‘ಅಪೊಲಿನಾ – ಸಪ್ನೋ ಕಿ ಉಂಚಿ ಉಡಾನ್’, ‘ರಬ್ ಸೇ ಹೈ ದುವಾ’ ಮತ್ತು ‘ಕಲೀರೇನ್’ ಮುಂತಾದ ಹಿಂದಿ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿರುವ ಕಿರುತೆರೆ ನಟಿ ಅದಿತಿ ಶರ್ಮಾ, ತಮ್ಮ ಪತಿ ಮತ್ತು ಅತ್ತೆಯ ಮನೆಯವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.
ಅದಿತಿ ಅವರ ದೂರಿನ ಮೇರೆಗೆ ಜುಲೈ 31ರಂದು ಮುಂಬೈನ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಪತಿ ಅಭಿನೀತ್ ವಿದ್ಯಾನಂದ್ ಕೌಶಿಕ್, ಅತ್ತೆ ಉರ್ಮಿಳಾ ಕೌಶಿಕ್ (65) ಮತ್ತು ನಾದಿನಿ ಕೀರ್ತಿ ಕೌಶಿಕ್ (29) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೈಹಿಕ ಹಾಗೂ ಮಾನಸಿಕ ಕಿರುಕುಳ, ಹಲ್ಲೆ, ನಿಂದನೆ, ವರದಕ್ಷಿಣೆ/ಸ್ತ್ರೀಧನದ ದುರ್ಬಳಕೆಯಂತಹ ಗಂಭೀರ ಆರೋಪಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, 2021ರ ಜೂನ್‌ನಲ್ಲಿ ಆನ್‌ಲೈನ್ ನಟನಾ ತರಗತಿಯೊಂದರಲ್ಲಿ ಅಭಿನೀತ್ ಅವರನ್ನು ಅದಿತಿ ಭೇಟಿಯಾಗಿದ್ದರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ 2024ರ ಸೆಪ್ಟೆಂಬರ್‌ನಿಂದ ಗುರುಗ್ರಾಮದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಒಟ್ಟಿಗೆ ವಾಸಿಸಲು (ಲಿವ್-ಇನ್) ಆರಂಭಿಸಿದ್ದರು. ಬಳಿಕ 2024ರ ನವೆಂಬರ್ 12ರಂದು ವಿವಾಹವಾಗಿದ್ದರು.
ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯ ವರ್ತನೆ ಬದಲಾಯಿತು ಎಂದು ಅದಿತಿ ಆರೋಪಿಸಿದ್ದಾರೆ. ಬಟ್ಟೆ ಧರಿಸುವ ವಿಚಾರ ಸೇರಿದಂತೆ ಸಣ್ಣಪುಟ್ಟ ವಿಚಾರಗಳಿಗೂ ಜಗಳವಾಡಲು ಶುರು ಮಾಡಿದರು. ಅಲ್ಲದೆ, ಮನೆ ಖರ್ಚಿಗೆ ಹಣ ನೀಡುವ ಬದಲು, ಅದಿತಿಯವರಿಂದಲೇ ನಿರಂತರವಾಗಿ ಹಣ ಕೀಳುತ್ತಿದ್ದರು ಎಂದು ದೂರಲಾಗಿದೆ.
2025ರ ಜನವರಿ 1ರಂದು ಕಾಫಿ ಮಾಡುವ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿತು. ಆ ಬಳಿಕ ಅದಿತಿಯವರ ಬಗ್ಗೆ ಅನುಮಾನ ಪಡಲು ಶುರು ಮಾಡಿದ ಪತಿ, ಬೇರೊಬ್ಬರೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ, ಪದೇ ಪದೇ ಮೊಬೈಲ್ ಫೋನ್ ತಪಾಸಣೆ ಮಾಡುತ್ತಿದ್ದರು. ಅಂತಿಮವಾಗಿ ಬೇರೊಂದು ಕೋಣೆಯಲ್ಲಿ ಮಲಗಲು ಆರಂಭಿಸಿದರು ಹಾಗೂ ಪೋಷಕರೊಂದಿಗೆ ಮಾತನಾಡದಂತೆಯೂ ತನಗೆ ನಿರ್ಬಂಧ ವಿಧಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮದುವೆಯ ಸಂದರ್ಭದಲ್ಲಿ ತನಗೆ ನೀಡಿದ್ದ ಚಿನ್ನದ ಸರ, ಉಂಗುರಗಳು, ವಜ್ರದ ಉಂಗುರ, ಮಾಂಗಲ್ಯ ಮತ್ತು ಬಳೆಗಳು ಸೇರಿದಂತೆ ತಮ್ಮ ‘ಸ್ತ್ರೀಧನ’ವನ್ನು (ವಧುವಿನ ಆಭರಣಗಳು) ಅತ್ತೆ ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಎಷ್ಟೇ ಬಾರಿ ಕೇಳಿದರೂ ವಾಪಸ್ ನೀಡಿಲ್ಲ ಎಂದು ಅದಿತಿ ದೂರಿದ್ದಾರೆ. ಜಗಳ ಬಿಡಿಸುವ ನೆಪದಲ್ಲಿ ಅತ್ತೆ ಮತ್ತು ನಾದಿನಿ ಕೂಡ ಪತಿಯ ಪರವಾಗಿಯೇ ನಿಂತು ತನಗೆ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗುರುಗ್ರಾಮಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.




