ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ, ಆಹಾರ ಭದ್ರತೆಗೆ ಎದುರಾಗಿದೆ ಸವಾಲು!

Date:

ಅಡುಗೆ ಮನೆಯ ದಿನನಿತ್ಯದ ಅಗತ್ಯವಾಗಿರುವ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾಮಾನ್ಯ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ಉದ್ಯೋಗ ಮತ್ತು ಆದಾಯದ ಅನಿಶ್ಚಿತತೆಯಿಂದ ತತ್ತರಿಸಿರುವ ಜನರಿಗೆ ಅಕ್ಕಿ ಬೆಲೆ ಏರಿಕೆ ಮತ್ತೊಂದು ಹೊರೆಯಾಗಿದೆ.

- Advertisement -

ಕರ್ನಾಟಕದಲ್ಲಿ ಮುಂಗಾರು ಮಳೆಯ ವೈಫಲ್ಯ, ಭತ್ತದ ಬಿತ್ತನೆ ಪ್ರದೇಶದ ಕುಸಿತ, ನೀರಾವರಿ ಸಮಸ್ಯೆ ಹಾಗೂ ಉತ್ಪಾದನೆಯಲ್ಲಿನ ಅನಿಶ್ಚಿತತೆ ಅಕ್ಕಿ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಪ್ರಮುಖ ಅಕ್ಕಿ ಪ್ರಭೇದಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಕೆಲವು ಉತ್ತಮ ಗುಣಮಟ್ಟದ ಅಕ್ಕಿ ಪ್ರಭೇದಗಳು ಕೆಜಿಗೆ ₹100ರ ಗಡಿಯನ್ನು ತಲುಪಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು...

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಕ್ಕಿ ಎನ್ನುವುದು ಕೇವಲ ಒಂದು ಆಹಾರ ಪದಾರ್ಥವಲ್ಲ. ಕರ್ನಾಟಕದ ಬಹುತೇಕ ಕುಟುಂಬಗಳ ದಿನನಿತ್ಯದ ಆಹಾರ ವ್ಯವಸ್ಥೆಯ ಪ್ರಮುಖ ಭಾಗ. ಅದರಲ್ಲೂ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳಿಗೆ ಅಕ್ಕಿಯ ಬೆಲೆ ಏರಿಕೆ ನೇರವಾಗಿ ಜೀವನ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ರಾಗಿ, ಜೋಳ, ನವಣೆ, ಸಜ್ಜೆ, ಬೇಳೆಕಾಳು ಸೇರಿದಂತೆ ಪರ್ಯಾಯ ಆಹಾರ ಪದಾರ್ಥಗಳಿದ್ದರೂ ಅಕ್ಕಿಯ ಮೇಲಿನ ಅವಲಂಬನೆ ಕಡಿಮೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಅಕ್ಕಿಯ ಬೆಲೆ ಏರಿಕೆ ಆಹಾರ ಭದ್ರತೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದೇಶದಲ್ಲೇ ದುಬಾರಿ ಅಕ್ಕಿ ಮಾರುಕಟ್ಟೆಗಳಲ್ಲಿ ಕರ್ನಾಟಕ

ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಲೆ ನಿಗಾ ದತ್ತಾಂಶದ ಆಧಾರದಲ್ಲಿ ಅಕ್ಟೋಬರ್ 31, 2026ರಂದು ಕರ್ನಾಟಕದಲ್ಲಿ ಚಿಲ್ಲರೆ ಅಕ್ಕಿಯ ಸರಾಸರಿ ಬೆಲೆ ಕೆಜಿಗೆ ₹74.40 ದಾಖಲಾಗಿದೆ. ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಲಭ್ಯ ದತ್ತಾಂಶಗಳ ಪೈಕಿ ಇದು ಅತ್ಯಧಿಕ ಬೆಲೆಗಳಲ್ಲಿ ಒಂದಾಗಿದೆ. ಜನವರಿಯಲ್ಲಿ ರಾಜ್ಯದ ಮಾಸಿಕ ಸರಾಸರಿ ಬೆಲೆ ಸುಮಾರು ₹48ರಷ್ಟಿದ್ದರೆ, ಅಕ್ಟೋಬರ್‌ನಲ್ಲಿ ಅದು ಸುಮಾರು ₹69ಕ್ಕೆ ಏರಿದೆ. ಅಂದರೆ ವರ್ಷದ ಆರಂಭಕ್ಕೆ ಹೋಲಿಸಿದರೆ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.

ಸೆಪ್ಟೆಂಬರ್ ವೇಳೆಗೆ ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಅಕ್ಕಿ ಬೆಲೆ ಕೆಜಿಗೆ ಸರಾಸರಿ ₹63.70 ತಲುಪಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಸಾಮಾನ್ಯ ಅಕ್ಕಿ ಪ್ರಭೇದಗಳ ಬೆಲೆಯಲ್ಲಿ ಕೆಜಿಗೆ ₹5ರಿಂದ ₹10ರವರೆಗೆ ಹಾಗೂ ಕೆಲವು ಉತ್ತಮ ಗುಣಮಟ್ಟದ ಪ್ರಭೇದಗಳಲ್ಲಿ ₹10ರಿಂದ ₹20ರವರೆಗೆ ಏರಿಕೆ ಕಂಡುಬಂದಿದೆ.

