ಒಂದು ಲಕ್ಷ ರೂ. ನಗದು ನೀಡಿದರೆ ಬ್ಯಾಂಕ್ ಖಾತೆಗೆ 1.30 ಲಕ್ಷ ರೂ. ಜಮೆ ಮಾಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ₹2.68 ಕೋಟಿ ಹಣವನ್ನು ದರೋಡೆ ಮಾಡಿದ ಪ್ರಕರಣವನ್ನು ಮೂಡಲಗಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್‌ಟೆಬಲ್ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದು, ₹2.39 ಕೋಟಿ ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ ವಾಹನಗಳು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಿ ಡಬ್ಲಿಂಗ್ ಹೆಸರಿನಲ್ಲಿ ಹೆಚ್ಚಿನ ಹಣದ ಆಮಿಷವೊಡ್ಡಿ ಅಮಾಯಕರನ್ನು ವಂಚಿಸಿ, ಹಣ ದರೋಡೆ ಮಾಡುವ ಸಂಚು ರೂಪಿಸಲಾಗಿತ್ತು. ಪ್ರಕರಣದಲ್ಲಿ ಒಟ್ಟು ಒಂಬತ್ತು ಆರೋಪಿಗಳು ಭಾಗಿಯಾಗಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ರಾಮಪ್ಪ ತಳವಾರನ ಬಂಧನಕ್ಕಾಗಿ ಶೋಧಕಾರ್ಯ ಚುರುಕುಗೊಳಿಸಲಾಗಿದೆ. ದರೋಡೆ ಮಾಡಿರುವ ಉಳಿದ ₹29 ಲಕ್ಷವನ್ನೂ ಪತ್ತೆಹಚ್ಚಿ ಜಪ್ತಿ ಮಾಡಲಾಗುವುದು ಎಂದು ತಿಳಿಸಿದರು.
ಪೊಲೀಸ್ ಕಾನ್ಸ್‌ಟೆಬಲ್ ಸೇರಿ 8 ಮಂದಿ ಬಂಧನ
ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ ಡಿಆರ್ ಕಾನ್ಸ್‌ಟೆಬಲ್ ಚಿದಾನಂದ ಸಿದ್ದಾರೂಢ ಕುರಬೆಟ್, ರಾಜಾರಾಮ ಸುರೇಶ ಮಾಳ್ಳಾಗೋಳ, ರಮೇಶ ದುಂಡಪ್ಪ ಮಾಳ್ಳಾಗೋಳ, ವಿಠಲ ಸುರಹ ಮಾಳ್ಯಾಗೋಳ, ತುಕ್ಕಾನಟ್ಟಿ ಗ್ರಾಮದ ಸಂಜೀವ ರಾಮಪ್ಪ ಆರಬಾವಿ, ಮಾರುತಿ ಅರಬಾವಿ, ಗೋಕಾಕದ ಪ್ರಕಾಶ ರಾಮಲಿಂಗಪ್ಪ ಮೆಳವಂಕಿ ಹಾಗೂ ರಾಘವೇಂದ್ರ ಪ್ರಕಾಶ ಕೊಪ್ಪದ ಬಂಧಿತ ಆರೋಪಿಗಳು.
ಬಂಧಿತರಿಂದ ₹2.39 ಕೋಟಿ ನಗದು, ಎರಡು ಬೈಕ್‌ಗಳು, ಒಂದು ಕಾರು ಹಾಗೂ ಹಣ ಎಣಿಕೆ ಯಂತ್ರವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.
