ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ, ನಾವು ಉಳಿಯಬೇಕಾಗಿದೆ: ದೇವನೂರ ಮಹಾದೇವ

Date:

ನಾನು, ಸಾಮಾನ್ಯವಾಗಿ ಯಾವ ಪಕ್ಷದ ಚುನಾವಣಾ ಪ್ರಣಾಳಿಕೆಗಳನ್ನು ಓದುವುದಿಲ್ಲ. ನಾನು ನುಡಿ ನೋಡಲ್ಲ. ಬದಲಿಗೆ, ಆ ಪಕ್ಷದ ನಡೆಯ ಚರಿತ್ರೆಯನ್ನು ನೋಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ, ಈ ಬಾರಿ 2023ರ ವಿಧಾನಸಭೆಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಓದಬೇಕಾಗಿ ಬಂತು. ಈ ದೇಶದ ಪ್ರಧಾನಮಂತ್ರಿಯವರು, ಕಾಂಗ್ರೆಸ್ ಪ್ರಣಾಳಿಕೆಯ ಕಾಲಂ ಒಂದನ್ನು ಉಲ್ಲೇಖಿಸಿ ಅದರ ವಿರುದ್ಧವಾಗಿ ಬಹುತೇಕ ಕಡೆ ತೀವ್ರ ಭಾಷಣ ಮಾಡಿದರು. ನಾನು ಕುತೂಹಲಕ್ಕೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಂತಹದ್ದೇನಿರಬಹುದು ಎಂದು ಗಮನವಿಟ್ಟು ಓದಿದೆ ಎಂದು ದೇವನೂರ ಮಹಾದೇವ ಅವರು ತಿಳಿಸಿದರು.

ಮೈಸೂರು ಜಿಲ್ಲೆಯ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ತಲಕಾಡಿನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

“ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಹಾಗೂ ನಿರ್ಣಾಯಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು, ಯಾವುದೇ ವ್ಯಕ್ತಿಗಳಾಗಲಿ ಭಜರಂಗ ದಳ ಮತ್ತು ಪಿಎಫ್‍ಐಗಳು ಸೇರಿದಂತೆ ಬಹುಸಂಖ್ಯಾತ, ಅಲ್ಪಸಂಖ್ಯಾತ ಅಥವಾ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಹಾಗಾಗಿ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಓದಿದ್ದೇನೆ. ನನಗೆ ಪ್ರಮುಖವಾಗಿ ಕಂಡಿದ್ದು ಸಮಾಜದ ವಿಭಜನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧ, ಕಾಂಗ್ರೆಸ್‍ಗೆ ಸಂವಿಧಾನ ಪವಿತ್ರ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಬಾರದು, ಇದನ್ನು ಉಲ್ಲಂಘಿಸುವವರು ಯಾರೇ ಆಗಲಿ ಭಜರಂಗದಳ, ಪಿಎಫ್‍ಐ ಇತ್ಯಾದಿಗಳ ಮೇಲೆ ಕಾಂಗ್ರೆಸ್ ಪಕ್ಷ ಬಲವಾದ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಇದು ಆ ಪ್ರಣಾಳಿಕೆಯ ಸಾರಾಂಶ. ಅಂದರೆ, ಯಾರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಆಶಯ ಇಲ್ಲಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದು ತನ್ನ ಧರ್ಮ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳುತ್ತಿದೆ” ಎಂದರು.

