ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳಲ್ಲಿ ಖಾಲಿ ಇರುವ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಭರ್ತಿ ಮಾಡಬೇಕು. SC/ST/OBC ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಒಳಮೀಸಲಾತಿ ಅಳವಡಿಸಿ ಈ ಉದ್ಯೋಗಗಳನ್ನು ಭರ್ತಿ ಮಾಡಬೇಕು ಆಗ್ರಹಿಸಿ ಅಹಿಂದ ಚಳವಳಿ ಸಂಘಟನೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ.
ಈ ಸಂಬಂಧ ಪಿಎಂ ಮೋದಿಗೆ ಪತ್ರ ಬರೆದಿದೆ. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದೆ. ಖಾಸಗಿ ಕ್ಷೇತ್ರಗಳ ಉದ್ಯೋಗದಲ್ಲಿಯೂ ಮೀಸಲಾತಿ ಅಳವಡಿಸಿ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳ ಪ್ರತಿಭಟನೆ
“ದೇಶದ ವಿವಿಧ ಮಂತ್ರಾಲಯಗಳಲ್ಲಿ 48 ಲಕ್ಷಕ್ಕೂ ಹೆಚ್ಚು ಮಂಜೂರಾತಿ ಉದ್ಯೋಗಗಳಿವೆ. ಆ ಪೈಕಿ, 56 ವಿವಿಧ ಮಂತ್ರಾಲಯಗಳಲ್ಲಿ 10 ಲಕ್ಷಕ್ಕೂ ಅಧಿಕ ಉದ್ಯೋಗಗಳು ಖಾಲಿ ಇವೆ. ಭಾರತ ಸರ್ಕಾರದ ಅಧೀನದಲ್ಲಿ 235 ಸರ್ಕಾರಿ ಸೌಮ್ಯಗಳು/ ಕಂಪನಿಗಳು/ ಕಾರ್ಖಾನೆ/ ಇತ್ಯಾದಿಗಳಿವೆ. ಇವುಗಳಲ್ಲಿ ಕೂಡ ಲಕ್ಷಾಂತರ ಉದ್ಯೋಗಗಳು ಖಾಲಿ ಇವೆ” ಎಂದು ಅಹಿಂದ ಚಳವಳಿ ಸಂಘಟನೆ ತಿಳಿಸಿದೆ.
ಇನ್ನು, “ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 29 ಹೆಚ್ಚು ಲಾಭದಾಯಕ ಉದ್ಯಮಗಳನ್ನು ಖಾಸಗೀಕರಣಗೊಳಿಸಿದೆ. ಇದರಿಂದ ಲಕ್ಷಾಂತರ (ಮೀಸಲಾತಿ) ಉದ್ಯೋಗಗಳು ಮೀಸಲಾತಿ ವ್ಯಾಪ್ತಿಯಿಂದ ಹೊರ ಹೋಗಿವೆ. ಕೇಂದ್ರದ ಅಧೀನದ ಸಾರ್ವಜನಿಕ ಉದ್ದಿಮೆಗಳು/ ಕಂಪನಿ/ ಕಾರ್ಖಾನೆ/ ಇತ್ಯಾದಿಗಳಲ್ಲಿ ಗುತ್ತಿಗೆ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿದೆ. ತನ್ನ ಕೆಲವು ಮಂತ್ರಾಲಯಗಳಲ್ಲಿ ಖಾಸಗಿಯವರನ್ನು ಸಲಹೆಗಾರರ ರೂಪದಲ್ಲಿ ನೇಮಕ ಮಾಡಿಕೊಂಡಿದೆ” ಎಂದೂ ದೂರಿದೆ.
