ಸಿನಿಮಾ ಇಂಡಸ್ಟ್ರಿಯಲ್ಲಿ ಲಿಂಗ ಆಧರಿತ ತಾರತಮ್ಯದ ಕುರಿತು ನಟಿ ಸಮಂತಾ ರುತ್ ಪ್ರಭು ತಮ್ಮ ಅಂತರಾಳವನ್ನು ತೆರೆದಿಟ್ಟಿದ್ದಾರೆ. ಮಹಿಳೆಯರಿಗೆ ಸಿನಿಲೋಕ ಒಡ್ಡುವ ಸವಾಲುಗಳ ಕುರಿತು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ‘ಹಾಲಿವುಡ್ ರಿಪೋರ್ಟರ್ ಆಫ್ ಇಂಡಿಯಾ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ, ಮಹಿಳೆಯ ನಿಲುವುಗಳನ್ನು ಆಲಿಸಲು ಅವಳತನವನ್ನು ಸಾಬೀತುಪಡಿಸಲು ಪಡಬೇಕಾದ ಪರಿಪಾಟಲಿನ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
“ಸಿನಿಲೋಕದಲ್ಲಿ ಮಿನುಗುವ ಹೆಣ್ಣು ಗಂಡಿಗಿಂತ ದುಪ್ಪಟ್ಟು ಸವಾಲುಗಳನು ಎದುರಿಸುತ್ತಾಳೆ. ಈ ಅಸಮಾನತೆಯನ್ನು ಇಂಡಸ್ಟ್ರಿ ತೀರಾ ಮಾಮೂಲಾಗಿಸಿದೆ” ಎಂದಿದ್ದಾರೆ.
ತನ್ನ ವೃತ್ತಿ ಬದುಕಿನಲ್ಲಿ ಪ್ರತಿದಿನವೂ ರಾಜಿ ಮಾಡಿಕೊಳ್ಳುವ ಮಹಿಳೆಯರ ಕುರಿತು ಮಾತನಾಡುತ್ತಾ, “ಹೆಣ್ಣು ಒಂದಿಲ್ಲೊಂದು ರೀತಿಯಲ್ಲಿ ಅವಳ ಸಮಯ, ಅಭಿಪ್ರಾಯ, ಆಕಾಂಕ್ಷೆಗಳನ್ನು ಸುತ್ತಲಿನವರ ಸೌಖ್ಯಕ್ಕಾಗಿ ಬಲಿಕೊಡುತ್ತಾಳೆ. ಈ ಹೊಂದಿಕೆ ಏನೇನೂ ಅಲ್ಲವೇನೋ ಎಂಬುವಷ್ಟು ಸಹಜವಾಗಿ ಒಗ್ಗಿ ಹೋಗಿದ್ದಾಳೆ. ಇದೊಂದು ಮಹಾತ್ಯಾಗ ಎಂಬ ಪರಿವೆಯೂ ಅವರಿಗೆ ಇರದು” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಅಸ್ಸಾಂ ವಿಧಾನಸಭಾ ಚುನಾವಣೆ: ಪಕ್ಷಾಂತರಿಗಳಿಗೆ ಪಾಠ ಕಲಿಸುತ್ತಾರೆಯೇ ಮತದಾರರು?
ಗಂಡಿಗಿಂತ ಹೆಣ್ಣು ಹತ್ತು ಬಾರಿ ಹೆಚ್ಚು ಕ್ಷಮೆ ಬೇಡುತ್ತಾಳೆ, ಹತ್ತು ಪಟ್ಟು ಹೆಚ್ಚು ಎಂದರೆ ನೀವೇ ಊಹಿಸಿ ಎಂದ ಸಮಂತಾ, “ನಾನು ಬಹಳ ನಮ್ರಳಾಗಿ ಕೇಳುತ್ತಿದ್ದೇನೆ, ಈ ಪರಿಪಾಟಲು ಇಲ್ಲಿಗೆ ನಿಲ್ಲಿಸಿ, ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಪಡೆಯುವುದು ಅಪರಾಧವಲ್ಲ, ನೀವು ಗಳಿಸಿದ ಸ್ಥಾನವನ್ನು ಉಳಿಸಿಕೊಳ್ಳಲು ನೀವು ಅರ್ಹರು, ಮನ್ನಣೆ ಎಂಬುದು ಕೀಳರಿಮೆಯ ಪದವಲ್ಲ, ಮಹತ್ವಾಕಾಂಕ್ಷೆಯ ಬೆನ್ನೇರಿ ಹೊರಟರೆ ಚಾರಿತ್ರ್ಯವನ್ನು ಬಿಟ್ಟುಕೊಟ್ಟಂತಾಗುವುದಿಲ್ಲ. ಯಾರಾದರೂ ಅಭಿನಂದಿಸಿದರೆ ಸರಳವಾದ ಧನ್ಯವಾದ ಹೇಳಿ ಹೊರಡುವುದು ತಪ್ಪಲ್ಲ” ಎಂದು ಸ್ಪೂರ್ತಿದಾಯಕ ಸಂದೇಶ ನೀಡಿದ್ದಾರೆ.
ನಟಿಯೊಬ್ಬಳು ತನ್ನ ಕಾಂಟ್ರಾಕ್ಟ್ ಸಹಿ ಮಾಡುವಾಗ ಹೆಚ್ಚಿನ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಪರಾಕಾಷ್ಟೆಯಾಗದ, ತೀರಾ ಸಹಜ ಸುದ್ದಿಯಾಗುವ ದಿನಗಳಿಗಾಗಿ ನಾನು ಕನಸುತ್ತಿದ್ದೇನೆ. ಸಿನಿಮಾ ಸೆಟ್‌ನಲ್ಲಿ ಕಲಾವಿದೆಯರ ಸುರಕ್ಷತೆ ಎಂಬುದು ಕನಿಷ್ಠ ಮೂಲಭೂತ ಸೌಲಭ್ಯವಾಗಿ ದಕ್ಕುವ ನಾಳೆಗಳ ಕನಸುತ್ತೇನೆ ಎಂಬ ಸಮಂತಾ ಹೇಳಿಕೆ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದೆ.



