ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಬಿಜೆಪಿ ಮತ್ತು ಜೆಡಿಎಸ್ ವ್ಯವಸ್ಥಿತ ಸಂಚು ರೂಪಿಸಿವೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶದಿಂದ ಪೂರ್ವಭರ್ತಿ ಮಾಡಿದ ಫಾರ್ಮ್-7 ಅರ್ಜಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಲ್ಲಿಸಲಾಗಿದೆ ಎಂಬ ಅವರ ಹೇಳಿಕೆ, ಎಸ್ಐಆರ್ ಪ್ರಕ್ರಿಯೆಯ ಸುತ್ತ ಇರುವ ಷಡ್ಯಂತ್ರದ ಆರೋಪಗಳಿಗೆ ಪುಷ್ಠಿ ನೀಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆಶಿ, ರಾಜ್ಯದಲ್ಲಿ ಸುಮಾರು 50 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಎಸ್ಐಆರ್ ಪ್ರಕ್ರಿಯೆಯಲ್ಲಿ 1.07 ಕೋಟಿ ಹೆಸರುಗಳನ್ನು ಕೈಬಿಡಲಾಗಿದ್ದು, 45 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ. ಇದರ ಬೆನ್ನಲ್ಲೇ ಮತ್ತೆ 50 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಗಿಡಲು ಸಂಚು ರೂಪಿಸಲಾಗಿದೆ ಎಂದು ದೂರಿದರು.
ಎಸ್ಐಆರ್ ಅಡಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು ಬಳಸಲಾಗುವ ಫಾರ್ಮ್-7 ಅರ್ಜಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ದುರ್ಬಲ ಸಮುದಾಯಗಳ ಮತದಾರರನ್ನು ಗುರಿಯಾಗಿಸಿಕೊಂಡು ಪೂರ್ವಭರ್ತಿ ಮಾಡಿದ ಅರ್ಜಿಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಬಬಲೇಶ್ವರ, ಭಾಲ್ಕಿ ಮತ್ತು ವಿಜಯಪುರ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಕೆಲವು ಕ್ಷೇತ್ರಗಳಲ್ಲಿ ಸಾವಿರಾರು ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಲಾಗಿದೆ. ಬಬಲೇಶ್ವರದಲ್ಲಿ 1,600ಕ್ಕೂ ಹೆಚ್ಚು, ಭಾಲ್ಕಿಯಲ್ಲಿ 3,244 ಹಾಗೂ ವಿಜಯಪುರದಲ್ಲಿ ಬರೋಬ್ಬರಿ 14,000 ಅರ್ಜಿಗಳನ್ನು ಸಲ್ಲಿಸಲಾಗಿದೆ. ಬಳ್ಳಾರಿ ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲೂ ಕ್ರಮವಾಗಿ 8,000 ಹಾಗೂ 10,000 ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ಕಾಂಗ್ರೆಸ್ ಶಾಸಕರು ಮಾಹಿತಿ ನೀಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಸಲ್ಲಿಸಿದ್ದಾರೆ ಎನ್ನಲಾದ ಫಾರ್ಮ್-7 ಅರ್ಜಿಗಳ ಪ್ರತಿಗಳನ್ನು ಪ್ರದರ್ಶಿಸಿದ ಶಿವಕುಮಾರ್, ಕೆಲವು ಅರ್ಜಿಗಳನ್ನು ಬಿಜೆಪಿ ಕಾರ್ಯಕರ್ತರೇ ತಮ್ಮ ಹೆಸರಿನಲ್ಲಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು. ಹಲವು ಪ್ರಕರಣಗಳಲ್ಲಿ ಅರ್ಜಿಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದು, ಇನ್ನು ಕೆಲವು ಅರ್ಜಿಗಳನ್ನು ಸಲ್ಲಿಸಿದವರು ತಪ್ಪಾಗಿದೆ ಎಂದು ಕ್ಷಮೆಯಾಚಿಸಿ ಹಿಂಪಡೆದಿದ್ದಾರೆ ಎಂದು ಹೇಳಿದರು.
ಕೆಲವು ಅರ್ಜಿಗಳನ್ನು ಸಲ್ಲಿಸಿದವರಿಗೆ ಸಂಬಂಧಪಟ್ಟ ಮತದಾರರ ಪರಿಚಯವೇ ಇರಲಿಲ್ಲ. ಮತದಾರರಿಗೂ ತಮ್ಮ ಹೆಸರು ಅಳಿಸಲು ಅರ್ಜಿ ಸಲ್ಲಿಸಿರುವ ವಿಚಾರ ತಿಳಿದಿರಲಿಲ್ಲ. ಕೆಲವು ಪ್ರಕರಣಗಳಲ್ಲಿ ಸಹಿ ನಕಲು ಹಾಗೂ ಅಧಿಕಾರಿಗಳ ಹೆಸರಿನಲ್ಲಿ ವಂಚನೆ ನಡೆದಿರುವ ಆರೋಪಗಳೂ ಇವೆ ಎಂದು ಅವರು ದೂರಿದರು.
