮಾರು 48-50 ಕೋಮುದ್ವೇಷ ಘಟನೆಗಳು ನಡೆದಿವೆ ಎಂದು ವರದಿಗಳು ದಾಖಲಿಸಿವೆ. ರಾಜ್ಯಾದ್ಯಂತ 2022 ಮತ್ತು 2055ರ ನಡುವೆ 270 ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿದ್ದು, 259 ಬಂಧನಗಳಾಗಿವೆ. ಆದರೆ ಯಾವುದೇ ಸುಸ್ಥಿರ ಸಾರ್ವಜನಿಕ ಹೊಣೆಗಾರಿಕೆ ವ್ಯವಸ್ಥೆಯು ಅನುಸರಿಸಲ್ಪಟ್ಟಿಲ್ಲ” ಎಂದು ಮುಸ್ಲಿಂ ಸಮಾವೇಶದ ವರದಿ ಆತಂಕ ವ್ಯಕ್ತಪಡಿಸಿದೆ.
ಈ ಲೇಖನ ಓದಿದ್ದೀರಾ?: ಗ್ರಾಮ ಸ್ವರಾಜ್ಯದ ಆಶಯಕ್ಕೆ ಎಳ್ಳು-ನೀರು ಬಿಟ್ಟ ಸರ್ಕಾರ
ಮುಖ್ಯವಾಗಿ ಕೆಲವು ವ್ಯಕ್ತಿಗಳು ಪದೇಪದೇ ಕೋಮುದ್ವೇಷ ಭಾಷಣ ಮಾಡಿರುವುದನ್ನು ವರದಿ ದಾಖಲಿಸಿದೆ. “2023ರಷ್ಟು ಹಳೆಯದಾದ ಎಫ್ಐಆರ್‌ಗಳನ್ನು ಹೊಂದಿರುವ ವ್ಯಕ್ತಿಗಳು 2026ರಲ್ಲಿಯೂ ಯಾವುದೇ ಭಯವಿಲ್ಲದೆ ಪ್ರಚೋದನಕಾರಿ ಭಾಷಣಗಳನ್ನು ಮುಂದುವರಿಸಿದ್ದಾರೆ. ಕಾನೂನಿನ ಪರಿಣಾಮಗಳ ಬಗ್ಗೆ ತಮಗೆ ಯಾವುದೇ ಭಯವಿಲ್ಲ ಎಂದು ಬಹಿರಂಗವಾಗಿ ಅವರು ಘೋಷಿಸಿರುವುದು ಕಂಡುಬಂದಿದೆ. ದ್ವೇಷದ ಸಿದ್ಧಾಂತದಲ್ಲಿ ಆಳವಾಗಿ ಬೇರೂರಿರುವ ನಾಯಕರ ವಿರುದ್ಧ ಕೇವಲ ಎಫ್ಐಆರ್ ದಾಖಲಿಸಿದರೆ ಸಾಕಾಗುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ” ಎಂದು ವರದಿ ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ಸತತವಾಗಿ ದ್ವೇಷಭಾಷಣ ಮತ್ತು ಕೋಮು ಪ್ರಚೋದನೆ ನೀಡುತ್ತಿರುವ 18 ಮಂದಿಯನ್ನು ವರದಿ ಉಲ್ಲೇಖಿಸಿದೆ. “ಬಸನಗೌಡ ಪಾಟೀಲ್ ಯತ್ನಾಳ್ (ಬಿಜೆಪಿ ಶಾಸಕ), ಪ್ರಮೋದ್ ಮುತಾಲಿಕ್ (ಶ್ರೀರಾಮಸೇನೆ), ಕೆ.ಎಸ್. ಈಶ್ವರಪ್ಪ (ಬಿಜೆಪಿ ನಾಯಕ), ಅರುಣ್ ಕುಮಾರ್ ಪುತ್ತಿಲ (ಮಾಜಿ ಬಿಜೆಪಿ ಮುಖಂಡ/ಪಕ್ಷೇತರ), ಎಚ್.