ದೇಶದಲ್ಲಿ ಎಲೆಕ್ಟ್ರಿಕ್ ವಾಹನ (EV) ಬಳಕೆಯ ವಿಸ್ತರಣೆ ಮತ್ತು ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಕರ್ನಾಟಕ ಪ್ರಮುಖ ಸಾಧನೆ ಮಾಡಿದ್ದು, ಕೇಂದ್ರ ನೀತಿ ಆಯೋಗ ಬಿಡುಗಡೆ ಮಾಡಿರುವ ‘ಭಾರತ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ 2025’ರಲ್ಲಿ (India Electric Mobility Index 2025) ಒಟ್ಟಾರೆ 3ನೇ ಸ್ಥಾನವನ್ನು ಪಡೆದುಕೊಂಡಿದೆ.
ನೀತಿ ಆಯೋಗವು ‘ಡಬ್ಲ್ಯುಆರ್‌ಐ ಇಂಡಿಯಾ’ ಸಂಸ್ಥೆಯ ಸಹಯೋಗದೊಂದಿಗೆ ಈ ವರದಿಯನ್ನು ತಯಾರಿಸಿದ್ದು, ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿತು. ಸೂಚ್ಯಂಕದಲ್ಲಿ 84 ಅಂಕಗಳೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, 78 ಅಂಕಗಳೊಂದಿಗೆ ಮಹಾರಾಷ್ಟ್ರ ದ್ವಿತೀಯ ಸ್ಥಾನದಲ್ಲಿದೆ. ಕರ್ನಾಟಕವು 73 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷದ ಶ್ರೇಯಾಂಕಕ್ಕೆ ಹೋಲಿಸಿದರೆ ಕರ್ನಾಟಕವು ಚಂಡೀಗಢವನ್ನು ಹಿಂದಿಕ್ಕಿ ಒಂದು ಮೆಟ್ಟಿಲು ಮೇಲೆರಿದೆ.
ಇದನ್ನೂ ಓದಿ: ರಾಜ್ಯ ಬಜೆಟ್: ಮೈಸೂರು 2ನೇ ಐಟಿ ಸಿಟಿ, 4000 ಎಲೆಕ್ಟ್ರಿಕ್ ಬಸ್ ಸೇರ್ಪಡೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಬಂಪರ್
ಒಟ್ಟಾರೆ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದರೂ, ‘ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮೂಲಸೌಕರ್ಯ ಸನ್ನದ್ಧತೆ’ ವಿಭಾಗದಲ್ಲಿ ಕರ್ನಾಟಕವು 100ಕ್ಕೆ 97 ಅಂಕಗಳನ್ನು ಗಳಿಸುವ ಮೂಲಕ ಇಡೀ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ರಾಜ್ಯದ್ಯಂತ ಚಾರ್ಜಿಂಗ್ ಜಾಲವನ್ನು ವಿಸ್ತರಿಸಲು ಬೆಸ್ಕಾಂ ಜಾರಿಗೆ ತಂದಿರುವ ‘ಇವಿ ಮಿತ್ರ’ ಆ್ಯಪ್, ಏಕಗವಾಕ್ಷಿ ಅನುಮೋದನೆ ವ್ಯವಸ್ಥೆ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವುದು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.
This video cannot be played in your browser. Open the video directly
ಇವಿ ಕ್ಷೇತ್ರದಲ್ಲಿ ಸಂಶೋಧನೆ, ನವೋದ್ಯಮ (Startups) ಹಾಗೂ ತಂತ್ರಜ್ಞಾನ ಆವಿಷ್ಕಾರದ ವಿಭಾಗದಲ್ಲೂ ರಾಜ್ಯವು 82 ಅಂಕ ಗಳಿಸಿ ದೇಶದಲ್ಲೇ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಬೆಂಗಳೂರಿನ ಬಲವಾದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯು ಈ ಶ್ರೇಯಾಂಕ ಹೆಚ್ಚಲು ಗಣನೀಯ ಕೊಡುಗೆ ನೀಡಿದೆ.
ದೇಶದ ಒಟ್ಟು ಎಲೆಕ್ಟ್ರಿಕ್ ವಾಹನ ನೋಂದಣಿಗಳಲ್ಲಿ ಕರ್ನಾಟಕದ ಪಾಲು ಶೇಕಡ 8.81ರಷ್ಟಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಇವಿ ವಾಹನಗಳ ನೋಂದಣಿಯಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಪ್ರಸ್ತುತ ರಾಜ್ಯದಲ್ಲಿ 6,900ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಕೇಂದ್ರಗಳಿದ್ದು, ಅದರಲ್ಲಿ 4,800ಕ್ಕೂ ಹೆಚ್ಚು ಕೇಂದ್ರಗಳು ಬೆಂಗಳೂರು ನಗರ ಒಂದರಲ್ಲೇ ಕಾರ್ಯನಿರ್ವಹಿಸುತ್ತಿವೆ. ಸಾರಿಗೆ ವಿದ್ಯುದೀಕರಣ, ಸೂಕ್ತ ನೀತಿ ನಿರೂಪಣೆ ಮತ್ತು ಮೂಲಸೌಕರ್ಯಗಳ ಸಕಾಲಿಕ ಅನುಷ್ಠಾನದಿಂದಾಗಿ ಕರ್ನಾಟಕವು ದೇಶದ ಇವಿ ಕ್ರಾಂತಿಯಲ್ಲಿ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ.





