ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕದ 2.5 ಎಕರೆ ಭೂಮಿಯ ಬಗ್ಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರಶ್ನೆ ಎತ್ತಿದ್ದು, ಚೇತನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚೇತನ್ ವಿರುದ್ಧ ರಾಜಕುಮಾರ್ ಅಭಿಮಾನಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏಪ್ರಿಲ್ 24ರಂದು ಡಾ. ರಾಜಕುಮಾರ್ ಅವರ 97ನೇ ಜನ್ಮದಿನದಂದು ಚೇತನ್ ಅಹಿಂಸಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ ‘ಸಮಾಧಿ ಕಾಂಪ್ಲೆಕ್ಸ್’ಕ್ಕಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸುಧಾಮೂರ್ತಿ ಅವರ ಆಸ್ತಿ ಜಗದಗಲ—ತಿಳಿವಳಿಕೆ ಚಮಚದಗಲ: ನಟ ಚೇತನ್ ಅಹಿಂಸಾ ಟೀಕೆ
“21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು. ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ” ಎಂದೂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಚೇತನ್ ಈ ಪೋಸ್ಟ್‌ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜಕುಮಾರ್ ಅಭಿಮಾನಿಗಳು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ದೇಶದ ಹಲವು ರಾಜಕಾರಣಿಗಳು, ಸೆಲೆಬ್ರೆಟಿಗಳ ಸ್ಮಾರಕಕ್ಕೆ ಎಕರೆಗಟ್ಟಲೆ ಜಾಗವನ್ನು ನೀಡಲಾಗಿದೆ. ಆದರೆ ರಾಜಕುಮಾರ್ ಅವರ ಬಗ್ಗೆಯೇ ಚೇತನ್ ಮಾತಾಡುವುದ್ಯಾಕೆ” ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದಾರೆ.
ತಮ್ಮ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಸಮರ್ಥಿಸಿಕೊಂಡಿರುವ ಚೇತನ್ ಅಹಿಂಸಾ, “ರಾಜಕುಮಾರ್ ಅವರೊಬ್ಬರೇ ಚಿತ್ರರಂಗಕ್ಕೆ ಕೊಡುಗೆ ಕೊಟ್ಟಿರುವುದು ಎಂದು ಹೇಳಲಾಗಲ್ಲ. ಪುಟ್ಟಣ್ಣ ಕಣಗಾಲ್, ಸರೋಜದೇವಿ, ವಿಷ್ಣುವರ್ಧನ್ ಹೀಗೆ ಸಾಕಷ್ಟು ಮಂದಿ ಇದ್ದಾರೆ. ಒಬ್ಬರ ಸ್ಮಾರಕಕ್ಕೆ ಜಾಗ ನೀಡಿದರೆ ಎಲ್ಲರೂ ಜಮೀನು ಕೇಳುತ್ತಾರೆ” ಎಂದು ಹೇಳಿಕೊಂಡಿದ್ದಾರೆ.




