ಮಹಿಳೆ ತನ್ನ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಅಂಡಾಣು ದಾನ ಮಾಡಬಹುದು. ಅಂಡಾಣುಗಳನ್ನು ಕೊಳ್ಳುವುದು ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಆದರೆ, ಕಾಗದದ ಮೇಲಿರುವ ಈ ಕಾನೂನುಗಳು ಬಡತನದ ಹಸಿವಿನ ಮುಂದೆ ಮತ್ತು ಮಾಫಿಯಾದ ಪಗಡೆಯಾಟದ ಮುಂದೆ ಇನ್ನೂ ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ.
ನಮ್ಮನ್ನು ನಿಬ್ಬರೆಗಾಗಿಸುವ ಹಲವು ತಂತ್ರಜ್ಞಾನಗಳು ವೈದ್ಯಕೀಯ ಲೋಕ ಆವಿಷ್ಕರಿಸುತ್ತಿದೆ. ಅಂತಹ ಹೊಸ ಬೆಳವಣಿಗೆಯಲ್ಲಿ ‘ಐವಿಎಫ್’ (IVF – In Vitro Fertilization) ಕೂಡಾ ಒಂದು. ಐವಿಎಫ್ ಅದೆಷ್ಟೋ ನಿಃಸಂತಾನ ದಂಪತಿಗಳ ಬಾಳಿಗೆ ಬೆಳಕಾಗಿದೆ. ಆದರೆ, ಇದೇ ತಂತ್ರಜ್ಞಾನದ ಮರೆಯಲ್ಲಿ ಕರಾಳ ದಂಧೆಯೂ ಹೆಣೆದುಕೊಂಡಿದೆ. ಈ ಜಾಲವು ಬಡ ಮಹಿಳೆಯರ ಬದುಕನ್ನೇ ನರಕವಾಗಿಸುತ್ತಿದೆ.
ದೇಶದ ವಾಣಿಜ್ಯ ನಗರಿ ಮುಂಬೈ ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿರುವ ‘ಅಂಡಾಣು ಮಾರಾಟದ ಕರಾಳ ಜಾಲ’ ಇಂದು ದಕ್ಷಿಣ ಭಾರತದ ರಾಜ್ಯಗಳಿಗೂ ಬೇರು ಬಿಟ್ಟಿದೆ. ಆರಂಭದಲ್ಲಿ ಮಹಾರಾಷ್ಟ್ರದ ಮುಂಬೈ, ಥಾಣೆ (ಬದ್ಲಾಪುರ)ಯಲ್ಲಿ ಬೆಳಕಿಗೆ ಬಂದ ಈ ಜಾಲದ ತನಿಖೆ ವಿಸ್ತಾರಗೊಳ್ಳುತ್ತಿದ್ದಂತೆ ಬೆಂಗಳೂರು, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಿಗೂ ವ್ಯಾಪಿಸಿರುವುದು ಬಹಿರಂಗವಾಗಿದೆ.
ಇದನ್ನೂ ಓದಿ: ಹಸುಗೂಸು ಮಾರಾಟ | ಕಳೆದ 6 ವರ್ಷದಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ
ಆರಂಭದಲ್ಲಿ ಈ ಪ್ರಕ್ರಿಯೆಯು ಸಂಪೂರ್ಣ ಕಾನೂನುಬದ್ಧ ಮತ್ತು ಸ್ವಯಂಪ್ರೇರಿತ ದಾನದ ರೂಪದಲ್ಲೇ ನಡೆಯುತ್ತಿತ್ತು. ಆದರೆ, ಕಳೆದ ಒಂದು ದಶಕದಲ್ಲಿ ಮುಂಬೈ, ಥಾಣೆ, ಮತ್ತು ನವಿ ಮುಂಬೈ ಪರಿಸರದಲ್ಲಿ ನೂರಾರು ಐವಿಎಫ್ ಕ್ಲಿನಿಕ್‌ಗಳು ತಲೆಎತ್ತಿದಾಗ, ಅಂಡಾಣುಗಳ ಬೇಡಿಕೆ ಗಗನಕ್ಕೇರಿತು. ಈ ವೇಳೆ ಶ್ರೀಮಂತ ಹಾಗೂ ವಯಸ್ಸಾದ ದಂಪತಿಗಳಿಗೆ ತಕ್ಷಣವೇ ಅಂಡಾಣುಗಳನ್ನು ಒದಗಿಸಲು ಮಧ್ಯವರ್ತಿಗಳು ಹುಟ್ಟಿಕೊಂಡರು. ಕ್ರಮೇಣ ಇದು ಒಂದು ವ್ಯವಸ್ಥಿತ ಮಾಫಿಯಾವಾಗಿ ಬದಲಾಯಿತು.