“ನನಗೆ ಅನಿಸುವಂತೆ, ಯಾವುದೇ ಒಂದು ಸರ್ಕಾರಕ್ಕೆ ತನ್ನ ರಾಜ್ಯದ, ದೇಶದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಎಂದರೆ ಅದು ಆ ಸರ್ಕಾರದ ಕನಿಷ್ಠ ಅರ್ಹತೆ. ಈ ಕನಿಷ್ಠ ಅರ್ಹತೆ ಇಲ್ಲದಿರುವುದರಿಂದಾಗಿ ಈವರೆಗೂ ರಾಜ್ಯವನ್ನು ಆಳುತ್ತಿದ್ದ ಬಿಜೆಪಿ ಸರ್ಕಾರದ ಜಮಾನದಲ್ಲಿ ಒಂದೆರಡಲ್ಲ-ನೂರಾರು ಸಲ, ಕೆಲವು ಗುಂಪುಗಳು ದಾಂಧಲೆ ಎಬ್ಬಿಸಿ ಗಲಭೆ ಆಯ್ತು. ವ್ಯಾಪಾರ ನಿಷೇಧ, ಹಿಜಾಬ್, ಹಲಾಲ್, ಗೋವು ಸಾಗಾಣಿಕೆ ಇತ್ಯಾದಿ, ಇತ್ಯಾದಿ ಸರಮಾಲೆಯಲ್ಲಿ ಕೊಲೆ ಸುಲಿಗೆ, ಹೊಡೆ ಬಡಿ ಎಲ್ಲ ನಡೆಯಿತು. ಸರ್ಕಾರ ಎನ್ನುವುದು ಇದೆಯೋ ಇಲ್ಲವೋ ಎಂದು ಅನುಮಾನ ಬರುವ ಪರಿಸ್ಥಿತಿ ಉಂಟಾಯ್ತು. ಇದೇ ಪರಿಸ್ಥಿತಿ ಮತ್ತೆ ಬರಬೇಕೆ?” ಎಂದು ತಿಳಿಸಿದರು.

“ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾನೂನನ್ನು ತನ್ನ ಕೈಗೆತ್ತಿಕೊಳ್ಳುವ ಭಜರಂಗದಳದ ನಿಷೇಧ ಪ್ರಸ್ತಾಪವನ್ನು ವಿರೋಧಿಸುತ್ತಾರೆ. ಆಕ್ರೋಶಭರಿತರಾಗುತ್ತಾರೆ. ಬ್ಯಾಲೆಟ್ ಬಾಕ್ಸ್‌ನಲ್ಲಿ ಬಟನ್ ಒತ್ತುವಾಗ ‘ಜೈ ಭಜರಂಗ ಬಲಿ’ ಎಂದು ಮತ ನೀಡಿ ಎಂದು ಮತದಾರರಿಗೆ ಬಹಿರಂಗ ಕರೆಯನ್ನೂ ಕೊಡುತ್ತಾರೆ. ಆದರೆ ಹನುಮಂತ, ಹನುಮಾನ್ ಪರಮಭಕ್ತಿಯ ಸಂಕೇತವಾಗಿ ನಮ್ಮ ಜನಸಮುದಾಯದ ಸುಪ್ತಪ್ರಜ್ಞೆಯಲ್ಲಿ ವಾಸ ಮಾಡುತ್ತಿದ್ದಾನೆ. ಇಂತಹ ಪರಮಭಕ್ತಿಯ ಹನುಮಾನ್ ಯಾವ ಕಾರಣಕ್ಕೂ ‘ಭಕ್ತಿಯೇ ಇಲ್ಲದ ವೇಷಧಾರಿ ಭಕ್ತ’ರ ಗದ್ದಲದ ಮಾತುಗಳನ್ನು ಕೇಳಿಸಿಕೊಳ್ಳಲಾರ. ವಚನ ಪಾಲನೆಯ ಸಂಕೇತವಾದ ರಾಮನ ಭಕ್ತ ಹನುಮಾನ್ ವಚನಭ್ರಷ್ಟ ಭಕ್ತರನ್ನಂತೂ ಕ್ಷಮಿಸಲಾರ. ಇದೇ ಭಾರತದ ಪರಂಪರೆಯ ಅಂತಃಸಾಕ್ಷಿ” ಎಂದರು.

 “ನಮ್ಮ ಪ್ರಧಾನಿಯವರಿಗೆ ಒಂದು ಪ್ರಶ್ನೆ. ಕಾನೂನು ಕೈಗೆತ್ತಿಕೊಳ್ಳುವ ಹಿನ್ನೆಲೆಯ ಭಜರಂಗದಳ ಮತ್ತು ಪಿಎಫ್‍ಐ ಇತ್ಯಾದಿಗಳ ಅವಾಂತರ ನೋಡಿಕೊಂಡು ಸರ್ಕಾರವೊಂದು ಸುಮ್ಮನಿರಬೇಕೆ? ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಇಂತಹ ಮತಾಂಧರ ಬಗ್ಗೆ- ಕನ್ನಡ ಮಹೋನ್ನತ ಲೇಖಕ ಪಿ.ಲಂಕೇಶ್ ಅವರು ಒಂದು ಮಾತು ಹೇಳುತ್ತಾರೆ ʼನಗು ಮರೆತ, ಅಳು ಮರೆತ, ದಯೆ ಮರೆತ ಧರ್ಮಾಂಧರು ಯಾವುದೇ ಅಣುಬಾಂಬಿಗಿಂತ ‘ಅಪಾಯದ ಮನುಷ್ಯರುʼ ಅಂತ. ಲಂಕೇಶರ ಈ ಒಳಗಣ್ಣಿನ ನುಡಿಗಳನ್ನು ನಾವು ಆಲಿಸಬೇಕಾಗಿದೆ” ಎಂದು ಕರೆ ನೀಡಿದರು.

