2013ರಲ್ಲಿ ಆರಂಭವಾದ ಕ್ಯಾನ್ವಾ, ವೃತ್ತಿಪರ ಗ್ರಾಫಿಕ್ ವಿನ್ಯಾಸದ ಯಾವುದೇ ತಾಂತ್ರಿಕ ಪರಿಣತಿ ಅಥವಾ ಅನುಭವವಿಲ್ಲದ ಸಾಮಾನ್ಯರಿಗೂ ಪೋಸ್ಟರ್ಗಳು, ಪ್ರೆಸೆಂಟೇಷನ್ಗಳು, ಸಾಮಾಜಿಕ ಮಾಧ್ಯಮದ ಚಿತ್ರಗಳು, ವೀಡಿಯೊಗಳು ಹಾಗೂ ಜಾಹೀರಾತುಗಳನ್ನು ಅತ್ಯಂತ ಸುಲಭವಾಗಿ ಸೃಷ್ಟಿಸುವ ಅವಕಾಶವನ್ನು ಕಲ್ಪಿಸಿತ್ತು. ಸಂಕೀರ್ಣ ಮತ್ತು ದುಬಾರಿ ವಿನ್ಯಾಸ ತಂತ್ರಾಂಶಗಳ ಬದಲಾಗಿ ಸರಳವಾದ ‘ಡ್ರ್ಯಾಗ್ ಆ್ಯಂಡ್ ಡ್ರಾಪ್’ ವ್ಯವಸ್ಥೆ, ಸಾವಿರಾರು ಸಿದ್ಧ ಟೆಂಪ್ಲೇಟ್ಗಳು ಹಾಗೂ ಉಚಿತ ಸೇವೆಗಳ ಮಾದರಿಗಳಿಂದ ಜಾಗತಿಕ ಮಟ್ಟದಲ್ಲಿ ಕಂಪನಿಯು ಕೋಟ್ಯಂತರ ಬಳಕೆದಾರರನ್ನು ಸಂಪಾದಿಸಿತ್ತು.
ಜಾಗತಿಕ ಗ್ರಾಫಿಕ್ ವಿನ್ಯಾಸ ವಲಯದಲ್ಲಿ ಕ್ರಾಂತಿ ಸೃಷ್ಟಿಸಿದ್ದ ಆಸ್ಟ್ರೇಲಿಯಾ ಮೂಲದ ಸಂಸ್ಥೆ ‘ಕ್ಯಾನ್ವಾ’ (Canva), ತನ್ನ 13 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಬೃಹತ್ ಸಾಂಸ್ಥಿಕ ಪುನರ್ರಚನೆಯನ್ನು ಘೋಷಿಸಿದೆ. ತನ್ನ ಒಟ್ಟು ಸಿಬ್ಬಂದಿಗಳಲ್ಲಿ 22% ಅಂದರೆ, ಒಟ್ಟು 1,271 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಈ ಆಘಾತಕಾರಿ ಸಂದೇಶವನ್ನು ತಮ್ಮ ಸಿಬ್ಬಂದಿಗಳಿಗೆ ರವಾನಿಸಿರುವ ಕಂಪನಿಯ ಸಹಸಂಸ್ಥಾಪಕಿ, ಸಿಇಒ ಮೆಲಾನಿ ಪರ್ಕಿನ್ಸ್, “ಕಳೆದ ಒಂದು ದಶಕದಲ್ಲಿ ಕಂಪನಿಯ ಬೆಳವಣಿಗೆಯ ವೇಗವು ಗಮನಾರ್ಹವಾಗಿ ನಿಧಾನಗೊಂಡಿದೆ. ಸಂಸ್ಥೆಯ ನಿರ್ವಹಣೆ ಮತ್ತು ವೆಚ್ಚವನ್ನು ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದಿದ್ದಾರೆ.
