ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೇ.64ರಷ್ಟು ಬೋಧಕ ಹುದ್ದೆ ಖಾಲಿ: ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಗಂಭೀರ ಸವಾಲು

Date:

ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿರುವ 32 ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳ ಭಾರೀ ಕೊರತೆಯಾಗಿರುವುದು ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಇದು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ವಿಶ್ವವಿದ್ಯಾಲಯಗಳಲ್ಲಿ ಒಟ್ಟು 4,730 ಮಂಜೂರಾದ ಬೋಧಕ ಹುದ್ದೆಗಳಿದ್ದು, 2025ರ ಡಿಸೆಂಬರ್ ಅಂತ್ಯದ ವೇಳೆಗೆ ಕೇವಲ 1,709 ಬೋಧಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 3,008 ಹುದ್ದೆಗಳು ಖಾಲಿ ಉಳಿದಿದ್ದು, ಇದು ಒಟ್ಟು ಮಂಜೂರಾದ ಹುದ್ದೆಗಳ ಶೇ.64ರಷ್ಟಾಗಿದೆ. ಅಂದರೆ ಪ್ರತಿ ಮೂರು ಹುದ್ದೆಗಳಲ್ಲಿ ಎರಡು ಹುದ್ದೆಗಳು ಖಾಲಿ ಇರುವ ಸ್ಥಿತಿ ನಿರ್ಮಾಣವಾಗಿದ್ದು, ಬೋಧನೆ, ಸಂಶೋಧನೆ, ಆಡಳಿತ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಮೇಲೆ ನೇರ ಪರಿಣಾಮ ಉಂಟುಮಾಡುತ್ತಿದೆ. ಈ ಪ್ರಮಾಣದ ಕೊರತೆ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಪರೂಪದ ಬೆಳವಣಿಗೆಯಾಗಿದ್ದು, ಸರ್ಕಾರ ತಕ್ಷಣದ ಗಮನ ಹರಿಸಬೇಕಾದ ವಿಷಯವಾಗಿದೆ.

- Advertisement -

ರಾಜ್ಯದ ಪ್ರಮುಖ ಹಾಗೂ ಐತಿಹಾಸಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯದಲ್ಲಿಯೇ ಅತಿಹೆಚ್ಚು ಬೋಧಕ ಹುದ್ದೆಗಳು ಖಾಲಿ ಇರುವುದಾಗಿ ತಿಳಿದುಬಂದಿದೆ. ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಈ ವಿಶ್ವವಿದ್ಯಾಲಯದಲ್ಲಿ ಬೋಧಕರ ಕೊರತೆ ಉಂಟಾಗಿರುವುದು ಶಿಕ್ಷಣ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಉನ್ನತ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವುದು, ವಿದ್ಯಾರ್ಥಿಗಳಿಗೆ ಸಮರ್ಪಕ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಸಮರ್ಪಕ ಸಂಖ್ಯೆಯ ಖಾಯಂ ಬೋಧಕರು ಅತ್ಯಗತ್ಯ. ಆದ್ದರಿಂದ ಸರ್ಕಾರವು ಯಾವುದೇ ವಿಳಂಬ ಮಾಡದೆ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಬೇಕು ಎಂಬ ಒತ್ತಾಯವನ್ನು ಶಿಕ್ಷಣ ತಜ್ಞರು, ಮಾಜಿ ಕುಲಪತಿಗಳು, ಪ್ರಾಧ್ಯಾಪಕರು ಹಾಗೂ ವಿವಿಧ ಶೈಕ್ಷಣಿಕ ಸಂಘಟನೆಗಳು ನಿರಂತರವಾಗಿ ಮುಂದಿರಿಸುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಇಷ್ಟು ದೊಡ್ಡ ಪ್ರಮಾಣದ ಬೋಧಕ ಹುದ್ದೆಗಳು ಖಾಲಿ ಉಳಿದಿರುವುದು ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನೇರ ಹಾಗೂ ವ್ಯಾಪಕ ಪರಿಣಾಮ ಬೀರುತ್ತಿದೆ. ಅನೇಕ ವಿಭಾಗಗಳಲ್ಲಿ ಖಾಯಂ ಪ್ರಾಧ್ಯಾಪಕರ ಕೊರತೆಯಿಂದ ನಿಯಮಿತ ಬೋಧನೆ ನಡೆಸಲು ತೊಂದರೆಯಾಗುತ್ತಿದ್ದು, ವಿದ್ಯಾರ್ಥಿಗಳ ಸಂಶೋಧನಾ ಮಾರ್ಗದರ್ಶನ, ಪಿಎಚ್‌ಡಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಶೈಕ್ಷಣಿಕ ಮೇಲ್ವಿಚಾರಣೆ, ಪಠ್ಯಕ್ರಮ ಅಭಿವೃದ್ಧಿ, ಹೊಸ ಕೋರ್ಸ್‌ಗಳ ರೂಪಣೆ ಹಾಗೂ ಶೈಕ್ಷಣಿಕ ಯೋಜನೆಗಳ ಅನುಷ್ಠಾನ ಕುಂಠಿತಗೊಳ್ಳುತ್ತಿದೆ. ಹಲವು ವಿಭಾಗಗಳಲ್ಲಿ ಅನುಭವಿ ಪ್ರಾಧ್ಯಾಪಕರ ಕೊರತೆಯಿಂದ ಶೈಕ್ಷಣಿಕ ನಾಯಕತ್ವವೂ ದುರ್ಬಲವಾಗುತ್ತಿದೆ. ಕೆಲ ವಿಶ್ವವಿದ್ಯಾನಿಲಯಗಳಲ್ಲಿ ಕೆಲವು ವಿಭಾಗಗಳಿಗೆ ಖಾಯಂ ಪ್ರಾಧ್ಯಾಪಕರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಭಾಗಗಳ ನಿರ್ವಹಣೆ ಸಂಪೂರ್ಣವಾಗಿ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಬೋಧಕರ ಮೇಲೆ ಅವಲಂಬಿತವಾಗಿದೆ.

