ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ₹10 ಸಾವಿರ ದರ ನಿಗದಿ ಆರೋಪ; ತನಿಖೆ ಮಾಡುತ್ತಾ ಆರೋಗ್ಯ ಇಲಾಖೆ?

Date:

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಇಂತಿಷ್ಟು ಸಾವಿರ ಎಂಬ ದರ ನಿಗದಿ ಮಾಡಿ ಅಲಿಖಿತ ಆದೇಶ ಹೊರಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ, ವಾಸ್ತವ ಸಂಗತಿಯನ್ನು ಜನರ ಮುಂದೆ ಇಡಬೇಕಿದೆ.

ಒಂದು ಹೆರಿಗೆಗಾಗಿ ಇಂತಿಷ್ಟು ಸಾವಿರ, ಇಂತಿಷ್ಟು ಲಕ್ಷ ಎಂಬ ಅಲಿಖಿತ ದರ ನಿಗದಿಯನ್ನು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಕೇಳಿರುತ್ತೀರಾ. ಆದರೆ, ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳ ತರಹವೇ ಹೆರಿಗೆಗಾಗಿ ದರ ನಿಗದಿ ಮಾಡಿದ್ದನ್ನು ಎಲ್ಲಾದರೂ ಕೇಳಿದ್ದೀರಾ?

ಹೌದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಇಂತಿಷ್ಟು ಸಾವಿರ ಎಂಬ ದರ ನಿಗದಿಮಾಡಿ ಅಲಿಖಿತ ಆದೇಶ ಹೊರಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಗರ್ಭಿಣಿ ರೇಣುಕಮ್ಮ ಬೊಮ್ಮನಹಳ್ಳಿ ಅವರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಲು ಗಂಗಾವತಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ 10 ಸಾವಿರ ರೂ. ಲಂಚ ಕೇಳಿದ್ದರು ಎಂದು ರೇಣುಕಮ್ಮನ ಗಂಡ ಹುಲಗಪ್ಪ ಆರೋಪಿಸಿದ್ದಾರೆ. ಡಾ. ಈಶ್ವರ ಸವಡಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳದ ಅಪರ ಜಿಲ್ಲಾಧಿಕಾರಿಗೆ ರೇಣುಕಮ್ಮನ ಗಂಡ ಹುಲಗಪ್ಪ ದೂರು ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆದಿದ್ದು, “ಡಾ. ಈಶ್ವರ ಸವಡಿ ಮೇಲೆ ಕೇಳಿಬಂದಿರುವ ಆರೋಪಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ನಿಯಮಾನುಸಾರ ತುರ್ತಾಗಿ ಸೂಕ್ತ ಕ್ರಮಕೈಗೊಂಡು, ದೂರುದಾರರಿಗೆ ಮಾಹಿತಿ ಒದಗಿಸಬೇಕು” ಎಂದು ಸೂಚಿಸಿದ್ದಾರೆ.

ಗಂಗಾವತಿ ಸರ್ಕಾರಿ ಆಸ್ಪತ್ರೆ

ಆರೋಗ್ಯ ಇಲಾಖೆಗೂ ದೂರು

ಹುಲಗಪ್ಪ ಬೊಮ್ಮನಹಳ್ಳಿ ಅವರು ತಮ್ಮ ಹೆಂಡತಿಯ ಹೆರಿಗೆಯಲ್ಲಾದ ಅನ್ಯಾಯಕ್ಕೆ ನ್ಯಾಯಕೋರಿ ಆರೋಗ್ಯ ಇಲಾಖೆಯ ಕದವನ್ನು ಕೂಡ ತಟ್ಟಿದ್ದಾರೆ. ಮೇ 18ರಂದು ವಿಕಾಸಸೌಧದಲ್ಲಿರುವ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿರುವ ಹುಲಗಪ್ಪ, “ಜಾತಿಯಿಂದ ನಾನು ಹರಿಜನ. ತುಂಬು ಗರ್ಭಿಣಿಯಾದ ನನ್ನ ಹೆಂಡತಿ ರೇಣುಕಮ್ಮಳನ್ನು ಮೇ 9ರಂದು ಹೆರಿಗೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೆ. ಕೂಡಲೇ ವಿವಿಧ ಪರೀಕ್ಷೆಗೆ ನನ್ನ ಹೆಂಡತಿ ಒಳಪಡಿಸಿದ ಡಾ. ಈಶ್ವರ ಸವಡಿ ಅವರು ನನ್ನನ್ನು ವೈಯಕ್ತಿಕವಾಗಿ ಕರೆಯಿಸಿ, ”ನಿನ್ನ ಹೆಂಡತಿಗೆ ಆಪರೇಷನ್‌ ಮೂಲಕ ಹೆರಿಗೆ ಮಾಡಬೇಕು. ಅದಕ್ಕೆ 15 ರಿಂದ 30 ಸಾವಿರ ಖರ್ಚಾಗುತ್ತದೆ ಎಂದರು” ಎಂದು ದೂರಿನ ಪ್ರತಿಯಲ್ಲಿ ಹುಲಗಪ್ಪ ಉಲ್ಲೇಖಿಸಿದ್ದಾರೆ.

