ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದು ಇನ್ನೂ ಮುಖ್ಯ. ಪ್ರಜಾ ಸೇವೆ ಎಂದರೆ ಅಧಿಕಾರದಲ್ಲಿರುವವರು ಜನರಿಗೆ ಮಾಡುವ ಉಪಕಾರವಲ್ಲ. ಜನ ನೀಡುವ ಅಧಿಕಾರವನ್ನು ಬಳಸಿಕೊಂಡು ಜನರ ಬದುಕನ್ನು ಸುಧಾರಿಸುವುದು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರ ನೂರು ದಿನ ಪೂರೈಸಿದ ಸಂದರ್ಭದಲ್ಲಿ ‘ನಾನು ಮುಖ್ಯಮಂತ್ರಿಯಲ್ಲ ಪ್ರಜಾ ಸೇವಕ’ ಎಂದು ಘೋಷಿಸಿದರು. ಅದಕ್ಕೂ ಮುಂಚೆ ಸಾರ್ವಜನಿಕರ ದೂರುಗಳನ್ನು ಪರಿಹರಿಸಲು ಮತ್ತು ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯಲು ನೂತನವಾಗಿ ಪ್ರಜಾ ಸೇವೆ ಇಲಾಖೆಯನ್ನು ಸ್ಥಾಪಿಸಿದರು.
ಅಂದರೆ, ಜನರು ಆಡಳಿತಗಾರರ ಬಳಿಗೆ ಹೋಗುವುದಕ್ಕೆ ಬದಲಾಗಿ, ಜನರು ಇರುವಲ್ಲಿಗೇ ಆಡಳಿತಗಾರರು ಹೋಗಲು; ಉತ್ತಮ ಆಡಳಿತ ಆರಂಭಗೊಳ್ಳುತ್ತದೆ ಎನ್ನುವುದಕ್ಕೆ ಸಾಂಸ್ಥಿಕ ಸ್ವರೂಪ ಕೊಡಲು ‘ಪ್ರಜಾ ಸೇವೆ’ ಯೋಜನೆ ಮುಂದಾಗಿದೆ. ಸಕಾಲ ಯೋಜನೆ, ಜನಸ್ಪಂದನ, ಸಾರ್ವಜನಿಕ ಅಹವಾಲುಗಳ ವಿಭಾಗ ಮತ್ತು ಆಡಳಿತ ಸುಧಾರಣೆಗಳನ್ನು ಒಂದೇ ಇಲಾಖೆಯಡಿ ತರುವುದು ‘ಪ್ರಜಾ ಸೇವೆ’ಯ ಉದ್ದೇಶವಾಗಿದೆ. ನಿಗದಿತ ಶನಿವಾರದ ಸಭೆಗಳು, ವಾರದ ಪರಿಶೀಲನೆಗಳು ಹಾಗೂ ಅರ್ಜಿಗಳು ಕಡತಗಳಲ್ಲಿ ಹುದುಗಿಹೋಗದಂತೆ ನೋಡಿಕೊಳ್ಳುವ ವ್ಯವಸ್ಥೆ ಯೋಜನೆಯ ಭಾಗವಾಗಿದೆ.
ಈಗಾಗಲೇ ತಾಲ್ಲೂಕು ಮತ್ತು ಹೋಬಳಿ ಹಂತಗಳಲ್ಲಿ ಅಹವಾಲು ಸ್ವೀಕಾರ ಸಭೆಗಳು ನಡೆದಿವೆ. ಪ್ರಜಾ ಸೇವೆ ಇಲಾಖೆ ಆರಂಭವಾದ ಎರಡೇ ದಿನಗಳಲ್ಲಿ ಸುಮಾರು 26,387 ದೂರುಗಳು ಮತ್ತು ಮನವಿಗಳು ದಾಖಲಾಗಿವೆ. ಒಟ್ಟು ದೂರುಗಳ ಪೈಕಿ ಸರಿಸುಮಾರು 22,810 ದೂರುಗಳು ಕಂದಾಯ, ನಗರಾಭಿವೃದ್ಧಿ, ವಸತಿ, ಗ್ರಾಮೀಣಾಭಿವೃದ್ಧಿ ಮತ್ತು ಆಹಾರ ಇಲಾಖೆಗಳಿಗೆ ಸಂಬಂಧಿಸಿದ್ದಾಗಿವೆ. ಇವುಗಳಲ್ಲಿ ವೃದ್ಧಾಪ್ಯ ವೇತನ ಮತ್ತು ಪಡಿತರ ಚೀಟಿ (ರೇಷನ್ ಕಾರ್ಡ್) ತಿದ್ದುಪಡಿಗೆ ಸಂಬಂಧಿಸಿದ ದೂರುಗಳೇ ಹೆಚ್ಚಾಗಿವೆ.