ಅತಿಥಿ ಉಪನ್ಯಾಸಕರು ತಮ್ಮ ಸಾಮರ್ಥ್ಯದ ಮಟ್ಟಿಗೆ ಬೋಧನಾ ಸೇವೆ ಸಲ್ಲಿಸುತ್ತಿದ್ದರೂ, ಖಾಯಂ ಬೋಧಕರಿಗೆ ಇರುವ ಜವಾಬ್ದಾರಿ, ಅಧಿಕಾರ ಹಾಗೂ ದೀರ್ಘಕಾಲಿಕ ಶೈಕ್ಷಣಿಕ ಬದ್ಧತೆಯನ್ನು ಅವರು ಸಂಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸಂಶೋಧನಾ ಯೋಜನೆಗಳನ್ನು ರೂಪಿಸುವುದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಶೋಧನಾ ಅನುದಾನಗಳನ್ನು ಪಡೆಯುವುದು, ವಿದ್ಯಾರ್ಥಿಗಳಿಗೆ ನಿರಂತರ ಶೈಕ್ಷಣಿಕ ಮಾರ್ಗದರ್ಶನ ನೀಡುವುದು, ಹೊಸ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿಭಾಗಗಳ ದೀರ್ಘಾವಧಿಯ ಶೈಕ್ಷಣಿಕ ಯೋಜನೆಗಳನ್ನು ಜಾರಿಗೊಳಿಸುವುದು ಖಾಯಂ ಬೋಧಕರಿಂದ ಮಾತ್ರ ಪರಿಣಾಮಕಾರಿಯಾಗಿ ಸಾಧ್ಯ. ಹೀಗಾಗಿ ಅತಿಥಿ ಉಪನ್ಯಾಸಕರ ಮೇಲಿನ ಅತಿಯಾದ ಅವಲಂಬನೆಯಿಂದ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಗುಣಮಟ್ಟ, ಸಂಶೋಧನಾ ಸಾಮರ್ಥ್ಯ ಹಾಗೂ ರಾಷ್ಟ್ರೀಯ ಮತ್ತು ಜಾಗತಿಕ ಶೈಕ್ಷಣಿಕ ಸ್ಪರ್ಧಾತ್ಮಕತೆ ಕುಸಿಯುವ ಆತಂಕವನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಇದರ ಜತೆಗೆ ಪ್ರಸಕ್ತ ವರ್ಷಾಂತ್ಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಬೋಧಕರು ವಯೋಮಿತಿಯ ಆಧಾರದ ಮೇಲೆ ನಿವೃತ್ತಿಯಾಗಲಿದ್ದು, ಈಗಿರುವ ಹುದ್ದೆಗಳ ಕೊರತೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಸಿಬ್ಬಂದಿ ಕೊರತೆಯಿಂದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು ಪರದಾಡುತ್ತಿರುವ ವಿಶ್ವವಿದ್ಯಾನಿಲಯಗಳಿಗೆ ಇದು ಮತ್ತಷ್ಟು ಸಂಕಷ್ಟವನ್ನು ಉಂಟುಮಾಡಲಿದೆ. ಹೊಸ ನೇಮಕಾತಿ ಪ್ರಕ್ರಿಯೆ ಆರಂಭವಾಗದಿದ್ದರೆ ಹಲವು ವಿಭಾಗಗಳಲ್ಲಿ ಬೋಧನಾ ಚಟುವಟಿಕೆಗಳನ್ನು ಸುಗಮವಾಗಿ ನಡೆಸುವುದು ಕಷ್ಟವಾಗುವ ಸಾಧ್ಯತೆಯಿದ್ದು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಮೇಲೆಯೂ ದುಷ್ಪರಿಣಾಮ ಉಂಟಾಗಲಿದೆ.