ಕೆ. ಪುರುಷೋತ್ತಮ ದತ್ತನಗರ (VHP), ಸಿದ್ದಲಿಂಗ ಸ್ವಾಮಿ (ಶ್ರೀರಾಮಸೇನೆ), ಡಾ. ಕಲ್ಲಡ್ಕ ಪ್ರಭಾಕರ ಭಟ್ (RSS ನಾಯಕ), ಗಂಗಾಧರ ಕುಲಕರ್ಣಿ (ಶ್ರೀರಾಮಸೇನೆ), ಶೋಭಾ ಕರಂದ್ಲಾಜೆ (ಕೇಂದ್ರ ಸಚಿವೆ, ಬಿಜೆಪಿ), ಸಿ.ಟಿ.ರವಿ (ಬಿಜೆಪಿ ಎಂಎಲ್ಸಿ), ತೇಜಸ್ವಿ ಸೂರ್ಯ (ಬಿಜೆಪಿ ಸಂಸದ), ಹರೀಶ್ ಪೂಂಜಾ (ಬಿಜೆಪಿ ಶಾಸಕ), ಪ್ರತಾಪ ಸಿಂಹ (ಮಾಜಿ ಸಂಸದ, ಬಿಜೆಪಿ), ಚಕ್ರವರ್ತಿ ಸೂಲಿಬೆಲೆ (ಕಾರ್ಯಕರ್ತ, ಭಾಷಣಕಾರ), ವೈ. ಭರತ್ ಶೆಟ್ಟಿ (ಬಿಜೆಪಿ ಶಾಸಕ), ಅನಂತ ಕುಮಾರ್ ಹೆಗಡೆ (ಮಾಜಿ ಸಂಸದ, ಬಿಜೆಪಿ), ಪುನೀತ್ ಕೆರೆಹಳ್ಳಿ (ಸ್ವಘೋಷಿತ ಗೋ ರಕ್ಷಕ, ಕಾರ್ಯಕರ್ತ), ಶರಣ್ ಪಂಪ್ ವೆಲ್ (VHP)- ಈ ಹದಿನೆಂಟು ಮಂದಿ ಪ್ರಮುಖ ದ್ವೇಷಭಾಷಣಕಾರರಾಗಿದ್ದಾರೆ” ಎಂದು ವರದಿ ದಾಖಲಿಸಿದೆ. ಈ ಪಟ್ಟಿಯಲ್ಲಿರುವ ಅನೇಕರ ಪ್ರಕರಣಗಳಿಗೆ ತಡೆಯಾಜ್ಞೆ ಸಿಕ್ಕಿರುವುದು ಹಾಗೂ ತಡೆಯಾಜ್ಞೆ ಪ್ರಶ್ನಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಕಳವಳಕಾರಿ ಎಂದು ವರದಿ ತಿಳಿಸಿದೆ.
ಯತ್ನಾಳ್, ಕಲ್ಲಡ್ಕ ಪ್ರಭಾಕರ ಭಟ್, ಈಶ್ವರಪ್ಪ, ಚಕ್ರವರ್ತಿ ಸೂಲಿಬೆಲೆ, ಗಂಗಾಧರ ಕುಲಕರ್ಣಿ, ಚಂದ್ರಶೇಖರ ಸ್ವಾಮೀಜಿ, ಆರ್. ಅಶೋಕ್, ತೇಜಸ್ವಿ ಸೂರ್ಯ ಅವರ ಮೇಲೆ ಕೆಲವು ದ್ವೇಷಭಾಷಣ ಸಂದರ್ಭಗಳಲ್ಲಿ ಪ್ರಕರಣ ದಾಖಲಾಗದೆ ಇರುವುದನ್ನು ವರದಿ ಪ್ರಸ್ತಾಪಿಸಿದೆ. “ಒಬ್ಬನೇ ವ್ಯಕ್ತಿ ಯಾವುದೇ ಅರ್ಥಪೂರ್ಣ ಪ್ರತಿಬಂಧಕವಿಲ್ಲದೆ ಪದೇಪದೇ ಪ್ರಚೋದನಕಾರಿ ಭಾಷಣಗಳನ್ನು ಮಾಡಲು ಸಾಧ್ಯವಾಗುತ್ತಿರುವಾಗ ಕೇವಲ ಎಫ್ಐಆರ್ ದಾಖಲಿಸುವುದು ಸಾಕಾಗುವುದಿಲ್ಲ” ಎಂದು ವರದಿ ಎಚ್ಚರಿಸಿದೆ.