ಅಕ್ಕಿ ಪ್ರಭೇದಪ್ರತಿ ಕೆಜಿಗೆ ಅಂದಾಜು ಬೆಲೆ
ಸೋನಾ ಮಸೂರಿ₹75–₹90
ಸ್ಟೀಮ್ ರೈಸ್₹60–₹90
ಕೋಲಂ ಅಕ್ಕಿ₹75–₹100
ಬಾಸ್ಮತಿ₹115–₹125
ಜೀರಿಗೆ ಅಕ್ಕಿ₹110–₹115
ದಪ್ಪ ಅಕ್ಕಿ₹37–₹42
ಬಾಯ್ಲ್ಡ್ ಅಕ್ಕಿ₹30–₹34

ಮುಂಗಾರು ವೈಫಲ್ಯ, ಭತ್ತದ ಬಿತ್ತನೆಗೆ ಹೊಡೆತ

ಈ ವರ್ಷದ ಅಕ್ಕಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಮುಂಗಾರು ಮಳೆಯ ಕೊರತೆಯೂ ಒಂದು. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಕರ್ನಾಟಕದಲ್ಲಿ ಸಾಮಾನ್ಯ ಮಳೆಗಿಂತ ಸುಮಾರು ಶೇ.35ರಷ್ಟು ಕೊರತೆ ದಾಖಲಾಗಿತ್ತು.

ಭತ್ತ ಬೆಳೆಯುವ ಪ್ರಮುಖ ಪ್ರದೇಶಗಳಾದ ಕೊಪ್ಪಳ, ಗಂಗಾವತಿ, ರಾಯಚೂರು, ಬಳ್ಳಾರಿ, ವಿಜಯನಗರ ಸೇರಿದಂತೆ ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯ ಕೊರತೆ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಯಿತು.

ರಾಜ್ಯದಲ್ಲಿ ಈ ಖಾರಿಫ್ ಹಂಗಾಮಿನಲ್ಲಿ ಸುಮಾರು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ, ಮಳೆ ಕೊರತೆ ಹಾಗೂ ನೀರಾವರಿ ಸಮಸ್ಯೆಯಿಂದಾಗಿ ಬಿತ್ತನೆ ಪ್ರದೇಶ ಸುಮಾರು 6.2 ಲಕ್ಷ ಹೆಕ್ಟೇರ್‌ಗೆ ಸೀಮಿತವಾಗಿದೆ ಎಂದು ಲಭ್ಯ ಕೃಷಿ ವರದಿಗಳು ತಿಳಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭತ್ತದ ಬಿತ್ತನೆ ಪ್ರದೇಶದಲ್ಲಿ ಗಣನೀಯ ಕುಸಿತವಾಗಿದೆ.

ಭತ್ತದ ಕೃಷಿ ಆರಂಭಿಕ ಹಂತದಿಂದ ಕಾಳು(ತೆನೆ) ತುಂಬುವವರೆಗೂ ನಿರ್ದಿಷ್ಟ ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಮಳೆ ಕೈಕೊಟ್ಟಾಗ ರೈತರು ನಾಟಿ ಮುಂದೂಡಬೇಕಾಗುತ್ತದೆ ಅಥವಾ ಕೃಷಿ ಪ್ರದೇಶವನ್ನು ಕಡಿಮೆ ಮಾಡಬೇಕಾಗುತ್ತದೆ. ಕೆಲವರು ನೀರಿನ ಲಭ್ಯತೆಗೆ ಅನುಗುಣವಾಗಿ ಬೇರೆ ಬೆಳೆಗಳಿಗೆ ವರ್ಗಾವಣೆಯಾಗುತ್ತಾರೆ. ಇದರಿಂದ ಭತ್ತದ ಒಟ್ಟು ಉತ್ಪಾದನೆ ಮೇಲೆ ಪರಿಣಾಮ ಉಂಟಾಗುತ್ತದೆ.

ಜಲಾಶಯಗಳ ನೀರಿನ ನಿರ್ವಹಣೆಯೂ ಪ್ರಶ್ನಾರ್ಹ

ರಾಜ್ಯದ ಪ್ರಮುಖ ಭತ್ತದ ಬೆಳೆಯುವ ಪ್ರದೇಶಗಳು ಕಾವೇರಿ, ಕೃಷ್ಣಾ ಮತ್ತು ತುಂಗಭದ್ರಾ ಜಲಾನಯನ ಪ್ರದೇಶಗಳನ್ನು ಅವಲಂಬಿಸಿವೆ. ಮುಂಗಾರು ಮಳೆ ಕಡಿಮೆಯಾದಾಗ ಜಲಾಶಯಗಳ ನೀರಿನ ಸಂಗ್ರಹವೇ ಕೃಷಿಗೆ ಆಸರೆಯಾಗುತ್ತದೆ. ಆದರೆ ಈ ಬಾರಿ ಮಳೆ ಕೊರತೆ ಮತ್ತು ಜಲಾಶಯಗಳ ನೀರಿನ ಲಭ್ಯತೆ ರೈತರಲ್ಲಿ ಆತಂಕ ಮೂಡಿಸಿತು.

