ಬೆಂಗಳೂರಿನ ಜನರಿಗೆ ಮತದಾನ ಎಂದರೆ ನಿರ್ಲಕ್ಷ್ಯವೇಕೆ?

Date:

ಪ್ರತಿ ಬಾರಿಯ ಚುನಾವಣೆಯಲ್ಲೂ ಬೆಂಗಳೂರಿನಲ್ಲಿ ಕಡಿಮೆ ಮತದಾನ ಆಗುತ್ತದೆ. ರಾಜ್ಯದ ರಾಜಧಾನಿಯಲ್ಲಿರುವ, ಎಲ್ಲ ಸವಲತ್ತುಗಳನ್ನೂ ಅನುಭವಿಸುವ, ಸುಶಿಕ್ಷಿತರು ಎನ್ನಿಸಿಕೊಂಡ ಈ ಜನರ ಧೋರಣೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. 

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ, ಶೇ. 73.19ರಷ್ಟು ಮತದಾನ ಆಗಿದೆ. 2013ರಲ್ಲಿ ಮತದಾನದ ಪ್ರಮಾಣ ಶೇ.71.83ರಷ್ಟಿದ್ದರೆ, ಅದು 2018ರಲ್ಲಿ ಶೇ.72.44 ಆಗಿತ್ತು. ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು (ಶೇ.85.56) ಮತದಾನವಾಗಿದ್ದರೆ, ಬೆಂಗಳೂರಿನಲ್ಲಿ ಅತಿ ಕಡಿಮೆ, ಅಂದರೆ ಶೇ.54.53ರಷ್ಟು, ಮತದಾನವಾಗಿದೆ.

2013ರಲ್ಲಿ ರಾಜ್ಯದಲ್ಲಿ ಶೇ.71.83ರಷ್ಟು ಮತದಾನವಾಗಿದ್ದರೆ, ಬೆಂಗಳೂರಿನಲ್ಲಿ ಶೇ.62ರಷ್ಟು ಮತದಾನವಾಗಿತ್ತು. 2018ರಲ್ಲಿ ರಾಜ್ಯದಲ್ಲಿ ಶೇ.72.44ರಷ್ಟು ಮತದಾನವಾಗಿದ್ದರೆ, ಬೆಂಗಳೂರಿನಲ್ಲಿ ಶೇ.57ರಷ್ಟು ಮತದಾನವಾಗಿತ್ತು. ಅಂದರೆ, ಚುನಾವಣೆಯಿಂದ ಚುನಾವಣೆಗೆ ಬೆಂಗಳೂರಿಗರ ಮತದಾನದ ಪ್ರಮಾಣ ಕುಸಿಯುತ್ತಲೇ ಇದೆ. ರಾಜ್ಯದ ರಾಜಧಾನಿಯಾದ, ದೇಶದ ಐಟಿ ಬಿಟಿ ನಗರ ಎಂದೇ ಹೆಸರಾಗಿರುವ ಬೆಂಗಳೂರಿನ ಮತದಾನದ ಪ್ರಮಾಣ ಆತಂಕಕಾರಿಯಾಗಿದೆ.

ಈ ಬಾರಿ ಬೆಂಗಳೂರಿನ ಐಟಿ ಪ್ರದೇಶಗಳೆಂದೇ ಹೆಸರಾದ ಬೊಮ್ಮನಹಳ್ಳಿ (46.82), ಬಿಟಿಎಂ ಲೇಔಟ್ (48.89), ಸಿ ವಿ ರಾಮನ್ ನಗರ (47.44) ಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಮತದಾನ ಆಗಿದೆ. ಒಂದು ಕ್ಷೇತ್ರದಲ್ಲಿರುವವರ ಪೈಕಿ ಅರ್ಧಕ್ಕಿಂತ ಕಡಿಮೆ ಜನ ಆಯ್ಕೆ ಮಾಡಿದ ವ್ಯಕ್ತಿ, ಆ ಇಡೀ ಕ್ಷೇತ್ರದ ಅಭಿವೃದ್ಧಿ, ಆಗುಹೋಗುಗಳನ್ನು ನಿರ್ಧರಿಸುತ್ತಾನೆ. ಇದು ಸುಶಿಕ್ಷಿತರು ಎನ್ನಿಸಿಕೊಂಡವರ ರಾಜಕೀಯ ಪ್ರಜ್ಞೆ ಮತ್ತು ಅವರ ಒಟ್ಟು ತಿಳಿವಳಿಕೆಯ ಬಗ್ಗೆಯೇ ಅನುಮಾನ ಮೂಡಿಸುತ್ತಿದೆ.  