ಸರ್ಕಾರ ರೂಪಿಸಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ವಿಧೇಯಕ, 2025’ರಲ್ಲಿನ ಮಿತಿಗಳ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನೂ ಸಮಾವೇಶದ ವರದಿ ಉಲ್ಲೇಖಿಸಿದೆ. “ಈ ವಿಧೇಯಕವನ್ನು ಸಾಕಷ್ಟು ಸಮಾಲೋಚನೆ ಇಲ್ಲದೆ ಅಂಗೀಕರಿಸಲಾಗಿದೆ. ಇದು ಅಸ್ಪಷ್ಟ ವ್ಯಾಖ್ಯಾನಗಳು, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ನಡುವಿನ ತಪ್ಪು ಸಮೀಕರಣ, ಶಿಕ್ಷೆಯಲ್ಲಿ ಅಸಮರ್ಪಕ ವ್ಯತ್ಯಾಸ ಹಾಗೂ ಮುಕ್ತ ಭಾಷಣವನ್ನು (legitimate speech) ಹತ್ತಿಕ್ಕಬಲ್ಲ ಸರ್ಕಾರದ ಅತಿಯಾದ ಅಧಿಕಾರಗಳಂತಹ ದೋಷಗಳನ್ನು ಹೊಂದಿರಬಹುದು ಎಂಬ ಗಂಭೀರ ಕಳವಳಗಳನ್ನು ‘ದ್ವೇಷ ಭಾಷಣದ ವರದಿ’ ಗಮನಿಸಿದೆ. ಹಕ್ಕುಗಳನ್ನು ರಕ್ಷಿಸುವ ಕಾನೂನು, ಉದ್ದೇಶಿತ ದ್ವೇಷವನ್ನು ಶಿಕ್ಷಿಸುವಂತಿರಬೇಕೇ ಹೊರತು ಅದು ಅನಿಯಂತ್ರಿತ ಸೆನ್ಸಾರ್‌ಶಿಪ್‌ನ ಸಾಧನವಾಗಬಾರದು” ಎಂದು ವರದಿ ಎಚ್ಚರಿಸಿದೆ.
ದ್ವೇಷ ಭಾಷಣ ತಡೆಗೆ ಏನು ಮಾಡಬೇಕು?
ಸರ್ಕಾರ ಭರವಸೆ ನೀಡಿ ಮೂರು ವರ್ಷಗಳಾದವು. ಆದರೆ ದ್ವೇಷ ಭಾಷಣ ತಡೆಗೆ ಪರಿಣಾಮಕಾರಿ ಕ್ರಮಗಳಾಗಿಲ್ಲ. ಸರ್ಕಾರ ತುರ್ತಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ವರದಿ ಆಗ್ರಹಿಸಿದೆ.
“ಕರ್ನಾಟಕದಲ್ಲಿ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ ಕುರಿತು ಸಮಗ್ರ ಲೆಕ್ಕಪರಿಶೋಧನೆ ಹಾಗೂ ವರದಿ ನೀಡಲು ನಾಗರಿಕ ಸಮಾಜದ ಸದಸ್ಯರು ಮತ್ತು ಕಾನೂನು ವೃತ್ತಿಪರರನ್ನೊಳಗೊಂಡ ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಕ್ರಿಮಿನಲ್ ವಿಚಾರಣೆಗಳ ಪ್ರಸ್ತುತ ಹಂತಗಳನ್ನು ಪರಿಶೀಲಿಸಬೇಕು, ಪ್ರಮುಖ ಅಪರಾಧಿಗಳು ಮತ್ತು ಸಂಘಟನೆಗಳನ್ನು ಗುರುತಿಸಬೇಕು, ಹಿಂಪಡೆಯಲಾದ ಪ್ರಕರಣಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು; ಉದ್ದೇಶಿತ ಸಮುದಾಯಗಳ ಮೇಲೆ ಉಂಟಾದ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಮೌಲ್ಯಮಾಪನ ಮಾಡಬೇಕು. ಆ ಮೂಲಕ ರಾಜ್ಯದ ಪ್ರತಿಕ್ರಿಯೆಯ ಪರಿಣಾಮಕಾರಿತ್ವ ಮತ್ತು ನ್ಯಾಯಾಂಗ ಮಾರ್ಗಸೂಚಿಗಳ ಅನುಷ್ಠಾನವನ್ನು ಮೌಲ್ಯಮಾಪನ ಮಾಡಬೇಕು” ಎಂದಿದೆ ವರದಿ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
“ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಭ್ರಾತೃತ್ವ ಮತ್ತು ಸಾಮರಸ್ಯಕ್ಕೆ ತನ್ನ ಬದ್ಧತೆಯನ್ನು ದೃಢೀಕರಿಸುವ ಸಾರ್ವಜನಿಕ ಪ್ರತಿಜ್ಞೆಯನ್ನು ಕೈಗೊಳ್ಳಬೇಕು. ಮುಖ್ಯವಾಹಿನಿ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿ ಮತ್ತು ದ್ವೇಷ ಭಾಷಣದ ಪಿಡುಗನ್ನು ಎದುರಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಲು ತಕ್ಷಣವೇ ನಾಗರಿಕ ಸಮಾಜದ ಸಮಾಲೋಚನಾ ಸಭೆಯನ್ನು ಕರೆಯಬೇಕು” ಎಂದು ಆಗ್ರಹಿಸಿದೆ.

