ಈ ದಿನ ಸಂಪಾದಕೀಯ |ಯುವಜನರ ನಿಜ ಆಕ್ರೋಶ ಪರೀಕ್ಷಾ ಅಕ್ರಮದಾಚೆಗಿದೆ, ನಿರುದ್ಯೋಗದ ಬಿಕ್ಕಟ್ಟಿನಲ್ಲಿ…

Date:

ಪ್ರಸ್ತುತ ಭಾರತದ ಯುವಜನತೆಯ ಆಕ್ರೋಶದ ಮೂಲ ಕೇವಲ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ನೇಮಕಾತಿ ವಿಳಂಬದಲ್ಲಿಲ್ಲ. ವರ್ಷಗಳಿಂದ ಬೆಳೆಯುತ್ತಲೇ ಇರುವ ʼನಿರುದ್ಯೋಗʼ ಬಿಕ್ಕಟ್ಟಿನಲ್ಲಿದೆ. ವರ್ಷಗಳ ಕಾಲ ಸಿದ್ಧತೆ ನಡೆಸಿದರೂ ಒಂದೊಳ್ಳೆ ಗೌರವಯುತ ಉದ್ಯೋಗ ಗಿಟ್ಟಿಸಿಕೊಳ್ಳಲು ಹೆಣಗಾಡುತ್ತಿರುವ ಪರಿಸ್ಥಿತಿಯಲ್ಲಿದೆ. ಹೀಗಿರುವಾಗ, ಕೇವಲ ಪರೀಕ್ಷಾ ಸುಧಾರಣೆ ಅಥವಾ ಉಚಿತ ಆನ್‌ಲೈನ್ ಕೋಚಿಂಗ್‌ನಂತಹ ತಾತ್ಕಾಲಿಕ ಗಿಮಿಕ್‌ಗಳು ಯುವಕರ ರೋಷಾಗ್ನಿಯನ್ನು ತಣಿಸಲಾರವು. ಸದ್ಯ ಎಲ್ಲ ಸಂಕಷ್ಟಗಳನ್ನ ಮೀರಿ ನಿಲ್ಲುವ ಬೃಹತ್ ಉದ್ಯೋಗ ಕ್ರಾಂತಿಯ ಅನಿವಾರ್ಯವೊಂದು ಸೃಷ್ಟಿಯಾಗಿದೆ.

- Advertisement -

ಭಾರತದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಪ್ರತಿಭೆಯ ಅಳತೆಗೋಲಾಗಿ ಉಳಿದಿಲ್ಲ. ಅದೊಂದು ದೊಡ್ಡ ಮಾಫಿಯಾದ ರೂಪು ತಳೆದಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ನೇಮಕಾತಿಗಳು, ಕೌನ್ಸೆಲಿಂಗ್‌ನಲ್ಲಿ ನಡೆಯುವ ಭ್ರಷ್ಟಾಚಾರ, ಕೋಟ್ಯಂತರ ರೂಪಾಯಿಗಳ ಲಂಚದ ರಾಡಿ ಈ ವ್ಯವಸ್ಥೆಯನ್ನು ಮೆತ್ತಿಕೊಂಡಿದೆ. ಯುವಕರು ಓದಿನ ಕಡೆ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ, ಪರೀಕ್ಷೆಗಳು ನ್ಯಾಯಯುತವಾಗಿ ನಡೆಯುತ್ತವೆಯೋ ಇಲ್ಲವೋ, ನಡೆದರೂ ಕೆಲಸ ಸಿಗುವುದೋ ಇಲ್ಲವೋ, ಸಿಕ್ಕರೂ ಎಷ್ಟು ಲಂಚದ ಮೇಲೆ ಸಿಗಬಹುದು ಎಂಬೆಲ್ಲಾ ಆತಂಕಗಳಲ್ಲೇ ಕಾಲ ಕಳೆಯಬೇಕಾದ ದುರಂತ ಸ್ಥಿತಿ ನಿರ್ಮಾಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಈ ದೇಶದ ಹೆಚ್ಚಿನವರು ಹಳ್ಳಿಗಾಡಿನ ರೈತರು ಮತ್ತು ಬಡ ಕೂಲಿ ಕಾರ್ಮಿಕರು. ಮಕ್ಕಳು ದೊಡ್ಡ ಅಧಿಕಾರಿಗಳಾಗಬೇಕು ಎಂಬ ಹಗಲುಗನಸು ಕಂಡು, ತಮಗಿರುವ ತುಂಡು ಭೂಮಿಯನ್ನೂ ಮಾರಿ, ಲೇವಾದೇವಿಗಾರರ ಬಳಿ ಕೈಯೊಡ್ಡಿ ಸಾಲ ಮಾಡಿ ದೊಡ್ಡ ನಗರಗಳಿಗೆ ಕಳುಹಿಸುತ್ತಾರೆ. ಅಲ್ಲಿ ವರ್ಷಗಟ್ಟಲೆ ಕಷ್ಟಪಟ್ಟು, ನೆಮ್ಮದಿಯಿಲ್ಲದೆ ಓದಿದರೂ ಕೊನೆಗೆ ಎದುರಾಗುವುದು ನಿರಾಶೆ. ಅದರ ಬೆನ್ನಲ್ಲೇ ಮಾನಸಿಕ ಒತ್ತಡ, ಕುಟುಂಬದ ಸಾಲದ ಹೊರೆ ಮತ್ತು ಭವಿಷ್ಯದ ಅನಿಶ್ಚಿಯತೆಯಂತಹ ಮತ್ತಷ್ಟು ಸಂಕಷ್ಟಗಳು.

ಶಿಕ್ಷಣ ಸಚಿವರ ರಾಜೀನಾಮೆಯಿಂದ ಹಿಡಿದು ಪ್ರಧಾನ ಮಂತ್ರಿಯವರ ಢೋಂಗಿ ಭಾಷಣದ ತನಕ ಎಲ್ಲವೂ ಹುಸಿ ಸಾಂತ್ವನದ ನಾಟಕಗಳೇ ವಿನಾ ನೈಜ ಬಿಕ್ಕಟ್ಟಿಗೆ ಮದ್ದಲ್ಲ. ಡಿಜಿಟಲ್ ಇಂಡಿಯಾದ ಕನಸು ಕಾಣಿಸುತ್ತಾ, ಉಚಿತ ಆನ್‌ಲೈನ್ ಕೋಚಿಂಗ್‌ನ ಆಮಿಷವೊಡ್ಡಿ ಮೂಲ ಸಮಸ್ಯೆಯಿಂದ ಯುವಕರ ಗಮನವನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ಈ ನಗ್ನಸತ್ಯವನ್ನ ವರದಿಗಳೇ ಬಿಚ್ಚಿಟ್ಟಿವೆ. ಮೋಸ್ಪಿ (MoSPI) ಸಮೀಕ್ಷೆಯ 2018ರ ದತ್ತಾಂಶದ ಪ್ರಕಾರ, ಭಾರತೀಯ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮಾಡುವ ಒಟ್ಟು ವೆಚ್ಚದಲ್ಲಿ ಕೇವಲ ಖಾಸಗಿ ಕೋಚಿಂಗ್‌ಗಾಗಿಯೇ ಶೇಕಡಾ 12.5ರಷ್ಟು ಖರ್ಚು ಮಾಡುತ್ತವೆ. 2025-26ರಲ್ಲಿ ಈ ಪ್ರಮಾಣ ಶೇ.16! ಹಿರಿಯ ಮಾಧ್ಯಮಿಕ ಹಂತ ತಲುಪುವಷ್ಟರಲ್ಲಿ ಈ ಖರ್ಚು ಒಟ್ಟು ಬಜೆಟ್‌ನ ಸುಮಾರು ಕಾಲುಭಾಗದಷ್ಟನ್ನು ನುಂಗಿರುತ್ತದೆ. ಸಾಲದ ಸುಳಿಗೆ ಸಿಕ್ಕ ಬಡ ಕುಟುಂಬಗಳು ಈ ಭಾರ ಭರಿಸಲಾಗದೆ ನಲುಗಿಹೋಗುತ್ತಿವೆ. ಇಷ್ಟೆಲ್ಲಾ ಹಣ ಸುರಿದು ಕಷ್ಟಪಟ್ಟು ಓದಿದರೂ ಕೊನೆಗೆ ಫಲ ಸಿಗುವ ಗ್ಯಾರಂಟಿ ಇಲ್ಲ. ಗುಣಮಟ್ಟದ ವೃತ್ತಿಪರ ಶಿಕ್ಷಣವು ಬೆರಳೆಣಿಕೆಯಷ್ಟು ಪ್ರತಿಷ್ಠಿತ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ.

