ಈ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಬಾಗ್ಮನೆ ಕಂಪನಿಯೂ ಸುಮಾರು ₹40 ಕೋಟಿಗಳನ್ನು ನೀಡುತ್ತಿದ್ದು, ಈ ಮೊತ್ತದಲ್ಲಿ ₹20 ಕೋಟಿಗಳನ್ನು ಈಗಾಗಲೇ ನೀಡಿದೆ. ಬಾಗ್ಮನೆ ಡೆವಲಪರ್ಸ್ ಕಂಪನಿಯು ಮೆಟ್ರೋ ನಿಲ್ದಾಣದ ಒಳಾಂಗಣ ಹಾಗೂ ಕಟ್ಟಡದ ಮುನ್ನೋಟದ ವಿನ್ಯಾಸಕ್ಕೂ ಕೊಡುಗೆ ನೀಡಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ನಮ್ಮ ಮೆಟ್ರೋ (ಬಿಎಂಆರ್‌ಸಿಎಲ್) ಮತ್ತು ಬಾಗ್ಮನೆ ಡೆವಲಪರ್ಸ್ ನಡುವೆ ಇದೇ 28 ಮಾರ್ಚ್ 2026 ರಂದು ಸುಮಾರು 40 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮೆಟ್ರೋ ರೈಲು ನಿಗಮವು ಹೊರವರ್ತುಲ ರಸ್ತೆಯ ನೀಲಿ ಮಾರ್ಗದ (2ಎ) ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರನ್ವಯ 20 ವರ್ಷಗಳ ಅವಧಿಗೆ ನಿಲ್ದಾಣದ ಹೆಸರಿನ ಹಕ್ಕನ್ನು ಬಾಗ್ಮನೆ ಕಂಪನಿ ಪಡೆದುಕೊಂಡಿದೆ.
ಈ ಒಪ್ಪಂದದಲ್ಲಿ ಬಾಗ್ಮನೆ ಕಂಪನಿಯು ಕೇವಲ ಹೆಸರಿಡುವ ಹಕ್ಕನ್ನು ಮಾತ್ರ ಪಡೆದುಕೊಂಡಿದೆ. ಜಾಹೀರಾತು ನೀಡುವ ಹಕ್ಕು, ವಾಣಿಜ್ಯ ಸ್ಥಳ ಅಥವಾ ಸಂಪರ್ಕ ಸೌಲಭ್ಯಗಳಂತಹ ಹೆಚ್ಚುವರಿ ಹಕ್ಕುಗಳನ್ನು ಒಳಗೊಂಡಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಈ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಬಾಗ್ಮನೆ ಕಂಪನಿಯೂ ಸುಮಾರು ₹40 ಕೋಟಿಗಳನ್ನು ನೀಡುತ್ತಿದ್ದು, ಈ ಮೊತ್ತದಲ್ಲಿ ₹20 ಕೋಟಿಗಳನ್ನು ಈಗಾಗಲೇ ಕಂಪನಿಯು ನೀಡಿದೆ. ಬಾಗ್ಮನೆ ಡೆವಲಪರ್ಸ್ ಕಂಪನಿಯು ಮೆಟ್ರೋ ನಿಲ್ದಾಣದ ಒಳಾಂಗಣ ಹಾಗೂ ಕಟ್ಟಡದ ಮುನ್ನೋಟದ ವಿನ್ಯಾಸಕ್ಕೂ ಕೊಡುಗೆ ನೀಡಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ನೀಲಿ ಮಾರ್ಗದ ಮೆಟ್ರೋ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ವರೆಗಿನ 19.75 ಕಿಮೀ ಉದ್ದದ ಮಾರ್ಗದಲ್ಲಿ ಸಾಗುತ್ತದೆ. ಈ ಮಾರ್ಗವು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಒಟ್ಟು ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸೇರಿದಂತೆ ಒಟ್ಟು 17 