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಚಿತ್ರ ಎಂದರೆ, ಕೇವಲ ಬೆಂಗಳೂರು ಅಥವಾ ಭಾರತದ ಇತರೆ ನಗರಗಳಷ್ಟೇ ಅಲ್ಲ; ಜಗತ್ತಿನ ಬಹುತೇಕ ನಗರಗಳಲ್ಲಿಯೂ ಇದೇ ಪ್ರವೃತ್ತಿ ಇದೆ. ನಗರ ಪ್ರದೇಶಗಳ ಮತದಾರರಿಗೆ ಮತದಾನದ ಬಗ್ಗೆ ಇಷ್ಟು ನಿರ್ಲಕ್ಷ ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸುಲಭವಲ್ಲ.   

ನಗರದ ಮತದಾರರ ಈ ನಿರ್ಲಕ್ಷ್ಯವು ಕೇವಲ ಅವರ ವೈಯಕ್ತಿಕ ನಡವಳಿಕೆಯ ದೋಷವನ್ನಷ್ಟೇ ಅಲ್ಲದೇ, ಒಟ್ಟು ರಾಜಕೀಯ ವ್ಯವಸ್ಥೆಯಲ್ಲಿನ ದೋಷಗಳತ್ತಲೂ ಬೊಟ್ಟು ಮಾಡುತ್ತಿದೆ. ನಮ್ಮ ರಾಜಕೀಯ ವ್ಯವಸ್ಥೆ ಮತ್ತು ರಾಜಕಾರಣಿಗಳ ಬಗೆಗಿನ ತಿರಸ್ಕಾರ ಮತ್ತು ಸಿನಿಕತನವೇ ಈ ನಿರ್ಲಕ್ಷ್ಯಕ್ಕೆ ಮುಖ್ಯ ಕಾರಣ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಬಗ್ಗೆ, ಅವರ ಅರ್ಹತೆಯ ಬಗ್ಗೆ ಇರುವ ಅಸಮಾಧಾನ ಮತ್ತು ಅದರಿಂದ ಉಂಟಾದ ನಿರಾಸಕ್ತಿಗಳೇ ನಗರಗಳ ಮತದಾರರು ಮತ ಚಲಾಯಿಸದೇ ಇರಲು ಮುಖ್ಯ ಕಾರಣ ಎನ್ನಲಾಗುತ್ತಿದೆ.

ಈ ಸುದ್ದಿ ಓದಿದ್ಧೀರಾ: ಹೆಣ್ಣು ಮಕ್ಕಳ ಸಮಗ್ರ ಅಭಿವೃದ್ಧಿ-ರಕ್ಷಣೆ-ಸ್ವಾವಲಂಬನೆಯತ್ತ ಗಮನ ಹರಿಸದ ರಾಜಕೀಯ ಪಕ್ಷಗಳ ಪ್ರಣಾಳಿಕೆ

