ಭಾರತದ ವಿವಿಧ ಭಾಗಗಳಲ್ಲಿ ಹವಾಮಾನದ ಏರಿಳಿತಗಳು ತೀವ್ರವಾಗಿವೆ. ಇತ್ತೀಚಿನ ವರದಿಗಳ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ತಾಪಮಾನವೂ ಗಮನಾರ್ಹ ಕುಸಿತ ಕಂಡಿದೆ. ಅಂತೆಯೇ, ದೇಶದ ನಾನಾ ಭಾಗಗಳಲ್ಲಿಯೂ ಮಳೆಯಾಗುತ್ತಿದ್ದು, ಕರ್ನಾಟಕದಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ.
ದೇಶದ ಕೃಷಿ ವಲಯದ ಜೀವನಾಡಿಯಾಗಿರುವ ‘ನೈಋತ್ಯ ಮಾನ್ಸೂನ್’ ಅರಬ್ಬಿ ಸಮುದ್ರ ಮತ್ತು ಹಿಂದು ಮಹಾಸಾಗರದಲ್ಲಿ ತೀವ್ರವಾಗಿ ಚಲಿಸುತ್ತಿದೆ. ವಾಡಿಕೆಗಿಂತ ಒಂದು ವಾರ ಮೊದಲೇ (ಮೇ 26) ಕೇರಳವನ್ನು ಪ್ರವೇಶಿಸುವ ಸಾಧ್ಯತೆಗಳಿವೆ. ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಬಂಗಾಳ ಕೊಲ್ಲಿಯ ಹಲವು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ, ಕೇರಳ, ತಮಿಳುನಾಡು ಭಾಗಗಳಲ್ಲಿ ಈಗಾಗಲೇ ಭಾರಿ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗುತ್ತಿದೆ. ಇನ್ನೂ ಒಂದು ತಿಂಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಇಲಾಖೆ ವಿವರಿಸಿದೆ.
ಮೇ ಅಂತ್ಯದವರೆಗೆ, ಕರ್ನಾಟಕದ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಪ್ರತಿ ಗಂಟೆಗೆ 50 ರಿಂದ 60 ಕಿ.ಮೀ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಅಂತೆಯೇ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದ್ದು, ಈ ಜಿಲ್ಲೆಗಳಿಗೆ ಇಲಾಖೆ ‘ಯೆಲ್ಲೋ ಅಲರ್ಟ್’ ಜಾರಿಗೊಳಿಸಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಗರಿಷ್ಠ 104 ಮಿ.ಮೀ ನಷ್ಟು ಭಾರಿ ಮಳೆ ದಾಖಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ರಾತ್ರಿ ವೇಳೆ ಮಳೆಯಾಗುತ್ತಿದ್ದು, ಮಳೆ ಆರ್ಭಟ ಮುಂದುವರೆಯಲಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದ ಸಮುದ್ರ ತೀರದಲ್ಲಿ ಭಾರಿ ಅಲೆಗಳು ಏಳುತ್ತಿರುವೆ ಮತ್ತು ಗಾಳಿಯ ವೇಗ ಹೆಚ್ಚಾಗಿದೆ. ಹೀಗಾಗಿ, ಮೇ 24ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.