ಉನ್ನತ ಶಿಕ್ಷಣವನ್ನು ಬಲಪಡಿಸುವುದು, ಸಂಶೋಧನೆಗೆ ಹೆಚ್ಚಿನ ಉತ್ತೇಜನ ನೀಡುವುದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಹಾಗೂ ವಿಶ್ವವಿದ್ಯಾನಿಲಯಗಳನ್ನು ಜಾಗತಿಕ ಮಟ್ಟದ ಶಿಕ್ಷಣ ಕೇಂದ್ರಗಳಾಗಿ ರೂಪಿಸುವುದಾಗಿ ಸರ್ಕಾರ ಹಲವು ಬಾರಿ ಘೋಷಣೆಗಳನ್ನು ಮಾಡಿದೆ. ಆದರೆ ಖಾಲಿ ಬೋಧಕ ಹುದ್ದೆಗಳ ಭರ್ತಿಯಲ್ಲಿ ನಿರೀಕ್ಷಿತ ವೇಗ ಕಂಡುಬಂದಿಲ್ಲ. ಸಮರ್ಪಕ ಸಂಖ್ಯೆಯ ಖಾಯಂ ಬೋಧಕರು ಇಲ್ಲದೆ ಗುಣಮಟ್ಟದ ಬೋಧನೆ, ಸಂಶೋಧನೆ, ನವೋದ್ಯಮ, ಉದ್ಯಮ-ಶಿಕ್ಷಣ ಸಹಭಾಗಿತ್ವ, ಅಂತಾರಾಷ್ಟ್ರೀಯ ಸಹಯೋಗ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಹಾಗೂ ರಾಷ್ಟ್ರೀಯ ಮೌಲ್ಯಮಾಪನ ಸಂಸ್ಥೆಗಳ ಮಾನದಂಡಗಳನ್ನು ಸಾಧಿಸುವುದು ಕಷ್ಟಕರವಾಗಿದೆ. ಹೀಗಾಗಿ ಬೋಧಕ ಹುದ್ದೆಗಳ ಭರ್ತಿ ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ರಾಜ್ಯದ ಉನ್ನತ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುವ ಅತ್ಯಂತ ಮಹತ್ವದ ಕ್ರಮವಾಗಿದೆ.

ಹೀಗಾಗಿ ಸರ್ಕಾರವು ಯಾವುದೇ ವಿಳಂಬ ಮಾಡದೆ ರಾಜ್ಯದ ಎಲ್ಲ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ತುರ್ತಾಗಿ ಆರಂಭಿಸಬೇಕಾಗಿದೆ. ಪಾರದರ್ಶಕ ಹಾಗೂ ವೇಗದ ನೇಮಕಾತಿ ಪ್ರಕ್ರಿಯೆ ಮೂಲಕ ಅರ್ಹ ಮತ್ತು ಸಮರ್ಥ ಬೋಧಕರನ್ನು ಶಾಶ್ವತವಾಗಿ ನೇಮಕ ಮಾಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತದೆ. ಜತೆಗೆ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಾಮರ್ಥ್ಯ, ಸಂಶೋಧನಾ ಸಾಧನೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಸಾಧನೆ, ಹೊಸ ಅಧ್ಯಯನ ಕೇಂದ್ರಗಳ ಅಭಿವೃದ್ಧಿ ಹಾಗೂ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸಲು ಕೂಡ ನೆರವಾಗಲಿದೆ.

