‘ಕರ್ನಾಟಕ ಹೆಚ್ಚು ತೆರಿಗೆ ಪಾವತಿಸುತ್ತಿದ್ದು, ಅದಕ್ಕೆ ತಕ್ಕಂತೆ ಹೆಚ್ಚು ಅನುದಾನ ನೀಡಬೇಕು’ ಎಂಬ ವಾದವನ್ನು ತಳ್ಳಿಹಾಕಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರವೇ ಕಾಳಜಿ ವಹಿಸಲಿದ್ದು, ಕೇಂದ್ರ ಸರ್ಕಾರವು ಮೊದಲು ಕರ್ನಾಟಕದಿಂದ ಸಂಗ್ರಹಿಸುವ ತೆರಿಗೆಯಲ್ಲಿ ಶೇ.50ರಷ್ಟನ್ನಾದರೂ ರಾಜ್ಯಕ್ಕೆ ಹಿಂದಿರುಗಿಸಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದ ನಿರ್ಮಲಾ ಸೀತಾರಾಮನ್, ‘ಬೆಂಗಳೂರಿನಲ್ಲಿ ಸಂಗ್ರಹವಾದ ತೆರಿಗೆಯನ್ನು ಬೆಂಗಳೂರಿಗೇ ಬಳಸಬೇಕು ಎನ್ನುವುದು ಎಷ್ಟು ಸರಿಯಲ್ಲವೋ, ರಾಜ್ಯದಿಂದ ಸಂಗ್ರಹಿಸಿದ ತೆರಿಗೆಯನ್ನು ಅದೇ ರಾಜ್ಯಕ್ಕೆ ನೀಡಬೇಕು ಎನ್ನುವುದೂ ಸರಿಯಲ್ಲ. ಹಾಗೆ ಮಾಡಿದರೆ ಯಾದಗಿರಿ, ಕಲಬುರಗಿಯಂತಹ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಎಲ್ಲಿಂದ ಅನುದಾನ ತರುತ್ತದೆ?’ ಎಂದು ಪ್ರಶ್ನಿಸಿದ್ದರು. ಕೇಂದ್ರ ಸಚಿವೆಯ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ನಾರಾಯಣಗೌಡರು, ರಾಜ್ಯದ ಜಿಲ್ಲೆಗಳ ನಡುವೆ ತಾರತಮ್ಯ ಬಿತ್ತುವ ಮೂಲಕ ಕನ್ನಡಿಗರನ್ನು ಒಡೆಯುವ ಯತ್ನ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯದ ಬಗ್ಗೆ ಅಂಕಿ-ಅಂಶಗಳ ಸಮೇತ ಪ್ರಶ್ನಿಸಿರುವ ಅವರು, “ಕಳೆದ 12 ವರ್ಷಗಳ (2014-2026) ಎನ್‌ಡಿಎ ಅವಧಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ₹4 ಲಕ್ಷ ಕೋಟಿ ನೀಡಿದೆ ಎಂದು ನೀವು ಹೇಳಿಕೊಳ್ಳುತ್ತಿದ್ದೀರಿ. ಆದರೆ, ರಾಜ್ಯವು ಕೇವಲ ಜಿಎಸ್‌ಟಿ ಮೂಲಕವೇ ವರ್ಷಕ್ಕೆ ₹4.3 ಲಕ್ಷ ಕೋಟಿಯಿಂದ ₹4.5 ಲಕ್ಷ ಕೋಟಿ ತೆರಿಗೆಯನ್ನು ನೀಡುತ್ತಿದೆ. ಜಿಎಸ್‌ಟಿ ಪೂರ್ವದ ವರ್ಷಗಳನ್ನೂ ಸೇರಿಸಿ ಲೆಕ್ಕಹಾಕಿದರೆ, ಕರ್ನಾಟಕವು ಈವರೆಗೆ ಅಂದಾಜು ₹45 ಲಕ್ಷ ಕೋಟಿಯಿಂದ ₹55 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ನೀಡಿದೆ. ಹೀಗಿರುವಾಗ ನೀವು ವಾಪಸ್ ನೀಡಿರುವ ₹4 ಲಕ್ಷ ಕೋಟಿಯು ರಾಜ್ಯದ ಒಟ್ಟು ಕೊಡುಗೆಯ ಶೇ.10ರಷ್ಟೂ ಆಗುವುದಿಲ್ಲ. ಇದು ಯಾವ ಸೀಮೆಯ ನ್ಯಾಯ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ಜಗತ್ತಿನಲ್ಲಿ ಭಾರತದ ಹೆಜ್ಜೆಗುರುತು – ಕನ್ನಡಿಗ ಕೆಂಪಯ್ಯನವರ ಮರೆಯಲಾಗದ ಸಾಧನೆ
“ನಾವು ಕೇಂದ್ರದ ಬಳಿ ಭಿಕ್ಷೆ ಬೇಡುತ್ತಿಲ್ಲ. ಬದಲಾಗಿ, ನಾವು ಪಾವತಿಸುವ ತೆರಿಗೆ ಹಣದಲ್ಲಿ ಶೇ.50ರಷ್ಟನ್ನಾದರೂ ನಮಗೆ ವಾಪಸ್ ನೀಡದಿದ್ದರೆ ದೇಶದ ಒಕ್ಕೂಟ ವ್ಯವಸ್ಥೆಗೆ ಅರ್ಥವಿರುವುದಿಲ್ಲ. ಕರ್ನಾಟಕದ ತೆರಿಗೆ ಹಣವನ್ನು ಯಾವುದೇ ಮುಲಾಜಿಲ್ಲದೆ ಬೇರೆ ರಾಜ್ಯಗಳಿಗೆ ಹಂಚಲಾಗುತ್ತಿದೆ. ದೇಶದ ಅತ್ಯುತ್ತಮ ಆರ್ಥಿಕತೆಯನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕದ ಋಣ ಕೇಂದ್ರದ ಮೇಲಿದೆ. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿಮಗೆ ಆ ಋಣಪ್ರಜ್ಞೆ ಇದ್ದಂತಿಲ್ಲ” ಎಂದು ನಾರಾಯಣಗೌಡರು ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಅಭಿವೃದ್ಧಿಯ ಕುರಿತು ಕರ್ನಾಟಕ ಸರ್ಕಾರವೇ ಗಮನಹರಿಸಲಿದ್ದು, ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಬೇಕು ಎಂಬುದು ರಾಜ್ಯಕ್ಕೆ ತಿಳಿದಿದೆ. ಕೇಂದ್ರ ಸರ್ಕಾರವು ಜಿಲ್ಲೆಗಳ ನಡುವೆ ಎತ್ತಿಕಟ್ಟಿ ತಮಾಷೆ ನೋಡುವುದನ್ನು ಬಿಡಬೇಕು. ನಿಮಗೆ ನಿಜಕ್ಕೂ ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ, ಅಧಿಕಾರ ನಿಮ್ಮ ಕೈಯಲ್ಲೇ ಇದ್ದು, ಕೂಡಲೇ ಆ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ನೋಡೋಣ ಎಂದು ನಾರಾಯಣಗೌಡರು ಕೇಂದ್ರ ಹಣಕಾಸು ಸಚಿವೆಯವರಿಗೆ ಸವಾಲು ಹಾಕಿದ್ದಾರೆ.