ವಿಶೇಷವಾಗಿ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ, ಗೇಟ್ ದುರಸ್ತಿ ಹಾಗೂ ನೀರು ಹಂಚಿಕೆಯ ವಿಚಾರಗಳು ಕೃಷಿ ವಲಯದಲ್ಲಿ ಚರ್ಚೆಗೆ ಕಾರಣವಾದವು. ನೀರಾವರಿಗೆ ಅಗತ್ಯವಿರುವಷ್ಟು ನೀರು ದೊರೆಯದಿರುವುದು ಭತ್ತದ ನಾಟಿ ಮತ್ತು ಬೆಳವಣಿಗೆ ಮೇಲೆ ಪರಿಣಾಮ ಬೀರಿತು.

ಒಂದೆಡೆ ಮಳೆಯ ಕೊರತೆ, ಮತ್ತೊಂದೆಡೆ ಜಲಾಶಯಗಳ ನೀರಿನ ನಿರ್ವಹಣೆಯಲ್ಲಿನ ಮಿತಿಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ನೀರು ಲಭ್ಯವಿರುವ ಪ್ರದೇಶಗಳಲ್ಲಿಯೂ ಬೆಳೆಗಳಿಗೆ ಯಾವ ಆದ್ಯತೆಯಲ್ಲಿ ನೀರು ಒದಗಿಸಬೇಕು ಎಂಬುದರ ಬಗ್ಗೆ ಮುಂಚಿತವಾದ ವೈಜ್ಞಾನಿಕ ಯೋಜನೆ ಅಗತ್ಯವಿತ್ತು. ಕುಡಿಯುವ ನೀರು, ಪರಿಸರದ ಅಗತ್ಯ ಮತ್ತು ಕೃಷಿ ನೀರಾವರಿಯ ನಡುವೆ ಸಮತೋಲನ ಸಾಧಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಹವಾಮಾನ ವೈಪರೀತ್ಯದ ವೈಜ್ಞಾನಿಕ ಪರಿಣಾಮ

ಭತ್ತದ ಉತ್ಪಾದನೆ ಕುಸಿತಕ್ಕೆ ಕೇವಲ ಮಳೆಯ ಕೊರತೆಯೇ ಕಾರಣವಲ್ಲ. ಜಾಗತಿಕ ಹವಾಮಾನ ಬದಲಾವಣೆ, ತಾಪಮಾನ ಏರಿಕೆ, ಮಳೆಯ ಅನಿಯಮಿತ ಹಂಚಿಕೆ ಮತ್ತು ಮಣ್ಣಿನ ತೇವಾಂಶದ ಕೊರತೆಯೂ ಪ್ರಮುಖ ಪಾತ್ರ ವಹಿಸುತ್ತವೆ.

ಭತ್ತವು ಹೆಚ್ಚು ನೀರು ಅಗತ್ಯವಿರುವ ಬೆಳೆಯಾಗಿರುವುದರಿಂದ ಸಸಿ ನಾಟಿ, ಕವಲು ಒಡೆಯುವಿಕೆ, ಹೂಬಿಡುವಿಕೆ ಮತ್ತು ಕಾಳು ತುಂಬುವ ಹಂತಗಳಲ್ಲಿ ನೀರಿನ ಲಭ್ಯತೆ ಅತ್ಯಂತ ಮುಖ್ಯ. ದೀರ್ಘಾವಧಿಯ ಶುಷ್ಕ ವಾತಾವರಣದಿಂದ ಮಣ್ಣಿನ ತೇವಾಂಶ ಕಡಿಮೆಯಾದರೆ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಎಲೆಗಳು ಮುದುಡಿಕೊಳ್ಳುವುದು, ದ್ಯುತಿಸಂಶ್ಲೇಷಣೆಯ ಪ್ರಮಾಣ ಕಡಿಮೆಯಾಗುವುದು ಮತ್ತು ಗಿಡದಲ್ಲಿ ಸಂಗ್ರಹವಾಗುವ ಆಹಾರ ಪದಾರ್ಥಗಳ ಪ್ರಮಾಣ ಇಳಿಯುವುದು ಮುಂತಾದ ಪರಿಣಾಮಗಳು ಉಂಟಾಗುತ್ತವೆ.

