ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜುಲೈ 7ರಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿಯೂ ವರುಣನ ಆರ್ಭಟ ಮುಂದುವರಿದಿದೆ. ಜಿಲ್ಲೆಯ ಸಪ್ತ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಭಾನುವಾರ ಮುಳುಗಡೆಯಾಗಿದ್ದ ಏಳು ಸೇತುವೆಗಳು ಸೋಮವಾರವೂ ಜಲಾವೃತವಾಗಿಯೇ ಉಳಿದಿವೆ. ಇದರೊಂದಿಗೆ ಗೋಕಾಕ-ಶಿಂಗಾಳಾಪುರ ಸೇತುವೆಯೂ ನೀರಿನಲ್ಲಿ ಮುಳುಗಿದ್ದು, ಮುಳುಗಡೆಯಾದ ಸೇತುವೆಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಇದರಿಂದ ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತಾಗಿದೆ.
ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಹಿಡಕಲ್ ಹಾಗೂ ನವಿಲುತೀರ್ಥ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಜಲಾಶಯಗಳ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದ್ದು, ಸಂಬಂಧಿತ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.
ಇದೇ ವೇಳೆ ಬೆಳಗಾವಿ ನಗರದಲ್ಲೂ ಮಳೆ ಮುಂದುವರಿದಿದ್ದು, ಭಾನುವಾರ ರಾತ್ರಿ ಬೃಕ ಸೋಮವಾರ ಸಂಜೆವರೆಗೆ ನಗರದ ವಿವಿಧೆಡೆ ಏಳು ಮರಗಳು ಧರೆಗುರುಳಿವೆ. ಕುವೆಂಪು ನಗರದ ಪ್ರೆಸ್ ಕಾಲೊನಿ ಹಾಗೂ ಭಾಗ್ಯನಗರದಲ್ಲಿ ಮರಗಳು ಕಾರುಗಳ ಮೇಲೆ ಬಿದ್ದು ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಸುದ್ದಿ ಓದಿದ್ದಿರಾ ? ಬಿಡದಿ ಟೌನ್‌ಶಿಪ್ ವಿವಾದ: ಬೆಂಗಳೂರು ಮಾತ್ರವೇ ಕರ್ನಾಟದ ಅಭಿವೃದ್ಧಿಯೇ?
ಇನ್ನೊಂದೆಡೆ, ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡಿನ ಶಿವಮೊಗ್ಗ ಹಾಗೂ ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಅನಗತ್ಯ ಸಂಚಾರ ತಪ್ಪಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.



