ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಕ್ರಿಯೆಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಕಾಲೇಜು ಆರಂಭಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತಿರಸ್ಕರಿಸಿದ್ದು, ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ ಅಕ್ಟೋಬರ್‌ನಲ್ಲಿ ಮರು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
2026-27ನೇ ಶೈಕ್ಷಣಿಕ ವರ್ಷದಿಂದ ಕಾಲೇಜು ಆರಂಭಿಸುವ ನಿರೀಕ್ಷೆಗೆ ತಾತ್ಕಾಲಿಕ ಅಡ್ಡಿಯಾಗಿದೆ. ಪ್ರಸ್ತುತ ವೈದ್ಯಕೀಯ ಕಾಲೇಜಿನ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಕ ಹಂತದಲ್ಲಿದ್ದು, ಮೂಲಸೌಕರ್ಯ ಅಭಿವೃದ್ಧಿ ನಡೆಯುತ್ತಿದೆ. ಇದೇ ವೇಳೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುಮತಿ ದೊರೆತ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಕೂಲವಾಗುವಂತೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯನ್ನು ಕಾಲೇಜಿಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಸಿಬ್ಬಂದಿ ಲಭ್ಯತೆಯನ್ನು ಆಧಾರವಾಗಿಟ್ಟುಕೊಂಡು ಎನ್‌ಎಂಸಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅಗತ್ಯ ಮಾನದಂಡಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬ ಕಾರಣದಿಂದ ಅರ್ಜಿ ಅಂಗೀಕಾರವಾಗಿಲ್ಲ ಎಂದು ತಿಳಿದುಬಂದಿದೆ.
ಸುಮಾರು ₹450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಈ ವರ್ಷದ ಮಾರ್ಚ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಕಾಲೇಜು ಆರಂಭಿಸಲು ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ವೈದ್ಯಕೀಯ ಕಾಲೇಜಿನ ವಿಶೇಷಾಧಿಕಾರಿ ಡಾ. ಬಿ.ಎಚ್. ನಾರಾಯಣಿ, “ಪ್ರಾಥಮಿಕ ಹಂತದಲ್ಲಿ ಟ್ರಯಲ್ ಆಧಾರದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಎನ್‌ಎಂಸಿ ಸೂಚಿಸಿರುವ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ ನಂತರ ಅಕ್ಟೋಬರ್‌ನಲ್ಲಿ ಮರು ಅರ್ಜಿ ಸಲ್ಲಿಸಲಾಗುವುದು” ಎಂದು ತಿಳಿಸಿದ್ದಾರೆ.