ಇದಲ್ಲದೆ ತಾಪಮಾನ ಏರಿಕೆಯೂ ಭತ್ತದ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಭತ್ತದ ಹೂಬಿಡುವ ಹಂತದಲ್ಲಿ ಹೆಚ್ಚಿನ ತಾಪಮಾನ ಉಂಟಾದರೆ ಪರಾಗದ ರೇಣುಗಳ ಜೀವಂತಿಕೆ ಮತ್ತು ಪರಾಗಸ್ಪರ್ಶ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಸಾಮಾನ್ಯವಾಗಿ ಹಗಲಿನ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಕೆಲವು ಭತ್ತದ ತಳಿಗಳಲ್ಲಿ ಪರಾಗದ ಫಲವತ್ತತೆ ಕುಸಿಯುವ ಅಪಾಯವಿದೆ. ಇದರಿಂದ ತೆನೆಗಳಲ್ಲಿ ಕಾಳುಗಳು ಸರಿಯಾಗಿ ತುಂಬದೆ ಜೊಳ್ಳು ಕಾಳುಗಳ ಪ್ರಮಾಣ ಹೆಚ್ಚಾಗಬಹುದು.

ರಾತ್ರಿಯ ತಾಪಮಾನ ಹೆಚ್ಚಳವೂ ಭತ್ತದ ಬೆಳೆಗೆ ಹಾನಿಕಾರಕ. ರಾತ್ರಿ ವೇಳೆಯಲ್ಲಿ ಗಿಡದ ಉಸಿರಾಟದ ಕ್ರಿಯೆ ಹೆಚ್ಚಾಗಿ ದ್ಯುತಿಸಂಶ್ಲೇಷಣೆಯಿಂದ ಸಂಗ್ರಹಿಸಿದ ಶಕ್ತಿಯ ಹೆಚ್ಚಿನ ಭಾಗ ವ್ಯಯವಾಗುತ್ತದೆ. ಇದರಿಂದ ಕಾಳು ತುಂಬುವ ಅವಧಿ ಮತ್ತು ಧಾನ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಕೆಲವು ವೈಜ್ಞಾನಿಕ ಅಧ್ಯಯನಗಳು ರಾತ್ರಿಯ ತಾಪಮಾನದಲ್ಲಿನ ಸಣ್ಣ ಏರಿಕೆಯೂ ಭತ್ತದ ಇಳುವರಿ ಕುಸಿತಕ್ಕೆ ಕಾರಣವಾಗಬಹುದು ಎಂದು ತೋರಿಸಿವೆ. ಆದರೆ, ಇದರ ಪರಿಣಾಮ ತಳಿ, ಬೆಳವಣಿಗೆಯ ಹಂತ ಮತ್ತು ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಮಳೆಯ ಪ್ರಮಾಣ ಸಾಮಾನ್ಯವಾಗಿದ್ದರೂ ಕೆಲವೇ ದಿನಗಳಲ್ಲಿ ಅತಿಯಾದ ಮಳೆ ಸುರಿದು ನಂತರ ದೀರ್ಘಕಾಲ ಒಣ ಹವಾಮಾನ ಮುಂದುವರಿಯುವ ಪ್ರವೃತ್ತಿಯೂ ಕೃಷಿಗೆ ಸವಾಲಾಗಿದೆ. ಹೀಗಾಗಿ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕಡಿಮೆ ನೀರು ಬೇಡುವ ಭತ್ತದ ತಳಿಗಳು, ಬರ ಸಹಿಷ್ಣು ತಳಿಗಳು ಮತ್ತು ಸುಧಾರಿತ ಕೃಷಿ ತಂತ್ರಜ್ಞಾನಗಳ ಬಳಕೆ ಅತ್ಯಗತ್ಯವಾಗಿದೆ.

ವಾಣಿಜ್ಯ ಬೆಳೆಗಳ ವ್ಯಾಮೋಹದಿಂದ ಆಹಾರ ಸಮತೋಲನ ನಷ್ಟ

ಅಕ್ಕಿ ಬೆಲೆ ಏರಿಕೆಯ ಮತ್ತೊಂದು ಪ್ರಮುಖ ಆಯಾಮ ಆಹಾರ ಬೆಳೆಗಳ ಕೃಷಿ ಪ್ರದೇಶ ಕುಸಿಯುತ್ತಿರುವುದು. ಮಲೆನಾಡು, ಅರೆಮಲೆನಾಡು, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಿಂದೆ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಕ್ರಮೇಣ ಅಡಿಕೆ, ತೆಂಗು ಮತ್ತಿತರ ವಾಣಿಜ್ಯ ಬೆಳೆಗಳ ತೋಟಗಳಾಗಿ ಪರಿವರ್ತನೆಯಾಗಿವೆ.

ವಾಣಿಜ್ಯ ಬೆಳೆಗಳಿಂದ ಹೆಚ್ಚಿನ ಆದಾಯ ದೊರೆಯುವ ನಿರೀಕ್ಷೆಯಲ್ಲಿ ರೈತರು ಆಹಾರ ಬೆಳೆಗಳಿಂದ ದೂರವಾಗುತ್ತಿದ್ದಾರೆ. ಈ ಬದಲಾವಣೆಗೆ ರೈತರನ್ನು ಮಾತ್ರ ಹೊಣೆ ಮಾಡಲಾಗದು. ಕೃಷಿಯ ವೆಚ್ಚ, ಬೆಳೆಗಳಿಗೆ ದೊರೆಯುವ ಬೆಲೆ, ಮಾರುಕಟ್ಟೆಯ ಅನಿಶ್ಚಿತತೆ, ಕಾರ್ಮಿಕರ ಕೊರತೆ ಮತ್ತು ನೀರಿನ ಲಭ್ಯತೆ ಕೂಡ ರೈತರ ನಿರ್ಧಾರವನ್ನು ಪ್ರಭಾವಿಸುತ್ತವೆ.