ಈ ಬೆಳವಣಿಗೆಯು ಕೇವಲ ಕ್ಯಾನ್ವಾ ಸಂಸ್ಥೆಗೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಬದಲಿಗೆ, ಜಾಗತಿಕ ಸಾಫ್ಟ್ವೇರ್ ಮತ್ತು ಟೆಕ್ ಉದ್ಯಮವು ಕೃತಕ ಬುದ್ಧಿಮತ್ತೆಯ (AI) ಹೊಡೆತದಿಂದ ಎದುರಿಸುತ್ತಿರುವ ಗಂಭೀರ ಆರ್ಥಿಕ ಮತ್ತು ತಾಂತ್ರಿಕ ಬಿಕ್ಕಟ್ಟಿನ ವಾಸ್ತವಿಕ ಚಿತ್ರಣವನ್ನು ತೆರೆದಿಟ್ಟಿದೆ.
2013ರಲ್ಲಿ ಆರಂಭವಾದ ಕ್ಯಾನ್ವಾ, ವೃತ್ತಿಪರ ಗ್ರಾಫಿಕ್ ವಿನ್ಯಾಸದ ಯಾವುದೇ ತಾಂತ್ರಿಕ ಪರಿಣತಿ ಅಥವಾ ಅನುಭವವಿಲ್ಲದ ಸಾಮಾನ್ಯರಿಗೂ ಪೋಸ್ಟರ್ಗಳು, ಪ್ರೆಸೆಂಟೇಷನ್ಗಳು, ಸಾಮಾಜಿಕ ಮಾಧ್ಯಮದ ಚಿತ್ರಗಳು, ವೀಡಿಯೊಗಳು ಹಾಗೂ ಜಾಹೀರಾತುಗಳನ್ನು ಅತ್ಯಂತ ಸುಲಭವಾಗಿ ಸೃಷ್ಟಿಸುವ ಅವಕಾಶವನ್ನು ಕಲ್ಪಿಸಿತ್ತು. ಸಂಕೀರ್ಣ ಮತ್ತು ದುಬಾರಿ ವಿನ್ಯಾಸ ತಂತ್ರಾಂಶಗಳ ಬದಲಾಗಿ ಸರಳವಾದ ‘ಡ್ರ್ಯಾಗ್ ಆ್ಯಂಡ್ ಡ್ರಾಪ್’ ವ್ಯವಸ್ಥೆ, ಸಾವಿರಾರು ಸಿದ್ಧ ಟೆಂಪ್ಲೇಟ್ಗಳು ಹಾಗೂ ಉಚಿತ ಸೇವೆಗಳ ಮಾದರಿಗಳಿಂದ ಜಾಗತಿಕ ಮಟ್ಟದಲ್ಲಿ ಕಂಪನಿಯು ಕೋಟ್ಯಂತರ ಬಳಕೆದಾರರನ್ನು ಸಂಪಾದಿಸಿತ್ತು. ಶಿಕ್ಷಕರು, ವಿದ್ಯಾರ್ಥಿಗಳು, ಸಣ್ಣ ಪ್ರಮಾಣದ ಉದ್ಯಮಿಗಳು, ಮಾರ್ಕೆಟಿಂಗ್ ಸಂಸ್ಥೆಗಳು, ಪತ್ರಕರ್ತರು ಹಾಗೂ ಹವ್ಯಾಸಿ ಕ್ರಿಯೇಟರ್ಗಳು ಕ್ಯಾನ್ವಾದ ಪ್ರಮುಖ ಗ್ರಾಹಕರಾದರು.
2025ರ ಅಂತ್ಯದ ವೇಳೆಗೆ ಕ್ಯಾನ್ವಾ ಭಾರೀ ಯಶಸ್ಸನ್ನೂ ಕಂಡಿತ್ತು. 26.5 ಕೋಟಿಗೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಮತ್ತು 3.1 ಕೋಟಿಗೂ ಹೆಚ್ಚು ಪಾವತಿದಾರ ಚಂದಾದಾರರನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿತ್ತು.
