ತಮಿಳುನಾಡು ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆಯಾಗಿದ್ದು, ಸುಮಾರು ಆರು ದಶಕಗಳ (59 ವರ್ಷಗಳ) ಬಳಿಕ ಕಾಂಗ್ರೆಸ್ ಪಕ್ಷವು ತಮಿಳುನಾಡು ಸಚಿವ ಸಂಪುಟವನ್ನು ಸೇರಲಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ನೇತೃತ್ವದ ಸಚಿವ ಸಂಪುಟಕ್ಕೆ ಕಾಂಗ್ರೆಸ್ ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಅವರನ್ನು ಸೇರಿಸಲು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಒಪ್ಪಿಗೆ ಸೂಚಿಸಿದ್ದಾರೆ. ಇಬ್ಬರು ಶಾಸಕರು ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ವಿಚಾರವನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. “ಇದೊಂದು ಐತಿಹಾಸಿಕ ಕ್ಷಣವಾಗಿದೆ. 59 ವರ್ಷಗಳ ದೀರ್ಘ ಅವಧಿಯ ನಂತರ ಕಾಂಗ್ರೆಸ್ ತಮಿಳುನಾಡು ಸಚಿವ ಸಂಪುಟವನ್ನು ಸೇರುತ್ತಿದೆ. ಇಬ್ಬರು ಶಾಸಕರು ತಮಿಳುನಾಡು ಜನತೆಯ ಭಾಗ್ಯ ಮತ್ತು ಆಶಯಗಳನ್ನು ಈಡೇರಿಸುತ್ತಾರೆ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕಲ್ಯಾಣ ಮತ್ತು ಜನಪರ ಆಡಳಿತದ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸುತ್ತಾರೆ ಎಂಬ ವಿಶ್ವಾಸ ನಮಗಿದೆ,” ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 23 ರಂದು ನಡೆದ 234 ಸ್ಥಾನಗಳ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಆದರೆ, ಕೇವಲ ಒಂದು ಅವಧಿಯ ಆಡಳಿತದ ನಂತರ ಡಿಎಂಕೆ ಅಧಿಕಾರವನ್ನು ಕಳೆದುಕೊಂಡಿತು. ಫೆಬ್ರವರಿ 2024 ರಲ್ಲಿ ಸ್ಥಾಪನೆಯಾದ, ನಟನೆಯಿಂದ ರಾಜಕಾರಣಿಯಾಗಿರುವ ವಿಜಯ್ ಅವರ ‘ಟಿವಿಕೆ’ ಪಕ್ಷವು ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ, ಬಹುಮತಕ್ಕೆ 10 ಸ್ಥಾನಗಳ ಕೊರತೆ ಎದುರಿಸಿತ್ತು.
ಇದನ್ನು ಓದಿದ್ದೀರಾ? ಎಐಎಡಿಎಂಕೆಗೆ ಸಂಪುಟದಲ್ಲಿ ಸ್ಥಾನವಿಲ್ಲ: ವಿಸಿಕೆ, ಸಿಪಿಎಂ ಎಚ್ಚರಿಕೆ ಬೆನ್ನಲ್ಲೇ ಸಿಎಂ ವಿಜಯ್ ನಿರ್ಧಾರ
ಬಹುಮತ ಕೊರತೆಯ ಹಿನ್ನೆಲೆಯಲ್ಲಿ ವಿಜಯ್ ಅವರು ಕಾಂಗ್ರೆಸ್ ಬೆಂಬಲವನ್ನು ಕೋರಿದರು. ಸರ್ಕಾರದಲ್ಲಿ ಯಾವುದೇ “ಕೋಮುವಾದಿ ಶಕ್ತಿಗಳನ್ನು” ಮೈತ್ರಿಯಲ್ಲಿ ಸೇರಿಸಬಾರದು ಎಂಬ ಷರತ್ತಿನ ಮೇರೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿತು. ನಂತರ ವಿದುತಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಮತ್ತು ಎಡಪಕ್ಷಗಳು ಕೂಡ ಟಿವಿಕೆಗೆ ಬೆಂಬಲ ನೀಡಿದವು, ಇದರಿಂದ ಟಿವಿಕೆ ಬಹುಮತದ ಗಡಿಯನ್ನು ದಾಟಲು ಸಾಧ್ಯವಾಯಿತು.
1967 ರಿಂದ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಅದರ ಪ್ರಬಲ ವಿರೋಧಿ ಎಐಎಡಿಎಂಕೆ ಪಕ್ಷಗಳೇ ಆಡಳಿತ ನಡೆಸಿದವು (ಟಿವಿಕೆ ಗೆಲ್ಲುವವರೆಗೆ). ವಿಶೇಷ ಎಂದರೆ, ಈ ಎರಡೂ ಪಕ್ಷಗಳು ಯಾವಾಗಲೂ ತಮ್ಮ ಸರ್ಕಾರದಲ್ಲಿ ಮೈತ್ರಿ ಪಕ್ಷಗಳಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷವು ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವ ಸ್ಥಾನ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಕಾಂಗ್ರೆಸ್ ತಮಗೆ ‘ಬೆನ್ನಿಗೆ ಚೂರಿ ಹಾಕಿದೆ’ ಎಂದು ಆರೋಪಿಸಿದೆ ಹಾಗೂ ಮೈತ್ರಿಯನ್ನು ಕಡಿದುಕೊಂಡಿದೆ.