ಕೋವಿಡ್-19 ಅವಧಿಯಲ್ಲಿ ಉಂಟಾದ ಆಡಳಿತಾತ್ಮಕ ಸಮಸ್ಯೆಗಳು, ಹಣಕಾಸಿನ ಮಿತಿಗಳು ಹಾಗೂ ಒಳಮೀಸಲು ಸಂಬಂಧಿತ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ಹಲವು ವರ್ಷಗಳ ಕಾಲ ಬೋಧಕ ಹುದ್ದೆಗಳ ನೇಮಕಾತಿಯನ್ನು ಸರ್ಕಾರ ಮುಂದೂಡಿತ್ತು. ಆದರೆ ಈಗ ಆ ಅಡೆತಡೆಗಳ ಬಹುಪಾಲು ನಿವಾರಣೆಯಾಗಿದ್ದರೂ ಹೊಸ ನೇಮಕಾತಿ ಪ್ರಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ಆರಂಭವಾಗಿಲ್ಲ. ಪರಿಣಾಮವಾಗಿ ವಿಶ್ವವಿದ್ಯಾಲಯಗಳಲ್ಲಿ ಶಾಶ್ವತ ಬೋಧಕರ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿವೃತ್ತಿ ಹೊಂದುವ ಬೋಧಕರ ಸ್ಥಾನಗಳು ಖಾಲಿಯಾಗಿಯೇ ಉಳಿಯುತ್ತಿರುವುದರಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ.

2026ರ ಜನವರಿವರೆಗಿನ ಲಭ್ಯ ಅಂಕಿ-ಅಂಶಗಳ ಪ್ರಕಾರ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ 620 ಮಂಜೂರಾದ ಹುದ್ದೆಗಳ ಪೈಕಿ 422 ಹುದ್ದೆಗಳು ಖಾಲಿ ಇದ್ದು, ಅತಿಹೆಚ್ಚು ಬೋಧಕ ಹುದ್ದೆಗಳ ಕೊರತೆ ಎದುರಿಸುತ್ತಿರುವ ವಿಶ್ವವಿದ್ಯಾನಿಲಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 572 ಮಂಜೂರಾದ ಹುದ್ದೆಗಳ ಪೈಕಿ 391 ಹುದ್ದೆಗಳು ಖಾಲಿ ಉಳಿದಿವೆ. ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿಯಲ್ಲಿ 365 ಹುದ್ದೆಗಳ ಪೈಕಿ 245, ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ 161 ಹುದ್ದೆಗಳ ಪೈಕಿ 151 ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 206 ಹುದ್ದೆಗಳ ಪೈಕಿ 171 ಹುದ್ದೆಗಳು ಖಾಲಿಯಾಗಿವೆ. ಅದೇ ರೀತಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 273 ಮಂಜೂರಾದ ಹುದ್ದೆಗಳ ಪೈಕಿ 150, ತುಮಕೂರು ವಿಶ್ವವಿದ್ಯಾಲಯದಲ್ಲಿ 217 ಹುದ್ದೆಗಳ ಪೈಕಿ 103 ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 228 ಹುದ್ದೆಗಳ ಪೈಕಿ 92 ಬೋಧಕ ಹುದ್ದೆಗಳು ಭರ್ತಿಯಾಗದೆ ಉಳಿದಿವೆ.