ಆದರೆ, 2026ರ ಆರಂಭದಿಂದ ಕಂಪನಿಯ ಬೆಳವಣಿಗೆಯ ಲೆಕ್ಕಾಚಾರಗಳು ತಲೆಗಾಗಲಾರಂಭಿಸಿದವು. ಆಗಸ್ಟ್ ತಿಂಗಳಲ್ಲಿ ಕ್ಯಾನ್ವಾ ತನ್ನ ವಾರ್ಷಿಕ ಆದಾಯ ಬೆಳವಣಿಗೆಯ ಅಂದಾಜನ್ನು 30%ರಿಂದ 20%ಕ್ಕೆ ಹಠಾತ್ತನೆ ಕಡಿತಗೊಳಿಸಿತು. AI ಆಧಾರಿತ ಸೇವೆಗಳನ್ನು ತನ್ನ ವೇದಿಕೆಯಲ್ಲಿ ಅಳವಡಿಸಲು ನಿರೀಕ್ಷೆಗಿಂತಲೂ ಹೆಚ್ಚಿನ ಹಣಕಾಸಿನ ವೆಚ್ಚವೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಿಕೊಂಡಿತ್ತು. ಗ್ರಾಹಕರಿಂದ AI ಉತ್ಪನ್ನಗಳಿಗೆ ಭಾರೀ ಬೇಡಿಕೆ ಬರುತ್ತಿದ್ದರೂ, ಆ ಬೇಡಿಕೆಯನ್ನು ಕಂಪನಿಗೆ ಲಾಭದಾಯಕವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನೂ ಕಂಪನಿ ಗುರುತಿಸಿತ್ತು.
ಸಾಂಪ್ರದಾಯಿಕ ಸಾಫ್ಟ್ವೇರ್ ಕಾರ್ಯ ಮಾದರಿಗೂ ಮತ್ತು AI ಆಧಾರಿತ ಸಾಫ್ಟ್ವೇರ್ ಕಾರ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಾಂಪ್ರದಾಯಿಕ ವಿನ್ಯಾಸ ತಂತ್ರಾಂಶಗಳಲ್ಲಿ ಬಳಕೆದಾರರು ಅಸ್ತಿತ್ವದಲ್ಲಿರುವ ಸಿದ್ಧ ಟೆಂಪ್ಲೇಟ್ ಅನ್ನು ಆಯ್ಕೆಮಾಡುವುದು, ಅದಕ್ಕೆ ಫೋಟೋ ಸೇರಿಸುವುದು ಅಥವಾ ಪಠ್ಯ ಬದಲಾಯಿಸುವಂತಹ ಸರಳ ಕೆಲಸಗಳನ್ನು ಮಾಡುತ್ತಾರೆ. ಇಂತಹ ಸೇವೆಗಳಿಗೆ ಕಂಪನಿಯ ಸರ್ವರ್ ಮತ್ತು ಸಾಮಾನ್ಯ ತಾಂತ್ರಿಕ ವೆಚ್ಚಗಳಿದ್ದರೂ, ಪ್ರತಿ ಹೊಸ ಕ್ರಿಯೆಗೂ ಸಂಕೀರ್ಣ ಲೆಕ್ಕಾಚಾರಗಳ ಅಗತ್ಯವಿರಲಿಲ್ಲ.
ಆದರೆ, AI ಮೂಲಕ ಸಂಪೂರ್ಣ ಹೊಸದಾಗಿ ಚಿತ್ರ, ವಿಡಿಯೋ, ಪ್ರೆಸೆಂಟೇಷನ್ ಅಥವಾ ವಿನ್ಯಾಸವನ್ನು ಸೃಷ್ಟಿಸುವ ಪ್ರತಿಯೊಂದು ವಿನಂತಿಗೂ ಅಪಾರ ಪ್ರಮಾಣದ ಕಂಪ್ಯೂಟರಿಂಗ್ ಸಂಪನ್ಮೂಲಗಳು ಮತ್ತು ವಿದ್ಯುತ್ ಶಕ್ತಿ ಬೇಕು. ತಂತ್ರಜ್ಞಾನ ಜಗತ್ತಿನಲ್ಲಿ ಇದನ್ನು ‘ಇನ್ಫರೆನ್ಸ್ ವೆಚ್ಚ’ ಎಂದು ಕರೆಯಲಾಗುತ್ತದೆ.
