ಇಳಯರಾಜ ಜನುಮದಿನ | ಸಂಗೀತ ಮಾಂತ್ರಿಕನ ಹೆಜ್ಜೆ ಗುರುತುಗಳು

Date:

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಇಂದು (ಜೂನ್‌ 2) 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಂಗೀತ ಮಾಂತ್ರಿಕನಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಹೊತ್ತಿನಲ್ಲಿ ಅವರ ಸಿನಿ ಪಯಣವನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನ.

ಏಳು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವ ಇಳಯರಾಜ, 1,400ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ 20 ಸಾವಿರಕ್ಕೂ ಅಧಿಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶನ ಮತ್ತು ರಾಗ ಸಂಯೋಜನೆಗಾಗಿ 5 ಬಾರಿ ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 2012ರಲ್ಲಿ ಪ್ರತಿಷ್ಠಿತ ʼಸಂಗೀತ ನಾಟಕ ಅಕಾಡೆಮಿʼ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪದ್ಮ ಭೂಷಣ, ಪದ್ಮ ವಿಭೂಷಣ ಗೌರವಗಳಿಗೂ ಇಳಯರಾಜ ಭಾಜನರಾಗಿದ್ದಾರೆ. ಅದಷ್ಟೇ ಅಲ್ಲ, ಇತ್ತೀಚೆಗೆ ರಾಜ್ಯಸಭೆಯ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ.

ಇಳಯರಾಜ ಅವರ ಮೂಲ ಹೆಸರೇ ಬೇರೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಮಿಳುನಾಡಿನ ತೇಣಿ ಜಿಲ್ಲೆಯ ಪನ್ನೈಪುರಂನಲ್ಲಿ ಕೃಷಿಕರ ಕುಟುಂಬದಲ್ಲಿ ಇಳಯರಾಜ ಜನಿಸುತ್ತಾರೆ. ಸಂಗೀತ ಪ್ರೇಮಿಗಳಿಗೆ ʼಇಳಯರಾಜʼ ಎಂದೇ ಚಿರಪರಿಚಿತರಾಗಿರುವ ಇವರ ಮೂಲ ಹೆಸರು ಜ್ಞಾನದೇಸಿಗನ್‌. ಆದರೆ, ಅವರ ತಂದೆ ಶಾಲೆಗೆ ಸೇರಿಸುವಾಗ ರಾಜಯ್ಯ ಎಂದು ಹೆಸರು ದಾಖಲಿಸುತ್ತಾರೆ. ಹುಟ್ಟಿನಿಂದ ಜ್ಞಾನದೇಸಿಗನ್‌, ಶಾಲೆಯಲ್ಲಿ ರಾಜಯ್ಯನಾಗಿದ್ದ ಇವರನ್ನು ಊರಿನ ಜನ ರಾಸಯ್ಯ ಎಂದು ಕರೆದದ್ದೂ ಉಂಟು. ಚಿಕ್ಕಂದಿನಿಂದಲೂ ಜಾನಪದ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಾಜಯ್ಯ, ಗಾಯಕ ಮತ್ತು ಸಂಗೀತಕಾರರಾದ ತಮ್ಮ ಹಿರಿಯಣ್ಣ ಪಾವಲಾರ್‌ ವರದರಾಜನ್‌ ಜೊತೆಗೆ ಊರೂರು ಸುತ್ತಿ ಸಂಗೀತ ಕಚೇರಿಗಳಲ್ಲಿ ಭಾಗವಹಿಸುತ್ತಾರೆ. ನಂತರ ಸಹೋದರರಂತೆ ತಾವು ಕೂಡ ಸಂಗೀತ ಕಲಿಯುವ ಹಠಕ್ಕೆ ಬೀಳುವ ರಾಜಯ್ಯ, ತಮಿಳಿನ ಖ್ಯಾತ ಸಂಗೀತಕಾರ ಧನರಾಜ್‌ ಮಾಸ್ಟರ್‌ ಬಳಿ ಕಲಿಕೆಯನ್ನು ಪ್ರಾರಂಭಿಸುತ್ತಾರೆ.