ಉದಾಹರಣೆಗೆ, ಈ ವರ್ಷದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ (NEET) ಸುಮಾರು 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರೆ, ಲಭ್ಯವಿದ್ದ ಅಂಡರ್‌ಗ್ರಾಜ್ಯುವೇಟ್ ಸೀಟುಗಳು ಕೇವಲ 1.4 ಲಕ್ಷದಷ್ಟು ಮಾತ್ರ. ಅದರಲ್ಲಿಯೂ ದೇಶದ ಅಗ್ರ 50 ಕಾಲೇಜುಗಳಲ್ಲಿ ಲಭ್ಯವಿದ್ದ ಸೀಟುಗಳು 10,000ಕ್ಕಿಂತ ಕಡಿಮೆ. ಎಂಜಿನಿಯರಿಂಗ್ ಕ್ಷೇತ್ರದ JEE ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಸೀಟುಗಳ ಈ ಅನ್ಯಾಯದ ಅಸಮತೋಲನದಿಂದ ಬೇಸತ್ತ ಯುವಕರು ಕಾಲೇಜು ಮೆಟ್ಟಿಲು ಹತ್ತುವುದನ್ನೇ ಬಿಡುತ್ತಿದ್ದಾರೆ. AISHE ಇತಿಹಾಸದಲ್ಲೇ ಮೊದಲ ಬಾರಿಗೆ 2023-24ರಲ್ಲಿ ಅಂಡರ್‌ಗ್ರಾಜ್ಯುವೇಟ್ ದಾಖಲಾತಿಯು 93,322ರಕ್ಕೆ ಕುಸಿದಿದೆ. ವಿಶೇಷವಾಗಿ ಯುವ ಪುರುಷರಲ್ಲಿ ಈ ಇಳಿಕೆ ಹೆಚ್ಚಾಗಿದೆ. ಉತ್ತರ ಪ್ರದೇಶವೊಂದರಲ್ಲೇ ಪದವಿ ದಾಖಲಾತಿ 1.53 ಲಕ್ಷದಷ್ಟು ಕುಸಿದರೆ, ಡಿಪ್ಲೊಮಾ ದಾಖಲಾತಿ 1.38 ಲಕ್ಷದಷ್ಟು ಹೆಚ್ಚಾಗಿದ್ದು, ಉನ್ನತ ಶಿಕ್ಷಣದ ಮೇಲಿನ ನಂಬಿಕೆ ಕಳೆದುಹೋಗಿ ಯುವಕರು ಅಲ್ಪಾವಧಿಯ ತಾಂತ್ರಿಕ ಕೋರ್ಸ್‌ಗಳತ್ತ ಮುಖ ಮಾಡುತ್ತಿರುವುದಕ್ಕೆ ಇದು ಸ್ಪಷ್ಟ ನಿದರ್ಶನ.