ಮುಂದುವರಿದು, “ನಮ್ಮಲ್ಲಿ ಹಣವಿಲ್ಲ, ನಾವು ಬಡವರು” ಎಂದು ಹೇಳಿದಾಗ ಈಶ್ವರ ಸವಡಿ ಅವರು, “ಕನಿಷ್ಠ 10 ಸಾವಿರ ಆದ್ರೂ ಕೊಟ್ಟರೆ ಮಾತ್ರ ಆಪರೇಷನ್‌ ಮಾಡುವೆ” ಎಂದು ಹೇಳಿದರು. ಅಷ್ಟೋತ್ತಿಗಾಗಲೇ ನನ್ನ ಹೆಂಡತಿ ನೋವಿನಿಂದ ಚಿರಾಡುತ್ತಿದ್ದಳು. ಆಗ ಆರೋಗ್ಯ ಸಹಾಯಕಿಯರು ಮುಂದೆ ಬಂದು, “ಬೇರೆ ಆಸ್ಪತ್ರೆಗೆ ಬೇಗ ಕರೆದುಕೊಂಡು ಹೋಗಿ” ಎಂದು ನನ್ನ ಮೇಲೆ ಒತ್ತಡ ಹಾಕಿದರು. ಅನಿವಾರ್ಯವಾಗಿ ನಾನು ಅಂದು ರಾತ್ರಿ 8ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದೆ ಎಂದಿದ್ದಾರೆ.

ಕೊಪ್ಪಳ ಜಿಲ್ಲಾಸ್ಪತ್ರೆಯ ಮಹಿಳಾ ವೈದ್ಯಾಧಿಕಾರಿಗಳು “ಪೆಶೆಂಟ್‌ ಕಂಡಿಷನ್‌ ತುಂಬಾ ಗಂಭೀರವಾಗಿದೆ. ತುಂಬಾ ತಡವಾಗಿ ಬಂದಿದ್ದೀರಿ. ಮಗುವಿನ ಹೊಟ್ಟೆಯಲ್ಲಿ ನೀರು ಹೋಗಿದೆ. ಮಗು ಬದುಕುವ ಸಂಭವ ಇಲ್ಲ” ಎಂದರು. ಆಗಿದ್ದು ಆಗಲಿ ಎಂದು ವೈದ್ಯರಲ್ಲಿ ಹೆರಿಗೆ ಮಾಡಿ ಎಂದು ವಿನಂತಿಸಿಕೊಂಡೆವು. ಆಪರೇಷನ್‌ ಮೂಲಕ ಹೆರಿಗೆ ಮಾಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯ ಈಗ ಚೆನ್ನಾಗಿಲ್ಲ. ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೇಳೆ ನನ್ನ ಹೆಂಡತಿ ಮತ್ತು ಮಗುವಿನ ಆರೋಗ್ಯದಲ್ಲಿ ಏರುಪೇರಾದರೂ ಡಾ. ಈಶ್ವರ ಸವಡಿ ಅವರೇ ಮೂಲ ಕಾರಣರಾಗುತ್ತಾರೆ. ನಮಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿ” ಎಂದು ಹುಲಗಪ್ಪ ಆರೋಗ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಗಂಗಾವತಿ ಸರ್ಕಾರಿ ಆಸ್ಪತ್ರೆ

ಲೋಕಾಯುಕ್ತ, ಸಿದ್ದರಾಮಯ್ಯಗೂ ದೂರು

ಡಾ. ಈಶ್ವರ ಸವಡಿ ಮೇಲೆ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ಕರ್ನಾಟಕ ರೈತ ಸಂಘವು ಲೋಕಾಯುಕ್ತ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೂ ದೂರು ನೀಡಿದೆ.

ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ ಎಚ್‌ ಪೂಜಾರ್‌ ಅವರು ಈ ದಿನ.ಕಾಮ್‌ ಜೊತೆ ಮಾತನಾಡಿ, “ಡಾ. ಈಶ್ವರ ಸವಡಿ ಅವರು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಒಂದು ಹೆರಿಗೆಗೆ 8-10 ಸಾವಿರ ದರ ನಿಗದಿ ಮಾಡಿದ್ದಾರೆ. ನಿತ್ಯ ಲಕ್ಷಾಂತರ ರೂಪಾಯಿಗಳನ್ನು ಹೆರಿಗೆ ಹೆಸರಲ್ಲಿ ಬಡಜನರಿಂದ ವಸೂಲಿ ಮಾಡಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.