ಇದರ ಜೊತೆಗೆ, ಕ್ಯಾನ್ವಾ ತನ್ನ ಪ್ಲಾಟ್ಫಾರ್ಮ್ನಲ್ಲಿ ಒದಗಿಸುವ ಪ್ರಮುಖ AI ವೈಶಿಷ್ಟ್ಯಗಳಿಗಾಗಿ ಇತರ ಬಾಹ್ಯ AI ಮಾದರಿ ಪೂರೈಕೆದಾರರ ತಂತ್ರಜ್ಞಾನವನ್ನೂ ಅವಲಂಬಿಸಬೇಕಿದೆ. ಹೀಗಾಗಿ, ಹೊರಗಿನವರಿಗೆ ಪಾವತಿಸಬೇಕಾದ ಪರವಾನಗಿ ಶುಲ್ಕ ಮತ್ತು ಸರ್ವರ್ ನಿರ್ವಹಣಾ ವೆಚ್ಚವು ಕ್ಯಾನ್ವಾದ ನಿವ್ವಳ ಲಾಭವನ್ನು ಸಂಪೂರ್ಣವಾಗಿ ಕಬಳಿಸುತ್ತಿವೆ. “AI ವೈಶಿಷ್ಟ್ಯಗಳಿಗೆ ಬಳಕೆದಾರರಿಂದ ಬಂದ ಬೇಡಿಕೆಯು ಕಂಪನಿಯ ನಿರೀಕ್ಷೆಗಳನ್ನು ಮೀರಿದೆ; ಆದರೆ, ಆ ವೆಚ್ಚವನ್ನು ಸಮರ್ಥವಾಗಿ ತಗ್ಗಿಸುವವರೆಗೆ AI ಉತ್ಪನ್ನಗಳ ವ್ಯಾಪಕ ವಿಸ್ತರಣೆಯನ್ನು ಕಡ್ಡಾಯವಾಗಿ ನಿಧಾನಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ” ಎಂದು ಸ್ವತಃ ಸಿಇಒ ಮೆಲಾನಿ ಪರ್ಕಿನ್ಸ್ ಅವರೇ ಸ್ಪಷ್ಟಪಸಿದ್ದಾರೆ.
AI ನಿರ್ವಹಣೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವೆಚ್ಚವನ್ನು ಹತೋಟಿಗೆ ತರಲು ಕ್ಯಾನ್ವಾ ಈಗಾಗಲೇ ಹಲವು ಮಾರ್ಗಗಳನ್ನು ಹುಡುಕಿಕೊಂಡು ಹೆಜ್ಜೆಗಳನ್ನು ಇಟ್ಟಿದೆ. ಬಾಹ್ಯ ಕಂಪನಿಗಳ AI ಮಾದರಿಗಳ ಮೇಲಿನ ಅವಲಂಬನೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸಂಸ್ಥೆಯು ತನ್ನದೇ ಆದ ಸ್ವಂತ AI ಮಾದರಿಗಳು ಮತ್ತು ತಾಂತ್ರಿಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ.
ಆ ನಿಟ್ಟಿನಲ್ಲಿ 2026ರ ಏಪ್ರಿಲ್ನಲ್ಲಿ ಪರಿಚಯಿಸಲಾದ ‘ಕ್ಯಾನ್ವಾ 2.0’ಅನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸುವಂತೆ ರೂಪಿಸಲಾಗಿದೆ. ಇದರ ಮೂಲಕ ಕೆಲವು ನಿರ್ದಿಷ್ಟ AI ಕಾರ್ಯಗಳ ಸರಾಸರಿ ವೆಚ್ಚವನ್ನು ಸುಮಾರು 90%ರಷ್ಟು ತಗ್ಗಿಸುವಲ್ಲಿ ಕಂಪನಿ ಯಶಸ್ವಿಯಾಗಿದೆ. ಜೊತೆಗೆ, ಅಕ್ಟೋಬರ್ನಲ್ಲಿ ಬಿಡುಗಡೆ ಮಾಡಲಾದ ‘ಕ್ಯಾನ್ವಾ ಬ್ರಷ್’ನಲ್ಲಿ, ಹಿಂದಿನ ವಿನ್ಯಾಸ ಏಜೆಂಟ್ಗಳಿಗೆ ಹೋಲಿಸಿದರೆ ಪ್ರತಿ ಕಾರ್ಯದ ವೆಚ್ಚವನ್ನು 46%ರಷ್ಟು ಕಡಿಮೆ ಮಾಡಲಾಗಿದೆ.
