ಪುರುಷರಿಗೂ ಪೀರಿಯಡ್ಸ್ ಬರುವಂತಾಗಿದ್ದರೆ ಪರಿಸ್ಥಿತಿ ತೀರಾ ಭಿನ್ನವಾಗಿರುತ್ತಿತ್ತು. ಉದ್ಯೋಗ ಒಪ್ಪಂದಗಳಲ್ಲಿ ‘ಋತುಚಕ್ರದ ರಜೆ’ ನೀಡುವುದು ಕಡ್ಡಾಯವಾಗುತ್ತಿತ್ತು. ಗಂಡಸರಿಗೂ ‘ಮುಟ್ಟಾಗಲಿ’ ಎಂದು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ ಎಂದು ನಟಿ ಶೃತಿ ಹಾಸನ್ ಹೇಳಿದ್ದಾರೆ.
ನಟಿ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶೃತಿ ಹಾಸನ್, ಋತುಚಕ್ರದ ಸಮಯದಲ್ಲಿ ಮಹಿಳೆಯರು ಅನುಭವಿಸುವ ತೀವ್ರ ನೋವು ಮತ್ತು ಈ ಕುರಿತು ಸಮಾಜದಲ್ಲಿರುವ ಅರಿವಿನ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಮುಟ್ಟಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವ ಸನ್ನಿವೇಶಗಳನ್ನು ಪ್ರಸ್ತಾಪಿಸಿ, ‘ಪುರುಷರಿಗೂ ಮುಟ್ಟಾಗಬೇಕಿತ್ತು’ ಎಂದಿದ್ದಾರೆ.
“ಮುಟ್ಟಿನ ವಿಚಾರದಲ್ಲಿ ಸಮಾಜದಲ್ಲಿರುವ ಸಮಸ್ಯೆಗೆ ಒಂದೇ ಪರಿಹಾರವೆಂದರೆ; ಪುರುಷರಿಗೂ ಪೀರಿಯಡ್ಸ್ ಬರುವುದು. ಈ ಬಗ್ಗೆ ನಾನು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ. ಹಾಗೇನಾದರೂ ಆಗಿದ್ದರೆ, ನಮ್ಮ ಉದ್ಯೋಗ ಒಪ್ಪಂದಗಳಲ್ಲಿಯೇ ಮುಟ್ಟಿನ ರಜೆಯನ್ನು ಸೇರಿಸಲಾಗುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸೋಹಾ ಅಲಿ ಖಾನ್ ಹಾಸ್ಯಸ್ಪರ್ಶದ ಮಾತುಗಳಲ್ಲಿ ದನಿಗೂಡಿಸಿ, “ಪುರುಷರಿಗೆ ಪೀರಿಯಡ್ಸ್ ಬರುತ್ತಿದ್ದರೆ ಅವರು ಯಾರಿಗೆ ಹೆಚ್ಚು ರಕ್ತಸ್ರಾವವಾಗುತ್ತದೆ ಅಥವಾ ಯಾರು ದೊಡ್ಡ ಸೈಜ್ ಟ್ಯಾಂಪೂನ್ ಬಳಸುತ್ತಾರೆ ಎಂಬುದರ ಮೇಲೆಯೇ ಸ್ಪರ್ಧೆಗೆ ಇಳಿಯುತ್ತಿದ್ದರು” ಎಂದು ತಮಾಷೆ ಮಾಡಿದರು.
ತಮಗೆ ‘ಪಿಸಿಒಎಸ್’ (Polycystic Ovary Syndrome – PCOS) ಆರೋಗ್ಯ ಸಮಸ್ಯೆ ಇರುವುದನ್ನು ಬಹಿರಂಗಪಡಿಸಿದ ಶೃತಿ, “ಇದರಿಂದಾಗಿ ತಮಗೆ ಪೀರಿಯಡ್ಸ್ ಸಮಯದಲ್ಲಿ ಅತ್ಯಂತ ತೀವ್ರವಾದ ನೋವು ಉಂಟಾಗುತ್ತದೆ” ಎಂದು ತಿಳಿಸಿದ್ದಾರೆ.
“ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಮುಟ್ಟು ಮತ್ತು ಪಿಸಿಒಎಸ್ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಲು ಹಿಂಜರಿಯುತ್ತಿದ್ದೆ. ಪೀರಿಯಡ್ಸ್ ಬಗ್ಗೆ ಮಾತನಾಡಿದರೆ ಜನರು ಅದನ್ನು ಚರ್ಚಿಸಲು ಇಷ್ಟಪಡುವುದಿಲ್ಲವೆಂದು ಭಾವಿಸಿದ್ದೆ. ಆದರೆ ಮೊದಲ ಬಾರಿಗೆ ನಾನು ನಿರ್ದೇಶಕರೊಬ್ಬರಿಗೆ ಈ ವಿಷಯ ತಿಳಿಸಿದಾಗ, ಅವರು ತಮ್ಮ ಮಗಳಿಗೂ ತೀವ್ರ ನೋವು ಬರುತ್ತದೆ ಎಂದರು. ಆ ಒಂದು ಮಾತು ಇಡೀ ವಾತಾವರಣವನ್ನೇ ಬದಲಾಯಿಸಿತು” ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!
“ಆರೋಗ್ಯಕ್ಕೆ ಸಂಬಂಧಿಸಿದ ಸಂಭಾಷಣೆಗಳು ಕೆಲಸದ ವಾತಾವರಣದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ಸಹಕರಿಸಲು ಸಹಾಯ ಮಾಡುತ್ತವೆ ಎಂಬುದನ್ನು ಮನಗಂಡ ನಂತರ ನಾನು ಮುಕ್ತವಾಗಿ ಮಾತನಾಡಲು ಆರಂಭಿಸಿದೆ. ನನ್ನ ಶರೀರದಲ್ಲಾಗುವ ಬದಲಾವಣೆ ಅಥವಾ ನೋವಿನ ಬಗ್ಗೆ ಜೊತೆಗಿದ್ದವರಿಗೆ ತಿಳಿದಿದ್ದರೆ, ನಾವು ಹೆಚ್ಚು ಸಹಕಾರದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಒಮ್ಮೆ ನನ್ನ ಸಹನಟರೊಬ್ಬರು ತಮಗೆ ಮೊಣಕಾಲು ಶಸ್ತ್ರಚಿಕಿಚಿಕೆ ಆಗಿದೆ ಎಂದಾಗ ಎಲ್ಲರೂ ಅದಕ್ಕೆ ತಕ್ಕಂತೆ ಕೆಲಸದ ವೇಳಾಪಟ್ಟಿಯನ್ನು ಹೊಂದಿಸಿಕೊಂಡರು. ಇದನ್ನು ಗಮನಿಸಿದ ನಾನು, ನನಗೂ ಪೀರಿಯಡ್ಸ್ ನೋವಿದೆ ಎಂಬುದನ್ನು ಮುಕ್ತವಾಗಿ ಹೇಳಲು ಪ್ರಾರಂಭಿಸಿದೆ” ಎಂದು ಶೃತಿ ಹೇಳಿದ್ದಾರೆ.
ಶೃತಿ ಹಾಸನ್ ಅವರು ಕೊನೆಯದಾಗಿ 2025ರ ‘ಕೂಲಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ವಿಜಯ್ ಸೇತುಪತಿ ಜೊತೆಗಿನ ‘ಟ್ರೇನ್’ ಮತ್ತು ದುಲ್ಕರ್ ಸಲ್ಮಾನ್ ಅಭಿನಯದ ‘ಆಕಾಶಂಲೋ ಒಕ ತಾರಾ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಎಸ್.ಎಸ್. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಭಾರೀ ಬಜೆಟ್ ಚಿತ್ರ ‘ವಾರಣಾಸಿ’ಯ ಹಾಡೊಂದಕ್ಕೆ ಅವರು ದನಿಯಾಗಿದ್ದಾರೆ.