ಇದರ ಜತೆಗೆ, ಕೆಲವು ಹೊಸ ಹಾಗೂ ವಿಶೇಷ ಉದ್ದೇಶದ ವಿಶ್ವವಿದ್ಯಾಲಯಗಳಲ್ಲಿ ಪರಿಸ್ಥಿತಿ ಇನ್ನಷ್ಟು ಆತಂಕಕಾರಿಯಾಗಿದೆ. ಮಂಜೂರಾದ ಬೋಧಕ ಹುದ್ದೆಗಳಿದ್ದರೂ ಒಂದೇ ಒಂದು ಕಾಯಂ ನೇಮಕಾತಿಯೂ ನಡೆಯದ ಕಾರಣ ಎಲ್ಲ ಹುದ್ದೆಗಳೂ ಸಂಪೂರ್ಣವಾಗಿ ಖಾಲಿ ಉಳಿದಿವೆ. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ 272ಕ್ಕೆ 272, ನೃಪತುಂಗ ವಿಶ್ವವಿದ್ಯಾಲಯದಲ್ಲಿ 100ಕ್ಕೆ 100, ಕೊಡಗು ವಿಶ್ವವಿದ್ಯಾಲಯದಲ್ಲಿ 80ಕ್ಕೆ 80, ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ 36ಕ್ಕೆ 36, ಬೀದರ್ ವಿಶ್ವವಿದ್ಯಾಲಯದಲ್ಲಿ 29ಕ್ಕೆ 29, ಹಾಸನ ವಿಶ್ವವಿದ್ಯಾನಿಲಯದಲ್ಲಿ 27ಕ್ಕೆ 27, ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದಲ್ಲಿ 17ಕ್ಕೆ 17, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ 15ಕ್ಕೆ 15 ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ 12ಕ್ಕೆ 12 ಬೋಧಕ ಹುದ್ದೆಗಳು ಖಾಲಿಯಾಗಿವೆ. ಈ ಅಂಕಿ-ಅಂಶಗಳು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧಕರ ನೇಮಕಾತಿಗೆ ಸರ್ಕಾರ ತುರ್ತು ಆದ್ಯತೆ ನೀಡಬೇಕಾದ ಅಗತ್ಯವನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಅತಿಥಿ ಉಪನ್ಯಾಸಕ ಎಂ. ಲಿಂಗಪ್ಪ ಈ ದಿನ.ಕಾಮ್ ಜತೆಗೆ ಮಾತನಾಡಿ, “ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕಳೆದ 15ರಿಂದ 20 ವರ್ಷಗಳಿಂದ ಖಾಲಿಯೇ ಉಳಿದಿರುವ ಬೋಧಕ ಹುದ್ದೆಗಳಿಗೆ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ ಸೇವಾ ಭದ್ರತೆ ನೀಡಿ ನೇಮಕ ಮಾಡಿಕೊಳ್ಳಬೇಕು. ಸಾವಿರಾರು ಬೋಧಕ ಹುದ್ದೆಗಳು ವರ್ಷಗಳಿಂದ ಖಾಲಿ ಉಳಿದಿರುವ ಪರಿಣಾಮ ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಕೊರತೆಯನ್ನು ನೀಗಿಸಲು ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರು ಕಡಿಮೆ ಸಂಭಾವನೆಯಲ್ಲಿಯೇ ನಿರಂತರವಾಗಿ ಬೋಧನಾ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರ ಸೇವೆಗೆ ಈವರೆಗೆ ಯಾವುದೇ ಶಾಶ್ವತ ಮಾನ್ಯತೆ ಅಥವಾ ಸೇವಾ ಭದ್ರತೆ ದೊರೆತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಪ್ರತಿ ವರ್ಷ ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಸುವುದರಿಂದ ಅನಿಶ್ಚಿತತೆ ಮುಂದುವರಿಯುತ್ತದೆ. ಉದ್ಯೋಗ ಭದ್ರತೆಯ ಕೊರತೆಯಿಂದ ಅನೇಕ ಅನುಭವಿ ಉಪನ್ಯಾಸಕರು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ, ಹಲವು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಹಿತವನ್ನು ಕಾಪಾಡುವ ಉದ್ದೇಶದಿಂದ ವಿಶೇಷ ನೀತಿ ರೂಪಿಸಿ, ಅವರಿಗೆ ಸೇವಾ ಭದ್ರತೆ ಒದಗಿಸುವುದು ಅಗತ್ಯವಾಗಿದೆ. ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಖಾಲಿ ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡಬೇಕು. ಅದರ ಜತೆಗೆ, ಹಲವು ವರ್ಷಗಳಿಂದ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವ್ಯವಸ್ಥೆಯನ್ನು ತೂಗಿಸಿಕೊಂಡು ಬಂದಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಗೌರವಿಸಿ, ಅವರಿಗೆ ನ್ಯಾಯ ಒದಗಿಸುವ ನಿರ್ಧಾರ ಕೈಗೊಳ್ಳಬೇಕೆಂದು” ಸರ್ಕಾರಕ್ಕೆ ಮನವಿ ಮಾಡಿದರು.