ಈ ಹಿಂದೆ ಸಲ್ಲಿಕೆಯಾದ ಅರ್ಜಿಗಳಿಗೂ ಇದೀಗ ಸಲ್ಲಿಕೆಯಾಗಿರುವ ಅರ್ಜಿಗಳಿಗೂ ಸಂಬಂಧವಿದೆಯೇ, ಈ ಪ್ರಕ್ರಿಯೆಯ ಹಿಂದೆ ಸಂಘಟಿತ ಜಾಲವಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಮತದಾರರ ಮಾಹಿತಿ ಬಿಜೆಪಿಗೆ ಎಲ್ಲಿಂದ ಲಭ್ಯವಾಗುತ್ತಿದೆ ಎಂಬ ಪ್ರಶ್ನೆಯನ್ನೂ ಎತ್ತಿರುವ ಡಿಕೆಶಿ, ಚುನಾವಣಾ ಆಯೋಗವು ಮಾಹಿತಿ ನಿರ್ವಹಣೆಯ ಜವಾಬ್ದಾರಿಯನ್ನು ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಂಸ್ಥೆಗೆ ನೀಡಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಿದರು. ಈ ಮೂಲಕ ಮಾಹಿತಿ ಸೋರಿಕೆಯಾಗುತ್ತಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕರ್ನಾಟಕ SIR | ಅರ್ಹರ ಹೆಸರು ಡಿಲೀಟ್ ಮಾಡಲು ಬಿಜೆಪಿಗೆ ‘ಫಾರ್ಮ್-7’ ಟೂಲ್ಕಿಟ್; ಷಡ್ಯಂತ್ರ ಬಹಿರಂಗ
ಡಿಕೆಶಿ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕರಡು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರ್ಪಡೆಯಾಗಿದ್ದಾರೆ ಎಂಬ ಅನುಮಾನವಿರುವ ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸುವ ಹಕ್ಕು ಬಿಜೆಪಿಗೂ ಇದೆ ಎಂದು ಹೇಳಿದ್ದಾರೆ. ಅಕ್ರಮ ಬಾಂಗ್ಲಾದೇಶಿ ವಲಸಿಗರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಬಿಜೆಪಿ ಅರ್ಜಿಗಳನ್ನು ಸಲ್ಲಿಸಿದೆ. ಚುನಾವಣಾ ಆಯೋಗವು ಅರ್ಜಿಗಳನ್ನು ಪರಿಶೀಲಿಸಿ, ಸುಳ್ಳು ಎಂದು ಕಂಡುಬಂದರೆ ತಿರಸ್ಕರಿಸಲಿದೆ. ಇದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಸಚಿವ ರಿಜ್ವಾನ್ ಅರ್ಷದ್ ಅವರು ಆ.20ರಿಂದ ಸೆ.24ರವರೆಗೆ 29,360 ಫಾರ್ಮ್-7 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಶೇ.94ರಷ್ಟು ಅರ್ಜಿಗಳನ್ನು ಖಾಸಗಿ ವ್ಯಕ್ತಿಗಳು ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಭಾಲ್ಕಿ ಮತ್ತು ಬಬಲೇಶ್ವರದಲ್ಲಿ ಮೂರು ದಿನಗಳಲ್ಲಿ ಸಲ್ಲಿಕೆಯಾದ 4,726 ಅರ್ಜಿಗಳ ಪೈಕಿ ಶೇ.87ರಷ್ಟು ಅರ್ಜಿಗಳು ಮುಸ್ಲಿಂ, ಅಲ್ಪಸಂಖ್ಯಾತ ಹಾಗೂ ಅಂಚಿನಲ್ಲಿರುವ ಸಮುದಾಯಗಳ ಮತದಾರರನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಅರ್ಹರ ಹೆಸರು ಡಿಲೀಟ್ ಮಾಡಲು ಫಾರ್ಮ್-7ನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂಬುದೂ ಬಹಿರಂಗವಾಗುತ್ತಿದೆ. ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಬ್ಯಾಡಗೊಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 21ರಲ್ಲಿ ಇಂತಹದೊಂದು ಕುತಂತ್ರ ಬೆಳಕಿಗೆ ಬಂದಿದೆ. ಅಲ್ಲಿ ಸೆಪ್ಟೆಂಬರ್ 23 ರಂದು ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 63 ಮುಸ್ಲಿಮ್ ಮತದಾರರನ್ನು ಗುರಿಯಾಗಿಸಿಕೊಂಡು ಫಾರ್ಮ್-7 ಅರ್ಜಿಗಳನ್ನು ಬಿಎಲ್ಒಗೆ ಬಿಎಲ್ಎ ಸಲ್ಲಿಸಿದ್ದಾರೆ.
