ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ವಂಚಕರು, ಶಿವಮೊಗ್ಗದ ಶಿಕ್ಷಕಿಯೊಬ್ಬರಿಗೆ ಬರೋಬ್ಬರಿ ರೂ.6.85 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ದೂರುದಾರ ಶಿಕ್ಷಕಿ ಫೇಸ್‌ಬುಕ್ ಬಳಸುತ್ತಿದ್ದಾಗ ಜಾಹೀರಾತೊಂದನ್ನು ನೋಡಿ ಕ್ಲಿಕ್ ಮಾಡಿದ್ದಾರೆ. ತಕ್ಷಣವೇ ಅವರನ್ನು ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ ವಂಚಕರು, ಟ್ರೇಡಿಂಗ್ ಆ್ಯಪ್ ಲಿಂಕ್ ಕಳುಹಿಸಿದ್ದಾರೆ. ಗ್ರೂಪ್‌ನಲ್ಲಿ ಇತರ ಸದಸ್ಯರು ಹೆಚ್ಚಿನ ಲಾಭ ಪಡೆದಿರುವುದಾಗಿ ಹಾಕಿದ್ದ ಫೇಕ್ ಸ್ಕ್ರೀನ್‌ಶಾಟ್‌ಗಳನ್ನು ನೋಡಿ ನಂಬಿದ ಶಿಕ್ಷಕಿ, ವಂಚಕರ ಮಾತು ಕೇಳಿ ಅವರ ಹೇಳಿದಂತೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ನಂತರ ವಿಐಪಿ ಗ್ರೂಪ್‌ಗೆ ಸೇರಿಸಿ, ಕೇವಲ 12 ದಿನಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 6,85,000 ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಹಣ ಹೂಡಿಕೆ ಮಾಡಿದ ನಂತರ ಯಾವುದೇ ಲಾಭಾಂಶ ನೀಡದೆ ಸತಾಯಿಸಿದಾಗ ಅನುಮಾನಗೊಂಡ ಶಿಕ್ಷಕಿ, ಕುಟುಂಬದವರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ತಿಳಿದುಬಂದಿದೆ.
ಕಂಪನಿಯ ಹೆಸರಿನಲ್ಲಿ ನಕಲಿ ಆ್ಯಪ್ ಮತ್ತು ಗ್ರೂಪ್ ರಚಿಸಿ ವಂಚಿಸಿರುವ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.