ಇದು ಏನನ್ನು ಸೂಚಿಸುತ್ತದೆ? ಒಂದು, ನಾಗರಿಕರಿಗೆ ಸರ್ಕಾರಿ ಸೇವೆಗಳು ಸುಲಭಕ್ಕೆ ಸಿಗುತ್ತಿಲ್ಲ; ಮತ್ತೊಂದು ಸಿಕ್ಕರೂ ಅದು ಸಮಯ ಬೇಡುವ, ಲಂಚಕ್ಕೆ ಒತ್ತಾಯಿಸುವ ಸೇವೆಯಾಗಿರುತ್ತದೆ.
ಇದನ್ನು ಓದಿದ್ದೀರಾ?: ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಮೂಲ ಉದ್ದೇಶ ಪ್ರಜೆಗಳಿಗೆ ಸೇವೆ ಸಲ್ಲಿಸುವುದು, ಅವರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ಜನರ ಕಲ್ಯಾಣಕ್ಕಾಗಿ ಬಳಸುವುದು. ಜನರಿಗೆ ಉತ್ತಮ ಶಿಕ್ಷಣ, ಸಾರ್ವಜನಿಕ ಆರೋಗ್ಯ, ಕುಡಿಯುವ ನೀರು, ರಸ್ತೆ, ಸಾರಿಗೆ, ಉದ್ಯೋಗಾವಕಾಶ, ಸಾಮಾಜಿಕ ಭದ್ರತೆ ಮತ್ತು ನ್ಯಾಯಯುತ ಆಡಳಿತ ದೊರಕಿಸುವುದೇ ಪ್ರಜಾ ಸೇವೆಯಾಗಿದೆ.
ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಜಾ ಸೇವೆ ಉತ್ತಮ ನಡೆಯೇ ಆಗಿದೆ. ಆದರೆ, ಸಮಸ್ಯೆಗಳ ಪರಿಹಾರಕ್ಕಿಂತ ಪ್ರಚಾರವೇ ಹೆಚ್ಚಾಗಿದೆ ಎಂಬ ದೂರುಗಳೂ ಕೇಳಿಬರುತ್ತಿವೆ.
ಇಲ್ಲಿಯವರೆಗೆ ಬರೋಬ್ಬರಿ 26,387 ಅಹವಾಲುಗಳು ಸ್ವೀಕಾರವಾಗಿದ್ದು, ಕೇವಲ ಆರು ದಿನಗಳ ಅಂತರದಲ್ಲಿ 13,872 ಅರ್ಜಿಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ. ಇದನ್ನು ಇನ್ನಷ್ಟು ಜನರಿಗೆ ಹತ್ತಿರವಾಗಿಸಲು ಅ. 2ರಂದು ‘ನಮ್ಮ ಸೇವೆ’ ಆ್ಯಪ್ ಅನ್ನು ಸಹ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾಹಿತಿ ನೀಡಿದ್ದಾರೆ.
ಆದರೆ, ಇದೇ ಸಂದರ್ಭದಲ್ಲಿ ದೂರು ಸಲ್ಲಿಸಿದ ಬೆಂಗಳೂರಿನ ನಾಗರಿಕರೊಬ್ಬರು, ಸಭೆಯಲ್ಲಿ ಅಧಿಕಾರಿಗಳು ನಾಗರಿಕರ ದೂರುಗಳಿಗೆ ಈ ಹಿಂದಿನಂತೆಯೇ ತಮ್ಮ ಹಂತದಲ್ಲಿ ಹಿಂಬರಹ ನೀಡಿ ಮುಕ್ತಾಯಗೊಳಿಸುತ್ತಿದ್ದಾರೆ. ಹಿಂಬರಹ ಪಡೆದು ಬಗೆಹರಿಯದ ಪ್ರಕರಣಗಳು ‘ಪ್ರಜಾ ಸೇವೆ’ ಸಭೆಯಲ್ಲಿ ಚರ್ಚೆಗೆ ಬರುತ್ತವೆಯೇ ಎಂಬ ಬಗ್ಗೆ ಅಧಿಕಾರಿಗಳಿಗೂ ಮಾಹಿತಿಯಿಲ್ಲ. ಹಾಗಾದರೆ, ಸಮಸ್ಯೆಗೆ ಪರಿಹಾರ ಸಿಗುವುದಾದರೂ ಎಲ್ಲಿ? ಅಧಿಕಾರಿಗಳ ಮಟ್ಟದಲ್ಲೇ ಹಿಂಬರಹಕ್ಕೆ ಸೀಮಿತಗೊಳಿಸುವುದಾದರೆ ‘ಪ್ರಜಾ ಸೇವೆ’ಯೆಂದು ಪ್ರಚಾರ ಮಾಡುವ ಅವಶ್ಯಕತೆ ಏನಿತ್ತು? ಸಮಸ್ಯೆ ಬಗೆಹರಿಸುವುದು ‘ಪ್ರಜಾ ಸೇವೆ’ಯ ಉದ್ದೇಶವಾದರೆ, ಅಧಿಕಾರಿಗಳು ಬರೀ ಸಮಾಧಾನಕ್ಕೆ ನಿರ್ದೇಶನವನ್ನು ಅಪ್ಲೋಡ್ ಮಾಡಿ, ದೂರುಗಳನ್ನು ಮುಕ್ತಾಯ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರ, ಪ್ರಜಾ ಸೇವೆ ಎಂಬ ಇಲಾಖೆಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆಯೇ ಎಂಬ ಅನುಮಾನ ಉಂಟಾಗುತ್ತದೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಸರ್ಕಾರವು ತನ್ನ ಇತ್ತೀಚಿನ ವಿವಿಧ ಯೋಜನೆಗಳು ಹಾಗೂ ಅಭಿಯಾನಗಳಿಗೆ ಸುಮಾರು 532 ಕೋಟಿಗೂ ಹೆಚ್ಚು ಹಣವನ್ನು ಜಾಹೀರಾತಿಗಾಗಿ ವೆಚ್ಚ ಮಾಡಿರುವುದು ಆ ಅನುಮಾನಕ್ಕೆ ಪುಷ್ಟಿ ನೀಡುತ್ತದೆ.
ಇನ್ನು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯಶೈಲಿ- ಬರ ವೀಕ್ಷಣೆಗೆ ಹೆಲಿಕಾಪ್ಟರ್ ಏರುವುದು, ರೈತರ ನಡುವೆ ಹೊಲದಲ್ಲಿ ಕೂರುವುದು, ದಿಢೀರ್ ಭೇಟಿಯ ನೆಪದಲ್ಲಿ ರೈತರು ಮತ್ತು ಸಣ್ಣ ವ್ಯಾಪಾರಿಗಳೊಂದಿಗೆ ಸಂವಾದ ನಡೆಸುವುದು, ಕೂಲಿಗಳ ಜೊತೆ ಕೂತು ತಿಂಡಿ ತಿನ್ನುವುದು, ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಮುದ್ದೆ ಮತ್ತು ಬಸ್ಸಾರು ಸವಿಯುವುದು- ಸಿಗುವ ಸಣ್ಣ ಅವಕಾಶವನ್ನು ಕೂಡ ಪ್ರಚಾರಕ್ಕೆ ಬಳಸಿಕೊಳ್ಳುವ ಹಪಾಹಪಿ ಎದ್ದುಕಾಣುತ್ತಿದೆ.
ಇದಕ್ಕೆ ಪೂರಕವಾಗಿ ಇತ್ತೀಚೆಗೆ ಸರ್ಕಾರಗಳ ಸಾಧನೆಯನ್ನು ಯೋಜನೆಗಳ ಸಂಖ್ಯೆಯಿಂದ ಅಳೆಯುವ ಪ್ರವೃತ್ತಿ ಹೆಚ್ಚಾಗಿದೆ. ಎಷ್ಟು ಯೋಜನೆಗಳು ಘೋಷಿಸಲ್ಪಟ್ಟವು, ಎಷ್ಟು ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಿತು, ಎಷ್ಟು ಉದ್ಘಾಟನೆಯಾದವು ಎಂಬುದೇ ಪ್ರಚಾರದ ಕೇಂದ್ರವಾಗುತ್ತದೆ. ದಿನ ಬೆಳಗಾದರೆ ದಿನಪತ್ರಿಕೆಗಳ ಮೊದಲ ಪುಟಗಳಲ್ಲಿ ಮುಖ್ಯಮಂತ್ರಿಗಳ ದೊಡ್ಡ ಚಿತ್ರಗಳ ಜಾಹೀರಾತುಗಳು ಸಾಮಾನ್ಯವಾಗಿವೆ. ಅಧಿಕಾರಕ್ಕೆ ಏರಿ ನೂರು ದಿನಗಳಾಗುತ್ತಿದ್ದಂತೆ, ಭಾರೀ ಸಮಾರಂಭ ಏರ್ಪಡಿಸಿದ್ದು ಹಲವರು ಕುಹಕಕ್ಕೆ ಕಾರಣವಾಗಿದೆ.