ಸಂಗೀತ ಹೇಳಿಕೊಟ್ಟ ಇದೇ ಧನರಾಜ್‌ ಮಾಸ್ಟರ್‌ ʼರಾಜಯ್ಯʼನ ಹೆಸರನ್ನು ತುಂಡರಿಸಿ ʼರಾಜʼ ಎಂದು ಕರೆಯಲು ಪ್ರಾರಂಭಿಸುತ್ತಾರೆ. ಧನರಾಜ್‌ ಅವರ ಬಳಿ ಸಂಗೀತ ಕಲಿತ ನಂತರ ಕನ್ನಡ ಮೂಲದ ಆಗ ತಮಿಳಿನಲ್ಲಿ ಹೆಸರು ಮಾಡಿದ್ದ ಜಿ.ಕೆ ವೆಂಕಟೇಶ್‌ ಅವರ ಬಳಿಕ ಸಹಾಯಕನಾಗಿ ಸೇರಿಕೊಳ್ಳುತ್ತಾರೆ. ವೆಂಕಟೇಶ್‌ ಜೊತೆಗೆ 200 ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುವ ʼರಾಜʼ, 1976ರಲ್ಲಿ ತೆರೆಕಂಡ ʼಅಣ್ಣಾಕಿಲಿʼ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಾರೆ. ಹಾಡುಗಳು ಕೂಡ ಜನಪ್ರಿಯತೆ ಗಳಿಸುತ್ತವೆ. ಈ ಹಿನ್ನೆಲೆ ಚಿತ್ರದ ನಿರ್ಮಾಪಕ ಪಂಚನಾಥನ್‌ ಅರುಣಾಚಲಂ, ʼರಾಜʼ ಎಂಬ ಹೆಸರಿನ ಮುಂದೆ ʼಇಳಯʼ ಎಂದು ಸೇರಿಸಿ ʼಇಳಯ ರಾಜʼ (ಯುವ ರಾಜ) ಎಂದು ಕರೆಯುತ್ತಾರೆ. ಪನ್ನೈಪುರಂನ ಜ್ಞಾನದೇಸಿಗನ್‌ ಅಂದಿನಿಂದ ಇಳಯರಾಜನಾಗಿಯೇ ಖ್ಯಾತರಾಗುತ್ತಾರೆ.

ಇಳಯರಾಜ ಹುಟ್ಟಿದ ದಿನ ಜೂನ್‌ ಎರಡಲ್ಲ

ಅಂದಹಾಗೆ ಜೂನ್‌ 2 ಇಳಯರಾಜ ಅವರ ಜನ್ಮ ದಿನವಲ್ಲ. ಅವರು ಹುಟ್ಟಿದ್ದು 1943ರ ಜೂನ್‌ 3ರಂದು. ಆದರೆ, ಪ್ರತಿ ವರ್ಷ ಜೂನ್‌ 2ರಂದೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಖ್ಯಾತ ಚಿತ್ರಸಾಹಿತಿ ದಿವಂಗತ ಕರುಣಾನಿಧಿ. ಜೂನ್‌ 3 ಕರುಣಾನಿಧಿ ಅವರು ಹುಟ್ಟಿದ ದಿನ. ಕರುಣಾನಿಧಿ ಅವರಿಂದಲೇ ನಾನು ಸಂಗೀತ ನಿರ್ದೇಶಕನಾದೆ ಎನ್ನುವ ಇಳಿಯರಾಜ ತಾವು ಆರಾಧಿಸುವ ವ್ಯಕ್ತಿಯ ಹುಟ್ಟಿದ ದಿನದಂದು ತಮ್ಮ ಜನ್ಮ ದಿನವನ್ನು ಆಚರಿಸಕೊಳ್ಳದಿರಲು ನಿರ್ಧರಿಸಿ ಒಂದು ದಿನ ಮುಂಚೆ ಅಂದರೆ ಜೂನ್‌ 2ರಂದು ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಇಳಯರಾಜ ಅವರ ಸಂಗೀತದ ಅಭಿಮಾನಿಯಾಗಿದ್ದ ಕರುಣಾನಿಧಿ ʼಇಸೈಜ್ಞಾನಿʼ ಎಂಬ ಬಿರುದು ನೀಡಿ ಗೌರವಿಸಿದ್ದರು.