ಈ ಮಧ್ಯವರ್ತಿಗಳು ಹೆಚ್ಚಾಗಿ ಗುರಿ ಮಾಡಿದ್ದು ಕೊಳೆಗೇರಿಗಳು, ಗಾರ್ಮೆಂಟ್ಸ್ ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಕಾರ್ಪೊರೇಷನ್‌ಗಳು ಮತ್ತು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳನ್ನು. ಸಾಲದ ಸುಳಿಗೆ ಸಿಲುಕಿದ ಮಹಿಳೆಯರು, ಪತಿಯ ಕುಡಿತ ಅಥವಾ ಅನಾರೋಗ್ಯದಿಂದ ಸಂಕಷ್ಟದಲ್ಲಿರುವ ಗೃಹಿಣಿಯರು, ತಕ್ಷಣ ಹಣ ಅಗತ್ಯವಿರುವ ಒಂಟಿ ಮಹಿಳೆಯರು/ವಿಧವೆಯರೇ ಈ ಮಧ್ಯವರ್ತಿಗಳ ಟಾರ್ಗೆಟ್.
ಕ್ರೂರತೆಯಲ್ಲಿ ಸಿಲುಕುವ ಬಡ ಮಹಿಳೆಯರು
ಮುಂಬೈನಲ್ಲಿ ಪತ್ತೆಯಾದ ಈ ಅಂಡಾಣು ಜಾಲವು ಅತ್ಯಂತ ಕ್ರೂರವಾಗಿ ಕಾರ್ಯನಿರ್ವಹಿಸುತ್ತಿದೆ. ಶ್ರೀಮಂತ ಗ್ರಾಹಕರಿಂದ ಅಂದರೆ ಮಕ್ಕಳಿಲ್ಲದ ದಂಪತಿಗಳಿಂದ ಲಕ್ಷಾಂತರ ರೂಪಾಯಿಗಳನ್ನು ವಸೂಲಿ ಮಾಡುವ ಈ ದಂಧೆಕೋರರು, ತಮ್ಮ ಅಂಡಾಣು ನೀಡುವ ಬಡ ಮಹಿಳೆಯರಿಗೆ ನೀಡುವುದು ಪುಡಿಗಾಸು. ಗ್ರಾಹಕರಿಂದ ಅಂಡಾಣಿಗಾಗಿ ಐದು ಲಕ್ಷ ರೂಪಾಯಿಗಿಂತ ಅಧಿಕ ಮೊತ್ತ ಪಡೆಯುವ ಈ ದಂಧೆಕೋರರು ಬಡ ಮಹಿಳೆಯರ ಕೈಗೆ ನೀಡುವುದು ಬರೀ 20-30 ಸಾವಿರ ರೂಪಾಯಿ.
ಇನ್ನು ಅಂಡಾಣು ನೀಡುವ ಈ ಮಹಿಳೆಯ ಚರ್ಮದ ಬಣ್ಣ, ಎತ್ತರ, ಶಿಕ್ಷಣ ಮತ್ತು ಆರೋಗ್ಯವನ್ನು ನೋಡಿ ಗ್ರಾಹಕರಿಂದ ಹೆಚ್ಚು ಮೊತ್ತವನ್ನೂ ವಸೂಲಿ ಮಾಡಲಾಗುತ್ತದೆ. ಆದರೆ, ಅಸಹಾಯಕ ಬಡ ಮಹಿಳೆಗೆ ಸಿಗುವುದು ಕೇವಲ ‘ಅಗ್ಗದ ಬೆಲೆ’ ಮಾತ್ರ. ಎಷ್ಟೋ ಬಾರಿ ಭರವಸೆ ನೀಡಿದ ಪೂರ್ಣ ಹಣವನ್ನೂ ನೀಡದೆ ವಂಚಿಸಲಾಗುತ್ತದೆ ಎಂಬುದೂ ತನಿಖೆಯಿಂದ ಬಹಿರಂಗಗೊಂಡಿದೆ.