“2024ರಲ್ಲಿ ಸರ್ವೋಚ್ಚ ನ್ಯಾಯಾಲಯದ ಚಂದ್ರಚೂಡ ನೇತೃತ್ವದ 7 ನ್ಯಾಯಮೂರ್ತಿಗಳ ‘ವಿಭಾಗಿಯ ಪೀಠ’ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಒಳಮೀಸಲಾತಿಗಳನ್ನು ಮಾಡಲು ಸಂವಿಧಾನದಲ್ಲಿ ಅವಕಾಶಗಳಿವೆ ಎಂದು ಸರ್ಕಾರಗಳ ಮುಂದೆ ಇದ್ದ ಗೊಂದಲಗಳು/ ನಿರ್ಬಂಧಗಳನ್ನು ನಿವಾರಣೆ ಮಾಡಿ ತೀರ್ಪು ನೀಡಿದೆ. ಈ ತೀರ್ಪು ಆಧರಿಸಿ ಕರ್ನಾಟಕ ಸರ್ಕಾರ ಒಳಗೊಂಡಂತೆ ಕೆಲವು ರಾಜ್ಯ ಸರ್ಕಾರಗಳು ಒಳ ಮೀಸಲಾತಿಯನ್ನು ಅನುಷ್ಠಾನ ಮಾಡಿವೆ. ಆದರೆ ಕೇಂದ್ರ ಸರ್ಕಾರ ಈವರೆಗೂ ತನ್ನ ಸಿಬ್ಬಂದಿ ನೇಮಕಾತಿಗಳಿಗೆ ಒಳ ಮೀಸಲಾತಿ ಅಳವಡಿಸಿ ಅನುಷ್ಠಾನ ಮಾಡಿಲ್ಲ” ಎಂದು ಅಹಿಂದ ಚಳವಳಿ ಸಂಘಟನೆ ಪ್ರಧಾನಿಗೆ ಬರೆದ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
“2014ರ ಚುನಾವಣೆಯಲ್ಲಿ ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಆಶ್ವಾಸನೆ ನೀಡಿದ್ದರು. ಆ ಆಶ್ವಾಸನೆಯಂತೆ ಈವರಗೆ 24 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಆದರೆ ಉದ್ಯೋಗ ಸೃಷ್ಟಿಯಾಗಿಲ್ಲ. ನೀಡಿದ ಆಶ್ವಾಸನೆ ಸುಳ್ಳಾಗಿದೆ” ಎಂದು ಟೀಕಿಸಿದೆ.
“ಸಾರ್ವಜನಿಕ ಬ್ಯಾಂಕುಗಳಿಗೆ ಸಿಬ್ಬಂದಿ ನೇಮಕಾತಿ ಮಾಡುತ್ತಿದ್ದ Banking Services Recruitment Board (BSRB) ಸರ್ಕಾರಿ ಸಂಸ್ಥೆಯನ್ನು ರದ್ದುಪಡಿಸಿ, ಬದಲಿಗೆ Institute of Banking Personnel Selection ಸಂಸ್ಥೆಯನ್ನು ಕೇಂದ್ರ ಸರ್ಕಾರ ಸ್ಥಾಪನೆ ಮಾಡಿದೆ. ಈ ಹೊಸ ಸಂಸ್ಥೆ ಉತ್ತರ ಭಾರತೀಯರಿಗೆ ಮಾತ್ರ ಉದ್ಯೋಗ ನೀಡುತ್ತಿದೆ. ದಕ್ಷಿಣ ಭಾರತದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನೀಡುತ್ತಿಲ್ಲವೆಂಬ ಆರೋಪವಿದೆ. (ದಕ್ಷಿಣ ಭಾರತದ ಯಾವುದೇ ಸಾರ್ವಜನಿಕ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು ಬಹುತೇಕ ಉತ್ತರ ಭಾರತೀಯರು)” ಎಂಬುದನ್ನೂ ಅಹಿಂದ ಚಳವಳಿ ಸಂಘಟನೆ ಪತ್ರದಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ
“ಕೇಂದ್ರ ಸರ್ಕಾರದ ಮತ್ತೊಂದು Staff Selection Commission (south zone) ಯಾವುದೇ ನೇಮಕಾತಿಗಳನ್ನು ಇತ್ತೀಚೆಗೆ ಮಾಡಿಲ್ಲ. ಈ ಸರ್ಕಾರಿ ಸಂಸ್ಥೆ ಅಸ್ತಿತ್ವದಲ್ಲಿ ಇದೆಯೇ? ಅಥವಾ ಇದನ್ನು ಮುಚ್ಚಲಾಗಿದೆಯೇ” ಎಂದು ಪ್ರಶ್ನಿಸಿದೆ.