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಕೈಗೊಂಡ 6ನೇ ಒಪ್ಪಂದ ಇದಾಗಿದೆ. ಎರಡು ಒಪ್ಪಂದಗಳ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ. ಈ ಯೋಜನೆಯು ಡಿಸೆಂಬರ್ 2026ರ ವೇಳೆಗೆ ಪೂರ್ಣಗೊಂಡು, ಸಂಚಾರ ಆರಂಭವಾಗುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಒಪ್ಪಂದದ ವೇಳೆ ಬಾಗ್ಮನೆ ಡೆವಲಪರ್ಸ್ ಪ್ರೈವೆಟ್ ಲಿಮಿಟೆಡ್‌ನ ಅಧಿಕೃತ ಪ್ರತಿನಿಧಿ ಆದಿತ್ಯ ಬಾಗ್ಮನೆ ಸೇರಿದಂತೆ ಪ್ರಮುಖರ ಜೊತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ರವಿಶಂಕರ್ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿರುವ ಲಕ್ಷಾಂತರ ಜನರಿಗೆ ಮೆಟ್ರೋ ಸಂಚಾರ ಪ್ರತಿದಿನ ಜೀವನಾಡಿ ಇದ್ದಂಗೆ. ವಿಶೇಷವಾಗಿ ನೀಲಿ ಮಾರ್ಗದಲ್ಲಿ ಒಆರ್‌ಆರ್- ಕೆ.ಆರ್.ಪುರ- ಸಿಲ್ಕ್ ಬೋರ್ಡ್‌ವರೆಗೆ ಸುಮಾರು 500 ಸಾಫ್ಟ್‌ವೇರ್ ಕಂಪನಿಗಳಿದ್ದು, ಬರೋಬ್ಬರಿ 9.5 ಲಕ್ಷದಷ್ಟು ಟೆಕ್ಕಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಟ್ರಾಫಿಕ್ ಸಮಸ್ಯೆ ನಿವಾರಿಸಲು ನೀಲಿ ಮಾರ್ಗದ ಮೆಟ್ರೊ ಟೆಕ್ಕಿಗಳಿಗೆ ಅತಿಮುಖ್ಯವಾಗಿದೆ.
ನೀಲಿ ಮಾರ್ಗ ಉದ್ಘಾಟನೆಗೆ ವಿಳಂಬವಾಗಿದ್ದೇಕೆ?
ಇದೇ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ವೇಳೆ, ಎಚ್‌ಆರ್‌ಬಿ ಲೇಔಟ್‌ನಲ್ಲಿ ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಮೃತಪಟ್ಟಿದ್ದರು. ಈ ದುರ್ಘಟನೆಯ ಪರಿಣಾಮ ಕೆ.ಆರ್.ಪುರ- ಹೆಬ್ಬಾಳದವರೆಗೆ ಸುಮಾರು 11 ತಿಂಗಳು ಮೆಟ್ರೋ ಕೆಲಸ ನಿಂತಿತ್ತು.
ಇದಕ್ಕೂ ಮುನ್ನ ನಿರ್ಮಾಣದ ಕೆಲಸಕ್ಕಾಗಿ ಮರಗಳ ತೆರವು ಹಾಗೂ ಸ್ಥಳಾಂತರ, ರಸ್ತೆಯಲ್ಲಿ ಕಡಿಮೆ ಜಾಗದಲ್ಲಿ ಪಿಲ್ಲರ್ ನಿರ್ಮಿಸಲು ಮರುವಿನ್ಯಾಸ ಹಾಗೂ ಗೇಲ್ ಪೈಪ್‌ಲೈನ್‌ಗಳ ಸ್ಥಳಾಂತರ, ಹೊರಮಾವು ಮತ್ತು ಎಚ್‌ಬಿಆರ್ ಲೇಔಟ್ ನಡುವಿನ ವಿದ್ಯುತ್ ಓವರ್‌ಹೆಡ್ ಹೈಟೆನ್ಷನ್ ಲೇನನ್ನು ಭೂಗತವಾಗಿ ತೆಗೆದುಕೊಂಡು ಹೋಗಲು, ಯಲಹಂಕದಲ್ಲಿ ವಾಯುಸೇನೆಗೆ ಸೇರಿದ ಜಾಗದ ಸ್ವಾಧೀನ ಮತ್ತಿತರ ಅಡ್ಡಿಗಳು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದ್ದವು.