ಅಂಡಾಣು ದಾನದ ಶೋಷಣೆಯ ವಿವಿಧ ಮುಖಗಳು
ಈ ಜಾಲವು ಸಂಪೂರ್ಣವಾಗಿ ಮಹಿಳೆಯರನ್ನು ಮಹಿಳೆಯರನ್ನಾಗಿ ನೋಡಲ್ಲ. ಈ ಜಾಲದಲ್ಲಿರುವವರಿಗೆ ಮಹಿಳೆ ಬರೀ ‘ಅಂಡಾಣು ಉತ್ಪಾದಿಸುವ ಯಂತ್ರ’ವಷ್ಟೆ. ‘ಅಸಿಸ್ಟೆಡ್ ರೀಪ್ರೊಡಕ್ಟಿವ್ ಟೆಕ್ನಾಲಜಿ (ನಿಯಂತ್ರಣ) ಕಾಯ್ದೆ’ಯ (ART Act) ಪ್ರಕಾರ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಒಂದೇ ಬಾರಿ ಅಂಡಾಣು ದಾನ ಮಾಡಬಹುದು. ಮಹಿಳೆಯರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದೆ. ಆದರೆ ಮುಂಬೈನ ಈ ಅಂಡಾಣು ಮಾಫಿಯಾ ಆಧಾರ್ ಕಾರ್ಡ್, ವಯಸ್ಸಿನ ದಾಖಲೆಗಳನ್ನು ನಕಲು ಮಾಡಿ, ಒಂದೇ ಮಹಿಳೆಯಿಂದ ವರ್ಷಕ್ಕೆ 4-5 ಬಾರಿ ಅಂಡಾಣುಗಳನ್ನು ಕಿತ್ತುಕೊಳ್ಳುತ್ತಿದೆ.
ಹೆಚ್ಚಿನ ಸಂಖ್ಯೆಯ ಅಂಡಾಣುಗಳನ್ನು ಪಡೆಯಲು ಮಹಿಳೆಯರಿಗೆ ಅತಿಯಾದ ಹಾರ್ಮೋನ್ ಇಂಜೆಕ್ಷನ್‌ಗಳನ್ನು ನೀಡಲಾಗುತ್ತಿದೆ. ತರಾತುರಿಯಲ್ಲಿ ಅಂಡಾಣುಗಳನ್ನು ಬೆಳೆಸಲು ಪ್ರಾಣಾಂತಿಕ ಡೋಸ್‌ಗಳನ್ನು ಚುಚ್ಚಲಾಗುತ್ತದೆ.
ಎಷ್ಟೋ ಮಹಿಳೆಯರಿಗೆ ತಮಗೆ ಯಾವ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದೇ ತಿಳಿದಿರುವುದಿಲ್ಲ ಎಂಬುದು ಇನ್ನೊಂದು ಆಶ್ಚರ್ಯ! ಇಂಗ್ಲಿಷ್‌ನಲ್ಲಿರುವ ಫಾರಂಗಳಿಗೆ ಬಲವಂತವಾಗಿ ಸಹಿ ಅಥವಾ ಹೆಬ್ಬೆರಳು ಒತ್ತು ತೆಗೆದುಕೊಂಡು ಈ ಮೋಸ ಮಾಡಲಾಗುತ್ತಿದೆ. “ಇದು ರಕ್ತದ ಕಾಯಿಲೆಗೆ ನೀಡುವ ಚಿಕಿತ್ಸೆ” ಎಂದು ಸುಳ್ಳು ಹೇಳಿ ಅಂಡಾಣು ತೆಗೆದ ಉದಾಹರಣೆಗಳೂ ಇವೆ.
ಇದನ್ನೂ ಓದಿ: ಥಾಣೆಯಲ್ಲಿ ಬಡ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಂಡಾಣು ದಾನ ದಂಧೆ; ಮೂವರ ಬಂಧನ
ಕೊನೆಗೆ ನರಳುವುದು ಬಡ ಮಹಿಳೆ
ಹಣ ಸಂಪಾದಿಸಲೆಂದು ಈ ಜಾಲದಲ್ಲಿ ಸಿಲುಕುವ ಬಡ ಮಹಿಳೆಯರು, ತಮ್ಮಿಂದ ಅಂಡಾಣು ಪಡೆಯಲಾಗುತ್ತಿದೆ ಎಂಬುದನ್ನೂ ತಿಳಿಯದ ಮಹಿಳೆಯರು ಜೀವನಪರ್ಯಂತ ಅನುಭವಿಸುವ ನರಕಯಾತನೆ ಅಪಾರ. ಪ್ರಮುಖವಾಗಿ ಈ ಮಹಿಳೆಯರಲ್ಲಿ OHSS (Ovarian Hyperstimulation Syndrome) ಕಂಡು ಬರುತ್ತದೆ. ಅಂದರೆ ಅತಿಯಾದ ಹಾರ್ಮೋನ್ ಇಂಜೆಕ್ಷನ್‌ನಿಂದಾಗಿ ಅಂಡಾಶಯಗಳು ಅತಿಯಾಗಿ ಉಬ್ಬಿಕೊಳ್ಳುತ್ತವೆ. ಹೊಟ್ಟೆ ಮತ್ತು ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತದೆ.
ಅಂಡಾಶಯಗಳ ಅತಿಯಾದ ಬಳಕೆಯಿಂದಾಗಿ ಆ ಮಹಿಳೆಯರು ಮುಂದೆ ಎಂದಿಗೂ ತಾಯಿಯಾಗದಂತೆ ಒಳಗಿನ ಅಂಗಾಂಗಗಳು ಹಾನಿಗೊಳಗಾಗುತ್ತವೆ. ಹಾರ್ಮೋನ್‌ಗಳ ಅಸಮತೋಲನದಿಂದಾಗಿ ಸ್ತನ ಕ್ಯಾನ್ಸರ್ ಮತ್ತು ಗರ್ಭಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡ 80ರಷ್ಟಿ ಹೆಚ್ಚಿರುತ್ತದೆ. ಇದಕ್ಕೂ ಮುಖ್ಯವಾಗಿ ಅರಿವಳಿಕೆ (Anesthesia) ಸರಿಯಾಗಿ ನೀಡದೆ ಅಥವಾ ಶಸ್ತ್ರಚಿಕಿತ್ಸೆಯ ನಂತರದ ಸೋಂಕಿನಿಂದಾಗಿ ಹಲವು ಹೆಣ್ಣುಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇಂತಹ ಸಾವುಗಳನ್ನು “ನೈಸರ್ಗಿಕ ಸಾವು” ಎಂದು ಬಿಂಬಿಸಿ ಮುಚ್ಚಿಹಾಕಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಮುಂಬೈ ಪೊಲೀಸರು ಮತ್ತು ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಹಲವು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿವೆ. ಮುಂಬೈನ ಪ್ರಸಿದ್ಧ ಆಸ್ಪತ್ರೆಗಳ ಕೆಲವು ವೈದ್ಯರು ಕೂಡ ಈ ದಂಧೆಯಲ್ಲಿ ಶಾಮೀಲಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ, ಕಾನೂನು ಬಿಗಿಯಾದಂತೆ ಈ ಜಾಲ ತನ್ನ ಕಾರ್ಯವಿಧಾನವನ್ನೇ ಬದಲಾಯಿಸಿಕೊಂಡು ವಿಸ್ತರಿಸಿಕೊಳ್ಳುತ್ತಿದೆ!