“ಇತ್ತೀಚೆಗೆ ನಾನು ನಂಜನಗೂಡಿನ ಹತ್ತಿರದ ತಗಡೂರಿಗೆ ಒಂದು ಸಭೆಗೆ ಹೋಗಿದ್ದೆ. ಅಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಸೇರಿದ್ದರು. ಅಲ್ಲಿ ಶಾಲಾಮಕ್ಕಳು, ತರುಣರು, ಮಹಿಳೆಯರು, ಸಂಘಟನೆಗಳ ನಾಯಕರು, ಆ ಊರಿನ ಯಜಮಾನರು ಎಲ್ಲರೂ ಸೇರಿದ್ದರು. ನಾನು ಸುಮಾರು ಅರ್ಧ ಗಂಟೆಗಳ ಕಾಲ ಮಾತಾಡಿದೆ. ಮಾತಾಡಿದೆ ಅನ್ನುವುದಕ್ಕಿಂತ ನಾನು ಬರೆದುಕೊಂಡಿದ್ದನ್ನು ಓದಿದೆ ಅನ್ನಬಹುದು. ನಾನೇ ಚಕಿತನಾಗುವಂತೆ ಎಲ್ಲರೂ ಆಲಿಸಿದರು. ಸಭೆ ಮುಗಿದ ಮೇಲೆ ನಾಕಾರು ಹುಡುಗರು ʼನಮಗೆ ಅರ್ಥವಾಯ್ತು, ನಾವು ಬಿಜೆಪಿಗೆ ಮತ ನೀಡುವುದಿಲ್ಲʼ ಅಂದರು. ಬಳಿಕ ಹತ್ತಾರು ಮಂದಿ ತರುಣರು ರಾತ್ರಿ 12-30ರವರೆಗೆ ಅಂದು ನಾನು ಹೇಳಿದ್ದ ಮುಖ್ಯ ಮಾತೊಂದನ್ನು ಚರ್ಚಿಸುತ್ತಿದ್ದರೆಂದು ತಿಳಿದುಬಂತು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಮದುರ್ಗ | ವಲಸೆ ಅಭ್ಯರ್ಥಿಗೆ ಟಿಕೆಟ್‌, ಬಿಜೆಪಿ ಮುಖಂಡರ ಮುನಿಸು – ಕಾಂಗ್ರೆಸ್‌ಗೆ ವರದಾನ

“ಬಿಜೆಪಿ ಸರ್ಕಾರಗಳು ತರುತ್ತಿರುವ ಕಾಯ್ದೆಗಳನ್ನು ಮೂಸಿ ನೋಡಿದರೂ, ಅಲ್ಲಿ ಮನುಧರ್ಮ ಶಾಸ್ತ್ರದ ವಾಸನೆ ಇರುವುದನ್ನು ಗುರುತಿಸಬಹುದು. ಹೀಗಿರುವಾಗ, ಸ್ನೇಹಿತರೇ ಸಂಘಪರಿವಾರ ಬಿಜೆಪಿಯನ್ನು ಸೋಲಿಸಲೇಬೇಕು. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಭಾರತದ ಸಂವಿಧಾನವನ್ನು ಪವಿತ್ರ ಎಂದು ಭಾವಿಸಿರುವ ಕಾಂಗ್ರೆಸ್‍ಗೆ, ಇಂದಿನ ಪರಿಸ್ಥಿತಿಯಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಬೆಂಬಲ ನೀಡಬೇಕಾಗಿದೆ. ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಿ ನಾವು ಉಳಿಯಬೇಕಾಗಿದೆ” ಎಂದು ತಿಳಿಸಿದರು.