ಈ ನಡುವೆ, ಮೂರು ಹಂತದಲ್ಲಿ ಗಡುವನ್ನು ಪರಿಷ್ಕರಿಸಲಾಯಿತು. ಕಳೆದ ಡಿಸೆಂಬರ್‌ನಲ್ಲಿ ಮಾರ್ಗದ ಪರಿಶೀಲನೆ ನಡೆಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, 5-6 ನಿಲ್ದಾಣಗಳಷ್ಟು ಅಂತರದ ಮಾರ್ಗದ ಕೆಲಸ ಮುಗಿದರೂ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಹೇಳಿದ್ದರು.
ಈ ಮಾರ್ಗದ ವಿಶೇಷತೆಗಳೇನು?
ಮೆಟ್ರೋ ರೈಲು ನಿಗಮವು ಹೊರವರ್ತುಲ ರಸ್ತೆಯ (ಒಆರ್‌ಆರ್) ನೀಲಿ ಮಾರ್ಗದ ಮೆಟ್ರೋ ಕೆ.ಆರ್.ಪುರದಿಂದ – ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆ ಕ್ರಮಿಸುತ್ತದೆ. ಇದು ಒಟ್ಟು 19.75 ಕಿ.ಮೀ. ಮಾರ್ಗವಾಗಿದ್ದು, ಇದೇ ವರ್ಷದ ಡಿಸೆಂಬರ್ ಅಂತ್ಯದಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.
ಒಟ್ಟಾರೆ 58 ಕಿ.ಮೀ. ಉದ್ದದ ನೀಲಿ ಮಾರ್ಗದಲ್ಲಿ ಒಆರ್‌ಆರ್ ಹಾಗೂ ವಿಮಾನ ನಿಲ್ದಾಣ ಮಾರ್ಗದ ಸಂಚಾರ ದಟ್ಟಣೆ ನಿವಾರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದೇ ವರ್ಷದ ಮೇ ತಿಂಗಳಲ್ಲಿ ಗುಲಾಬಿ ಮಾರ್ಗದ ಎಲಿವೇಟೆಡ್ ಕಾರಿಡಾರ್ ಉದ್ಘಾಟನೆ ಬಳಿಕ, ನೀಲಿ ಮಾರ್ಗದ ಮೊದಲ ಹಂತವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಇದು ರಾಜ್ಯ ಸರ್ಕಾರದ ಗುರಿಯೂ ಆಗಿದೆ.
ನೀಲಿ ಮಾರ್ಗದ ಎರಡನೇ ಹಂತದಲ್ಲಿ ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗೆ (27.44 ಕಿ.ಮೀ.) 2027ರ ಜೂನ್‌ಗೆ ಹಾಗೂ ಕೆ.ಆರ್.ಪುರದಿಂದ ಹೆಬ್ಬಾಳದವರೆಗೆ (11 ಕಿ.ಮೀ.) 2027ರ ಡಿಸೆಂಬರ್‌ಗೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಸರ್ಕಾರ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀಲಿ ಮಾರ್ಗದ ಮೆಟ್ರೋ ಕಾಮಗಾರಿ ಕೆಲಸವನ್ನು ಐದು ವಿಶೇಷ ಪ್ಯಾಕೇಜ್‌ಗಳಲ್ಲಿ ನಡೆಸಲಾಗುತ್ತಿದೆ. ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕಾಡುಬೀಸನಹಳ್ಳಿವರೆಗೆ, ಅಲ್ಲಿಂದ ಎಸ್‌ಎನ್‌ಸಿ ಕನ್‌ಸ್ಟ್ರಕ್ಷನ್ಸ್ ಕಂಪನಿ ಬೈಯಪ್ಪನಹಳ್ಳಿವರೆಗೆ ಹಾಗೂ ಎನ್‌ಸಿಸಿ ಕಂಪನಿ ಬೆನ್ನಿಗಾನಹಳ್ಳಿಯಿಂದ ವಿಮಾನ ನಿಲ್ದಾಣದವರೆಗೆ ಮೂರು ಪ್ಯಾಕೇಜ್‌ನಲ್ಲಿ ಕೆಲಸ ಮಾಡುತ್ತವೆ. ಇನ್ನು ಎರಡು ಹಂತದ ಬಗ್ಗೆ ಬಿಎಂಆರ್‌ಸಿಎಲ್ ತಿಳಿಸಿಲ್ಲ.