ಆದರೆ, ಒಂದು ಪ್ರದೇಶದ ಕೃಷಿ ವ್ಯವಸ್ಥೆಯೇ ಆಹಾರ ಧಾನ್ಯಗಳ ಉತ್ಪಾದನೆಯಿಂದ ವಾಣಿಜ್ಯ ಬೆಳೆಗಳ ಕಡೆಗೆ ಸಂಪೂರ್ಣವಾಗಿ ವಾಲಿದರೆ ದೀರ್ಘಾವಧಿಯಲ್ಲಿ ಆಹಾರ ಭದ್ರತೆಗೆ ಸಮಸ್ಯೆ ಎದುರಾಗಬಹುದು. ಒಂದು ಕಾಲದಲ್ಲಿ ಮನೆಗಳಲ್ಲಿ ಅಕ್ಕಿ, ರಾಗಿ, ಜೋಳದ ಚೀಲಗಳ ಸಂಗ್ರಹವೇ ಕುಟುಂಬದ ಸಮೃದ್ಧಿಯ ಸಂಕೇತವಾಗಿತ್ತು. ಇಂದು ಭತ್ತ ಬೆಳೆಯುತ್ತಿದ್ದ ರೈತರೇ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತ ಮುಖಂಡರ ಆಕ್ರೋಶ: ಸರ್ಕಾರಕ್ಕೆ ದೂರದೃಷ್ಟಿ ಇರಬೇಕಿತ್ತು

ಚಾಮರಾಜನಗರ ಜಿಲ್ಲೆಯ ರೈತ ಸಂಘದ ಹಿರಿಯ ಮುಖಂಡ ಹೊನ್ನೂರು ಪ್ರಕಾಶ್ ಅವರು ಈದಿನ.ಕಾಮ್ ಜೊತೆ ಮಾತನಾಡಿ, ಅಕ್ಕಿ ಬೆಲೆ ಕೆಜಿಗೆ ₹100ರ ಗಡಿ ದಾಟುತ್ತಿರುವುದು ಸಾಮಾನ್ಯ ಜನರ ಬದುಕಿಗೆ ದೊಡ್ಡ ಹೊಡೆತ ನೀಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

“ಬರಗಾಲ ಇದೆ ಎನ್ನುವುದು ನಿಜ. ಪ್ರಕೃತಿಯ ವಿರುದ್ಧ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಮಳೆ ಇಲ್ಲದ ಸಂದರ್ಭದಲ್ಲಿ ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬಹುದು, ಆಹಾರ ಸಮತೋಲನವನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಸರ್ಕಾರ ಕೃಷಿ ಪರಿಣಿತರು ಮತ್ತು ಅನುಭವ ಹೊಂದಿರುವ ರೈತರೊಂದಿಗೆ ಚರ್ಚಿಸಬೇಕಿತ್ತು. ಮಳೆ ಇಲ್ಲದಿದ್ದರೂ ಸಾಧ್ಯವಾದಷ್ಟು ಭತ್ತ ಬೆಳೆದಿದ್ದಾರೆ. ಜಲಾಶಯಗಳಿಂದ ಕೃಷಿಗೆ ಅಗತ್ಯವಿರುವ ನೀರನ್ನು ಸಮರ್ಪಕವಾಗಿ ಒದಗಿಸಿದ್ದರೆ ಇನ್ನಷ್ಟು ಪ್ರದೇಶದಲ್ಲಿ ಭತ್ತ ಬೆಳೆಯಲು ಸಾಧ್ಯವಿತ್ತು. ಹನೂರು ಮತ್ತು ಮಲೆ ಮಹದೇಶ್ವರ ಬೆಟ್ಟದ ಭಾಗಗಳಲ್ಲಿ ಬಿದ್ದ ಮಳೆಯ ನೀರು ತಮಿಳುನಾಡಿನ ಕಡೆ ಹರಿದುಹೋಯಿತು. ನಮ್ಮ ಜಲಾಶಯಗಳಿಂದಲೂ ನೀರು ಹರಿಯಿತು. ಆದರೆ ರೈತರ ಸಂಕಷ್ಟಕ್ಕೆ ತಕ್ಕ ಗಮನ ನೀಡಲಿಲ್ಲ. ಇಂದಿನ ಪರಿಸ್ಥಿತಿಗೆ ಸರ್ಕಾರದ ದೂರದೃಷ್ಟಿಯ ಕೊರತೆಯೂ ಕಾರಣ” ಎಂದು ಆರೋಪಿಸಿದರು.