ಪ್ರಜೆಗಳು ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಡಳಿತ ನೀಡಲು, ಹಕ್ಕುಗಳನ್ನು ರಕ್ಷಿಸಲು, ಸಾರ್ವಜನಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಲು ಮತ್ತು ತಮ್ಮ ಬದುಕನ್ನು ಉತ್ತಮಗೊಳಿಸಲು. ಸಾರ್ವಜನಿಕ ಹಣದಲ್ಲಿ ನಿರ್ಮಿಸಿದ ಯೋಜನೆಗೆ ರಾಜಕೀಯ ಪಕ್ಷದ ಜಾಹೀರಾತು ಅಂಟಿಸುವುದು ಅಕ್ಷಮ್ಯ.
ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಜನರ ಸೇವೆ ಮಾಡುವ ಅವಕಾಶ ದೊರೆಯುತ್ತದೆ. ಆದರೆ ಆ ಅವಕಾಶವನ್ನು ಅವರು ಅಧಿಕಾರದ ಪ್ರದರ್ಶನ, ಪ್ರಚಾರ ಮತ್ತು ರಾಜಕೀಯ ಲಾಭದ ಸಾಧನವಾಗಿ ಪರಿವರ್ತಿಸಿಕೊಳ್ಳುತ್ತಾರೆ. ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು, ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಅಗತ್ಯ. ಅದಕ್ಕಾಗಿಯೇ ವಾರ್ತಾ ಮತ್ತು ಪ್ರಚಾರ ಇಲಾಖೆಯಿದೆ. ಆದರೆ ಅದನ್ನು ಜಾಹೀರಾತು ನೀಡುವ ಏಜೆನ್ಸಿಯನ್ನಾಗಿಸಲಾಗಿದೆ.
ಇದನ್ನು ಓದಿದ್ದೀರಾ?: ಮಾರುವುದಿಲ್ಲ ಎಂದು ಮಾರುವ ಮೋದಿ… ಈಗ ಇಸ್ರೋ ಸರದಿ?
ಉತ್ತಮ ಸರ್ಕಾರವೆಂದರೆ ಹೆಚ್ಚು ಜಾಹೀರಾತು ನೀಡುವ ಸರ್ಕಾರವಲ್ಲ; ಜನರು ಕಡಿಮೆ ದೂರು ಹೇಳುವ ಸರ್ಕಾರ. ಉತ್ತಮ ಆಡಳಿತವೆಂದರೆ ಹೆಚ್ಚು ಉದ್ಘಾಟನೆ ಮಾಡುವ ಆಡಳಿತವಲ್ಲ; ಸಾಮಾನ್ಯ ನಾಗರಿಕನ ಕೆಲಸವನ್ನು ಕಡಿಮೆ ಸಮಯದಲ್ಲಿ ಮಾಡಿಕೊಡುವ ಆಡಳಿತ. ನಿಜವಾದ ಪ್ರಜಾ ಸೇವೆ ಎಂದರೆ ದೊಡ್ಡ ವೇದಿಕೆಗಳಲ್ಲಿ ನಿಂತು ಘೋಷಿಸುವುದಲ್ಲ; ಜನರ ಬದುಕಿನಲ್ಲಿ ತಣ್ಣಗೆ ಅನುಭವಕ್ಕೆ ಬರುವ ಸೇವೆ. ಪ್ರಜಾ ಸೇವೆಯ ನಿಜವಾದ ಪ್ರಮಾಣಪತ್ರ ಸರ್ಕಾರದ ಜಾಹೀರಾತಿನಲ್ಲಿ ಇರುವುದಿಲ್ಲ; ಅದು ಪ್ರಜೆಯ ಬದುಕಿನಲ್ಲಿರುತ್ತದೆ.
ಈಗಲೂ ಕಾಲ ಮಿಂಚಿಲ್ಲ, ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದು ಇನ್ನೂ ಮುಖ್ಯ. ಪ್ರಜಾ ಸೇವೆ ಎಂದರೆ ಅಧಿಕಾರದಲ್ಲಿರುವವರು ಜನರಿಗೆ ಮಾಡುವ ಉಪಕಾರವಲ್ಲ. ಜನ ನೀಡುವ ಅಧಿಕಾರವನ್ನು ಬಳಸಿಕೊಂಡು ಜನರ ಬದುಕನ್ನು ಸುಧಾರಿಸುವುದು.




