ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಪಾದಚಾರಿ ಮಹಿಳೆಗೆ ಕ್ರೇನ್ ಡಿಕ್ಕಿ ಹೊಡೆದು ಮೃತಪಟ್ಟ ದುರ್ಘಟನೆ ನಡೆದಿದೆ.
ಕಾರವಾರ ಮೂಲದ ದಿವ್ಯಾ (45) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರ ಸಹಾಯದಿಂದ ಖಾಸಗಿ ವಾಹನದಲ್ಲಿ ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮಾಹಿತಿಯಂತೆ, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದ ಪುತ್ರಿಯನ್ನು ಕಾರವಾರದತ್ತ ಕರೆದೊಯ್ಯುತ್ತಿದ್ದ ವೇಳೆ, ಉದ್ಯಾವರ ಬಲಾಯಿಪಾದೆ ಬಳಿ ಯು-ಟರ್ನ್ ಪಡೆದು ಗುಡ್ಡೆಯಂಗಡಿ ಸಮೀಪದ ಹೋಟೆಲ್‌ಗೆ ಉಪಾಹಾರಕ್ಕಾಗಿ ತೆರಳಿದ್ದರು. ಇದೇ ವೇಳೆ ಪುತ್ರಿ ಕ್ರಿಕೆಟ್ ಬ್ಯಾಟ್ ಬೇಕೆಂದು ಹೇಳಿದ ಕಾರಣ, ದಿವ್ಯಾ ಅವರು ರಸ್ತೆ ದಾಟಲು ಮುಂದಾಗುತ್ತಿದ್ದಾಗ ಕ್ರೇನ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ಭಾಗದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಸರ್ವಿಸ್ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.