ರೈತ ಮುಖಂಡ ಮಂಜು ಕಿರಣ್ ಮಾತನಾಡಿ, ಅಕ್ಕಿ ಬೆಲೆ ಏರಿಕೆಯೊಂದಿಗೆ ಕಾಳಸಂತೆ ಮತ್ತು ಅಕ್ರಮ ದಾಸ್ತಾನು ಹೆಚ್ಚಾಗುವ ಅಪಾಯವಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಮಾರುಕಟ್ಟೆಯ ಮೇಲೆ ನಿಗಾ ವಹಿಸಬೇಕು ಎಂದರು.

“ಜನರಿಗೆ ಅಗತ್ಯ ಪ್ರಮಾಣದಲ್ಲಿ ಅಕ್ಕಿ ಒದಗಿಸಲು ಸಾಧ್ಯವಾಗದಿದ್ದರೆ ನವಣೆ, ಸಜ್ಜೆ, ರಾಗಿ, ಜೋಳ, ಕಡಲೆ ಮತ್ತು ಬೇಳೆಕಾಳುಗಳಂತಹ ಪರ್ಯಾಯ ಆಹಾರ ಪದಾರ್ಥಗಳನ್ನು ಪಡಿತರ ವ್ಯವಸ್ಥೆಯಲ್ಲಿ ಒದಗಿಸುವ ಬಗ್ಗೆ ಯೋಚಿಸಬೇಕು. ಹೊರದೇಶಗಳಿಂದ ಆಮದು ಮಾಡಿಕೊಳ್ಳುವುದಕ್ಕಿಂತ ಅಗತ್ಯವಿದ್ದಾಗ ನೆರೆಯ ರಾಜ್ಯಗಳಿಂದಲೂ ಆಹಾರ ಧಾನ್ಯಗಳನ್ನು ಖರೀದಿಸುವ ವ್ಯವಸ್ಥೆ ಮಾಡಬಹುದು. ಪಡಿತರದಲ್ಲಿ ಹಣ ನೀಡುವುದಕ್ಕಿಂತ ಜನರಿಗೆ ನೇರವಾಗಿ ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸುವುದು ಹೆಚ್ಚು ಪ್ರಯೋಜನಕಾರಿ. ಬೆಲೆ ಏರಿಕೆಯ ಸಂದರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಸಲಹೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಅಣೆಕಟ್ಟುಗಳನ್ನು ನಿರ್ಮಿಸಿರುವುದು ಜನರ ಮತ್ತು ಕೃಷಿಯ ಅಗತ್ಯಗಳನ್ನು ಪೂರೈಸುವುದಕ್ಕಾಗಿ. ಮಳೆ ಕೊರತೆಯ ಸಂದರ್ಭದಲ್ಲಿ ರೈತರಿಗೆ ನೀರು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

“ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀರಿನ ಕೊರತೆಯ ಕಾರಣದಿಂದ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ ನೀಡಿದ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ, ರೈತರು ಬೆಳೆ ಬೆಳೆಯದಿದ್ದರೆ ಮುಂದೆ ಜನರು ತಿನ್ನುವುದೇನು ಎಂಬುದನ್ನು ಸರ್ಕಾರ ಯೋಚಿಸಬೇಕಿತ್ತು. ಟಿ. ನರಸೀಪುರ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಭತ್ತ ಬೆಳೆಯಲು ಸಾಧ್ಯವಾಗಿಲ್ಲ. ಈಗ ಉತ್ಪಾದನೆ ಕುಸಿತದಿಂದ ಅಕ್ಕಿ ಬೆಲೆ ಏರಿಕೆಯಾಗಿದ್ದು, ಮುಂದೆ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ” ಎಂದರು.

ಬೆಂಗಳೂರಿನ ನೈಜ ಹೋರಾಟಗಾರ ವೇದಿಕೆಯ ಎಚ್.ಎಂ. ವೆಂಕಟೇಶ್ ಮಾತನಾಡಿ, ಆಹಾರ ಬೆಳೆಗಳ ಕೃಷಿ ಪ್ರದೇಶ ವಾಣಿಜ್ಯ ಬೆಳೆಗಳ ತೋಟಗಳಾಗಿ ಬದಲಾಗುತ್ತಿರುವುದೇ ದೀರ್ಘಕಾಲೀನ ಸಮಸ್ಯೆ ಎಂದು ಅಭಿಪ್ರಾಯಪಟ್ಟರು.

