ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಸುಭಾಷ್ ನಗರದಲ್ಲಿರುವ ಕೊಬ್ಬರಿ ಸಂಸ್ಕರಣಾ ಘಟಕವೊಂದರಲ್ಲಿ ಇಂದು ಬೆಳಗ್ಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ, ಕ್ಷಣಾರ್ಧದಲ್ಲೇ ಘಟಕದಲ್ಲಿದ್ದ ಕೊಬ್ಬರಿ ದಾಸ್ತಾನಿಗೆ ಬೆಂಕಿ ವ್ಯಾಪಿಸಿದೆ.
ಸ್ಥಳೀಯರು ಅಗ್ನಿಶಾಮಕ್ಕೆ ಮಾಹಿತಿ ನೀಡಿದ್ದು ಉಡುಪಿ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ವರ್ಷಗಳಿಂದ ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ, ನಳಿನಿ ಪುಷ್ಪಲತಾ ಸಾಲಿಯನ್ಸ್ ಎಂಬವರ ಮಾಲಕತ್ವದ ಕೊಬ್ಬರಿ ಸಂಸ್ಕರಣಾ ಘಟಕ ಇದಾಗಿದೆ.
ಘಟಕದಲ್ಲಿ ದಾಸ್ತಾನಿಟ್ಟಿದ್ದ ಅಪಾರ ಪ್ರಮಾಣದ ಕೊಬ್ಬರಿ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ಸುಟ್ಟುಹೋಗಿದೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ನಷ್ಟದ ನಿಖರ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.






