ಕಳೆದ ಎರಡು ಮೂರು ದಿನಗಳಿಂದ ರಾಜ್ಯದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಕರಾವಳಿ, ಮಲೆನಾಡು ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜೂನ್ ಅಂತ್ಯದಲ್ಲಿದ್ದ ಶೇ.42ರಷ್ಟಿದ್ದ ಮಳೆ ಕೊರತೆ, ಶೇ.35ಕ್ಕೆ ಇಳಿದಿದೆ. ರಾಜ್ಯದಲ್ಲಿ ಸುಮಾರು ಶೇ.42ರಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಸೋಮವಾರ ಅತಿ ಹೆಚ್ಚು 10 ಸೆಂ.ಮೀ ಮಳೆಯಾಗಿದ್ದರೆ, ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 8 ಸೆಂ.ಮೀ ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಶಿವಮೊಗ್ಗದ ಆಗುಂಬೆ, ಹುಂಚದಕಟ್ಟೆ ಮತ್ತು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ತಲಾ 7 ಸೆಂ.ಮೀ ಮಳೆಯಾಗಿದೆ.
ಕೊಡಗು, ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಿಗೆ ಬರುತ್ತಿರುವ ಒಳಹರಿವು ಸುಧಾರಿಸಿದೆ.
ಶಿವಮೊಗ್ಗ ಜಿಲ್ಲೆಯ ಆಗುಂಬೆ ಬಳಿಯ ಮಾಲತಿ ಹೊಳೆಗೆ ಅಳವಡಿಸಿದ್ದ ತಮ್ಮ ಪಂಪ್‌ಸೆಟ್ ಪರಿಶೀಲಿಸಲು ಇಳಿದಿದ್ದ ರೈತ ರಾಮಪ್ಪ(65) ನೀರಿನ ಅಲೆಗೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಇದರ ಹೊರತಾಗಿ, ಮಲೆನಾಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಪಶ್ಚಿಮ ಘಟ್ಟದ ಕೆಲವು ಭಾಗಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದ ಪರಿಣಾಮ ಕಳೆದ ಎರಡು ದಿನಗಳಿಂದ ಹಲವಾರು ಒಳನಾಡಿನ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಹಾರಾಷ್ಟ್ರದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಂದ ಅತಿಯಾದ ನೀರು ಬಿಡುಗಡೆಯಿಂದಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ, ಗೋಕಾಕ್ ಮತ್ತು ಬೈಲಹೊಂಗಲ ತಾಲೂಕುಗಳಲ್ಲಿನ ಒಂಬತ್ತು ತಗ್ಗು ಪ್ರದೇಶದ ಸೇತುವೆಗಳು ಮುಳುಗಿವೆ.
ಉತ್ತರ ಒಳನಾಡಿನಲ್ಲಿ ಭಾನುವಾರ ಸಂಜೆಯಿಂದ ಸೇತುವೆಗಳು ನೀರಿನಿಂದ ಆವೃತವಾಗಿದ್ದವು. ಪೊಲೀಸ್ ಅಧಿಕಾರಿಗಳು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದರಿಂದ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗಿಲ್ಲ.
ಉತ್ತರ ಒಳನಾಡಿನಲ್ಲಿ ಸೋಮವಾರ ಹಗುರದಿಂದ ಮಧ್ಯಮ ಮಳೆಯಾಗಿದ್ದರೆ, ಮಹಾರಾಷ್ಟ್ರದ ಕೃಷ್ಣಾ ಮತ್ತು ಅದರ ಉಪನದಿಗಳ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿ ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಿಗೆ ಬರುತ್ತಿರುವ ಒಳಹರಿವು ಸುಧಾರಿಸಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯ ಮತ್ತು ರಾಜಾಪುರ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ ಇರುವ ಕಲ್ಲೋಲ್ ಬ್ಯಾರೇಜ್‌ಗೆ 77,123 ಕ್ಯೂಸೆಕ್ ನೀರು ಹರಿದು ಬಂದಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಿಪ್ಪರಗಿ ಬ್ಯಾರೇಜ್‌ಗೆ ಸುಮಾರು 53,200 ಕ್ಯೂಸೆಕ್ ಒಳಹರಿವು ಬಂದಿದೆ.
ಈ ಸುದ್ದಿ ಓದಿದ್ದೀರಾ? ಮಳೆ ಅಬ್ಬರ: ಬೆಳಗಾವಿ ಖಾನಾಪುರ ಶಾಲೆಗಳಿಗೆ ರಜೆ, ಎಂಟು ಸೇತುವೆಗಳು ಜಲಾವೃತ
ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮತ್ತೊಂದು ಬಹುಪಯೋಗಿ ಜಲಾಶಯವಾದ ಹಿಡ್ಕಲ್‌ನ ನೀರಿನ ಸಂಗ್ರಹ ಮಟ್ಟವು ಒಂದೇ ದಿನದಲ್ಲಿ ಸುಮಾರು 4 ಟಿಎಂಸಿ ಅಡಿಗಳಷ್ಟು ಸುಧಾರಿಸಿದೆ. ಪ್ರಸ್ತುತ, ಇದು 9 ಟಿಎಂಸಿ ಅಡಿ ನೀರನ್ನು ಸಂಗ್ರಹಿಸುತ್ತಿದ್ದು, 14,143 ಕ್ಯುಸೆಕ್‌ಗಳ ಸ್ಥಿರ ಒಳಹರಿವು ಇದೆ. ಖಾನಾಪುರದ ಮಲಪ್ರಭಾ ನದಿಯ ಜಲಾನಯನ ಪ್ರದೇಶದಲ್ಲೂ ಕೂಡ ಹೇರಳವಾದ ಮಳೆಯಾಗಿದ್ದು, ಸವದತ್ತಿ ಬಳಿಯ ನೀರಸಾಗರ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಸಾಮರ್ಥ್ಯವು 8.8 ಟಿಎಂಸಿ ಅಡಿಗಳಿಗೆ ಸುಧಾರಿಸಿದೆ. ನಾರಾಯಣಪುರ ಜಲಾಶಯವನ್ನು ಹೊರತುಪಡಿಸಿ, ರಾಜ್ಯದ ಎಲ್ಲ ಪ್ರಮುಖ ಜಲಾಶಯಗಳು ಒಳಹರಿವನ್ನು ಕಾಣುತ್ತಿವೆ.




