2025-26ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ದೇವನೂರ ಮಹಾದೇವ, ಅಕ್ಕಮಹಾದೇವಿ ಪ್ರಶಸ್ತಿಗೆ ಕೆ ನೀಲಾ ಆಯ್ಕೆಯಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ವಿವಿಧ ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದ್ದು ಪ್ರತಿಷ್ಠಿತ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಸಿದ್ದರಾಮ ಶರಣರು ಬೆಲ್ದಾಳ, ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪುರಸ್ಕಾರಕ್ಕೆ ಕಂಬದಹಳ್ಳಿ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಆಯ್ಕೆಯಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ, ನಾವು ಉಳಿಯಬೇಕಾಗಿದೆ: ದೇವನೂರ ಮಹಾದೇವ
ಹಾಗೆಯೇ, ಕೆ ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಅಲ್ಲಾಭಕ್ಷ್ ಮೀರಸಾಹೇಬ ಮಿರ್ಜಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಡಾ. ಸುಕನ್ಯಾ ಮಾರುತಿ, ಡಾ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಜಿ ವಿ ಶಾರದಾ, ಬಿ ವಿ ಕಾರಂತ ಪ್ರಶಸ್ತಿಗೆ ಪ್ರಸನ್ನ, ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ಗಂಗಾರಾಮ ಚಂಡಾಳ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ವಿ ಹರಿ ರಾಮ್, ಜಕಣಾಚಾರಿ ಪ್ರಶಸ್ತಿಗೆ ಅಶೋಕ್ ಗುಡಿಗಾರ್ ಆಯ್ಕೆಯಾಗಿದ್ದಾರೆ.
ಜಾನಪದ ಶ್ರೀ ಪ್ರಶಸ್ತಿಗೆ ಎಂ ಮಹದೇವಯ್ಯ ಹಾಗೂ ಬಿ ಲಕ್ಷ್ಮಣ ಅವರನ್ನು ಆಯ್ಕೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಸಿದ್ದನಗೌಡ ಪಾಟೀಲ್, ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿಗೆ ಪ್ರೊ.ಎಸ್ ಜಿ ಸಿದ್ದರಾಮಯ್ಯ, ಕುಮಾರವ್ಯಾಸ ಪ್ರಶಸ್ತಿಗೆ ಶ್ರೀಕಲ್ಲಿನಾಥ ಶಾಸ್ತ್ರಿ, ನಾಟ್ಯರಾಣಿ ಶಾಂತಲಾ ಪ್ರಶಸ್ತಿಗೆ ಪ್ರತಿಭಾ ಪ್ರಹ್ಲಾದ್ ಅವರನ್ನು ಆಯ್ಕೆ ಮಾಡಲಾಗಿದೆ.
ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ಸಚಿವ ಶಿವರಾಜ ತಂಗಡಗಿ ಅಭಿನಂದಿಸಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿನಾಂಕ ಪಡೆದು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.






