ಬಾಕಿ ಇರುವ ಸುಮಾರು 37,370 ಕೋಟಿ ರೂಪಾಯಿಗಳ ಬಿಲ್‌ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯ ಗುತ್ತಿಗೆದಾರರ ಸಂಘವು (KSCA) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೆ ಮನವಿ ಸಲ್ಲಿಸಿದೆ. ಈ ಬಾರಿಯೂ ಹಣ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರ ಕಾಮಗಾರಿ ಸ್ಥಗಿತ ಮಾಡುವ ಸಾಧ್ಯತೆಯಿದೆ.
ಗುತ್ತಿಗೆದಾರರ ನಿಯೋಗವು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆಶಿ ಅವರನ್ನು ಭೇಟಿ ಮಾಡಿ ಈ ಬೇಡಿಕೆಯನ್ನು ಇಟ್ಟಿದ್ದಾರೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಬಾಕಿ ಹಣವನ್ನು ಇತ್ಯರ್ಥಪಡಿಸಲು 3 ತಿಂಗಳ ಕಾಲಾವಕಾಶ ನೀಡುವಂತೆ ಗುತ್ತಿಗೆದಾರರಲ್ಲಿ ವಿನಂತಿಸಿದ್ದಾರೆ.
ಇದನ್ನೂ ಓದಿ: ಜು. 15ರ ಒಳಗೆ ಬಾಕಿ ಬಿಲ್ ಪಾವತಿಸದಿದ್ದರೆ ಕಾಮಗಾರಿ ಸ್ಥಗಿತ: ಗುತ್ತಿಗೆದಾರರ ಸಂಘ ಎಚ್ಚರಿಕೆ
ಗುತ್ತಿಗೆದಾರರಿಗೆ ಬರಬೇಕಾದ ಒಟ್ಟು ಮೊತ್ತದ ವಿವರ
ಜಲಸಂಪನ್ಮೂಲ ಇಲಾಖೆ: ₹13,000 ಕೋಟಿಗೂ ಹೆಚ್ಚು
ಲೋಕೋಪಯೋಗಿ ಇಲಾಖೆ (PWD): ಸುಮಾರು ₹8,370 ಕೋಟಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: ₹3,800 ಕೋಟಿ
ಸಣ್ಣ ನೀರಾವರಿ ಇಲಾಖೆ: ₹3,000 ಕೋಟಿ
ವಸತಿ ಮತ್ತು ವಕ್ಫ್ ಮಂಡಳಿ: ₹2,600 ಕೋಟಿ
ಬಿಬಿಎಂಪಿ (ಪ್ರಸ್ತುತ ಜಿಬಿಎ): ಸುಮಾರು ₹2,600 ಕೋಟಿ
ನಗರಾಭಿವೃದ್ಧಿ ಮತ್ತು ಕಾರ್ಮಿಕ ಇಲಾಖೆ: ತಲಾ ₹2,000 ಕೋಟಿ
ಈ ಬಾಕಿ ಬಿಲ್ ಪಾವತಿ ಮಾಡಬೇಕು ಎಂಬ ಬೇಡಿಕೆ ಜತೆಗೆ ಗುತ್ತಿಗೆದಾರರು ಇನ್ನೂ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. “ಬಾಕಿ ಇರುವ ಜಿಎಸ್‌ಟಿ ಹಾಗೂ ವ್ಯಾಟ್ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಗುತ್ತಿಗೆದಾರರ ಪರವಾನಗಿ ಸಿಂಧುತ್ವದ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸಬೇಕು” ಎಂದು ಒತ್ತಾಯಿಸಿದ್ದಾರೆ.
“5 ವರ್ಷಗಳ ಹಿಂದೆ ಬಿಲ್ ಪಾವತಿ ವೇಳೆ ಕಡಿತಗೊಳಿಸಲಾಗಿದ್ದ ಶೇ. 10ರಷ್ಟು ಭದ್ರತಾ ಠೇವಣಿ ಹಣವನ್ನು ಹಿಂತಿರುಗಿಸಬೇಕು. ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳ ಮಾದರಿಯಲ್ಲೇ, ಗುತ್ತಿಗೆದಾರರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಲು ಒಬ್ಬ ಗುತ್ತಿಗೆದಾರರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು” ಎಂದೂ ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ಬಿಡುಗಡೆ ಮಾಡದಿದ್ದರೆ ಕಾಮಗಾರಿ ಸ್ಥಗಿತ ಭೀತಿ ಸಣ್ಣ ಗುತ್ತಿಗೆದಾರರಿಗೆ ಮೊದಲ ಹಂತದ ಹಣ ಬಿಡುಗಡೆ ಮಾಡಿದ ಬಿಬಿಎಂಪಿ
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ನೇತೃತ್ವದ ನಿಯೋಗವು, ಕಳೆದ 3-4 ವರ್ಷಗಳಿಂದ (2022-23ರಿಂದೀಚೆಗೆ) ಬಿಲ್‌ಗಳು ಪಾವತಿಯಾಗದೆ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ ಪಾವತಿಯಾಗದಿದ್ದರೆ ರಾಜ್ಯಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಹಾಗಿರುವಾಗ ಈಗ ಪದೇ ಪದೇ ಮನವಿ ನೀಡಿದರೂ ಹಣ ಬಿಡುಗಡೆಯಾಗದಿದ್ದರೆ ಗುತ್ತಿಗೆದಾರರು ಕೊನೆಯದಾಗಿ ಕಾಮಗಾರಿ ಸ್ಥಗಿತಗೊಳಿಸುವ ಆಯ್ಕೆ ಮಾಡಬಹುದು.
ಸದ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಸಿ ಹಂತ-ಹಂತವಾಗಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಈ ಅವಧಿಯಲ್ಲಿ ಬಿಲ್ ಇತ್ಯರ್ಥವಾಗದಿದ್ದರೆ, ರಾಜ್ಯದ ಪ್ರಮುಖ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡು ಸರ್ಕಾರಕ್ಕೆ ದೊಡ್ಡ ಮಟ್ಟದ ಆಡಳಿತಾತ್ಮಕ ಹಿನ್ನಡೆಯಾಗುವ ಸಾಧ್ಯತೆಯಿದೆ.