ಇನ್ನು ಉದ್ಯೋಗ ಮಾರುಕಟ್ಟೆಯ ನೈಜತೆಯಂತೂ ಎದೆ ನಡುಗಿಸುತ್ತದೆ. ಆವರ್ತಕ ಶ್ರಮಶಕ್ತಿ ಸಮೀಕ್ಷೆಯ (PLFS) ದತ್ತಾಂಶವು, 2025ರಲ್ಲಿ 15 ರಿಂದ 29 ವರ್ಷ ವಯಸ್ಸಿನ ಪ್ರತಿ 100 ಪದವೀಧರರಲ್ಲಿ ಕೇವಲ 26 ಮಂದಿ ಮಾತ್ರ ನಿಯಮಿತ ಸಂಬಳದ ಉದ್ಯೋಗದಲ್ಲಿದ್ದರು. ಅತಿ ಶೋಚನೀಯ ಸಂಗತಿಯೆಂದರೆ, ಕೇವಲ ನಾಲ್ವರಿಗೆ ಮಾತ್ರ ಉದ್ಯೋಗ ಒಪ್ಪಂದ (Contract) ಮತ್ತು ಸಾಮಾಜಿಕ ಭದ್ರತೆಯೊಂದಿಗೆ ಸುರಕ್ಷಿತ ಸಂಬಳದ ಕೆಲಸವಿತ್ತು. ಉಳಿದವರು ಕೈಯಲ್ಲಿ ಪದವಿ ಹಿಡಿದುಕೊಂಡು ಗೂಡ್ಸ್ ಡೆಲಿವರಿ ಬಾಯ್‌ಗಳಾಗಿ, ರಾಜಕಾರಣಿಗಳ ಹಿಂಬಾಲಕರಾಗಿ, ಯಾವುದೋ ಪಕ್ಷದ ಕಾರ್ಯಕರ್ತರಾಗಿ ಅಥವಾ ಕಡಿಮೆ ವೇತನದ ಕೆಲಸವನ್ನೇ ಹುಡುಕಿ ಅಲೆಯುವ ಅನಿವಾರ್ಯತೆಯಲ್ಲಿದ್ದಾರೆ ಎಂದಿದೆ.

ಸರ್ಕಾರ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಎಂದು ಬೊಬ್ಬೆ ಹೊಡೆಯುತ್ತದೆ. ವಾಸ್ತವದಲ್ಲಿ ಈ ದೇಶದ ಯುವಕರ ಕೌಶಲಕ್ಕೆ ತಕ್ಕ ಉದ್ಯೋಗಗಳನ್ನು ಸೃಷ್ಟಿಸುವ ಕೈಗಾರಿಕಾ ಸಾಮರ್ಥ್ಯ ಇನ್ನೂ ಬೆಳೆದಿಲ್ಲ. ಅದಕ್ಕಾಗಿಯೇ ಪ್ರತಿ ವರ್ಷ ಇಲ್ಲಿ ಓದಿ ವಿದೇಶದಲ್ಲಿ ಭವಿಷ್ಯ ಕಟ್ಟಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳು ತಮ್ಮ ಯುವಜನತೆಯನ್ನು ಉತ್ಪಾದನಾ ವಲಯದ ಶಕ್ತಿಯಾಗಿ ರೂಪಿಸಿಕೊಂಡು ಜಾಗತಿಕ ಪೂರೈಕೆ ಸರಪಳಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿರುವಾಗ, ನಮ್ಮ ದೇಶದಲ್ಲಿ ಪದವೀಧರರು ಚಹಾ ಅಂಗಡಿಗಳ ಮುಂದೆ ನಿಲ್ಲುವ, ಗೂಡ್ಸ್ ಡೆಲಿವರಿ ಮಾಡುವ ಅನಿವಾರ್ಯ ಸೃಷ್ಟಿಯಾಗಿದೆ.