ಅತಿಥಿ ಉಪನ್ಯಾಸಕಿ ಡಾ. ಆರ್. ಭವ್ಯ ಮಾತನಾಡಿ, “ಸರ್ಕಾರಿ ಕಾಲೇಜಿನಲ್ಲಿ ಕಳೆದ 14 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಅವಧಿಯಲ್ಲಿ ಪಿಎಚ್‌ಡಿ ಹಾಗೂ ಎಂ.ಫಿಲ್ ಪದವಿಗಳನ್ನು ಪೂರ್ಣಗೊಳಿಸಿದ್ದರೂ ಇದುವರೆಗೂ ಯಾವುದೇ ಸರ್ಕಾರಿ ಉದ್ಯೋಗ ದೊರೆತಿಲ್ಲ. ಉನ್ನತ ವಿದ್ಯಾರ್ಹತೆ ಮತ್ತು ದೀರ್ಘ ಸೇವಾನುಭವ ಇದ್ದರೂ ಉದ್ಯೋಗ ಭದ್ರತೆ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಪ್ರತಿ ವರ್ಷ ಕೌನ್ಸಿಲಿಂಗ್ ಮೂಲಕ 10 ತಿಂಗಳ ಅವಧಿಗೆ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಬಾರಿ ಕೇವಲ ಆರು ತಿಂಗಳಲ್ಲೇ, ಏಪ್ರಿಲ್ 29ರಂದು ಕೆಲಸದಿಂದ ಬಿಡುಗಡೆ ಮಾಡಲಾಗಿದೆ. ಪರಿಣಾಮವಾಗಿ ಉಳಿದ ನಾಲ್ಕು ತಿಂಗಳು ಯಾವುದೇ ಕೆಲಸವೂ ಇಲ್ಲ, ಸಂಬಳವೂ ಇಲ್ಲ. ಕುಟುಂಬ ನಿರ್ವಹಣೆ ಸೇರಿದಂತೆ ಜೀವನ ಸಾಗಿಸುವುದೇ ಕಷ್ಟಕರವಾಗಿದೆ” ಎಂದು ಹೇಳಿದರು.

“ಪರೀಕ್ಷಾ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ದಿನಕ್ಕೆ ಕೇವಲ ₹150 ಗೌರವಧನದ ಆಧಾರದ ಮೇಲೆ ಕೆಲಸ ಮಾಡಲು ಒತ್ತಾಯಿಸಲಾಯಿತು. ಇಷ್ಟು ಕಡಿಮೆ ಸಂಭಾವನೆಗೆ ಕೆಲಸ ಮಾಡಲು ನಾವು ನಿರಾಕರಿಸಿದ್ದೇವೆ. ಮತ್ತೊಂದೆಡೆ ರಾಜಕಾರಣಿಗಳ ಅಥವಾ ಪ್ರಭಾವಿಗಳ ಶಿಫಾರಸು ಇರುವವರಿಗೆ ನಾಲ್ಕು ಗಂಟೆಗಳ ಅವಧಿಯ ಕೆಲಸ ಸುಲಭವಾಗಿ ದೊರೆಯುತ್ತಿದೆ. ಯಾವುದೇ ಅನುಭವವಿಲ್ಲದವರಿಗೂ ಅವಕಾಶ ನೀಡಲಾಗುತ್ತಿದೆ. ಆದರೆ 14 ವರ್ಷಗಳ ಅನುಭವ, ಪಿಎಚ್‌ಡಿ ಮತ್ತು ಎಂ.ಫಿಲ್ ಪದವಿಗಳನ್ನು ಹೊಂದಿರುವ ನಾವು ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ನಾಗರಾಜು ಮಾತನಾಡಿ, “ರಾಜ್ಯದ್ಯಂತ ಸಾವಿರಾರು ಬೋಧಕ ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಗುಣಮಟ್ಟದ ಉನ್ನತ ಶಿಕ್ಷಣವನ್ನು ಖಚಿತಪಡಿಸಲು ಈ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ನೇಮಕಾತಿಯನ್ನು ವಿಳಂಬ ಮಾಡಿದರೆ ಶಿಕ್ಷಣದ ಗುಣಮಟ್ಟದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗಲಿದೆ” ಎಂದು ಹೇಳಿದರು.