“ಮಲೆನಾಡು, ಅರೆಮಲೆನಾಡು, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಇಂದು ಅಡಿಕೆ, ತೆಂಗು ಮತ್ತಿತರ ವಾಣಿಜ್ಯ ಬೆಳೆಗಳ ತೋಟಗಳಾಗಿವೆ. ರೈತರಿಗೆ ಹೆಚ್ಚಿನ ಆದಾಯದ ನಿರೀಕ್ಷೆ ಮೂಡಿಸಿರುವ ವಾಣಿಜ್ಯ ಬೆಳೆಗಳತ್ತ ಆಕರ್ಷಣೆ ಹೆಚ್ಚಿದೆ. ಹಿಂದೆ ಮನೆಗಳಲ್ಲಿ ಅಕ್ಕಿ, ರಾಗಿ ಚೀಲಗಳ ಸಂಗ್ರಹವೇ ಸಮೃದ್ಧಿಯ ಸಂಕೇತವಾಗಿತ್ತು. ಈಗ ಆರ್ಥಿಕ ಸಮೃದ್ಧಿಯನ್ನು ಕಾರು, ಐಷಾರಾಮಿ ಬದುಕಿನ ಮೂಲಕ ಅಳೆಯುವ ಪ್ರವೃತ್ತಿ ಹೆಚ್ಚಾಗಿದೆ. ಭತ್ತ ಬೆಳೆಯುತ್ತಿದ್ದ ರೈತರೇ ಇಂದು ಅಕ್ಕಿ ಖರೀದಿಸುವಂತಾಗಿದೆ. ಆಹಾರ ಸಮತೋಲನ ಕಾಪಾಡುವ ಬಗ್ಗೆ ಕೃಷಿ ಇಲಾಖೆ ಮತ್ತು ಸರ್ಕಾರ ಸೂಕ್ತ ಅರಿವು ಮೂಡಿಸದಿರುವುದೂ ಇದಕ್ಕೆ ಕಾರಣ” ಎಂದು ಹೇಳಿದರು.

ಮಳವಳ್ಳಿಯಿಂದ ಮಾತನಾಡಿದ ಕೃಷಿಕರಾದ ಎಂ.ವಿ. ಕೃಷ್ಣ, ಈ ಬಾರಿ ಮಂಡ್ಯ ಜಿಲ್ಲೆಯಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಭತ್ತದ ಕೃಷಿ ಸಾಧ್ಯವಾಗಿಲ್ಲ. ಬೆಳೆದಿರುವ ಬೆಳೆಯ ಇಳುವರಿಯೂ ಕಡಿಮೆಯಾಗಿದ್ದು, ರೈತರು ಬೆಳೆದ ಭತ್ತಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೃಷಿ ಕೂಲಿ ಕಾರ್ಮಿಕರಿಗೆ ವೇತನ ನೀಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಭತ್ತದ ಕೃಷಿ ಕೈಬಿಟ್ಟು ನೀಲಗಿರಿ, ಸಾಮೆ ಮರಗಳನ್ನು ಬೆಳೆದು ಮಾರಾಟ ಮಾಡುವ ಪರಿಸ್ಥಿತಿ ಆರಂಭವಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕಿದೆ. ಗ್ಯಾರಂಟಿ ಯೋಜನೆಗಳ ಮಾದರಿಯಲ್ಲಿಯೇ ಭತ್ತ ಕಟಾವಿನ ಸಂದರ್ಭದಲ್ಲಿ ಸರ್ಕಾರವೇ ರೈತರಿಂದ ನೇರವಾಗಿ ಭತ್ತ ಖರೀದಿಸುವ ವ್ಯವಸ್ಥೆ ಜಾರಿಗೆ ತರಬೇಕು. ನ್ಯಾಯಬೆಲೆ ಅಂಗಡಿಗಳ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಅಕ್ಕಿ ವಿತರಿಸಬೇಕು. ಇದರಿಂದ ರೈತರಿಗೆ ಸೂಕ್ತ ಬೆಲೆ ದೊರೆಯುವುದರ ಜೊತೆಗೆ ಮಧ್ಯವರ್ತಿಗಳ ಹಾವಳಿಯೂ ತಪ್ಪಲಿದೆ. ಸರ್ಕಾರ ರೈತರನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶವಿದ್ದರೆ ರೈತರಿಂದ ನೇರವಾಗಿ ಭತ್ತ ಖರೀದಿಸಿ, ಅದನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಜನರಿಗೆ ತಲುಪಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಪರಿಣಾಮಕಾರಿ ಮಾರ್ಗವಾಗಿದೆ. ಇದರಿಂದ ರೈತರು ಮತ್ತು ಗ್ರಾಹಕರು ಇಬ್ಬರಿಗೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಬೆಲೆ ನಿಯಂತ್ರಣಕ್ಕೆ ತಕ್ಷಣದ ಕ್ರಮ ಅಗತ್ಯ