2.68 ಕೋಟಿ ರೂ. ಸಂಗ್ರಹಿಸಿ ದರೋಡೆಗೆ ಸಂಚು
ಒಂದು ಲಕ್ಷ ರೂ. ನಗದು ನೀಡಿದರೆ ಬ್ಯಾಂಕ್ ಖಾತೆಗೆ 1.30 ಲಕ್ಷ ರೂ. ಜಮೆ ಮಾಡುವುದಾಗಿ ಕಾನ್ಸ್‌ಟೆಬಲ್ ಚಿದಾನಂದ ಕುರಬೆಟ್ ಜನರನ್ನು ನಂಬಿಸಿದ್ದ. ಈ ಆಮಿಷಕ್ಕೆ ಒಳಗಾದ ಕಲ್ಲೇಶ ಬಸವರಾಜ ರಂಗಾಪುರ ₹48 ಲಕ್ಷ, ಅವರ ಸೋದರಮಾವ ಚನ್ನಬಸಪ್ಪ ₹49 ಲಕ್ಷ, ಬೀರಪ್ಪ ವನಸು ₹50 ಲಕ್ಷ, ಗೋಕಾಕದ ಕಲ್ಲೇಶ ₹50 ಲಕ್ಷ ಹಾಗೂ ಶಂಕರ ಜಕ್ಕಣ್ಣವರ ₹80 ಲಕ್ಷ ನೀಡಿದ್ದರು.ಹೀಗೆ ಒಟ್ಟು ₹2.68 ಕೋಟಿ ಹಣ ಸಂಗ್ರಹಿಸಲಾಗಿತ್ತು. ಈ ಹಣವನ್ನು ದರೋಡೆ ಮಾಡುವ ಉದ್ದೇಶದಿಂದ ಚಿದಾನಂದ ಸಂಚು ರೂಪಿಸಿದ್ದ. ಹಣವನ್ನು ಶೆಡ್‌ನಲ್ಲಿ ಎಣಿಕೆ ಮಾಡೋಣ ಎಂದು ನಂಬಿಸಿ ಬೀರಪ್ಪ ವನಸು ಅವರ ಶೆಡ್‌ಗೆ ಹಣ ತರಿಸಿದ್ದ.
ಅಕ್ಟೋಬರ್ 30ರ ರಾತ್ರಿ 11.45ರ ಸುಮಾರಿಗೆ ಖಾರದಪುಡಿ ಹಿಡಿದು ಬಂದ ಆರೋಪಿಗಳು ಶೆಡ್ ಮೇಲೆ ದಾಳಿ ನಡೆಸಿದ್ದರು. ಚನ್ನಬಸಪ್ಪ ಅವರ ಕಣ್ಣಿಗೆ ಖಾರದಪುಡಿ ಎರಚಿ, ಹಗ್ಗದಿಂದ ಹಲ್ಲೆ ನಡೆಸಿ, ಐದು ಬ್ಯಾಗ್‌ಗಳಲ್ಲಿದ್ದ ₹2.68 ಕೋಟಿ ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿಎಸ್‌ಪಿ ನೇತೃತ್ವದಲ್ಲಿ ಕಾರ್ಯಾಚರಣೆ
ಮೂಡಲಗಿಯ ಕಲ್ಲೇಶ ಬಸವರಾಜ ರಂಗಾಪುರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಗೋಕಾಕ ಉಪವಿಭಾಗದ ಡಿಎಸ್‌ಪಿ ರವಿ ನಾಯಕ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಕೆ. ರಾಮರಾಜನ್ ತಿಳಿಸಿದರು.
ಮನಿ ಡಬ್ಲಿಂಗ್ ಆಮಿಷಕ್ಕೆ ಬಲಿಯಾಗಬೇಡಿ
ಗೋಕಾಕ ಸುತ್ತಮುತ್ತ ಮನಿ ಡಬ್ಲಿಂಗ್ ಹೆಸರಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸುವ ಆಮಿಷವೊಡ್ಡಿ ಅಮಾಯಕರನ್ನು ವಂಚಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಆಮಿಷಗಳಿಗೆ ಬಲಿಯಾಗಬಾರದು. ಅಪರಿಚಿತ ವ್ಯಕ್ತಿಗಳ ಹಣದ ವ್ಯವಹಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಎಸ್ಪಿ ರಾಮರಾಜನ್ ಮನವಿ ಮಾಡಿದರು.



