ಶಿರಸಿ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಮಾರು 1,000 ಹೊರಗುತ್ತಿಗೆ ನೌಕರರನ್ನು ಅಕ್ಟೋಬರ್ 31ರಿಂದ ಸೇವೆಯಿಂದ ಬಿಡುಗಡೆಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನೌಕರರ ಸಂಘ, ಸೇವೆ ಮುಂದುವರಿಸುವಂತೆ ಒತ್ತಾಯಿಸಿದೆ.
ಕಳೆದ 10ರಿಂದ 15 ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನ್‌ಸ್ಕಿಲ್ಡ್, ಸಿಡಿಸಿ ಹಾಗೂ ಡಿ-ಗ್ರೂಪ್ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಆಡಳಿತಾತ್ಮಕ ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.
ಇದೀಗ ಇವರನ್ನು ಸೇವೆಯಿಂದ ಬಿಡುಗಡೆಗೊಳಿಸುವ ನಿರ್ಧಾರದಿಂದ ಸುಮಾರು 1,000 ಬಡ ಕುಟುಂಬಗಳ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ. ನೌಕರರ ಸೇವೆಯನ್ನು ಮುಂದುವರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ ಕೆಫೆ’: 44 ಲಕ್ಷ ರೂ. ವಹಿವಾಟು!
ಈ ಕುರಿತು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡುವಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊರಗುತ್ತಿಗೆ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಮಿತಕುಮಾರ ನಾಗರಾಜ ಜೋಗಳೇಕರ, ರೇಣುಕಾ ಕುಡಾಳ್ಕರ್, ಸಹನಾ ದುರ್ಗೇಕರ್, ಪ್ರಹ್ಲಾದ್ ಜೋಗಳೇಕರ, ಸುರೇಶ್ ಕೊರವರ, ಶಹನಾಜ ರಾಮಾಪುರ, ಪರಶುರಾಮ ಬಿ. ಚಲವಾದಿ, ಶಿವರಂಜನ ಆಗೇರ, ರಾಘವೇಂದ್ರ ಮುರುಡೇಶ್ವರ ಹಾಗೂ ಜಯಾ ಕಾರವಾರ ಉಪಸ್ಥಿತರಿದ್ದರು.




