ಕನ್ನಡ ನಾಡು, ನುಡಿ ಹಾಗೂ ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಸುದೀರ್ಘ ಸೇವೆ ಸಲ್ಲಿಸಿರುವ ಕೊಪ್ಪಳ ಜಿಲ್ಲೆಯ ಇಬ್ಬರು ಹಿರಿಯ ಕಲಾವಿದರಿಗೆ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಗೀಗೀಪದ ಕಲಾವಿದ ದಾವಲಸಾಬ ಅತ್ತಾರ ಹಾಗೂ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಹಗಲುವೇಷ ಕಲಾವಿದ ಶಿವಲಿಂಗಪ್ಪ ರಾಮಣ್ಣ ಸಿದ್ದಾಪುರ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸುಮಾರು 55 ವರ್ಷದ ದಾವಲಸಾಬ ಅತ್ತಾರ ಅವರು ಕಳೆದ ನಾಲ್ಕು ದಶಕಗಳಿಂದ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಗೀಗೀಪದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ವೃತ್ತಿಯಿಂದ ಅಗರಬತ್ತಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೂ, ಬಡತನದ ನಡುವೆಯೂ ಜಾನಪದ ಕಲಾಸೇವೆಯನ್ನು ಮುಂದುವರಿಸಿರುವ ಇವರ ಸಾಧನೆಯನ್ನು ಸರ್ಕಾರ ಗುರುತಿಸಿದೆ.
ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಶಿವಲಿಂಗಪ್ಪ ರಾಮಣ್ಣ ಸಿದ್ದಾಪುರ ಅವರು ಕಳೆದ 30 ವರ್ಷಗಳಿಂದ ಹಗಲುವೇಷ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವ ಮೂಲಕ ಗ್ರಾಮೀಣ ಸಾಂಪ್ರದಾಯಿಕ ಕಲೆಯ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇವರ ಸುದೀರ್ಘ ಕಲಾಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ ಸಂದಿದೆ.
ಜಿಲ್ಲೆಯ ಇಬ್ಬರು ಹಿರಿಯ ಕಲಾವಿದರಿಗೆ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಕಲಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ : ಬೀದರ್ ಜಿಲ್ಲೆಯ ಇಬ್ಬರು ಕಲಾ ಸಾಧಕರಿಗೆ ರಾಜೋತ್ಸವ ಪ್ರಶಸ್ತಿ