ಸರ್ಕಾರ ಈ ದೇಶದ ಆರ್ಥಿಕತೆ ಶೇಕಡಾ 6 ರಿಂದ 6.5ರಷ್ಟು ಬೆಳೆಯುತ್ತಿದೆ ಎಂದು ಬೆನ್ನು ತಟ್ಟಿಕೊಳ್ಳುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಕಾಲೇಜುಗಳಿಂದ ಹೊರಬರುವ ಕೋಟ್ಯಂತರ ಯುವಕರ ಹಸಿವನ್ನು ನೀಗಿಸುವ ತಯಾರಿಕಾ (Manufacturing) ವಲಯ ಒಟ್ಟು ಮೌಲ್ಯ ವರ್ಧನೆಯಲ್ಲಿ (GVA) ಕೇವಲ ಆರನೇ ಒಂದು ಭಾಗದಷ್ಟಿದೆ. ಇದು ಸರ್ಕಾರ ಭರವಸೆ ನೀಡಿದ್ದ ಕಾಲುಭಾಗದಷ್ಟೂ ಇಲ್ಲ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಸರ್ಕಾರ, ಸಾರ್ವಜನಿಕ ಆರೋಗ್ಯ ಮತ್ತು ಸಚಿವ ಖಾದರ್

ಮತ್ತೊಂದೆಡೆ, ಕಾರ್ಪೊರೇಟ್ ತೆರಿಗೆಯನ್ನು 2019ರಲ್ಲಿ ಶೇಕಡಾ 30ರಿಂದ 22ಕ್ಕೆ ಇಳಿಸಿದರೂ ಖಾಸಗಿ ವಲಯ ಉದ್ಯೋಗ ನೀಡಿಕೆಯ ಸ್ಥಿತಿಯನ್ನು ತಲುಪಿಲ್ಲ. 2007-08ರಲ್ಲಿ ಜಿಡಿಪಿಯ ಶೇಕಡಾ 17.3ರಷ್ಟಿದ್ದ ಕಾರ್ಪೊರೇಟ್ ಹೂಡಿಕೆಯು 2024-25ಕ್ಕೆ ಬರುವಷ್ಟರಲ್ಲಿ ಶೇಕಡಾ 10.3ಕ್ಕೆ ಕುಸಿದಿದೆ. ತೆರಿಗೆ ಕಡಿತದ ಹೊರತಾಗಿಯೂ ಖಾಸಗಿ ಹೂಡಿಕೆ ನಿರೀಕ್ಷಿತ ಮಟ್ಟಕ್ಕೆ ಏರಲಿಲ್ಲ. ಉದ್ಯೋಗ ಸೃಷ್ಟಿಸುವ ಹೊಸ ಕಾರ್ಖಾನೆಗಳು ಮತ್ತು ಉತ್ಪಾದನಾ ಸಾಮರ್ಥ್ಯ ವಿಸ್ತರಣೆಗೆ ಸಿಕ್ಕ ಪ್ರೋತ್ಸಾಹದ ಪರಿಣಾಮ ಗೋಚರಿಸಲಿಲ್ಲ. ಅಂದರೆ, ತೆರಿಗೆ ವಿನಾಯಿತಿ ಮತ್ತು ಖಾಸಗಿ ಹೂಡಿಕೆಯನ್ನು ನಿರೀಕ್ಷಿಸುವುದಷ್ಟೇ ಉದ್ಯೋಗ ಸೃಷ್ಟಿಯ ದಾರಿ ಅಲ್ಲ ಎಂಬುದು ಸ್ಪಷ್ಟ. ಖಾಸಗಿ ಬಂಡವಾಳವನ್ನು ಉತ್ಪಾದನೆ, ರಫ್ತು ಮತ್ತು ಉದ್ಯೋಗ ಸೃಷ್ಟಿಯತ್ತ ಹರಿಸುವಂತಹ ಕೈಗಾರಿಕಾ ವಾತಾವರಣವನ್ನು ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲೆಯೇ ಇದೆ.

ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ನೀತಿಯ ಧೋರಣೆ ಬದಲಾಗಬೇಕಿದೆ. ಬರೀ ಭಾಷಣಗಳಲ್ಲಿ ಬಣ್ಣದ ಕನಸುಗಳನ್ನು ತೋರಿಸುವ ಮೋಸ ನಿಲ್ಲಬೇಕು. ಸಾರ್ವಜನಿಕ ಹೂಡಿಕೆಯ ಮೂಲಕ ಕೈಗಾರಿಕಾ ಸಾಮರ್ಥ್ಯವನ್ನು ಬುಡದಿಂದ ಗಟ್ಟಿಗೊಳಿಸಬೇಕು. ರಫ್ತು ಆಧಾರಿತ ಕೈಗಾರಿಕಾ ನೀತಿಯನ್ನು ಅಳವಡಿಸಿಕೊಳ್ಳಬೇಕು. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಗುರಿಯಾಗಿಸುವ ಅತಿಯಾದ ನಿಯಂತ್ರಣಗಳನ್ನು ತಗ್ಗಿಸಬೇಕು. ಈ ಮಾರ್ಗವೊಂದೇ ಯುವಜನತೆಗೆ ಅಗತ್ಯ ಪ್ರಮಾಣದಲ್ಲಿ ಉದ್ಯೋಗ ತಂದುಕೊಡಬಲ್ಲದು. ಇಲ್ಲದಿದ್ದರೆ ಈ ಬಿಕ್ಕಟ್ಟು ಪರೀಕ್ಷಾ ಸುಧಾರಣೆಯ ಬೇಡಿಕೆಗೆ ಸೀಮಿತವಾಗದೆ, ಉದ್ಯೋಗರಹಿತ ಅಭಿವೃದ್ಧಿಯ ವಿರುದ್ಧದ ದೈತ್ಯ ಸಾಮಾಜಿಕ ಅಶಾಂತಿಯಾಗಿ ಸಿಡಿಯಲಿದೆ. ಈ ಕಟು ವಾಸ್ತವದ ನಡುವೆ ದೇಶದ ಚುಕ್ಕಾಣಿ ಹಿಡಿದಿರುವವರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲೆತ್ನಿಸಿದರೆ ಅದು ಪ್ರಜಾಪ್ರಭುತ್ವಕ್ಕೆ, ಈ ದೇಶದ ಯುವಕರಿಗೆ, ನಂಬಿ ಮತಹಾಕಿದ ಈ ದೇಶವಾಸಿಗಳಿಗೆ ಬಗೆಯುವ ದ್ರೋಹ. ನಿರುದ್ಯೋಗದ ಈ ಬಿರುಗಾಳಿಯನ್ನು ಸಮರ್ಥವಾಗಿ ಎದುರಿಸದಿದ್ದರೆ, ಇಂದು ಪರೀಕ್ಷಾ ಕೇಂದ್ರಗಳ ಮುಂದೆ ಕೇಳಿಬರುತ್ತಿರುವ ಯುವಕರ ಆಕ್ರೋಶ ನಾಳೆ ದೇಶದಾದ್ಯಂತ ಉದ್ಯೋಗದ ಹಕ್ಕಿನ ದೊಡ್ಡ ಸಾಮಾಜಿಕ ಹೋರಾಟವಾಗಿ ರೂಪುಗೊಳ್ಳಬಹುದು. ಆಗ ಎದ್ದು ನಿಲ್ಲುವ ಪ್ರಶ್ನೆ ‘ಓದಿದ್ದೇವೆ, ಪರೀಕ್ಷೆ ಬರೆದಿದ್ದೇವೆ, ಉದ್ಯೋಗವೆಲ್ಲಿ?’

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...

ಮುದ್ದೇಬಿಹಾಳ | ದೆಹಲಿ ಸಭೆಗೂ ಮುನ್ನ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹8,500 ಕನಿಷ್ಠ ಬೆಲೆ ಹಾಗೂ ಹೆಚ್ಚುವರಿಯಾಗಿ...