ತಾಂತ್ರಿಕವಾಗಿ ಈ ಸುಧಾರಣೆಗಳು ಗಮನಾರ್ಹವಾಗಿದ್ದರೂ, ವೆಚ್ಚ ಇಳಿಕೆಯೊಂದೇ ಕಂಪನಿಯ ಒಟ್ಟಾರೆ ಆರ್ಥಿಕ ಬಿಕ್ಕಟ್ಟನ್ನು ತಕ್ಷಣಕ್ಕೆ ಪರಿಹರಿಸಲಿಲ್ಲ. ಒಟ್ಟು ಬಳಕೆದಾರರ ಸಂಖ್ಯೆ, ಪ್ರತಿ ವ್ಯಕ್ತಿ ಬಳಸುವ AI ಕಾರ್ಯಗಳ ನಿತ್ಯದ ಪ್ರಮಾಣ, ಉಚಿತ ಮಮತ್ತು ಪಾವತಿದಾರ ಗ್ರಾಹಕರ ನಡುವಿನ ಅಂತರ ಹಾಗೂ ದುಬಾರಿ ಹಾರ್ಡ್ವೇರ್ ಮೂಲಸೌಕರ್ಯದ ನಿರ್ವಹಣೆಯು ಒಟ್ಟಾರೆ ಲಾಭದ ಮೇಲೆ ಪರಿಣಾಮ ಬೀರಿದೆ.
ಈ ಹಿಂದೆ, ಬಳಕೆದಾರರು ಒಂದು ಸಾಮಾಜಿಕ ಮಾಧ್ಯಮ ಪೋಸ್ಟರ್ ತಯಾರಿಸಬೇಕಾದರೆ ಕ್ಯಾನ್ವಾ ಅಪ್ಲಿಕೇಶನ್ ತೆರೆದು, ಸೂಕ್ತ ಟೆಂಪ್ಲೇಟ್ ಆಯ್ಕೆಮಾಡಿ, ಫೋಟೋ ಸೇರಿಸಿ, ಬಣ್ಣಗಳನ್ನು ಹೊಂದಿಸಿ, ಪಠ್ಯ ಅಳವಡಿಸಬೇಕಾಗಿತ್ತು. ಆದರೆ, ಈಗ ChatGPT ಅಥವಾ Google Gemini ಯಂತಹ AI ವ್ಯವಸ್ಥೆಗಳಲ್ಲಿ ಗ್ರಾಹಕರು ತಮಗೆ ಬೇಕಾದ ವಿನ್ಯಾಸದ ವಿವರಣೆಯನ್ನು (Prompt) ನೀಡಿದರೆ ಸಾಕು, ಅವು ಸೆಕೆಂಡುಗಳಲ್ಲಿ ನೇರವಾಗಿ ಚಿತ್ರಗಳು ಮತ್ತು ಸಂಪೂರ್ಣ ಪ್ರೆಸೆಂಟೇಷನ್ಳನ್ನು ಸೃಷ್ಟಿಸಿ ಕೊಡುತ್ತವೆ. ಇದು ಕ್ಯಾನ್ವಾಗೆ ಹಲವು ಸವಾಲುಗಳನ್ನು ಸೃಷ್ಟಿಸಿದೆ.