“ಪ್ರಸ್ತುತ ಹಲವು ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ಕಾಲೇಜುಗಳ ಅನೇಕ ವಿಭಾಗಗಳಲ್ಲಿ ಒಬ್ಬರೂ ಖಾಯಂ ಅಧ್ಯಾಪಕರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಬೋರ್ಡ್ ಆಫ್ ಸ್ಟಡೀಸ್ (BOS) ಮತ್ತು ಬೋರ್ಡ್ ಆಫ್ ಎಕ್ಸಾಮಿನರ್ಸ್ (BOE) ಸೇರಿದಂತೆ ಅತ್ಯಂತ ಮಹತ್ವದ ಶೈಕ್ಷಣಿಕ ಜವಾಬ್ದಾರಿಗಳನ್ನು ಬೇರೆ ಕಾಲೇಜುಗಳ ಅಧ್ಯಾಪಕರಿಂದ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಉನ್ನತ ಶಿಕ್ಷಣ ವ್ಯವಸ್ಥೆಯ ಗಂಭೀರ ದುರ್ಬಲತೆಯನ್ನು ತೋರಿಸುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?ಮೈಸೂರು | ಚುನಾವಣಾ ಆಯೋಗದ ನಡೆ ಖಂಡಿಸಿ ಕಪ್ಪು ತೋಳುಪಟ್ಟಿ ಧರಿಸಿ ಮೌನ ಪ್ರತಿಭಟನೆ

ಈ ಕೊರತೆಯನ್ನು ಸರಿದೂಗಿಸಲು ಅನೇಕ ವಿಶ್ವವಿದ್ಯಾನಿಲಯಗಳು ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಬೋಧಕರನ್ನು ಹೆಚ್ಚಿನ ಪ್ರಮಾಣದಲ್ಲಿ ನೇಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿವೆ. ಇದರಿಂದ ಬೋಧನಾ ನಿರಂತರತೆಯನ್ನು ಕಾಪಾಡಲು ಸಾಧ್ಯವಾದರೂ, ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು, ವಿದ್ಯಾರ್ಥಿಗಳಿಗೆ ವೈಯಕ್ತಿಕ ಶೈಕ್ಷಣಿಕ ಮಾರ್ಗದರ್ಶನ ಒದಗಿಸುವುದು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಹೊಸ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು, ಕೈಗಾರಿಕೆ-ಶೈಕ್ಷಣಿಕ ಸಹಯೋಗವನ್ನು ವಿಸ್ತರಿಸುವುದು ಹಾಗೂ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(NAAC), ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಸೇರಿದಂತೆ ವಿವಿಧ ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗುತ್ತಿದೆ. ಆದ್ದರಿಂದ ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಉಳಿಸಿ ಬೆಳೆಸಲು ಖಾಲಿ ಬೋಧಕ ಹುದ್ದೆಗಳ ಭರ್ತಿಯನ್ನು ಸರ್ಕಾರ ಅತ್ಯುನ್ನತ ಆದ್ಯತೆಯ ವಿಷಯವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳುವುದು ಪ್ರಸ್ತುತ ಕಾಲದ ಅಗತ್ಯವಾಗಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...

ರಾಜ್ಯ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಚರ್ಚೆ: ಅನ್ನಪೂರ್ಣ ಹೆಸರು ಮುನ್ನೆಲೆಗೆ!

ರಾಜ್ಯ ಸಚಿವ ಸಂಪುಟದಲ್ಲಿ ಸದ್ಯ ಎರಡು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು,...

ರಾಯಚೂರು | ಜಾನುವಾರುಗಳ ಸಾವು ಏರಿಕೆ: ₹132.17 ಲಕ್ಷ ಪರಿಹಾರ ಬಾಕಿ, ತಪ್ಪದ ರೈತರ ಅಲೆದಾಟ

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ರಾಯಚೂರು ಜಿಲ್ಲೆಯಲ್ಲಿ ಜಾನುವಾರುಗಳ...