“ಬಡ ವಿದ್ಯಾರ್ಥಿಗಳು ಕೂಡ ಮೆಡಿಕಲ್ ಮತ್ತು ಇಂಜಿನಿಯರಿಂಗ್ ವ್ಯಾಸಂಗ ಮಾಡಲು, ಕರ್ನಾಟಕ ಸರ್ಕಾರ ಸ್ಥಾಪನೆ ಮಾಡಿದ್ದ CET ಸಂಸ್ಥೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ಪರ್ಯಾಯವಾಗಿ ರಾಷ್ಟ್ರಮಟ್ಟದಲ್ಲಿ NEET ಸರ್ಕಾರಿ ಸಂಸ್ಥೆಯನ್ನು ಸ್ಥಾಪನೆ ಮಾಡಿದೆ. ಇದರಿಂದ, ಕರ್ನಾಟಕ ರಾಜ್ಯದ ಒಳಗಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಗಳನ್ನು ಪಡೆಯುತ್ತಿದ್ದಾರೆ. ಪ್ರವೇಶ ಸಿಗದ ರಾಜ್ಯದ ವಿದ್ಯಾರ್ಥಿಗಳು ವಂಚನೆಗೊಳಗಾಗಿದ್ದಾರೆ” ಎಂದು ದೂರಿದೆ.
“ಗ್ರಾಮೀಣ ಭಾಗದ ಕೃಷಿ ಕಾರ್ಮಿಕರು ಉದ್ಯೋಗ ಇಲ್ಲದ ಕಾರಣ ನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ, ಉದ್ಯೋಗ ನೀಡಿ, ಹಸಿವು ನಿವಾರಣೆ ಮಾಡುವ ಸಲುವಾಗಿ, ಸೋನಿಯಾ ಗಾಂಧಿ ನೇತೃತ್ವದ (ಯುಪಿಎ) ಸರ್ಕಾರ Mahatma Gandhi National Rural Employment Gurantee Scheme(NREGS) ರಾಷ್ಟ್ರ ವ್ಯಾಪಿ ಜಾರಿ ಮಾಡಿದ್ದರು. ಗ್ರಾಮೀಣ ಭಾಗದಲ್ಲಿ ಬಹುತೇಕ ಕೃಷಿ ಕಾರ್ಮಿಕರು ಉದ್ಯೋಗ ಮಾಡಿ, ಊಟ ಮಾಡುತ್ತಿದ್ದರು. ಹಾಲಿ ಸರ್ಕಾರ ಈ ಯೋಜನೆ ಮಾರ್ಪಡು ಮಾಡಿದೆ. ಇದರೊಳಗಿನ ತಾಂತ್ರಿಕ ಕಾರಣಗಳಿಂದ ಈಗ ಯಾರಿಗೂ ಉದ್ಯೋಗ ಸಿಗುತ್ತಿಲ್ಲ. ಜೊತೆಗೆ ಅವರ ಹಸಿವು ನಿವಾರಣೆ ಆಗುತ್ತಿಲ್ಲ. ನಗರಗಳಿಗೆ ಗುಳೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ” ಎಂದು ಹೇಳಿದೆ.
