ಪಶ್ಚಿಮ ಬಂಗಾಳದಲ್ಲಿ ಅಂತಿಮವಾಗಿ ಗೆಲುವು ನಮ್ಮದೇ ಆಗಲಿದೆ. ಹೀಗಾಗಿ ಫಲಿತಾಂಶದ ಕೊನೆಯ ಕ್ಷಣದವರೆಗೆ ಯಾವುದೇ ಕಾರಣಕ್ಕೂ ಕಾರ್ಯಕರ್ತರು ಮತ್ತು ಏಜೆಂಟರು ಎಣಿಕೆ ಕೇಂದ್ರಗಳನ್ನು ಬಿಟ್ಟು ಹೊರಬರಬಾರದು ಎಂದು ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಆರಂಭಿಕ ಒಲವುಗಳಲ್ಲಿ ಟಿಎಂಸಿ ಹಿನ್ನಡೆ ಅನುಭವಿಸುತ್ತಿರುವ ಬೆನ್ನಲ್ಲೇ ಮಮತಾ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸೋಲಿನ ಭೀತಿ ಅಥವಾ ಎದುರಾಳಿಗಳ ಒತ್ತಡಕ್ಕೆ ಮಣಿಯದಂತೆ ಅವರು ತಮ್ಮ ಬೆಂಬಲಿಗರಲ್ಲಿ ಧೈರ್ಯ ತುಂಬಿದ್ದಾರೆ.
ಮತದಾನದ ಪ್ರಕ್ರಿಯೆ ಮತ್ತು ಎಣಿಕೆಯ ಸಂದರ್ಭದಲ್ಲಿ ಬಿಜೆಪಿ ಅಕ್ರಮ ಎಸಗುತ್ತಿದೆ ಎಂದು ಆರೋಪಿಸಿರುವ ಅವರು, “ಬಿಜೆಪಿಯು ನಮ್ಮ ಪಕ್ಷದ ಕಾರ್ಯಕರ್ತರನ್ನು ಮತ್ತು ಮತದಾರರನ್ನು ಮತಗಟ್ಟೆಗೆ ಹೋಗದಂತೆ ಬಲವಂತವಾಗಿ ತಡೆಯುತ್ತಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ” ಎಂದು ಕಿಡಿಕಾರಿದ್ದಾರೆ.
ಪಕ್ಷದ ಕಾರ್ಯಕರ್ತರು ಎಣಿಕೆ ಕೇಂದ್ರಗಳಲ್ಲಿ ಜಾಗರೂಕರಾಗಿರಬೇಕು. ಪ್ರತಿಯೊಂದು ಮತದ ಎಣಿಕೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೂ ಎಣಿಕೆ ಕೇಂದ್ರದಲ್ಲೇ ಬೀಡುಬಿಡಬೇಕು ಎಂದು ಅವರು ಸೂಚಿಸಿದ್ದಾರೆ. ಆರಂಭಿಕ ಅಂಕಿಅಂಶಗಳು ಏನೇ ಇರಲಿ, ಅಂತಿಮವಾಗಿ ಟಿಎಂಸಿ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸವನ್ನು ಅವರು ಪುನರುಚ್ಚರಿಸಿದ್ದಾರೆ.
ರಾಜ್ಯದ ಹಿತದೃಷ್ಟಿಯಿಂದ ಮತ್ತು ಪಕ್ಷದ ಭವಿಷ್ಯಕ್ಕಾಗಿ ಕಾರ್ಯಕರ್ತರು ಸಂಯಮದಿಂದ ಮತ್ತು ಜಾಗರೂಕತೆಯಿಂದ ಇರಬೇಕೆಂದು ಮಮತಾ ಬ್ಯಾನರ್ಜಿ ಈ ಮೂಲಕ ವಿನಂತಿಸಿದ್ದಾರೆ.