80ರ ದಶಕದಲ್ಲಿ ಸಂಚಲನ ಸೃಷ್ಟಿಸಿದ್ದ ʼಇಳಯರಾಜʼ

ಚಿಕ್ಕಂದಿನಿಂದ ಜಾನಪದ ಸಂಗೀತದ ಬಗ್ಗೆ ಅಪಾರ ಒಲವು ಹೊಂದಿದ್ದ ʼಇಳಯರಾಜʼ ತಮ್ಮ ಸಂಗೀತದ ಮೂಲಕ ತಮಿಳು ಚಿತ್ರರಂಗಕ್ಕೆ ಜಾನಪದದ ಸೊಗಡನ್ನು ಪರಿಚಯಿಸಿದರು. ಏಕತಾನತೆಯ ಸಂಗೀತಕ್ಕೆ ಸೀಮಿತವಾಗಿದ್ದ ತಮಿಳು ಸಿನಿ ಪ್ರೇಮಿಗಳಿಗೆ ಇಳಯರಾಜ ಅವರ ಮೆಲೋಡಿ ಹಾಡುಗಳು ಮೋಡಿ ಮಾಡಿದ್ದವು. ತಮಿಳು ಸಂಗೀತ ಲೋಕಕ್ಕೆ ಪಾಶ್ಚಿಮಾತ್ಯದ ಕ್ಲಾಸಿಕಲ್‌ ಮ್ಯೂಸಿಕ್‌ ಮೆರಗನ್ನು ಪರಿಚಯಿಸಿದವರಲ್ಲಿ ಇಳಯರಾಜ ಮೊದಲಿಗರು. ಅವರ ಆರ್ಕೆಸ್ಟ್ರಾ ಮಾದರಿಯ ಸಂಗೀತ ಜನಮಾನಸ ಗೆದ್ದಿತ್ತು. ಬೃಹತ್‌ ʼಸಿಂಫನಿʼ ಏರ್ಪಿಡಿಸಿ ಸಂಗೀತ ಸಂಯೋಜನೆ ಮಾಡಿದ ದಕ್ಷಿಣ ಏಷ್ಯಾದ ಮೊದಲ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆ ಇಳಯರಾಜ ಅವರದ್ದು. ಅಷ್ಟೇ ಅಲ್ಲ, 1986ರಲ್ಲಿ ಕಮಲ್‌ ಹಾಸನ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡ ʼವಿಕ್ರಮ್‌ʼ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಲು ಕಂಪ್ಯೂಟರ್‌ ಬಳಸುವ ಮೂಲಕ. ಹಿನ್ನೆಲೆ ಸಂಗೀತವನ್ನು ಸೆರೆ ಹಿಡಿಯಲು ಕಂಪ್ಯೂಟರ್‌ ಬಳಸಿದ ಮೊದಲ ಸಂಗೀತ ನಿರ್ದೇಶಕ ಎಂಬ ಖ್ಯಾತಿಗೂ ಪಾತ್ರರಾದರು.

