ದೇಶದ ಜನರ ಸೇವೆ ಮಾಡುವುದೇ ನನ್ನ ಜೀವನದ ಗುರಿ. ಕೊನೆಯ ಉಸಿರಿರುವವರೆಗೂ ಈ ಕಾರ್ಯದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಮೋದಿ ಕಾ ಬಾಪ್ ಭೀ ಜಾಯೇಗಾ’ (ಮೋದಿಯ ಅಪ್ಪನೂ ಹೋಗಬೇಕಾಗುತ್ತದೆ) ಎಂದು ಹೇಳಿಕೆ ನೀಡಿದ ಕೆಲವೇ ದಿನಗಳ ಬಳಿಕ, ಕೊನೆವರೆಗೂ ದೇಶಸೇವೆ ಮಾಡುವುದಾಗಿ ಘೋಷಿಸಿದ್ದಾರೆ.
ಮೋದಿ ಗುಜರಾತ್‌ನ ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ಸುಮಾರು 14 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಹಲವು ಯೋಜನೆಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣವನ್ನೂ ಬಿಡುಗಡೆ ಮಾಡಿದರು.
ಬನಸ್ಕಾಂಠ ಜಿಲ್ಲೆಯ ಭಿಲ್ಡಿಯಲ್ಲಿ ಭಾರತ್ ಬೋವೈನ್ ಬ್ರೀಡಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ (BBBRC) ಉದ್ಘಾಟಿಸಿ, ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶ ಸಂಕಷ್ಟಕ್ಕೆ ಸಿಲುಕಿದಾಗ ಅದನ್ನು ಪರಿಹರಿಸುವ ಬದಲು ಸಂಭ್ರಮಿಸುವ ಮನಸ್ಥಿತಿ ಕೆಲವರಲ್ಲಿದೆ. ಪಶ್ಚಿಮ ಏಷ್ಯಾದ ಸಂಘರ್ಷವನ್ನು ಮುಂದಿಟ್ಟುಕೊಂಡು ರಸಗೊಬ್ಬರ ಮತ್ತು ಅಡುಗೆ ಅನಿಲದ ಕೊರತೆಯಾಗಲಿದೆ ಎಂಬ ಸುಳ್ಳು ಸುದ್ದಿಗಳನ್ನು ಹರಡಿ ಜನರಲ್ಲಿ ಭೀತಿ ಹುಟ್ಟಿಸಲಾಗುತ್ತಿದೆ. ದೇಶ ಸಂಕಷ್ಟದಲ್ಲಿರಲಿ ಎಂದು ಬಯಸುವವರಿದ್ದಾರೆ. ರಾಷ್ಟ್ರಕ್ಕೆ ಕಷ್ಟ ಎದುರಾದಾಗ ಅವರಿಗೆ ಸಂತೋಷವಾಗುತ್ತದೆ. ರೈತರಿಗೆ ಗೊಬ್ಬರ ಸಿಗುವುದಿಲ್ಲ ಎಂದು ಭಯ ಹುಟ್ಟಿಸಿ, ಕೃತಕ ಸರತಿ ಸಾಲುಗಳು ನಿರ್ಮಾಣವಾಗುವಂತೆ ಮಾಡಿದರು ಎಂದು ಆರೋಪಿಸಿದರು.
ಅಡುಗೆ ಅನಿಲದ ಪೂರೈಕೆ ನಿಲ್ಲಲಿದೆ ಎಂಬ ವದಂತಿ ಹರಡಿ ಮಹಿಳೆಯರಲ್ಲೂ ಆತಂಕ ಮೂಡಿಸುವ ಪ್ರಯತ್ನ ನಡೆದಿದೆ. ಅಡುಗೆ ಹೇಗೆ ಮಾಡುತ್ತೀರಿ, ಮಕ್ಕಳನ್ನು ಶಾಲೆಗೆ ಹೇಗೆ ಕಳುಹಿಸುತ್ತೀರಿ ಎಂಬ ಪ್ರಶ್ನೆಗಳ ಮೂಲಕ ಜನರನ್ನು ಗೊಂದಲಕ್ಕೆ ತಳ್ಳಲು ಯತ್ನಿಸಲಾಗಿದೆ. ಇದೆಲ್ಲವೂ ತಮ್ಮ ವಿರುದ್ಧ ಅಪಪ್ರಚಾರ ನಡೆಸುವ ಉದ್ದೇಶದಿಂದ ಮಾಡಲಾಗುತ್ತಿದೆ. ನಿಮ್ಮೊಂದಿಗೆ ಮೋದಿ ಗಟ್ಟಿಯಾಗಿ ನಿಲ್ಲುತ್ತಾನೆ ಎಂಬ ಭರವಸೆ ನೀಡಿದ್ದೆ. ಸಂಘರ್ಷ ಮುಂದುವರಿದಿದ್ದರೂ ದೇಶದ ರೈತರಿಗೆ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು.
ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಾಗಿದೆ. ಅವುಗಳ ಉತ್ಪಾದನೆಗೆ ಬೇಕಾದ ರಾಸಾಯನಿಕಗಳ ವೆಚ್ಚವೂ ಏರಿಕೆಯಾಗಿದೆ. ಆದರೆ ಈ ಹೊರೆ ರೈತರ ಮೇಲೆ ಬೀಳದಂತೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಯೂರಿಯಾ ಚೀಲದ ಬೆಲೆ ಸುಮಾರು 3,000 ರೂಪಾಯಿ ಇದ್ದರೆ, ಭಾರತೀಯ ರೈತರಿಗೆ 300 ರೂಪಾಯಿಗಿಂತ ಕಡಿಮೆ ದರದಲ್ಲಿ ಸಿಗುತ್ತಿದೆ. ಇದೇ ರೀತಿ ಜಾಗತಿಕ ಮಾರುಕಟ್ಟೆಯಲ್ಲಿ 5,000 ರೂಪಾಯಿ ದಾಟಿರುವ ಡಿಎಪಿ ಗೊಬ್ಬರದ ಚೀಲವನ್ನು ರೈತರು 1,350 ರೂಪಾಯಿಗೆ ಪಡೆಯುತ್ತಿದ್ದಾರೆ ಎಂದರು.
ಪ್ರಧಾನಿ ಭಾಷಣಕ್ಕೂ ಮುನ್ನ ಮಾತನಾಡಿದ ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಂಘವಿ, ದೇಶದ 140 ಕೋಟಿ ಜನರ ಬೆಂಬಲ ಮೋದಿ ಅವರಿಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪ್ರಧಾನಿ ಹಾಗೂ ಜನರ ನಡುವಿನ ಬಾಂಧವ್ಯವನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆಯಾಗಿ ‘ಮೋದಿ ಕಹೀ ನಹೀ ಜಾಯೇಗಾ’ (ಮೋದಿ ಎಲ್ಲಿಗೂ ಹೋಗುವುದಿಲ್ಲ) ಎಂಬ ಘೋಷಣೆ ದೇಶಾದ್ಯಂತ ಕೇಳಿಬರುತ್ತಿದೆ. ಬನಸ್ಕಾಂಠದ ಹಳ್ಳಿಗಳಿಂದ ಕಾಶ್ಮೀರದವರೆಗೆ, ಕನ್ಯಾಕುಮಾರಿವರೆಗೂ ಈ ಸಂದೇಶ ತಲುಪಿದೆ ಎಂದು ಸಂಘವಿ ಹೇಳಿದರು.
ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಖರ್ಗೆ ಅವರಿಗೆ ಸಭಿಕರೊಬ್ಬರು ‘ಮೋದಿ ಎಲ್ಲಿಗೂ ಹೋಗುವುದಿಲ್ಲ’ ಎಂದು ಕೂಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಖರ್ಗೆ, ‘ಮೋದಿ ಕಾ ಬಾಪ್ ಭೀ ಜಾಯೇಗಾ’ ಎಂದು ಹೇಳಿದ್ದರು. ಈ ಹೇಳಿಕೆ ರಾಜಕೀಯ ವಿವಾದಕ್ಕೆ ನಾಂದಿ ಹಾಡಿತ್ತು. ಖರ್ಗೆ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ-ಕಾಂಗ್ರೆಸ್ ಡಿಜಿಟಲ್ ವಾರ್ ನಡೆಸಿದ್ದವು.
ಖರ್ಗೆ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡ ಬಿಜೆಪಿ, ‘ಮೋದಿ ಕಹೀ ನಹೀ ಜಾಯೇಗಾ’ (ಮೋದಿ ಎಲ್ಲಿಗೂ ಹೋಗುವುದಿಲ್ಲ) ಎಂಬ ಘೋಷಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿತು. ಕಾಂಗ್ರೆಸ್ ಕೂಡ ಸುಮ್ಮನಿರಲಿಲ್ಲ. ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸುವ ರೀತಿಯಲ್ಲಿ ಕೆಲವು ರಾಜ್ಯಗಳ ಕಾಂಗ್ರೆಸ್ ಘಟಕಗಳು ಪೋಸ್ಟ್‌ಗಳನ್ನು ಹಂಚಿಕೊಂಡವು.
ಇದನ್ನೂ ಓದಿ: ಟ್ರಂಪ್‌ಗೆ ಭಯಪಡುವ ಮೋದಿ, ಅಂಬಾನಿ-ಅದಾನಿಯ ‘ರಿಮೋಟ್ ಕಂಟ್ರೋಲ್’ನಲ್ಲಿದ್ದಾರೆ: ರಾಹುಲ್ ಗಾಂಧಿ
ಖರ್ಗೆ ಅವರು ‘ಬಾಪ್’ ಎಂದು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬುದನ್ನು ನೀವೇ ಊಹಿಸಿ ಎಂಬ ವ್ಯಂಗ್ಯದೊಂದಿಗೆ ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಟೂನ್‌ಗಳನ್ನು ಪ್ರಕಟಿಸಿತು. ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಒಳಗೊಂಡ ಎಐ ಚಿತ್ರಗಳನ್ನೂ ಹಂಚಿಕೊಂಡಿತು.
ಖರ್ಗೆ ಹೇಳಿಕೆಯನ್ನು ಖಂಡಿಸಿ ಬಿಜೆಪಿ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿತು. ದೆಹಲಿ, ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಅಧ್ಯಕ್ಷರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇತ್ತ ಕಾಂಗ್ರೆಸ್ ನಾಯಕರು ಖರ್ಗೆ ಅವರ ಮಾತನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ ನಾಯಕ ಪವನ್ ಖೇರಾ ಕೂಡ ಬಿಜೆಪಿ ವಿರುದ್ಧ ತಿರುಗೇಟು ನೀಡಿದರು.
ಈ ನಡುವೆ, ಖರ್ಗೆ ಅವರ ಮಾತಿಗೆ ಕಾರಣವಾದ ಸಭಿಕ ಸಂತೋಷ್ ಕುಮಾರ್ ಕೂಡ ಸ್ಪಷ್ಟನೆ ನೀಡಿದ್ದು, ತಾನು ‘ಬಂಡಾಯ ನಡೆಯದ ಹೊರತು ಮೋದಿ ಅಧಿಕಾರದಿಂದ ಕೆಳಗಿಳಿಯುವುದಿಲ್ಲ’ ಎಂದು ಹೇಳಲು ಉದ್ದೇಶಿಸಿದ್ದೆ. ಆದರೆ ತನ್ನ ಮಾತಿನ ಒಂದು ಭಾಗ ಮಾತ್ರ ಕೇಳಿಸಿಕೊಂಡು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.