ಸಂಘ ಪರಿವಾರದ ಬಿಜೆಪಿಯವರು ಪ್ರಿಯಾಂಕ ಖರ್ಗೆ ವಿರುದ್ಧ ಬೆದರಿಕೆ ಹಾಕಿರುವ ಮಣಿಕಂಠ ರಾಥೋಡ್ ಎಂಬ ರೌಡಿಶೀಟರ್‌ನನ್ನು ಕಣಕ್ಕಿಳಿಸಿದೆ. ‘ಯಥಾ ಪಕ್ಷ, ತಥಾ ಅಭ್ಯರ್ಥಿ!’ ಮಣಿಕಂಠ ರಾಥೋಡ್ ಮೇಲೆ ಅವರ ವಯಸ್ಸು ಎಷ್ಟಾಗಿದೆಯೋ ಹೆಚ್ಚುಕಮ್ಮಿ ಅದರ ಡಬಲ್ ಕೇಸುಗಳಿವೆ. ಗಡಿಪಾರೂ ಆಗಿದೆ. ಜೈಲೂ ಆಗಿದೆ. ಈತ ಪಿಸ್ತೂಲು ತಿರುಗಿಸುತ್ತಾ ಠೇಂಕಾರದ ಶೋ ಕೊಡುತ್ತಾನೆ. ನಾಳೆ ಪಿಸ್ತೂಲು ತಿರುಗಿಸುತ್ತಾ ರೋಡ್ ಶೋ  ಮಾಡಲೂಬಹುದು. ಈಗ ಈತ ಖರ್ಗೆಯವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದು ಸುದ್ದಿಯಾಗಿದೆ. ಈತನ ಬೆದರಿಕೆ ಖರ್ಗೆಯವರ ಕುಟುಂಬಕ್ಕೆ ಮಾತ್ರವಲ್ಲ. ಇಡೀ ನಾಡಿಗೇ ಹಾಕಿದ ಬೆದರಿಕೆಯಾಗಿದೆ” ಎಂದರು.

“ನಾಗರಿಕ ಸಮಾಜ, ಪ್ರಗತಿಪರ ಸಂಘಟನೆಗಳು ಕೂಡಲೇ ರಾಜ್ಯಾದ್ಯಂತ ಕೇವಲ ಒಂದು ಗಂಟೆ ಧರಣಿ ಮಾಡಿ, ‘ಮಣಿಕಂಠ ರಾಥೋಡ್ ನಡಾವಳಿ ಸಹಿಸುವುದಿಲ್ಲ’ ಎಂದು ಹೇಳಬೇಕಾಗಿದೆ. ನಿಮ್ಮೊಡನೆ ನಾನೂ ಇದ್ದೇನೆ” ಎಂದು ದೇವನೂರ ಮಹಾದೇವ ಅ ಕರೆ ನೀಡಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫ್ರಿ ಬಸ್ | ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ; ಬಿಜೆಪಿ ಪ್ರಚಾರಕಿ, ನಟಿ ಶೃತಿ ವಿವಾದಾತ್ಮಕ ಹೇಳಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ...

ಚಾಮರಾಜನಗರ | ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್‌ ಬೆಂಬಲಿಸಿ: ಮಾನವ ಬಂಧುತ್ವ ವೇದಿಕೆ

ದೇಶದ ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನರು...

ಮತದಾರರಿಗೆ ಉಚಿತ ಆಹಾರ ನೀಡಲು ಹೋಟೆಲ್‌ಗಳಿಗೆ ಹೈಕೋರ್ಟ್ ಅನುಮತಿ

ಚುನಾವಣೆಯ ದಿನ ಮತದಾನ ಮಾಡಿದವರಿಗೆ ಉಚಿತ ಆಹಾರ ವಿತರಣೆ ಮಾಡಲು ಬೃಹತ್...

ಇಲ್ಲಾ ಗೌಡ್ರೇ, ಇದು ನ್ಯಾಯ ಅಲ್ಲ, ಇನ್ನು ನಿಲ್ಲಿಸ್ಬಿಡಿ ಸಾಕು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮನವಿ

ಪ್ರಜ್ವಲ್‌ ರೇವಣ್ಣನ ವಿಡಿಯೋಗಳನ್ನ ನೋಡಿ ಹಾಸನದ ಜನ ಬೆಚ್ಚಿ ಬಿದ್ದಿದ್ದಾರೆ. ಮೊದಮೊದಲು...