ಇಳಯರಾಜ ಕನ್ನಡದ ನಂಟು

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್‌ ಅವರಿಂದ ಸಂಗೀತ ಸಂಯೋಜನೆಯನ್ನು ಕಲಿತ ಇಳಯರಾಜ, ‘ನಮ್ಮೂರ ಮಂದಾರ ಹೂವೆ’ ಚಿತ್ರದ “ಓಂಕಾರದಿ ಕಂಡೆ ಪ್ರೇಮ ನಾದವ..”, “ಮುತ್ತು.. ಮುತ್ತು.. ನೀರ ಹನಿಯಾ.. ತಾಂತನ”, ʼಪಲ್ಲವಿ ಅನುಪಲ್ಲವಿʼ ಚಿತ್ರದ “ನಗುವ ನಯನ ಮಧುರ ಮೌನ..”, ʼಆ ದಿನಗಳುʼ ಚಿತ್ರದ “ಸಿಹಿ ಗಾಳಿ.. ಸಿಹಿ ಗಾಳಿ..”, ʼನನ್ನ ಪ್ರೀತಿಯ ರಾಮʼ ಚಿತ್ರದ “ಬಡವ ಗುಡಿಸಲನು ಗುಡಿಯಾಗಿ ಮಾಡಲೆಂದು ಆ ದೇವನೇ ಯಾಕೆ ಬಂದ..” ಹಾಡಿಗೆ ಸಂಗೀತ ನೀಡಿದ್ದಲ್ಲದೇ ಹಿನ್ನೆಲೆ ಗಾಯಕರಾಗಿ ಕಂಠದಾನ ಕೂಡ ಮಾಡಿದ್ದರು. 1996ರಲ್ಲಿ ಶಿವರಾಜ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಶಿವ ಸೈನ್ಯʼ ಚಿತ್ರದ “ಜೈಲಲಿ ಹುಟ್ಟಿ ಬಯಲಿಗೆ ಬಂದೆ ಕೃಷ್ಣ.. ಕೃಷ್ಣ..ಕೃಷ್ಣ..” ಹಾಡನ್ನು ಸ್ವತಃ ಇಳಿಯರಾಜ ಅವರೇ ಬರೆದಿದ್ದು ಅವರ ಕನ್ನಡ ಪ್ರೀತಿಗೆ ಸಾಕ್ಷಿ. ಈ ಹಾಡಿಗೆ ಇಳಿಯರಾಜ ಅವರೇ ಧ್ವನಿಯಾಗಿದ್ದಲ್ಲದೇ, ಸಂಗೀತ ಸಂಯೋಜನೆಯನ್ನೂ ಮಾಡಿದ್ದರು. ಶಂಕರ್‌ ನಾಗ್‌ ಮುಖ್ಯಭೂಮಿಕೆಯ ʼಆ್ಯಕ್ಸಿಡೆಂಟ್‌ʼ, ʼಭಾಗ್ಯದ ಬಳೆಗಾರʼ, ಪುನೀತ್‌ ರಾಜ್‌ಕುಮಾರ್‌ ನಟನೆಯ ʼಮೈತ್ರಿʼ, ಪ್ರಕಾಶ್‌ ರಾಜ್‌ ನಟಿಸಿ, ನಿರ್ದೇಶಿಸಿದ್ದ ʼಒಗ್ಗರಣೆʼ, ʼಇದೊಳ್ಳೆ ರಾಮಾಯಣʼ ಸೇರಿದಂತೆ ಕನ್ನಡದ ಹಲವು ಚಿತ್ರಗಳಿಗೆ ಇಳಯರಾಜ ಸಂಗೀತ ನೀಡಿದ್ದಾರೆ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಪ್ಪಿಗೆಯಿಲ್ಲದೆ ಹಾಡು ಬಳಕೆ: ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಾಪಕರಿಗೆ ಇಳಯರಾಜ ನೋಟಿಸ್

ಇತ್ತೀಚಿಗೆ ಮಲಯಾಳಂನಲ್ಲಿ ಸೂಪರ್‌ ಡೂಪರ್‌ ಹಿಟ್‌ ಆಗಿದ್ದ ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾ...

ಬಿಸಿಗಾಳಿ | ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ಶಾರೂಖ್ ಖಾನ್

ಮಂಗಳವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ...

ಅಪಘಾತದಲ್ಲಿ ನಟಿ ಪವಿತ್ರ ಜಯರಾಂ ನಿಧನರಾದ ಬೆನ್ನಲ್ಲೇ ಸ್ನೇಹಿತ, ನಟ ಚಂದ್ರಕಾಂತ್ ಆತ್ಮಹತ್ಯೆ

ಕಳೆದ ಐದು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಮೆಹಬೂಬ್‌ ನಗರದಲ್ಲಿ...

ನೀವು ಮನುಷ್ಯನಾಗಿರಲೇ ಅಯೋಗ್ಯ: ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಕುಮಾರ್ ಗರಂ

ಪ್ರಧಾನಿ ನರೇಂದ್ರ ಮೋದಿಯವರ ಕಟು ಟೀಕಾಕಾರರಲ್ಲಿ ಒಬ್ಬರಾಗಿರುವ ಬಹುಭಾಷಾ ನಟ ಕಿಶೋರ್...