“ಗೃಹ ಇಲಾಖೆಯ ಅಡಿಯಲ್ಲಿ ಅಲ್ಪಸಂಖ್ಯಾತರು ಮತ್ತು ಪೊಲೀಸ್ ಇಲಾಖೆಗಳ ಪ್ರತಿನಿಧಿಗಳು, ನಾಗರಿಕ ಸಮಾಜ ಹಾಗೂ ಕಾನೂನು ತಜ್ಞರನ್ನೊಳಗೊಂಡ ಅಧಿಸೂಚಿತ ‘ಕೋಮು ದ್ವೇಷ, ದ್ವೇಷ ಭಾಷಣ, ದ್ವೇಷ ಅಪರಾಧಿ ಮತ್ತು ವಿಜಿಲಾಂಟಿಸಂ ಉಸ್ತುವಾರಿ ಪ್ರಾಧಿಕಾರ’ವನ್ನು ಸ್ಥಾಪಿಸಬೇಕು. ಇದು ದ್ವೇಷ ಭಾಷಣ, ನೈತಿಕ ಪೊಲೀಸ್ಗಿರಿ, ವಿಜಿಲಾಂಟಿಸಂಗೆ ಸಂಬಂಧಿಸಿದ ಪುನರಾವರ್ತಿತ ಅಪರಾಧಿಗಳು ಮತ್ತು ಸಂಘಟನೆಗಳನ್ನು ಗುರುತಿಸುವ ಹಾಗೂ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರಬೇಕು. ಸಾರ್ವಜನಿಕ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಹೊಣೆಗಾರಿಕೆ ಡ್ಯಾಶ್ಬೋರ್ಡ್’ ಅನ್ನು ಸಿದ್ಧಪಡಿಸಬೇಕು. ಇದು ದಾಖಲಾದ ಎಫ್ಐಆರ್ಗಳು ಆರೋಪಿಗಳು, ಸಂಘಟನೆಗಳು, ಬಳಸಲಾದ ಸೆಕ್ಷನ್‌ಗಳು, ತನಿಖೆಯ ಸ್ಥಿತಿ, ದೋಷಾರೋಪ ಪಟ್ಟಿ ಸಲ್ಲಿಕೆಯ ಸ್ಥಿತಿ, ಜಾಮೀನು/ತಡೆಯಾಜ್ಞೆ ಆದೇಶಗಳು, ವಿಚಾರಣೆಯ ಪ್ರಗತಿ ಮತ್ತು ಶಿಕ್ಷೆ/ಖುಲಾಸೆ ಸ್ಥಿತಿಯನ್ನು ತೋರಿಸಬೇಕು” ಎಂದು ಒತ್ತಾಯಿಸಲಾಗಿದೆ.
“ಶಾಹೀನ್ ಅಬ್ದುಲ್ಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ದ್ವೇಷ ಭಾಷಣದ ಪ್ರಕರಣಗಳಲ್ಲಿ ತಕ್ಷಣವೇ ಸ್ವಯಂಪ್ರೇರಿತ (Suo Moto) ಎಫ್ಐಆರ್ ದಾಖಲಿಸುವುದನ್ನು ಕಡ್ಡಾಯಗೊಳಿಸಿ ಗೃಹ ಇಲಾಖೆಯು ಸರ್ಕಾರಿ ಆದೇಶವನ್ನು ಹೊರಡಿಸಬೇಕು. ಜೊತೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ನೇಮಕ, ಗುಂಪು ಹಿಂಸಾಚಾರಕ್ಕೆ ತುತ್ತಾಗುವ ಪ್ರದೇಶಗಳ ಮ್ಯಾಪಿಂಗ್, ತಡೆಗಟ್ಟುವ ಗುಪ್ತಚರ ವ್ಯವಸ್ಥೆಗಳ ರಚನೆ, ಫಾಸ್ಟ್ ಟ್ರ್ಯಾಕ್ ಅಭಿಯೋಜನೆ ಮತ್ತು ಸಂತ್ರಸ್ತರಿಗೆ ಪರಿಹಾರದ ಖಾತರಿಯ ಮೂಲಕ ತಹೀನ್ ಪೂನಾವಾಲ ತೀರ್ಪನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ವ್ಯವಸ್ಥಿತ ಪೂರ್ವಗ್ರಹ ಮತ್ತು ಕೋಮು ಧ್ರುವೀಕರಣವನ್ನು, ವಿಶೇಷವಾಗಿ ಅಂಚಿನಲ್ಲಿರುವ ಸಮುದಾಯಗಳನ್ನು ಗುರಿಯಾಗಿಸುವುದನ್ನು ಹೋಗಲಾಡಿಸಲು ಸಮಗ್ರ ಪೊಲೀಸ್ ಸುಧಾರಣೆಗಳು ಮತ್ತು ಸಂವೇದನಾಶೀಲ ಕ್ರಮಗಳನ್ನು ಜಾರಿಗೆ ತರಬೇಕು” ಎಂದು ತಿಳಿಸಿದೆ.
“ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣವನ್ನು ಗುರುತಿಸುವ ಕುರಿತು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಡ್ಡಾಯ ಪಠ್ಯಕ್ರಮವನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆಯು ಸರ್ಕಾರಿ ಆದೇಶವನ್ನು ಹೊರಡಿಸಬೇಕು. ಸಾರ್ವಜನಿಕ ಕಾರ್ಯಕ್ರಮಗಳು, ಯಾತ್ರೆಗಳು, ಧಾರ್ಮಿಕ ಮೆರವಣಿಗೆಗಳು ಮತ್ತು ರ್ಯಾಲಿಗಳಿಗೆ ಷರತ್ತುಗಳೊಂದಿಗೆ ಮಾತ್ರ ಅನುಮತಿ ನೀಡಲಾಗಿದೆಯೆಂದು ಖಚಿತಪಡಿಸಿಕೊಳ್ಳಬೇಕು. ಪುನರಾವರ್ತಿತ ಅಪರಾಧಿಗಳು ಭಾಗಿಯಾಗಿರುವ ಗಂಭೀರ ದ್ವೇಷ ಭಾಷಣ ಮತ್ತು ಕೋಮು ಬೆದರಿಕೆ ಪ್ರಕರಣಗಳಲ್ಲಿ ಸರ್ಕಾರಿ ವಕೀಲರು ಮತ್ತು ಪ್ರಾಸಿಕ್ಯೂಟರ್‌ಗಳು ವಾಡಿಕೆಯ ಜಾಮೀನು ಅಥವಾ ತಡೆಯಾಜ್ಞೆಯನ್ನು ವಿರೋಧಿಸುವುದನ್ನು ಕಡ್ಡಾಯಗೊಳಿಸುವ ಮೂಲಕ ಅಭಿಯೋಜನೆಯನ್ನು ಬಲಪಡಿಸಬೇಕು. ಸಾಂವಿಧಾನಿಕ ಸುವ್ಯವಸ್ಥೆಯನ್ನು ಪದೇ ಪದೇ ಉಲ್ಲಂಘಿಸುವ ಸಂಘಟನೆಗಳ ವಿರುದ್ಧದ ಕ್ರಮಕ್ಕಾಗಿ ಶಾಸನಬದ್ಧ ಆಯ್ಕೆಗಳನ್ನು ಪರಿಶೀಲಿಸಲು ಎನ್ಎಚ್ಆರ್‌ಸಿ ಮಾದರಿಯ ತನಿಖಾ ಅಧಿಕಾರಗಳೊಂದಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವನ್ನು ಬಲಪಡಿಸಬೇಕು” ಎಂದು ವರದಿ ಬೇಡಿಕೆ ಇಟ್ಟಿದೆ.
“ದ್ವೇಷ ಭಾಷಣಗಳನ್ನು ತಡೆಯುವುದೆಂದರೆ ಸರ್ಕಾರ ಮುಸ್ಲಿಮರಿಗೆ ಮಾಡುವ ಉಪಕಾರವೇನೂ ಅಲ್ಲ. ಅದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿ” ಎಂಬುದನ್ನು ಸಮಾವೇಶವು ಸ್ಪಷ್ಟವಾಗಿ ಹೇಳಿದೆ. ಸಮವೇಶವು ಬಿಡುಗಡೆ ಮಾಡಿರುವ ಹತ್ತು ಅಂಶಗಳ ವರದಿಗೆ ಕಾಂಗ್ರೆಸ್ ನಾಯಕರು ಹೇಗೆ ಸ್ಪಂದಿಸುತ್ತಾರೆ ಎಂಬುದು ಸದ್ಯದ ಕುತೂಹಲ.



