ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಮುಂದಾದ ಸ್ಟಾರ್ ನಟ
ಸೋನು ಸೂದ್ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ
ಬಾಲಿವುಡ್‌ನ ಖ್ಯಾತ ನಟ ಸೋನು ಸೂದ್, ಒಡಶಾ ರೈಲು ದುರಂತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ವ್ಯಕ್ತಿಗಳ ಕುಟುಂಬಗಳಿಗೆ ನೆರವಾಗಲು ಮುಂದಾಗಿದ್ದಾರೆ. ರೈಲು ದುರಂತ ಸಂಭವಿಸಿದ ಬಳಿಕ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಸೋನು ಸೂದ್, ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ನಟ, ಇದೀಗ ಸಂತ್ರಸ್ತರ ಕುಟುಂಬಗಳಿಗೆ ನೆರವಾಗುವ ಸಲುವಾಗಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸೂನು ಸೂದ್, “ಒಡಿಶಾ ರೈಲು ದುರಂತದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ನೆರವಾಗಲು ನಮ್ಮ ʼಸೂದ್ ಚಾರಿಟಿ ಟ್ರಸ್ಟ್ʼ ವತಿಯಿಂದ ಸಹಾಯವಾಣಿಯನ್ನು ಆರಂಭಿಸಿದ್ದೇವೆ. ಅಪಘಾತದಲ್ಲಿ ಮನೆಗೆ ಆಧಾರವಾಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದ ಸದಸ್ಯರಿಗೆ ನೌಕರಿ ಕೊಡಿಸುವ ಅಥವಾ ಆ ಕುಟುಂಬ ಇರುವ ಊರಿನಲ್ಲೇ ಸಣ್ಣ ಪುಟ್ಟ ವ್ಯಾಪಾರ ನಡೆಸಲು ಹಣಕಾಸಿನ ಸಹಾಯ ಮಾಡುವ ಮತ್ತು ಸಂತ್ರಸ್ತ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಈ ಸಹಾಯವಾಣಿ ಆರಂಭಿಸಿದ್ದೇವೆ. ಸಂತ್ರಸ್ತ ಕುಟುಂಬಗಳ ಸದಸ್ಯರು ಅಥವಾ ಅಂತಹ ಕುಟುಂಬಗಳ ಬಗ್ಗೆ ತಿಳಿದವರು ತಮ್ಮ ವಿವರಗಳನ್ನು ಸಂದೇಶದ ಮೂಲಕ ಸಹಾಯವಾಣಿಗೆ ರವಾನಿಸಬೇಕು” ಎಂದಿದ್ದಾರೆ.
ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟ ಅಥವಾ ಗಂಭೀರವಾಗಿ ಗಾಯಗೊಂಡವರ ಕುಟುಂಬ ಸದಸ್ಯರು ʼ+91 9967567520ʼ ಈ ಸಹಾಯವಾಣಿಗೆ ಸಂದೇಶ ಕಳುಹಿಸುವ ಮೂಲಕ ಅಗತ್ಯ ನೆರವುಗಳನ್ನು ಪಡೆಯಬಹುದಾಗಿದೆ. ಈ ಸಹಾಯವಾಣಿ ಕೇವಲ ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೆರವಾಗಲು ಮಾತ್ರ ಕಾರ್ಯ ನಿರ್ವಹಿಸಲಿದೆ.
ಈ ಸುದ್ದಿ ಓದಿದ್ದೀರಾ? ರೈಲು ದುರಂತಕ್ಕೆ ಸರ್ಕಾರ ಹೊಣೆಯಲ್ಲವೇ? ನಟ ಕಿಶೋರ್ ಪ್ರಶ್ನೆ
ಘಟನೆಯ ಬಳಿಕ ಸಂತಾಪ ಸೂಚಿಸಿ ಮಾತನಾಡಿದ್ದ ಸೋನು ಸೂದ್, “ಈ ಅಪಘಾತದಲ್ಲಿ ದುಡಿಮೆ ಅರಸಿ ಚೆನ್ನೈಗೆ ಹೊರಟಿದ್ದ ಬಿಹಾರದ ಕೂಲಿ ಕಾರ್ಮಿಕರು, ಕೆಲ ಕುಟುಂಬಗಳು ಹೀಗೆ ಹಲವರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಪರಿಹಾರ ಸಿಗತ್ತದೆ. ಆ ಪರಿಹಾರ ಮೂರ್ನಾಲ್ಕು ತಿಂಗಳುಗಳಿಗೆ ಖಾಲಿಯಾಗುತ್ತದೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಶಾಶ್ವತವಾಗಿ ಗಾಯಗೊಂಡು ಹಾಸಿಗೆ ಹಿಡಿದರೆ ಅಂತಹ ಕುಟುಂಬಗಳು ಯಾವತ್ತಿಗೂ ಸುಧಾರಿಸಲು ಸಾಧ್ಯವೇ ಇಲ್ಲ. ಅಂತಹ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ಸಾಕಾಗುವುದಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಶ್ವತ ಪರಿಹಾರ ನೀತಿಗಳನ್ನು ರೂಪಿಸಬೇಕು. ಈ ರೀತಿಯ ದುರಂತಗಳಿಗೆ ಬಲಿಯಾದ ವ್ಯಕ್ತಿ ಅಥವಾ ಕುಟುಂಬಗಳಿಗೆ ನೆರವಾಗಲು ಪಿಂಚಣಿಯ ಮಾದರಿಯಲ್ಲಿ ಮಾಸಿಕ ಪರಿಹಾರವನ್ನು ನೀಡುವಂತಾಗಬೇಕು” ಎಂದು ಆಗ್ರಹಿಸಿದ್ದರು.
ಒಡಿಶಾದ ಬಾಲಾಸೋರ್ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದ್ದ ರೈಲು ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು.