ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ರಾಜಕೀಯ ಒತ್ತಡದಿಂದಾಗಿ ಅಧಿಕಾರಿಗಳು ಆ ಭೂಮಿಯನ್ನು ತೆರವುಗೊಳಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಸಮಯದಲ್ಲಿ, ವಿವಾದಿತ ಭೂಮಿಯ ನಾಲ್ಕು ಎಕರೆಯನ್ನು ರಮೇಶ್ ಕುಮಾರ್ ಅವರು ತಮ್ಮ ಸೊಸೆಗೆ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮತ್ತೊಂದು ಆರೋಪವೂ ಕೇಳಿಬಂದಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಪತ್ರ ಬರೆದಿದೆ ಎಂದು ವರದಿಯಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಅರಣ್ಯ ಮತ್ತು ಕೆರೆ ಭೂಮಿಯನ್ನು ರಮೇಶ್ ಕುಮಾರ್ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕಳೆದ ವರ್ಷ ಆರೋಪಿಸಲಾಗಿತ್ತು. ಈ ಭೂ ವಿವಾದ ಸಂಬಂಧ ರಮೇಶ್ ಕುಮಾರ್ ಅವರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿತ್ತು. ಆ ನೋಟಿಸ್‌ಅನ್ನು ಪ್ರಶ್ನಿಸಿ ಮಾಜಿ ಸ್ಪೀಕರ್, 2025ರ ಸೆಪ್ಟೆಂಬರ್‌ನಲ್ಲಿ, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಭೂಮಿಯ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು. ಆದರೆ, ಒತ್ತುವರಿ ಪ್ರಕರಣದಲ್ಲಿ ಅರ್ಜಿದಾರರಿಗೆ ಹೊಸ ನೋಟಿಸ್ ನೀಡಲು ಇಲಾಖೆಗೆ ಅನುಮತಿ ನೀಡಿತ್ತು.
ಆದಾಗ್ಯೂ, ಅರಣ್ಯ ಇಲಾಖೆಯು ಈಗ ಶ್ರೀನಿವಾಸಪುರದ ಉಪನೋಂದಣಾಧಿಕಾರಿ, ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದೆ. ರಮೇಶ್ ಕುಮಾರ್ ಅವರು ಮಾರ್ಚ್ 16ರಂದು ವಿವಾದಿತ ಭೂಮಿಯ ಹೊಸ ಸರ್ವೆ ನಂಬರ್ 47ರಲ್ಲಿರುವ 4 ಎಕರೆಯನ್ನು ತಮ್ಮ ಸೊಸೆ ಪೃಥ್ವಿ ಕೃಷ್ಣಮೂರ್ತಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಹೈಕೋರ್ಟ್‌ನ ಯಥಾಸ್ಥಿತಿ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಮಾರ್ಚ್ 25 ರಂದು ಬರೆದ ಪತ್ರದಲ್ಲಿ, “ಜಿಲ್ಲಾಧಿಕಾರಿಗಳ ತನಿಖಾ ವರದಿಯ ಪ್ರಕಾರ, ಸರ್ವೆ ನಂಬರ್ 47ರ 4 ಎಕರೆ ಭೂಮಿಯ ಪೈಕಿ, 2 ಎಕರೆ 4 ಗುಂಟೆ ಅರಣ್ಯ ಭೂಮಿ ಮತ್ತು 1 ಎಕರೆ 36 ಗುಂಟೆ ಕಂದಾಯ ಭೂಮಿಯಾಗಿದೆ. ಈ ಭೂಮಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಯಾವುದೇ ಬದಲಾವಣೆ ಮಾಡುವುದು ಹೈಕೋರ್ಟ್ ಆದೇಶ ಮತ್ತು ಕಾನೂನಿನ ಉಲ್ಲಂಘನೆಯಾಗುತ್ತದೆ” ಎಂದು ಇಲಾಖೆ ಹೇಳಿದೆ. ಈ ಭಾಗದಲ್ಲಿ ಒಟ್ಟು 60 ಎಕರೆ 23 ಗುಂಟೆ ಒತ್ತುವರಿಯನ್ನು ತೆರವುಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂಬುದನ್ನೂ ಇಲಾಖೆ ಗಮನಿಸಿದೆ.
ಈ ಲೇಖನ ಓದಿದ್ದೀರಾ?: ಕೇಸರಿ ಫೈಲ್ | ಬಿಜೆಪಿ ನಾಯಕ ‘ಹರೇನ್ ಪಾಂಡ್ಯ’ರನ್ನು ಮೌನಗೊಳಿಸಿದ ಭೀಕರ ಕತೆ
ಭೂವಿವಾದ ಮತ್ತು ಭೂ ಉಡುಗೊರೆ ಕುರಿತು ಶ್ರೀನಿವಾಸಪುರ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರು ನೀಡಿದ್ದಾರೆ. “ಜಂಟಿ ಸರ್ವೆಯಲ್ಲಿ ಒತ್ತುವರಿ ದೃಢಪಟ್ಟಿದ್ದರೂ, ರಮೇಶ್ ಕುಮಾರ್ ಅವರಿಗೆ ಒತ್ತುವರಿ ಭೂಮಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. 1944ರಲ್ಲೇ ಅಧಿಸೂಚನೆ ಹೊರಡಿಸಲಾದ ಅರಣ್ಯ ಭೂಮಿಯ ಗಡಿಯನ್ನು ಬದಲಾಯಿಸಿ ರಮೇಶ್ ಕುಮಾರ್ ಅವರಿಗೆ ಸಹಾಯ ಮಾಡಲು ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 19(2)ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಹಿರಿಯ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ರಮೇಶ್ ಕುಮಾರ್ ವಿರುದ್ಧ ಈ ಹಿಂದೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ವಕೀಲ ಕೆ.ವಿ. ಶಿವಾರೆಡ್ಡಿ, “ಒತ್ತುವರಿ ತೆರವು ನೋಟಿಸ್ ವಿರುದ್ಧದ ಮೇಲ್ಮನವಿ ವಿಚಾರಣೆ ಮುಗಿದಿದ್ದು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯದಲ್ಲಿ ಆದೇಶ ಬಾಕಿ ಇದೆ. ಹೈಕೋರ್ಟ್ ಯಥಾಸ್ಥಿತಿ ಕಾಪಾಡಲು ಆದೇಶಿಸಿರುವಾಗ, ಸೊಸೆಯ ಹೆಸರಿಗೆ ಉಡುಗೊರೆ ಪತ್ರದ ಮೂಲಕ ಭೂಮಿ ವರ್ಗಾಯಿಸುವುದು ಕಾನೂನುಬಾಹಿರ. ಈ ಹಿಂದೆ ಅವರು ಈ ಭೂಮಿಯನ್ನು ಅಡವಿಡಲು ಪ್ರಯತ್ನಿಸಿದ್ದರು,” ಎಂದು ಆರೋಪಿಸಿದ್ದಾರೆ.



