2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣ ನಶೆ ಮುಕ್ತ ರಾಜ್ಯವನ್ನಾಗಿ ರೂಪಿಸುವುದು ನಮ್ಮ ಗುರಿ. ಈ ದಂಧೆಯನ್ನು ಬುಡಸಮೇತ ಕಿತ್ತೊಗೆಯಲು ಸರ್ಕಾರ ಸಜ್ಜಾಗಿದ್ದು, ಸಾರ್ವಜನಿಕರು ಮತ್ತು ಯುವಜನತೆ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ವಿರೋಧಿ ದಿನ – 2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 3 ವರ್ಷಗಳಲ್ಲಿ ಅಂದಿನ ಗೃಹಸಚಿವರಾಗಿದ್ದ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 89 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ಈ ಜಾಲವನ್ನು ಭೇದಿಸಿದ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಅವರು ಶ್ಲಾಘಿಸಿದರು.
ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ ಬಗ್ಗೆ ಗುಪ್ತ ಮಾಹಿತಿ ನೀಡುವ ಸಾರ್ವಜನಿಕರು ಹಾಗೂ ಪೋಷಕರಿಗೆ ಇಲಾಖೆಯಿಂದ ಬಹುಮಾನ ನೀಡುವ ಹೊಸ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಸರಬರಾಜು ಜಾಲವನ್ನು ಹತ್ತಿಕ್ಕಲು ಇದು ಸಹಕಾರಿಯಾಗಲಿದೆ. ಸಮಾಜದ ಗೌರವಕ್ಕೆ ಭಯಪಟ್ಟು ಮಕ್ಕಳ ದುರಭ್ಯಾಸವನ್ನು ಪೋಷಕರು ಮುಚ್ಚಿಡಬೇಡಿ. ಬದಲಾಗಿ, ಪೊಲೀಸರನ್ನು ವಿಶ್ವಾಸಕ್ಕೆ ಪಡೆದು ಸಹಕರಿಸಿ; ನಿಮ್ಮ ಮಕ್ಕಳ ಹೆಸರು ಬಹಿರಂಗಗೊಳ್ಳದಂತೆ ಎಚ್ಚರಿಕೆ ವಹಿಸಲು ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಭರವಸೆ ನೀಡಿದರು.
ಪಾನ್ ಮಸಾಲಾ ಮತ್ತು ಗುಟ್ಕಾಗಳಲ್ಲಿ ವಿವಿಧ ರೀತಿಯ ಅಮಲು ಪದಾರ್ಥಗಳನ್ನು ಬೆರೆಸಿ ಮನೆಬಾಗಿಲಿಗೇ ತಲುಪಿಸುತ್ತಿರುವ ಜಾಲದ ಬಗ್ಗೆ ಗಮನ ಸೆಳೆದ ಸಿಎಂ, “ಇಂತಹ ಕೃತ್ಯಗಳು ಕಂಡುಬಂದರೆ ಯಾರನ್ನೂ ಕ್ಷಮಿಸುವುದಿಲ್ಲ, ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಶಾಲಾ-ಕಾಲೇಜುಗಳಲ್ಲಿ ‘ಸ್ಟುಡೆಂಟ್ ಪೊಲೀಸಿಂಗ್’ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಡ್ರಗ್ಸ್ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ದುರಾಭ್ಯಾಸಗಳಿಗೆ ಮಣಿಯದಂತೆ, ತಮ್ಮ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಿಎಂ ಸಲಹೆ ನೀಡಿದರು.
ಇದನ್ನೂ ಓದಿ: ಅಭಿವೃದ್ಧಿ ಹೆಸರಲ್ಲಿ ಕಾಡುಗಳ ಮಾರಣಹೋಮ: ಪರಿಸರ ಸಮತೋಲನಕ್ಕೆ ಕಾದಿದೆ ಮಹಾ ವಿಪತ್ತು!
ಕರ್ನಾಟಕವು ಪ್ರತಿವರ್ಷ ಸಾವಿರಾರು ವೈದ್ಯರು, ಶುಶ್ರೂಷಕರು ಮತ್ತು ಎಂಜಿನಿಯರ್‌ಗಳನ್ನು ದೇಶಕ್ಕೆ ನೀಡುತ್ತಿರುವ ರಾಜ್ಯವಾಗಿದ್ದು, ಇಂತಹ ಆದರ್ಶ ಪ್ರಜೆಗಳ ನಾಡಿನಲ್ಲಿ ಮಾದಕ ವಸ್ತುಗಳ ಪಿಡುಗು ಇರಬಾರದು ಎಂದು ಪ್ರತಿಪಾದಿಸಿದರು. ಪೊಲೀಸರು ನಿಮ್ಮ ಕುಟುಂಬದವರಿದ್ದಂತೆ. ನಶೆ ಮುಕ್ತ ಕರ್ನಾಟಕದ ಕನಸನ್ನು ನನಸಾಗಿಸಲು ಇಲಾಖೆಯ ಮೇಲೆ ವಿಶ್ವಾಸವಿಡಿ ಎಂದು ಮನವಿ ಮಾಡಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಸಿಎಂ ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆ ಸ್ವೀಕರಿಸಿದರು. “ನಶೆ ಬಿಡಿ, ಖುಷಿ ಪಡಿ” ಎಂಬ ಮಂತ್ರದೊಂದಿಗೆ ರಾಜ್ಯವನ್ನು ಮಾದಕ ಮುಕ್ತವನ್ನಾಗಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕಿದೆ ಎಂದು ಅವರು ತಿಳಿಸಿದರು.