ತನ್ನದೇ ಪ್ಲಾಟ್ಫಾರ್ಮ್ನಲ್ಲಿ ಸ್ಪರ್ಧಾತ್ಮಕ AI ಸೌಲಭ್ಯಗಳನ್ನು ನೀಡಲು ಕಂಪನಿಯು ಭಾರಿ ಪ್ರಮಾಣದ ತಾಂತ್ರಿಕ ಹೂಡಿಕೆ ಮಾಡಬೇಕಾಗಿದೆ. ಆದಾಗ್ಯು, ಇದೇ AI ತಂತ್ರಜ್ಞಾನವನ್ನು ಬಳಸಿ ಸ್ವತಂತ್ರವಾಗಿ ಬೆಳೆಯುತ್ತಿರುವ ಇತರ ದೊಡ್ಡ AI ಪ್ಲಾಟ್ಫಾರ್ಮ್ಗಳು ಕ್ಯಾನ್ವಾದ ಗ್ರಾಹಕರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿವೆ.
ಹೀಗಾಗಿ, ಕ್ಯಾನ್ವಾ ತನ್ನ ಉತ್ಪನ್ನಗಳನ್ನು AI ತಂತ್ರಜ್ಞಾನಕ್ಕೆ ತಕ್ಕಂತೆ ನವೀಕರಿಸಿಕೊಳ್ಳುವುದರ ಜೊತೆಗೆ, AI ತಂತ್ರಜ್ಞಾನದಿಂದಲೇ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ತೀವ್ರ ಸ್ಪರ್ಧೆಯೊಡನೆ ಹೋರಾಡಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಪರಿಣಾಮ, ಉದ್ಯೋಗ ಕಡಿತಕ್ಕೆ ಕೈಹಾಕಿದೆ.
ಕ್ಯಾನ್ವಾದಲ್ಲಿ ನಡೆದಿರುವ ಈ ಸಿಬ್ಬಂದಿ ಕಡಿತ ಅಥವಾ ಪುನರ್ರಚನೆಯು ಕಂಪನಿಯೊಳಗೆ ಕೃತಕ ಬುದ್ಧಿಮತ್ತೆಗೆ ನೀಡಲಾಗುತ್ತಿರುವ ಹೆಚ್ಚಿನ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸಿದೆ. 2026ರ ಏಪ್ರಿಲ್ನಲ್ಲಿಯೇ ಕಂಪನಿಯ ಸಹಸಂಸ್ಥಾಪಕ ಕ್ಲಿಫ್ ಒಬ್ರೆಕ್ಟ್, “ಉದ್ಯೋಗಿಗಳಿಗೆ ಸಾಂಪ್ರದಾಯಿಕ ಕೌಶಲ್ಯಗಳಷ್ಟೇ ಅಲ್ಲದೆ, AI ತಂತ್ರಜ್ಞಾನದ ಪ್ರಾಯೋಗಿಕ ಜ್ಞಾನವಿರುವುದು ಅತ್ಯಂತ ಅನಿವಾರ್ಯ” ಎಂದು ಎಚ್ಚರಿಸಿದ್ದರು. ಕಂಪನಿಯ ಎಂಜಿನಿಯರ್ಗಳಿಗಾಗಿ ಪ್ರತ್ಯೇಕವಾಗಿ ‘ಏಳು ಹಂತಗಳ AI ಕೌಶಲ್ಯ ಮೌಲ್ಯಮಾಪನ ವ್ಯವಸ್ಥೆಯನ್ನು’ ಜಾರಿಗೆ ತರಲಾಗಿತ್ತು. ಈಗ, ಹಲವು AI ಏಜೆಂಟ್ಗಳನ್ನು ಏಕಕಾಲದಲ್ಲಿ ಸ್ವತಂತ್ರವಾಗಿ ನಿರ್ವಹಿಸುವ ನುರಿತ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಹಿಂದಿನ ವರ್ಷಗಳಲ್ಲಿ ಕಂಪನಿಯು ತನ್ನ ಉದ್ಯೋಗಿಗಳ ಸಂಖ್ಯೆಯನ್ನು ವರ್ಷಕ್ಕೆ ಸರಾಸರಿ 50%ರಷ್ಟು ಭಾರೀ ಪ್ರಮಾಣದಲ್ಲಿ ಹೆಚ್ಚಿಸುತ್ತಿತ್ತು. ಆದರೆ, ಈಗ ಹೊಸ ನೇಮಕಾತಿಯ ಬೆಳವಣಿಗೆಯು ಕೇವಲ 5%ಗೆ ಕುಸಿದಿದೆ. ಇದು ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಿಗಳ ಸ್ವರೂಪವೇ ಬದಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಒಂದೇ ನಿರ್ದಿಷ್ಟ ಕೆಲಸದಲ್ಲಿ ಮಾತ್ರ ಪರಿಣತಿ ಹೊಂದಿರುವ ಉದ್ಯೋಗಿಗಳ ಬದಲಾಗಿ, ಬಹುಮುಖಿ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲ ಹಾಗೂ AI ಸಾಧನಗಳೊಂದಿಗೆ ತ್ವರಿತ ಉತ್ಪಾದಕತೆ ನೀಡಬಲ್ಲ ಸಿಬ್ಬಂದಿಗೆ ಮಾತ್ರ ಕಂಪನಿಗಳು ಮಣೆ ಹಾಕುತ್ತಿವೆ. ಆದರೆ, ಮಾನವ ಶ್ರಮದ ಅಗತ್ಯವನ್ನು ಕಡಿಮೆ ಮಾಡುವ ಈ AI ತಂತ್ರಜ್ಞಾನವು ಉದ್ಯೋಗಿಗಳ ಉದ್ಯೋಗ ಭದ್ರತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
ಗಮನಾರ್ಹವಾಗಿ, 2026ರ ಆರಂಭದಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಕ್ಯಾನ್ವಾದ ಒಟ್ಟು ಮೌಲ್ಯವು ಸುಮಾರು 42 ಶತಕೋಟಿ ಅಮೆರಿಕನ್ ಡಾಲರ್ಗಳ ಗಡಿಯನ್ನು ಮುಟ್ಟಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ಮತ್ತು ಆದಾಯ ಬೆಳವಣಿಗೆಯ ಮಂದಗತಿಯ ಕಾರಣದಿಂದ ಕೆಲವು ಪ್ರಮುಖ ಹೂಡಿಕೆದಾರರು ಇದರ ಮೌಲ್ಯವನ್ನು ಸುಮಾರು 35 ಶತಕೋಟಿ ಡಾಲರ್ಗೆ ಇಳಿಕೆ ಮಾಡಿದ್ದಾರೆ. ಅಂದರೆ, ಒಂದೇ ವರ್ಷದ ಅವಧಿಯಲ್ಲಿ ಕಂಪನಿಯ ಮೌಲ್ಯದಲ್ಲಿ ಅಂದಾಜು 7 ಶತಕೋಟಿ ಡಾಲರ್ಗಳಷ್ಟು ಭಾರೀ ಇಳಿಕೆಯಾಗಿದೆ.
ಕ್ಯಾನ್ವಾ ಎದುರಿಸುತ್ತಿರುವ ಈ ಆಡಳಿತಾತ್ಮಕ ಮತ್ತು ಆರ್ಥಿಕ ಸವಾಲುಗಳು ಜಾಗತಿಕ ಹೂಡಿಕೆದಾರರ ಲೆಕ್ಕಾಚಾರದಲ್ಲೂ ಸ್ಪಷ್ಟವಾಗಿ ಪ್ರತಿಫಲಿಸಿವೆ. ಜಾಗತಿಕ ಸಾಫ್ಟ್ವೇರ್ ಉದ್ಯಮದಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ಎರಡು ದಶಕಗಳಲ್ಲಿ ಅನೇಕ ಪ್ರಮುಖ ಸಾಫ್ಟ್ವೇರ್ ಕಂಪನಿಗಳು ‘ಚಂದಾದಾರಿಕೆ ಆಧಾರಿತ ಮಾದರಿ’ಯಿಂದಲೇ ಭಾರೀ ಬೆಳವಣಿಗೆ ಸಾಧಿಸಿದ್ದವು. ಬಳಕೆದಾರರು ತಿಂಗಳ ಅಥವಾ ವಾರ್ಷಿಕ ನಿಗದಿತ ಶುಲ್ಕ ಪಾವತಿಸಿ ಸಾಫ್ಟ್ವೇರ್ ಬಳಸುತ್ತಿದ್ದರು. ಒಮ್ಮೆ ಅತ್ಯುತ್ತಮ ಸಾಫ್ಟ್ವೇರ್ಅನ್ನು ಅಭಿವೃದ್ಧಿಪಡಿಸಿದರೆ, ಅದನ್ನು ಲಕ್ಷಾಂತರ ಜನರಿಗೆ ಯಾವುದೇ ಹೆಚ್ಚುವರಿ ಮಹತ್ವದ ವೆಚ್ಚವಿಲ್ಲದೆ ವಿತರಿಸಿ, ಬೃಹತ್ ಪ್ರಮಾಣದ ಲಾಭ ಗಳಿಸಲು ಸಾಧ್ಯವಾಗುತ್ತಿತ್ತು.
ಆದರೆ, AI ಆಧಾರಿತ ಸೇವೆಗಳ ಆರ್ಥಿಕ ವ್ಯವಸ್ಥೆಯು ಸಂಪೂರ್ಣವಾಗಿ ಭಿನ್ನವಾಗಿದೆ. ಇಲ್ಲಿ ಬಳಕೆದಾರರು ಹೆಚ್ಚಿದಂತೆ ಕಂಪನಿಯ ಕಂಪ್ಯೂಟರಿಂಗ್ ವೆಚ್ಚವೂ ಗಣನೀಯವಾಗಿ ಏರಿಕೆಯಾಗುತ್ತದೆ. ಆದ್ದರಿಂದ, AI ಬಳಕೆಯ ಹೆಚ್ಚಳವು ಹಿಂದಿನಂತೆ ಸ್ವಯಂಚಾಲಿತ ಬೃಹತ್ ಲಾಭದ ಬದಲಾಗಿ, ಕಂಪನಿಯ ಮೇಲಿನ ವೆಚ್ಚವನ್ನು ಹೆಚ್ಚಿಸಿತ್ತಿದೆ.
ಇದೇ ಸಮಯದಲ್ಲಿ ಆಸ್ಟ್ರೇಲಿಯಾದ ಮತ್ತೊಂದು ಬೃಹತ್ ತಂತ್ರಜ್ಞಾನ ಕಂಪನಿ ‘Atlassian’ ಕೂಡ 2026ರ ಮಾರ್ಚ್ನಲ್ಲಿ ಸುಮಾರು 1,600 ಉದ್ಯೋಗಗಳನ್ನು ಕಡಿತಗೊಳಿಸಿತ್ತು. AI ಅಭಿವೃದ್ಧಿ ಮತ್ತು ಉದ್ಯಮ ಗ್ರಾಹಕರ ಸೇವೆಗಳಿಗೆ ಹೆಚ್ಚಿನ ಹೂಡಿಕೆ ಮಾಡುವುದು ತಮ್ಮ ನಿರ್ಧಾರದ ಉದ್ದೇಶವೆಂದು ಕಂಪನಿ ಹೇಳಿಕೊಂಡಿತ್ತು.
ಕ್ಯಾನ್ವಾದಲ್ಲಿನ ಬಿಕ್ಕಟ್ಟು AI ಸುವರ್ಣಯುಗದಲ್ಲಿ ತಂತ್ರಜ್ಞಾನ ಉದ್ಯಮವು ಎದುರಿಸುತ್ತಿರುವ ಗಂಭೀರ ಸವಾಲುಗಳಿಗೆ ಉದಾಹರಣೆಯಾಗಿದೆ. ಇದರ ಪರಿಣಾಮವು ನೇರವಾಗಿ ಉದ್ಯೋಗಿಗಳ ಬದುಕಿನ ಮೇಲೆ ಬೀರುತ್ತಿದೆ.