ಆ ಅರ್ಜಿಗಳಲ್ಲಿ ಮತದಾರರ ಹೆಸರು, ವಿಳಾಸ ಹಾಗೂ ಎಪಿಕ್ (EPIC) ಸಂಖ್ಯೆಗಳನ್ನು ಮುಂಚಿತವಾಗಿಯೇ ಕಂಪ್ಯೂಟರ್ನಲ್ಲಿ ಮುದ್ರಿಸಿ ಸಿದ್ಧಪಡಿಸಲಾಗಿತ್ತು. ಈ ಅರ್ಜಿಗಳನ್ನು ತಂದಿಟ್ಟ ಬಿಜೆಪಿ ಕಾರ್ಯಕರ್ತರನ್ನು ವರದಿಗಾರರು ವಿಚಾರಿಸಿದಾಗ, ಈ ಮುದ್ರಿತ ಫಾರ್ಮ್-7 ‘ಟೂಲ್ ಕಿಟ್’ಗಳನ್ನು ಸೋಮವಾರಪೇಟೆಯ ಬಿಜೆಪಿ ಕಚೇರಿಯಿಂದ ನೀಡಲಾಗಿತ್ತು ಎಂಬ ಆಘಾತಕಾರಿ ಸತ್ಯವನ್ನು ಬಿಎಲ್ಎಗಳು ಒಪ್ಪಿಕೊಂಡಿದ್ದಾರೆ.
ಬ್ಯಾಡಗೊಟ್ಟದ ಬೂತ್ ಸಂಖ್ಯೆ 21ರಲ್ಲಿ ‘ಮತದಾರರು ‘ಸ್ಥಳದಲ್ಲಿ ಲಭ್ಯವಿಲ್ಲ’ ಅಥವಾ ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂಬ ಸುಳ್ಳು ಕಾರಣಗಳನ್ನು ಉಲ್ಲೇಖಿಸಿ ಬಿಜೆಪಿ ಬಿಎಲ್ಎಗಳಾದ ರಜಿನಿ ಯು.ಎಲ್ ಮತ್ತು ಯು.ಎಚ್.ಲೋಕೇಶ್ ಅವರು ತಲಾ ಹತ್ತು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಬಿಜೆಪಿಯ ಇತರರೂ ಸೇರಿ ಸುಮಾರು 50 ಫಾರ್ಮ್-7 ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿರುವುದಾಗಿ ಸ್ವತಃ ಯು.ಎಚ್ ಲೋಕೇಶ್ ಅವರೇ ಒಪ್ಪಿಕೊಂಡಿದ್ದಾರೆ. ಈ ಎಲ್ಲ ಅರ್ಜಿಗಳು ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿಕೊಂಡಿವೆ ಎಂಬುದು ವಾಸ್ತವ ಸಂಗತಿ. ಅಂದರೆ, ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಕಾರಣದಿಂದ, ಅವರನ್ನು ಮತಪಟ್ಟಿಯಿಂದಲೇ ಹೊರಹಾಕುವ ವ್ಯವಸ್ಥಿತ ಸಂಚು ನಡೆದಿದೆ.
ಆದಾಗ್ಯೂ, ಬಿಎಲ್ಒಗಳು ನಡೆಸಿದ ಸ್ಥಳೀಯ ಪರಿಶೀಲನೆಯಲ್ಲಿ ಆ ಎಲ್ಲ ಮತದಾರರೂ ಹಲವು ದಶಕಗಳಿಂದ ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಅರ್ಹ ಮತದಾರರೆಂದು ಸಾಬೀತಾಗಿದೆ. ಆದ್ದರಿಂದ, ಅವರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯದೆ, ಉಳಿಸಿಕೊಳ್ಳಲಾಗಿದೆ. ಇವೆಲ್ಲವೂ ಬಿಜೆಪಿ ಕಚೇರಿಯ ಸೂಚನೆಯಂತೆಯೇ ನಡೆದಿದೆ ಎಂದು ಸ್ಥಳೀಯ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳ ಮರುಪರಿಶೀಲನೆಯ ನಂತರ ಆ ಅರ್ಜಿಗಳನ್ನು ತಡೆಹಿಡಿಯಲಾಗಿದೆ.