ಮುಂದುವರಿದು, ”ಗಂಗಾವತಿ ನಗರದಲ್ಲಿ ಈಶ್ವರ ಸವಡಿ ಅವರು ಖಾಸಗಿ ಆಸ್ಪತ್ರೆಯನ್ನು ಕೂಡ ನಡೆಸುತ್ತಾರೆ. ಅಲ್ಲದೇ ಲಿಂಗಸುಗೂರು ತಾಲ್ಲೂಕಿನ ಮುದಗಲ್‌ ಪಟ್ಟಣದಲ್ಲಿ ಅಕ್ರಮವಾಗಿ ಸ್ಕ್ಯಾನಿಂಗ್‌ ಸೆಂಟರ್‌ ನಡೆಸುತ್ತಾರೆ. ಇದಕ್ಕೆ ನೋಂದಣಿಯೇ ಇಲ್ಲ. ಈ ಸೆಂಟರ್‌ನಲ್ಲಿ ದುಡ್ಡಿನ ಆಸೆಗಾಗಿ ಭ್ರೂಣ ಲಿಂಗ ಪತ್ತೆ ಮಾಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಇಲ್ಲಿ ಸ್ಕ್ಯಾಕ್‌ ಮಾಡಿಸಿಕೊಂಡರೆ ಗಂಗಾವತಿ ಸ್ಪೂರ್ತಿ ಕ್ಲಿನಿಕ್‌ ಹೆಸರಲ್ಲಿ ದಾಖಲಾತಿ ನೀಡುತ್ತಿದ್ದಾರೆ” ಎಂದು ದೂರಿದರು.

ಗಂಗಾವತಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ಈಶ್ವರ ಸವಡಿ ಅವರು ಕೊಪ್ಪಳ ಜಿಲ್ಲಾ ಸರ್ಜನ್‌ ಇನ್‌ಚಾರ್ಜ್‌ ಅಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಹಿಂದಿನಿಂದಲೂ ಕರ್ನಾಟಕ ರೈತ ಸಂಘ ಭ್ರಷ್ಟಾಚಾರದ ಆರೋಪಗಳು ಮಾಡುತ್ತ ಬಂದಿದೆ.  ರೈತ ಸಂಘದ ದೂರು ಆಧರಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಕೆ 2022ರ ನವೆಂಬರ್‌ನಲ್ಲಿ ಕಲಬುರಗಿಯ ವಿಭಾಗಕ್ಕೂ ಪತ್ರ ಬರೆದು, ಸವಡಿ ಮೇಲೆ ಕೇಳಿಬಂದ ಆರೋಪಗಳ ಬಗ್ಗೆ ತನಿಖೆ ನಡೆಸಲು ಸೂಚಿಸಿತ್ತು.

ಗಂಗಾವತಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು 2021ರಲ್ಲಿ ಡಾ. ಈಶ್ವರ ಸವಡಿ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆರೋಗ್ಯ ಇಲಾಖೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದನ್ನು ಇಲ್ಲಿ ನೆನೆಯಬಹುದು.

ಈ ಎಲ್ಲ ಆರೋಪಗಳ ಬಗ್ಗೆ ಡಾ. ಈಶ್ವರ ಸವಡಿ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು. ರೇಣುಕಮ್ಮ, ಹುಲಗಪ್ಪ ಎನ್ನುವವರು ಯಾರು ನಮ್ಮ ಆಸ್ಪತ್ರೆಗೆ ಬಂದಿರುವುದಿಲ್ಲ. ಯಾರೋ ಹಣಕ್ಕಾಗಿ ಈ ರೀತಿ ಮಾಡಿದ್ದಾರೆ ಅನ್ನಿಸುತ್ತದೆ” ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದರು.

ಆರೋಗ್ಯ ಇಲಾಖೆ ಕೂಡಲೇ ಈ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿ, ವಾಸ್ತವವನ್ನು ಜನರ ಮುಂದೆ ಇಡಬೇಕಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಡಾ. ಈಶ್ವರ ಸವಡಿ ಪ್ರಕರಣವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೇಹಾ ಕೊಲೆ ಪ್ರಕರಣ | ಸಿಐಡಿ ತನಿಖೆ ಆರಂಭ; ಆರೋಪಿ ಫಯಾಜ್‌ನನ್ನು ವಶಕ್ಕೆ ಪಡೆದ ಅಧಿಕಾರಿಗಳು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ...

ಧಾರವಾಡ | ಸಚಿವ ಸಂತೋಷ್‌ ಲಾಡ್‌ಗೆ ವಿಜಯೇಂದ್ರ ಅಪಮಾನ; ಕ್ಷಮೆ ಯಾಚಿಸಲು ಆಗ್ರಹ

ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಕೀಳು ಮಟ್ಟದ ಪದ ಬಳಸಿ ಸಚಿವ...

ಲೋಕಸಭಾ ಚುನಾವಣೆ | ಊರಿಗೆ ಹೊರಟ ಮತದಾರರು; ಸುಲಿಗೆಗಿಳಿದ ಖಾಸಗಿ ಬಸ್‌ಗಳು

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26ರಂದು ಮತದಾನ...

ಗದಗ | ಮನರೇಗಾ ಕೆಲಸದ ನಂತರ ಕಾರ್ಮಿಕರಿಗೆ ಕಬಡ್ಡಿ, ಖೋಖೋ ಕ್ರೀಡೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕು ಪಂಚಾಯತಿಯು ವಿಶಿಷ್ಟವಾಗಿ ಮನರೇಗಾ ಯೋಜನೆಗೆ ಸಾಂಸ್ಕೃತಿಕ,...