ಚುನಾವಣೆಗಳಲ್ಲಿ ನಡೆಯುವ ಹಣ ಹಂಚಿಕೆ, ವಂಚನೆ, ನೀತಿ ನಿಯಮಗಳ ಉಲ್ಲಂಘನೆ ನಗರದ ಮತದಾರರ ಸಿನಿಕತೆಗೆ ಕಾರಣ ಎಂದು ಒಂದು ಅಧ್ಯಯನ ಹೇಳುತ್ತದೆ. ಬೇರೆ ರಾಜ್ಯಗಳ ವಲಸಿಗರು ಇಲ್ಲಿನ ಚುನಾವಣೆಗಳಲ್ಲಿ ಭಾಗವಹಿಸದೇ ಇರುವುದು ಕೂಡ ಕಡಿಮೆ ಮತದಾನದ ಕಾರಣಗಳಲ್ಲಿ ಒಂದು. ಕೇವಲ ಬೆಂಗಳೂರು ಅಷ್ಟೇ ಅಲ್ಲ, ಮೈಸೂರು ನಗರದ ಕೆಲವು ಬೂತ್‌ಗಳಲ್ಲಿ ಕೂಡ ಕಡಿಮೆ ಮತದಾನ ಆಗುತ್ತಿದೆ. ಅಂದರೆ, ಕರ್ನಾಟಕದ ಮಟ್ಟಿಗೆ ಕೂಡ ನಗರ ಪ್ರದೇಶಗಳ ಮತದಾರರು ಮತ ಚಲಾವಣೆ ಮಾಡದೇ ಇರುವುದು ಗಂಭೀರ ಸಮಸ್ಯೆಯಾಗಿದೆ.

ಈ ಬಾರಿ ಮತದಾನಕ್ಕೆ ಹುರುಪು ತುಂಬಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಬೀದಿ ನಾಟಕಗಳ ಮೂಲಕ ಜನರಲ್ಲಿ ಅರಿವು ಮೂಡಿಸುವುದು, ಬೂತ್‌ಗಳನ್ನು ವರ್ಣರಂಜಿತವಾಗಿ ಅಲಂಕರಿಸುವುದು, ವಾಕಥಾನ್ ಏರ್ಪಡಿಸುವುದು ಹೀಗೆ ಹಲವು ಕ್ರಮಗಳ ಮೂಲಕ ಶ್ರಮಿಸಿತ್ತು. ಆದರೂ ಈ ಬಾರಿ ಬೆಂಗಳೂರಿನಲ್ಲಿ ಹಿಂದಿನ ಎರಡು ಚುನಾವಣೆಗಳಿಗಿಂತ ಕಡಿಮೆ ಮತದಾನವಾಗಿದೆ.

ಬೆಂಗಳೂರಿನ ಐಟಿ ಬಿಟಿ ಉದ್ಯೋಗಿಗಳು ಸೇರಿದಂತೆ ಬಹುತೇಕರು ವೀಕೆಂಡ್ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ವಾರ ಪೂರ್ತಿ ದುಡಿದು ಸುಸ್ತಾಗುವ ಅವರು ವಾರಾಂತ್ಯದಲ್ಲಿ ಪ್ರವಾಸ ಮತ್ತಿತರ ಕಾರ್ಯಕ್ರಮಗಳ ಮೂಲಕ ರಿಫ್ರೆಶ್ ಆಗುತ್ತಾರೆ. ಈ ಹಿಂದೆ ವಾರಾಂತ್ಯದಲ್ಲಿ ಚುನಾವಣೆ ಬಂದಾಗ, ಚುನಾವಣಾ ಕಡ್ಡಾಯ ರಜೆಯನ್ನು ಬಳಸಿಕೊಂಡು ಬಹುತೇಕರು ಪ್ರವಾಸ ಮತ್ತಿತರ ಕಾರ್ಯಕ್ರಮಕ್ಕೆಂದು ಹೊರಟುಬಿಡುತ್ತಿದ್ದರು. ಈ ಬಾರಿ ಹಾಗಾಗದಿರಲೆಂದು ಚುನಾವಣಾ ಆಯೋಗವು ವಾರದ ಮಧ್ಯೆ ಬರುವ ಬುಧವಾರದ ದಿನ ಮತದಾನ ಇಟ್ಟುಕೊಂಡಿತ್ತು. ಇಷ್ಟಾದರೂ ಬಹುತೇಕರು ಮನೆ ದಾಟಿ ಬಂದು ಮತ ಚಲಾಯಿಸಿಲ್ಲ. ಅಹಂಕಾರದಿಂದಲೋ, ಸ್ವಾರ್ಥದಿಂದಲೋ, ತಿರಸ್ಕಾರದಿಂದಲೋ, ತಪ್ಪು ತಿಳಿವಳಿಕೆಯಿಂದಲೋ, ಸೋಮಾರಿತನದಿಂದಲೋ ಮತ ಚಲಾಯಿಸದಿದ್ದರೆ, ಅದು ಅವರು ರಾಜ್ಯಕ್ಕೆ, ದೇಶಕ್ಕೆ, ಕೊನೆಗೆ ತಮಗೆ ತಾವೇ ಎಸಗಿಕೊಂಡ ದ್ರೋಹ ಎನ್ನುವುದನ್ನು ಅರಿಯಬೇಕು.

ಇಲ್ಲಿ ಒಂದು ವಿಚಿತ್ರ ಗಮನಿಸಬೇಕು. ಬಹುತೇಕರು ರಾಜಕೀಯ ವ್ಯವಸ್ಥೆ ದೋಷಪೂರಿತ ಎಂದೋ, ಸಿನಿಕತನದಿಂದಲೋ ಮತ ಚಲಾವಣೆ ಮಾಡುವುದಿಲ್ಲ. ಅವರು ಮತ ಚಲಾವಣೆ ಮಾಡದಿದ್ದರೆ ಅಂಥ ದೋಷಗಳು, ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಿ, ಅವರು ಮತ್ತಷ್ಟು ಸಿನಿಕರಾಗಬೇಕಾಗುತ್ತದೆ. ಹೆಚ್ಚು ಜನ ಮತ ಚಲಾಯಿಸಿದರೆ ಪ್ರಜಾಪ್ರಭುತ್ವ ಹೆಚ್ಚು ಪಕ್ವವಾಗುತ್ತದೆ, ಹೆಚ್ಚು ಅರ್ಥಪೂರ್ಣವಾಗುತ್ತದೆ. ಇಲ್ಲದೆ ಇದ್ದರೆ ಬಹುಸಂಖ್ಯಾತ ನೆಲೆಯ ಪ್ರಜಾಪ್ರಭುತ್ವ ವಿಫಲಗೊಳ್ಳುವ ಅಪಾಯವಿದೆ. ಈ ವಿಚಾರದಲ್ಲಿ ಓದಿದವರು, ತಿಳಿದವರು ಎನ್ನಿಸಿಕೊಂಡ ನಗರದ ಜನ ಹೆಚ್ಚು ಓದದ ಹಳ್ಳಿಗಳ ವಿವೇಕವಂತರನ್ನು ನೋಡಿಯಾದರೂ ಬುದ್ಧಿ ಕಲಿಯಬೇಕಿದೆ.                                 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹಾಡಹಗಲೇ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರ ಬರ್ಬರ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರನ್ನು...

ಬೆಂಗಳೂರು |ತಲಾ ₹1 ಲಕ್ಷ ದಂಡ ಬಾಕಿ ಉಳಿಸಿಕೊಂಡಿವೆ 123 ವಾಹನಗಳು

ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು...

ಚಿಕ್ಕಮಗಳೂರು | ಜಯಪ್ರಕಾಶ್ ಹೆಗ್ಡೆ ಮಲೆನಾಡಿನ ಅಡಿಕೆ ಬೆಳೆಗಾರರ ಆಶಾಕಿರಣ: ಬಿ ಎ ರಮೇಶ್ ಹೆಗ್ಡೆ

"ಜಯಪ್ರಕಾಶ್ ಹೆಗ್ಡೆ ಅವರು ಅಡಿಕೆ ಬೆಳೆಗಾರರ ಆಶಾಕಿರಣ. ಕೇವಲ ಎರಡು ವರ್ಷಗಳಲ್ಲಿ...

ಕನ್ನಡ ಸೇರಿ 5 ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪ್ರೊಪಗ್ಯಾಂಡಗಳ ವಿರುದ್ಧ ಟೊಂಕಕಟ್ಟಿ ನಿಂತಿರುವ ದೇಶದ...