ಅಕ್ಕಿ ಬೆಲೆ ಏರಿಕೆಯನ್ನು ಕೇವಲ ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯ ಸಮಸ್ಯೆಯಾಗಿ ನೋಡಲು ಸಾಧ್ಯವಿಲ್ಲ. ಇದು ಕೃಷಿ ನೀತಿ, ನೀರಾವರಿ ನಿರ್ವಹಣೆ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆಯೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಕರ್ನಾಟಕದ ಮಾರುಕಟ್ಟೆಯಲ್ಲಿ ಅಕ್ಕಿಯ ಕೊರತೆ ಎದುರಾದಾಗ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಂದ ಪೂರೈಕೆ ಹೆಚ್ಚಿಸುವ ಅಗತ್ಯವಿದೆ. ಆದರೆ,ಸಾರಿಗೆ ವೆಚ್ಚ, ಸಂಗ್ರಹಣೆ ಮತ್ತು ಸಗಟು ಮಾರುಕಟ್ಟೆಯ ಬೆಲೆಗಳೂ ಅಂತಿಮವಾಗಿ ಗ್ರಾಹಕರಿಗೆ ವರ್ಗಾವಣೆಯಾಗುತ್ತವೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿಯ ದಾಸ್ತಾನು, ಮಾರುಕಟ್ಟೆ ಆವಕ, ಸಗಟು ಮತ್ತು ಚಿಲ್ಲರೆ ಬೆಲೆಗಳ ಬಗ್ಗೆ ನಿರಂತರ ನಿಗಾ ವಹಿಸಬೇಕು. ಕೃತಕ ಅಭಾವ ಸೃಷ್ಟಿಸುವುದು, ಅಕ್ರಮ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಹೆಚ್ಚುವರಿ ಅಕ್ಕಿ ವಿತರಣೆ ಹಾಗೂ ಕಡಿಮೆ ಬೆಲೆಯ ಆಹಾರ ಧಾನ್ಯಗಳ ಲಭ್ಯತೆಯನ್ನು ಖಚಿತಪಡಿಸಬೇಕು.

ಇದರೊಂದಿಗೆ ಭತ್ತ ಬೆಳೆಯುವ ಪ್ರದೇಶಗಳ ಸಂರಕ್ಷಣೆ, ರೈತರಿಗೆ ಸಮರ್ಪಕ ನೀರಾವರಿ, ಉತ್ತಮ ಗುಣಮಟ್ಟದ ಬೀಜ, ಬರ ಸಹಿಷ್ಣು ತಳಿಗಳ ವಿತರಣೆ ಮತ್ತು ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಒದಗಿಸುವ ದೀರ್ಘಕಾಲೀನ ಯೋಜನೆ ರೂಪಿಸಬೇಕು. ರಾಗಿ, ಜೋಳ, ನವಣೆ, ಸಜ್ಜೆ ಮತ್ತು ಬೇಳೆಕಾಳುಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸೇರಿಸುವ ಮೂಲಕ ಆಹಾರ ಪದ್ಧತಿಯ ವೈವಿಧ್ಯತೆಯನ್ನು ಹೆಚ್ಚಿಸಬೇಕು.

ಈ ವಿಶೇಷ ವರದಿ ಓದಿದ್ದೀರಾ?ಕಬ್ಬು ಬೆಳೆಗಾರರ ಬದುಕಿಗೆ ಸಿಹಿಯಾಗದ ಕಬ್ಬಿನ ಬೆಲೆ!

ಒಟ್ಟಿನಲ್ಲಿ ಅಕ್ಕಿ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಬೀಳುತ್ತಿರುವ ಹೊರೆ ಮಾತ್ರವಲ್ಲ; ರಾಜ್ಯದ ಕೃಷಿ ವ್ಯವಸ್ಥೆಯಲ್ಲಿನ ಅಸಮತೋಲನ, ನೀರಿನ ನಿರ್ವಹಣೆಯ ಸವಾಲು ಮತ್ತು ಆಹಾರ ಭದ್ರತೆಯ ದೂರದೃಷ್ಟಿಯ ಕೊರತೆಯನ್ನೂ ಎತ್ತಿ ತೋರಿಸಿದೆ. ಭತ್ತ ಬೆಳೆಯುವ ರೈತನಿಗೆ ಲಾಭದಾಯಕ ಬೆಲೆ ದೊರೆಯಬೇಕು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಆಹಾರ ಸಿಗಬೇಕು. ಈ ಎರಡರ ನಡುವೆ ಸಮತೋಲನ ಸಾಧಿಸುವುದೇ ಸರ್ಕಾರದ ಪ್ರಮುಖ ಜವಾಬ್ದಾರಿ. ಇಲ್ಲವಾದರೆ ಇಂದು ಅಕ್ಕಿ ಬೆಲೆ ಏರಿಕೆಯಿಂದ ಆರಂಭವಾಗಿರುವ ಸಂಕಷ್ಟ ಮುಂದಿನ ದಿನಗಳಲ್ಲಿ ಇತರ ಆಹಾರ ಧಾನ್ಯಗಳಿಗೂ ವಿಸ್ತರಿಸುವ ಅಪಾಯವಿದೆ.

WhatsApp Image 2025 02 05 at 18.09.20
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಬಸ್ ದರ ಏರಿಕೆ ಬರೆ; ಸರ್ಕಾರದ ವಿರುದ್ಧ ಸಿಪಿಐಎಂ ಆಕ್ರೋಶ

ರಾಜ್ಯದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಮೇಲೆ...

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ...

56% ಮೀಸಲಾತಿಗೆ ಹೈಕೋರ್ಟ್ ತಡೆ: ಶೋಷಿತರ ಸಾಮಾಜಿಕ ನ್ಯಾಯಕ್ಕಾಗಿ ರಾಜ್ಯಮಟ್ಟದ ಬೃಹತ್ ಹಕ್ಕೊತ್ತಾಯ ಸಭೆ

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿಯನ್ನು...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು ಹೇಗೆ ಗೊತ್ತೇ?

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ...