ಇಂದಿನ ದಿನಗಳಲ್ಲಿ ನಿರ್ಭೀತವಾಗಿ ಪತ್ರಿಕಾ ವೃತ್ತಿ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ತತ್ವಬದ್ಧ ವೃತ್ತಿಪರತೆಯಿಂದ ಮಾತ್ರ ಮಾಧ್ಯಮಗಳು ಈ ಸವಾಲನ್ನು ಗೆಲ್ಲಲು ಸಾಧ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ತಮ್ಮ ವೃತ್ತಿಯ ನೈತಿಕತೆ, ತತ್ವ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಮಾಜಕ್ಕೆ ಒಳಿತಾಗುತ್ತದೆ. ಪ್ರಸ್ತುತ ಮಾಧ್ಯಮ ಕ್ಷೇತ್ರವು ಸುಳ್ಳು ಸುದ್ದಿಗಳ ಹಾವಳಿಯಿಂದ ಹೊರಬರಬೇಕಾದ ಅನಿವಾರ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ತಮ್ಮ ಬಗ್ಗೆಯೇ ಹಬ್ಬಿದ್ದ ಸುಳ್ಳು ಸುದ್ದಿಗಳ ಉದಾಹರಣೆ ನೀಡಿದ ಮುಖ್ಯಮಂತ್ರಿಗಳು ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ನಾನು ಇಂದು ಬೆಳಗ್ಗೆ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದೆ. ಆದರೆ, ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಕೆಲವು ಟಿವಿ ವಾಹಿನಿಗಳು ತಪ್ಪು ಸುದ್ದಿ ಪ್ರಸಾರ ಮಾಡಿದವು,” ಎಂದರು.
ಇದನ್ನು ಓದಿದ್ದೀರಾ? ದೇಶದ ರಿಯಲ್ ಎಸ್ಟೇಟ್ ಮೇಲೆ ಯುದ್ಧದ ಕಾರ್ಮೋಡ: 7 ನಗರಗಳಲ್ಲಿ ವಸತಿ ಮಾರಾಟ ಕುಸಿತ
ಅದೇ ರೀತಿ, ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಸ್ಮರಿಸಿದ ಅವರು, “ಆಗ ನಾನು ನಿತ್ರಾಣಗೊಂಡು, ಕಾರ್ಯಕರ್ತರ ನೂಕುನುಗ್ಗಲಿಗೆ ಸಿಲುಕಿ ತೊಂದರೆಗೀಡಾಗಿದ್ದೆ. ಆದರೆ, ಅದನ್ನು ನಾನು ‘ಕುಡಿದು ನಡೆದುಕೊಂಡು ಬರುತ್ತಿದ್ದೆ’ ಎಂಬಂತೆ ಬಿಂಬಿಸಲಾಯಿತು. ಇದು ಉದ್ದೇಶಪೂರ್ವಕವಾಗಿ ಜನರಿಗೆ ತಪ್ಪು ಸಂದೇಶ ನೀಡುವ ಯತ್ನವಾಗಿತ್ತು,” ಎಂದು ಟೀಕಿಸಿದರು.
“ನಾನು ತಪ್ಪು ಮಾಡಿದರೆ ಅದನ್ನು ಖಂಡಿತಾ ಬಹಿರಂಗಪಡಿಸಿ. ಆದರೆ, ಸುಳ್ಳು ಸುದ್ದಿಗಳನ್ನು ಸೃಷ್ಟಿಸಬೇಡಿ ಮತ್ತು ಪ್ರಸಾರ ಮಾಡಬೇಡಿ. ಯಾವುದೇ ಒಂದು ಸುದ್ದಿ ಪ್ರಕಟವಾಗುವ ಮುನ್ನವಷ್ಟೇ ಅದು ಪತ್ರಕರ್ತನಿಗೆ ಸೇರಿರುತ್ತದೆ. ಒಮ್ಮೆ ಪ್ರಕಟವಾದ ಬಳಿಕ ಅದು ಸಮಾಜದ ಆಸ್ತಿಯಾಗುತ್ತದೆ. ಹೀಗಾಗಿ, ಪ್ರತಿಯೊಂದು ಸುದ್ದಿಯಲ್ಲೂ ಸತ್ಯ ಹಾಗೂ ಪ್ರಾಮಾಣಿಕತೆ ಇರಬೇಕು,” ಎಂದು ಅವರು ಕಿವಿಮಾತು ಹೇಳಿದರು.
ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರು ಪತ್ರಕರ್ತರಾಗಿ ಕೆಲಸ ಮಾಡುವ ಮೂಲಕ ಈ ವೃತ್ತಿಯ ಘನತೆ ಹೆಚ್ಚಿಸಿದ್ದಾರೆ. ಇಂದಿನ ಪೀಳಿಗೆ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ‘ವಾರ್ತಾಭಾರತಿ’ ಪತ್ರಿಕೆಯ ಸಂಪಾದಕ ಅಬುಸಾಲಂ ಪುತ್ತಿಗೆ ಪ್ರಧಾನ ಭಾಷಣ ಮಾಡಿದರು. ಸಚಿವ ದಿನೇಶ್ ಗುಂಡೂರಾವ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನುಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಆರ್. ಪೂರ್ಣಿಮಾ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಅನುಚೇತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




