ರಾಜ್ಯದ ಮಹಿಳೆಯರು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿದ್ದರೂ, ಅಧಿಕಾರದ ವಿಚಾರ ಬಂದಾಗ ಅವರು ಇಂದಿಗೂ ‘ಅತಿಥಿಗಳು’ ಎಂಬುದು ಮತ್ತೊಮ್ಮೆ ಸಾಬೀತಾದಂತಿದೆ. ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಂಪುಟದಲ್ಲಿ ಒಬ್ಬೇ ಒಬ್ಬ ಮಹಿಳೆಗೆ ಸಚಿವ ಸ್ಥಾನ ನೀಡದಿರುವುದು ಇಡೀ ಮಹಿಳಾ ಕುಲಕ್ಕೆ ಬಗೆದ ದ್ರೋಹವಲ್ಲವೇ? ಮಹಿಳೆಗೆ ಮಂತ್ರಿ ಸ್ಥಾನ ಕೊಡುವುದಾಗಿ ಭರವಸೆ ಕೊಟ್ಟು ಅದನ್ನು ಕಾರ್ಯರೂಪದಕ್ಕೆ ತರಲು ಹೆಣಗಾಡುತ್ತಿರುವ ಕಾಂಗ್ರೆಸ್ ಮಾತಿಗೆ ತಪ್ಪಿತೇ?
ಮಹಿಳಾ ಪ್ರಾತಿನಿಧ್ಯವಿಲ್ಲದೆ ಸಂಪುಟ ವಿಸ್ತರಣೆಗೊಂಡಿರುವುದಕ್ಕೆ ವಿರೋಧ ಪಕ್ಷಗಳು, ಸ್ವತಃ ಕಾಂಗ್ರೆಸ್ ನಾಯಕರು ಮತ್ತು ಮಹಿಳಾ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಗೊಂದಲಕ್ಕೆ ತೆರೆಎಳೆಯಲು ದೆಹಲಿ ಕದ ತಟ್ಟಲು ಮುಂದಾಗಿದ್ದಾರೆ. ಸಂಪುಟದಲ್ಲಿ ಇನ್ನೂ 2 ಸ್ಥಾನ ಖಾಲಿ ಉಳಿದಿರುವುದನ್ನು ಪ್ರಸ್ತಾಪಿಸಿರುವ ಅವರು, “ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ, ಮಹಿಳೆಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅಂದು ಸಂಪುಟ ರಚನೆಯ ಆರಂಭದಲ್ಲೇ ಮೂರೇ ದಿನಗಳಲ್ಲಿ ಮಹಿಳೆಗೆ ಮಂತ್ರಿ ಸ್ಥಾನ ನೀಡುವುದಾಗಿ ಆಶ್ವಾಸನೆ ನೀಡಿದ್ದ ಸಿಎಂ, ಈಗ ಮತ್ತೆ ವರಿಷ್ಠರ ಬಳಿ ಚರ್ಚಿಸಬೇಕು ಎನ್ನುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.
ರಾಜ್ಯ ಕಾಂಗ್ರೆಸ್ ವಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬ ವಿಚಾರದಲ್ಲಿ ಇನ್ನೂ ಸ್ಪಷ್ಟ ಒಮ್ಮತ ಮೂಡಿಲ್ಲ. ಅದರಲ್ಲೂ ಪ್ರಮುಖ ನಾಯಕರ ಹಗ್ಗಜಗ್ಗಾಟ ಹಾಗೂ ಲಾಬಿಯಿಂದಾಗಿ ಮಹಿಳಾ ನಾಯಕಿಯರ ಹೆಸರುಗಳು ಕೊನೆಯ ಕ್ಷಣದಲ್ಲಿ ಕೈಬಿಟ್ಟುಹೋಗುತ್ತಿವೆ ಎಂಬ ಆರೋಪಗಳಿವೆ.
ಕಾಂಗ್ರೆಸ್ ಪಕ್ಷದ ಪ್ರಮುಖರಾದ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿಯೇ ಸಮಾಲೋಚನೆಗಳು ನಡೆದಿದ್ದರೂ, ಅಂತಿಮ ಪಟ್ಟಿಯಲ್ಲಿ ಮಹಿಳೆಯರಿಗೆ ಜಾಗ ಸಿಗದಿರುವುದು ಪಕ್ಷದ ನಾಯಕರ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಪ್ರಸ್ತುತ ನವದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಭಾಗವಹಿಸಲು ತೆರಳುತ್ತಿರುವ ಡಿಕೆಶಿ, ಅಲ್ಲಿಯಾದರೂ ಹೈಕಮಾಂಡ್ ಜತೆ ಗಂಭೀರ ಚರ್ಚೆ ನಡೆಸಿ ಬಾಕಿ ಉಳಿದಿರುವ ಸ್ಥಾನಗಳಿಗೆ ಸಮರ್ಥ ಮಹಿಳಾ ನಾಯಕಿಗೆ ಮಂತ್ರಿಗಿರಿ ಕಲ್ಪಿಸಬೇಕಿದೆ.
ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಲಿಂಗಾಯತ, ಒಕ್ಕಲಿಗ, ಎಸ್ಸಿ/ಎಸ್ಟಿ ಮತ್ತು ಮುಸ್ಲಿಂ ಸಮುದಾಯಗಳ ಓಟ್ ಬ್ಯಾಂಕ್ ಲೆಕ್ಕಾಚಾರಗಳು ನಡೆಯುತ್ತವೆಯೇ ಹೊರತು, ಶಾಸನಸಭೆಯಲ್ಲಿರುವ ಮಹಿಳಾ ಶಾಸಕರಿಗೆ ಅಥವಾ ಪರಿಣಿತ ನಾಯಕಿಯರಿಗೆ ಸೂಕ್ತ ಸ್ಥಾನ ನೀಡುವ ದಿಟ್ಟ ನಿರ್ಧಾರವನ್ನು ಹೈಕಮಾಂಡ್ ಅಥವಾ ಸ್ಥಳೀಯ ನಾಯಕರು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಮತ್ತೊಂದೆಡೆ, ಬಹುನಿರೀಕ್ಷೆಯಂತೆ ಖಾಲಿ ಇರುವ ಸ್ಥಾನಗಳಿಗೆ ಮುಂದಿನ ಹಂತದಲ್ಲಿ ಯಾರಿಗೆ ಅವಕಾಶ ಸಿಗಬಹುದು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಕೆಲವು ಪ್ರಮುಖ ಮಹಿಳಾ ನಾಯಕಿಯರು ಸಂಭಾವ್ಯರ ರೇಸ್‌ನಲ್ಲಿದ್ದಾರೆ.
ಈ ಪೈಕಿ ವಿಧಾನ ಪರಿಷತ್ (MLC) ಸದಸ್ಯೆಯಾಗಿರುವ ಗಾಯತ್ರಿ ಶಾಂತೇಗೌಡ ಕುರುಬ ಸಮುದಾಯದ ಪ್ರಮುಖ ನಾಯಕಿಯಾಗಿದ್ದು, ಇತ್ತೀಚಿನ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿಯಲ್ಲೂ ಇವರ ಹೆಸರು ಅಂತಿಮಗೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಕೈಬಿಡಲ್ಪಟ್ಟಿದ್ದರಿಂದ, ಮುಂದಿನ ಅವಕಾಶದಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ.
ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾಮೋಟಮ್ಮ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲದಿರುವುದನ್ನು ಬಹಿರಂಗವಾಗಿ ಪ್ರಶ್ನಿಸುವ ಮೂಲಕ ಗಮನ ಸೆಳೆದಿದ್ದಾರೆ. ಯುವ ಮತ್ತು ವಿದ್ಯಾಭ್ಯಾಸದ ಹಿನ್ನೆಲೆಯುಳ್ಳ ಪ್ರಮುಖ ದಲಿತ (SC) ಮಹಿಳಾ ನಾಯಕಿಯಾಗಿರುವುದರಿಂದ ಇವರ ಹೆಸರೂ ಚಾಲ್ತಿಯಲ್ಲಿದೆ.
ಇದನ್ನೂ ಓದಿ: ಬುಧವಾರವೇ ಸಂಪುಟ ವಿಸ್ತರಣೆ: ಹೈಕಮಾಂಡ್ ಅಸ್ತುಗಾಗಿ ನಾಳೆ ದೆಹಲಿಗೆ ಸಿಎಂ, ಮಾಜಿ ಸಿಎಂ, ಕೆಪಿಸಿಸಿ ಅಧ್ಯಕ್ಷರ ದೌಡು
ಕೆಜಿಎಫ್ (KGF) ಕ್ಷೇತ್ರದ ಯುವ ಶಾಸಕಿ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ ಪುತ್ರಿ ರೂಪಕಲಾಶಶಿಧರ್, ಪಕ್ಷದಲ್ಲಿ ಸಕ್ರಿಯರಾಗಿದ್ದು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಕಲಬುರಗಿ ಉತ್ತರ ಕ್ಷೇತ್ರದ ಹಿರಿಯ ಶಾಸಕಿ ಕನೀಜ್ ಫಾತಿಮಾ, ಅಲ್ಪಸಂಖ್ಯಾತ ಮಹಿಳಾ ಕೋಟಾದಡಿಯಲ್ಲಿ ಸಚಿವ ಸ್ಥಾನವನ್ನು ನಿರೀಕ್ಷಿಸುತ್ತಿರುವ ಪ್ರಮುಖ ನಾಯಕಿ. ಸಂಸತ್ ಸದಸ್ಯ ಇ. ತುಕಾರಾಂ ಅವರ ಪತ್ನಿ ಅನ್ನಪೂರ್ಣತುಕಾರಾಂ ಅವರ ಹೆಸರೂ ಚರ್ಚೆಯಲ್ಲಿದೆ.
ಉಳಿದಂತೆ ಬಹುತೇಕ ಮಹಿಳೆಯರಿಗೆ ಸಾಂಪ್ರದಾಯಿಕವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನೇ ಹೆಚ್ಚಾಗಿ ನೀಡುತ್ತಾ ಬರಲಾಗಿದೆ. ಪ್ರಸ್ತುತ ಅಸ್ತಿತ್ವಕ್ಕೆ ಬಂದಿರುವ ಡಿ ಕೆ ಶಿವಕುಮಾರ್ ಅವರ ನೂತನ ಸಂಪುಟದಲ್ಲಿ ಆರಂಭಿಕವಾಗಿ ಯಾವುದೇ ಮಹಿಳೆಯರಿಗೆ ಸಚಿವ ಸ್ಥಾನ ನೀಡದ್ದಿದ್ದರೂ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಹಲವರದ್ದು.