ಈಗ ಮುಂಬೈ ಏಜೆಂಟರು ಕರ್ನಾಟಕ, ಆಂಧ್ರಪ್ರದೇಶ, ಮತ್ತು ತಮಿಳುನಾಡಿನ ಗ್ರಾಮೀಣ ಭಾಗದ ಬಡ ಮಹಿಳೆಯರನ್ನು ರೈಲುಗಳ ಮೂಲಕ ಮುಂಬೈಗೆ ಕರೆಸಿಕೊಳ್ಳುತ್ತಿದ್ದಾರೆ. ಅಲ್ಲಿನ ಸ್ಥಳೀಯ ಆಸ್ಪತ್ರೆಗಳಲ್ಲಿ ಇವರನ್ನು ಇರಿಸಿ, ಪ್ರಕ್ರಿಯೆ ಮುಗಿದ ತಕ್ಷಣ ವಾಪಸ್ ಕಳುಹಿಸುತ್ತಿದ್ದಾರೆ. ರಹಸ್ಯ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದಾರೆ. ಯಾವುದೇ ಲಿಖಿತ ದಾಖಲೆಗಳಿಲ್ಲದೆ, ಕೇವಲ ಕೋಡ್ ವರ್ಡ್‌ಗಳ ಮೂಲಕವೇ ವಾಟ್ಸಾಪ್ ಗ್ರೂಪ್‌ಗಳಲ್ಲಿ ದಾನಿಗಳ ಫೋಟೋ ಮತ್ತು ವಿವರಗಳನ್ನು ಐವಿಎಫ್ ಕ್ಲಿನಿಕ್‌ಗಳಿಗೆ ರವಾನಿಸಲಾಗುತ್ತಿದೆ.
ಕಾನೂನು ಏನು ಹೇಳುತ್ತದೆ?
ಬಡ ಮಹಿಳೆಯರನ್ನು ಈ ರೀತಿ ಶೋಷಿಸುವುದನ್ನು ತಡೆಯಲೆಂದೇ ART (Assisted Reproductive Technology) Regulation Act ಅನ್ನು ಜಾರಿಗೆ ತರಲಾಗಿದೆ. ಇದರ ಪ್ರಕಾರ ಅಂಡಾಣು ದಾನ ಮಾಡುವ ಮಹಿಳೆಯ ವಯಸ್ಸು 23 ರಿಂದ 35 ವರ್ಷದೊಳಗಿರಬೇಕು. ಆಕೆ ಈಗಾಗಲೇ ಮದುವೆಯಾಗಿ ಕನಿಷ್ಠ ಒಂದು ಜೀವಂತ ಮಗುವನ್ನು ಹೊಂದಿರಬೇಕು.
ಹಾಗೆಯೇ ಈ ಮಹಿಳೆ ತನ್ನ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಅಂಡಾಣು ದಾನ ಮಾಡಬಹುದು. ಅಂಡಾಣುಗಳನ್ನು ಕೊಳ್ಳುವುದು ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಆದರೆ, ಕಾಗದದ ಮೇಲಿರುವ ಈ ಕಾನೂನುಗಳು ಬಡತನದ ಹಸಿವಿನ ಮುಂದೆ ಮತ್ತು ಮಾಫಿಯಾದ ಪಗಡೆಯಾಟದ ಮಹಿಳೆ ತನ್ನ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಅಂಡಾಣು ದಾನ ಮಾಡಬಹುದು. ಅಂಡಾಣುಗಳನ್ನು ಕೊಳ್ಳುವುದು ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಆದರೆ, ಕಾಗದದ ಮೇಲಿರುವ ಈ ಕಾನೂನುಗಳು ಬಡತನದ ಹಸಿವಿನ ಮುಂದೆ ಮತ್ತು ಮಾಫಿಯಾದ ಪಗಡೆಯಾಟದ ಮುಂದೆ ಇನ್ನೂ ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ.ಮುಂದೆ ಇನ್ನೂ ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ.
ಬಡತನ ಮತ್ತು ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ಈ ಅಂಡಾಣು ಮಾರಾಟ ಜಾಲವು ಮಾನವ ಹಕ್ಕುಗಳ ಘೋರ ಉಲ್ಲಂಘನೆ. ನಡುರಾತ್ರಿಯ ಕತ್ತಲಲ್ಲಿ, ಕಿರಿದಾದ ಗಲ್ಲಿಗಳಲ್ಲಿ ನಡೆಯುವ ಈ ಕರಾಳ ದಂಧೆಗೆ ಬ್ರೇಕ್ ಬೀಳಬೇಕಾದರೆ ಕೇವಲ ಪೊಲೀಸ್ ದಾಳಿ ಸಾಕಾಗುವುದಿಲ್ಲ. ಗ್ರಾಮೀಣ ಭಾಗದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಮತ್ತು ಇಂತಹ ದಂಧೆಕೋರ ವೈದ್ಯರ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸುವ ಕಠಿಣ ಕ್ರಮಗಳು ತುರ್ತಾಗಿ ಆಗಬೇಕಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