“ದೇಶದ ಇತಿಹಾಸದಲ್ಲಿ ಹಿಂದೆ ಎಂದು ಕಂಡರಿಯದ ಪ್ರಮಾಣದಲ್ಲಿ, ನಿರುದ್ಯೋಗ ಹೆಚ್ಚಳವಾಗಿದೆ. ಜೊತೆಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಹಸಿವಿನಿಂದ ಬಾಧಿತರಾಗಿರುವ ಬಡವರು ದೇಶದಲ್ಲಿ ಹೆಚ್ಚಳವಾಗಿದ್ದಾರೆಂದು ವಿಶ್ವಸಂಸ್ಥೆ ವರದಿ ಮಾಡಿದೆ. ಖಾಲಿ ಇರುವ ಉದ್ಯೋಗ ಭರ್ತಿ ಮತ್ತು ಹೊಸ ಉದ್ಯೋಗ ಸೃಷ್ಟಿ ಇವೆರಡನ್ನೂ ಆದಷ್ಟು ಬೇಗ ಮಾಡಿಲ್ಲವೆಂದರೆ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಹಸಿವಿನಿಂದ ಜೀವಿಸುವ ಬಡವರ ಸಂಖ್ಯೆ ದೇಶದಲ್ಲಿ ಹೆಚ್ಚಳ ವಾಗುತ್ತದೆ” ಎಂದಿದೆ. ಹಾಗೆಯೇ ಖಾಸಗಿ ಕ್ಷೇತ್ರಗಳ ಉದ್ಯೋಗದಲ್ಲಿ ಮೀಸಲಾತಿ ಅಳವಡಿಸಿ, ಅನುಷ್ಠಾನ ಮಾಡುವುದು, ಅನಿವಾರ್ಯ/ಅಗತ್ಯತೆ ಆಗಿದೆ ಎಂದೂ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ
- ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳಲ್ಲಿ ಖಾಲಿ ಇರುವ 10.00 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು; ಜೊತೆಗೆ ಕೇಂದ್ರ ಸರ್ಕಾರದ ಸರ್ಕಾರಿ ಸೌಮ್ಯ/ ಕಂಪನಿ/ ಕಾರ್ಖಾನೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು.
- ಕೇಂದ್ರ ಸರ್ಕಾರ ತನ್ನ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ SC/ST/OBC ಸಮುದಾಯಗಳಿಗೆ ಒಳ ಮೀಸಲಾತಿ ಅಳವಡಿಸಿ, ಅನುಷ್ಠಾನ ಮಾಡಬೇಕು.
- ಖಾಸಗಿ ಕ್ಷೇತ್ರಗಳ ಉದ್ಯೋಗಗಳಲ್ಲಿ ಕೂಡ ಮೀಸಲಾತಿ ಅಳವಡಿಸಿ, ಅನುಷ್ಠಾನ ಮಾಡಬೇಕು.
- ಕೇಂದ್ರ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡಬಾರದು.
- ಕೇಂದ್ರ ಸರ್ಕಾರ ಗುತ್ತಿಗೆ ನೇಮಕಾತಿ/ ಸಲಹೆಗಾರ/ ಇತ್ಯಾದಿ ರೂಪದ ಖಾಸಗಿಯವರ ನೇಮಕಾತಿಗಳನ್ನು ರದ್ದುಪಡಿಸಿ, ಕಾಯಂ ನೇಮಕಾತಿ ಮಾಡಬೇಕು.
“ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರು/ ಹಿಂದುಳಿದವರು/ ದಲಿತ ಸಮುದಾಯಗಳು ಮತ್ತು ಸಾಮಾನ್ಯ ವರ್ಗಗಳ ನಿರುದ್ಯೋಗಿಗಳ ಸಲುವಾಗಿ ಈ ಮನವಿಯನ್ನು ಪರಿಗಣಿಸಿ, ಅನುಷ್ಠಾನ ಮಾಡಬೇಕು” ಪ್ರಧಾನಿ ಮೋದಿಯನ್ನು ಅಹಿಂದ ಚಳವಳಿ ಸಂಘಟನೆ ಮನವಿ ಮಾಡಿದೆ.




